ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಲ್ಲಿಗೆ ಬರುವವರೆಗೆ…

ಮಂಜುಳಾ ಬಬಲಾದಿ
ಇತ್ತೀಚಿನ ಬರಹಗಳು: ಮಂಜುಳಾ ಬಬಲಾದಿ (ಎಲ್ಲವನ್ನು ಓದಿ)

ಅಲ್ಲಿಗೆ ಬರುವವರೆಗೆ…
ನನ್ನ ಕತ್ತಲಿಗೆ
ನಾನೇ ಬೆಳಕಾಗಬೇಕಿದೆ
ದೀಪದ ಕೆಳಗೇ ಕತ್ತಲಂತಲ್ಲ?
ಅದು ಈಗ ನನ್ನರಿವಿಗೆ
ಬರುತಲಿದೆ.

ಜಗಕೆಲ್ಲ ಬೆಳಕಿನ ಬರವಿಲ್ಲ
ಬೆಳಗುತ್ತಲೇ ಇದ್ದೇನೆ ನಾನು
ಝಗ-ಮಗ, ಝಗ-ಮಗ!
ಎಣ್ಣೆ ಹೀರಿ
ಬೆಂಕಿಯ ಝಳವ ಮೀರಿ!

ಬರಲೇಬೇಕಿದೆ ನನಗಲ್ಲಿ
ನಿನ್ನ ತೋಳ ತೆಕ್ಕೆಯಲಿ
ಬೆಳಕೆಲ್ಲವನ್ನು ಹೊರಗಲ್ಲ
ಒಳಗೆ ಅರಳಿಸಬೇಕಿದೆ…
ತಂಪಾಗಬೇಕಿದೆ, ನಿನ್ನಲ್ಲಿ
ಮಂಜಿನ ಹನಿಯೊಂದರಂತೆ
ಕ್ಷಣಕಾಲ ಅರಳಿ
ಮತ್ತೆ ಮರಳಬೇಕಿದೆ!

ಅಲ್ಲಿಗೆ ಬರುವವರೆಗೆ…
ನನ್ನ ಕತ್ತಲಿಗೆ
ನಾನೇ ಬೆಳಕಾಗಬೇಕಿದೆ…
ನಾನೇ ಬೆಳಕಾಗಬೇಕಿದೆ!