ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವ್ವ ಅಳುಕದ ಅಕ್ಷರ

ಡಾ. ಸದಾಶಿವ ದೊಡಮನಿ ಬರೆದ ಕವಿತೆ.
ಡಾ. ಸದಾಶಿವ ದೊಡಮನಿ
ಇತ್ತೀಚಿನ ಬರಹಗಳು: ಡಾ. ಸದಾಶಿವ ದೊಡಮನಿ (ಎಲ್ಲವನ್ನು ಓದಿ)

ಬೆಂಕಿ- ಬಿರುಗಾಳಿಯಲಿ
ಬದುಕು ಕುದ್ದು-ಕುದ್ದು
ಅಕ್ಕ-ತಮ್ಮರ ಸಾವು
ವಾಲಾಡುವಾಗ
ಅಮ್ಮ ನೋವಿನ ಹೊಳಿ
ಕಣ್ಣೀರಿನ ಮಡಿ

ಸುಡುವ ಅಂಗಳದಲಿ
ಅನ್ನ ಕುದಿಸುತ್ತ
ಮಕ್ಕಳ ಸಲಹುತ್ತ
ಕ್ರಮಿಸಿದ ಹಾದಿ ಕಾಡು-ಮೇಡು
ಸೋತು ಸೊರಗಿದ ಧ್ವನಿಗೆ
ಅಪ್ಪನೇ ಆಸರೆಗೋಲು

ನೋವಿರಲಿ-ನಗುವಿರಲಿ
ಅವ್ವನದು ಬೆಳದಿಂಗಳ ಹಾಡು

ಅಜ್ಜನ ಆಸ್ತಿಯೆಂಬಂತೆ
ಅಮ್ಮ ನೋವನ್ನೇ
ಪಡೆದು ಬಂದಳು
ಹಿರಿಮಗಳೊಂದಿಗೆ ಗಂಡನಿಲ್ಲ
ಎಂಬ ಕೊರಗು
ಮಗಳು ತೀರಿದಳೆಂಬ ಮೊಗದೊಂದು ಕೊರಗು
ಈ ಗಾಯ ಇನ್ನೂ ಹಸಿ-ಹಸಿಯಿರುವಾಗಲೇ
ಕಿರಿಮಗ ತೀರಿದನೆಂಬುದು ತೀರಲಾಗದ ನೋವು

ಅದ-
ಉಂಡು-ಉಟ್ಟು ಮಲಗಿದಾಕೆ
ಬಂಧು- ಬಳಗಕ್ಕೆ ಬೇವಿನ ಮರ-
ದ ನೆರಳಾದಾಕೆ

ಇದ್ದಾಳೆ; ನಮ್ಮೊಂದಿಗೆ
ಮುಂದೆಯೂ ಇರುತ್ತಾಳೆ
ಕಣ್ಣ ಮುಂದಿನ ಬೆಳಕಾಗಿ
ನೆತ್ತಿ ಮೇಲಿನ ನೆರಳಾಗಿ

ಅವ್ವ ಅಳುಕದ ಅಕ್ಷರ – ಕವಿ ಡಾ. ಸದಾಶಿವ ದೊಡಮನಿ
ಇಲಕಲ್ಲ
ಈ ಕವಿತೆಗೆ ಚಿತ್ರ ಬಿಡಿಸಿದ ಕಲಾವಿದರು: ಜಬಿವುಲ್ಲಾ ಎಂ ಅಸದ್.