ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆತ್ಮ ಸಾಂಗತ್ಯ

ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ಹರಹಿಕೊಂಡ ಕೇಶರಾಶಿಯಲ್ಲಿ
ತೆರೆದ ಭೌತಿಕ ಸತ್ಯಕ್ಕೆ
ಜಗ ತಲೆ ಬಾಗಿತು
ಹೊರ ಹರಿದ ಮಲಿನತೆ
ಕಣ್ಣುಗಳಿಗೆ ನೀಡಿತು ಹೊಸ ನೋಟವ

ನೊಸಲ ಭಸ್ಮ ತ್ರಿಕರಣ ಶುದ್ಧಿಯ ಪ್ರತೀಕ
ಅಂಗೈಯಲ್ಲಿ ಆತ್ಮ ಸಾಂಗತ್ಯ

ಕಿಲುಬು ಇರುವುದು ಕಾಣುವ ಪರಿಯಲ್ಲಿ
ಕಾಮನೆ ಕರಿಯ ತೊಲಗಿಗೆ
ಮರುಳುಗಳಿಗೆ ಸೆರೆಯಾದ ಮರುಳರು
ಮೈ ಮುಚ್ಚುವರು ವಸ್ತ್ರದಲ್ಲಿ
ಅಂದ ಚಂದದ ಬಣ್ಣನೆಗೆ

ಕೈಯಲ್ಲಿ ಮಣಿಮಾಲೆ
ಲೆಕ್ಕದ ನಾಮಕ್ಕಲ್ಲ
ಜಾರುವುದರಲ್ಲಿ ಹಿಡಿಯಬೇಕು
ಅರೆಕ್ಷಣದ ಭಕ್ತಿಯ
ಸ್ಮರಣೆಯಲ್ಲಿ ಸರಿಯಬೇಕು
ಇಹದ ಸರಿದಾರಿ

ಹಾದಿಯಲ್ಲಿ ಹರಿದಾಡಿದ ಹಾದರದ ಕಣ್ಣುಗಳು
ಉಡುವುದಕ್ಕಿಂತ ಬಿಡುವುದೇ ಲೇಸೆಂದು ಕಲಿಸದಿದ್ದರೆ
ಮಂಟಪದವರೆಗೆ ಕಾಲು ಎಳೆಯುತ್ತಿರಲಿಲ್ಲ
ಅನುಭವದ ಅಮೃತದ ಹೊಳೆ
ಕದಳಿಯಲ್ಲಿ ಸೇರುತ್ತಿರಲಿಲ್ಲ.