ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

Bleeding and bruised leaf from hurt environment

ಇದ್ದಂತಿದ್ದರೂ ಇಲ್ಲವಾದಾಗ….

ನಾ ದಿವಾಕರ

ದಿಬ್ಬದಾಚೆಗಿನ ಹೊಂಡದಲಿ
ತಿಳಿಗೊಳದ ಮಡು
ನಸುಕು ಮಬ್ಬೆಳಕಿನ ಕೆಂಪು
ಸುಡು ಬಿಸಿಲ ದೀವಟಿಗೆ
ಕದಡುವ ಸದ್ದಿನ ನಡುವೆ
ಬೂಟುಗಾಲಿನ ಸಪ್ಪಳ
ಬಿತ್ತಿದವನ ಪಿಸುಮಾತುಗಳು
ಹೆತ್ತವ್ವನೊಡಲಿನ ಕರೆಗೆ ;

ಸಾಲು ಕಾಲುವೆಗಳ ನಡುವೆ
ಪೀಳಿಗೆಗಳ ಬದುಕು
ನೊಗದ ಕುಲ ಮೊಗೆದ ಬಲ
ಕೆಸರಿಗಂಟಿದ ಬೆವರಿನಲಿ
ಜನ್ಮಕಂಟಿದ ಬವಣೆ
ಮಳೆ ಹನಿಗೆ ಇಳೆ ದನಿಗೆ
ಇಬ್ಬನಿಯ ಮೃದು ಸ್ಪರ್ಶ
ಹಟ್ಟಿಯೊಳಗಿನ ಒಲೆಯಲಿ
ಸುಟ್ಟ ರೊಟ್ಟಿಯ ಕಮಟು ;

ಉಂಡೆಸೆದ ಎಲೆಗಾಗಿ
ಹಸಿದ ಸಂಕುಲದ ಸಾಲು
ಬತ್ತಿದೆದೆಗವುಚಿದ ಕೂಸಿಗೆ
ಕಂಬನಿಯ ಗುಟುಕು
ತರಗೆಲೆಯ ಅಂಚಿನಲಿ
ಜೀವರಸದ ಸಾಲುಹನಿ
ಚಿರನಿದ್ರೆಯ ತಾಣದಲಿ
ಜೀವಕೋಶದ ಶೋಧ ;

ಹಸಿರ ಹೊದಿಕೆಯ ಮೇಲೆ
ಬಸಿದ ನೆತ್ತರ ಕಲೆ
ಕುಡಿ ಎಲೆಯ ಬೇರಿನಲಿ
ಕರಿಚುಕ್ಕೆಗಳ ಚಿತ್ತಾರ
ಬೆಳೆದ ಪೈರಿನ ರುಂಡ
ಒಣ ಟೊಂಗೆಗೆ ಮುಕುಟ
ಪೊಟರೆಯೊಳಗಿನ ಹಕ್ಕಿಗೆ
ರೆಕ್ಕೆ ಮೂಡುವ ತವಕ ;

ಬಿರಿದ ಕೆಸರೊಡಲಿನಲಿ
ನೊಗದ ಮೌನ ನಿರಶನ
ಹರಿವ ತೊರೆಗಳಂಚಿನಲಿ
ಎರೆಹುಳುಗಳ ಮೆರವಣಿಗೆ
ಇದ್ದು ಇಲ್ಲವಾಗುವ ನಿನ್ನೆ
ಇಲ್ಲದಂತೆಯೂ ಇರುವ ನಾಳೆ
ಸವೆದ ಚಕ್ರಗಳ ಹೆಜ್ಜೆಯಲಿ
ಬದುಕು ಕಟ್ಟುವ ಕನಸು !