ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಕ್ಷರಗಳ ಬೇನೆ

ಈ ಪರಿ ನಿನ್ನ ಬಣ್ಣಗಳ ವ್ಯಾಮೋಹ ನನಗೆ ಅರ್ಥವಾಗದು.
ಪೂರ್ಣಿಮಾ ಸುರೇಶ್
ಇತ್ತೀಚಿನ ಬರಹಗಳು: ಪೂರ್ಣಿಮಾ ಸುರೇಶ್ (ಎಲ್ಲವನ್ನು ಓದಿ)

ಈ ಪರಿ ನಿನ್ನ ಬಣ್ಣಗಳ ವ್ಯಾಮೋಹ
ನನಗೆ ಅರ್ಥವಾಗದು.

ಅದೆಷ್ಟು ಬಣ್ಣಗಳ ಹಾಳೆಗಳನು
ಶೃದ್ಧೆಯಿಂದ ತಂದು ಹರಡುವೆ
ಕೆಂಪು,ಗುಲಾಬಿ,ಹಳದಿ..

ಇವೆಲ್ಲ ಸಿಗುವುದು ಅಷ್ಟು
ಸುಲಭವಲ್ಲ..
ಹದಗೊಂಡ ಶೋಧನೆ

ಗುಲಾಬಿ ಮುಂಜಾವಿನಲಿ ದಳಗಳನು ತೆರೆದಂತೆ ಅಘ್ರಾಣಿಸುವೆ.
ಹಳದಿಯಲಿ ಅಕ್ಷರಗಳು
ಅರಳುವ ಅಂದ ನೋಡಿ ಸಮ್ಮೋಹನ.

ನೀನು ಮೆಚ್ಚುವ ನೀಲ-ನಗುತ್ತಾನೆ.
ಕೆಂಪು ಪ್ರೀತಿ-ಬೆಳಕು
ಬಣ್ಣಗಳ ಅಸ್ತಿತ್ವವನು ವಿವರಿಸುತ್ತಾನೆ.

ಬಣ್ಣಗಳನು ಅಂಗೈಯಿಂದ
ಉದುರಿಸಿ
ಚಿಟ್ಟೆಗಳನು ಹಾರಿಸುತ್ತಾನೆ.

ಅವನಿಗೆ ಹೇಗೆ ಹೇಳಲಿ?
ಕವಿತೆಯ ಹುಟ್ಟು ಸುಲಭವಲ್ಲ

ಹಾಳೆಗಳು ಹಸನಾಗಬೇಕು.
ತವಕ,ಕಾತರದಲ್ಲಿ ಕಾದ ಅಕ್ಷರಗಳ
ಹಸಿ,ನವಿರು ಬೇನೆಗೆ
ಅನುವಾಗಬೇಕು.
ತೆರೆದುಕೊಳ್ಳುವ ಹಾಳೆಗಳ
ಕಾಂತತ್ವದಲಿ
ಅಕ್ಷರಗಳು ಅರಳುವುದೇ
ಒಂದು ಸೋಜಿಗ.

ಬಣ್ಣ ಬಣ್ಣದ ಹಾಳೆಗಳನ್ನು
ಜೋಡಿಸಿ
ಎದೆಗಾನಿಸಿಕೊಂಡೆ