ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಂಬನಿತರಿಸಿದ ಲಾಕ್ಡೌನ್ ಚಂದ್ರಮತಿ

ಸುಮಾ ವೀಣಾ

2020 ರಲ್ಲಿ ಕೊವಿಡ್ 19 ವಿಶ್ವದಾದ್ಯಂತ ಸಾಮಾಜಿಕರ ನೆಮ್ಮದಿ ಕೆಡಿಸಿದ್ದು ಅದರಿಂದುಂಟಾದ ಅವಾಂತರ ಎಲ್ಲರಿಗು ತಿಳಿದಿರುವಂಥದ್ದೆ! ಇಂದಿಗೂ ಇದರ ಬಾಧೆ ತಪ್ಪಿಲ್ಲ. ಮಾರ್ಚ್ 2020 ರಲ್ಲಿ ಭಾರತ ಸರಕಾರ ಕೊರೊನಾ ವೈರಸಿನ ಹಬ್ಬುವಿಕೆಯ ಓಘವನ್ನು ತಗ್ಗಿಸಲು ಲಾಕ್ ಡೌನ್ ಘೋಷಿಸಿತು. ಆದರೆ ಅದು ಇನ್ನೊಂದು ರೀತಿಯ ಅಪಸವ್ಯವಾಗಿ ಕಾಡಿತು. ಸಾವು- ಬದುಕು ನರಳಾಟ, ಗೋಳಾಟ, ವಲಸೆ ಇತ್ಯಾದಿಗಳಿಂದ ಸಮಸ್ಯೆಗಳು ಎದುರಾದವು. ಕೊರೊನೇತರ ಸಾವುಗಳು ತೀವ್ರವಾಗಿ ಬಾಧಿಸಿದವು. ಕೆಲವು ಘಟನೆಗಳನ್ನು ಓದಿದಾಗ ನೋಡಿದಾಗ ಕಣ್ಣುಗಳು ಆರ್ದ್ರವಾದವು, ಇದು ದುಃಖವೆ ಹೌದಲ್ವ! ಇದನ್ನೆ ‘ಶೋಕ’ ಅನ್ನುವುದು ‘ಕರುಣಾ ರಸ’ದ ಸ್ಥಾಯಿ ಭಾವವೇ ‘ಶೋಕ’?

2020 ರ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನನ್ನನ್ನು ತುಂಬಾ ಕಾಡಿದ ಕರುಣಾ ಜನಕ, ಶೋಕದ ಪ್ರಸಂಗ ಎಂದರೆ ಏಪ್ರಿಲ್ 12/2020 ರಂದು ನಡೆದ ಜೆಹನಾಬಾದ್ ಬಿಹಾರ್ ರಾಜ್ಯದಲ್ಲಿ ನಡೆದ ಘಟನೆ. ಮಗು ಅನಾರೋಗ್ಯದಿಂದ ಸತ್ತಿರುತ್ತದೆ ತಂದೆಗೆ ವಿಷಯ ಗೊತ್ತಾದ ಮೇಲೆ ಮೂರು ವರ್ಷದ ಸತ್ತ ಮಗನನ್ನು ಕಾಲ್ನಡಿಗೆಯಲ್ಲಿಯೇ ತೆಗೆದುಕೊಂಡು ಬಾ ಎನ್ನುತ್ತಾನೆ. ಪಾಟ್ನದ ಆಸ್ಪತ್ರೆ ತಲುಪುವ ವೇಳೆಗೆ ಮಗು ಅಸು ನೀಗುತ್ತದೆ. ಕೈಯಲ್ಲಿ ಸತ್ತ ಮಗನ ಶವವನ್ನು ಕೈಯಲ್ಲಿ ಹಿಡಿದ ಆ ತಾಯಿಯ ಆಕ್ರಂದನ ಮುಗಿಲು ಮುಟ್ಟುವಂತಿರುತ್ತದೆ. ತಂದೆಗೆ ಸಹಾಯ ಮಾಡುವುದಾಗಿ ಕೇಳಿದರೆ “ಮಗುವಿನ ಜೀವ ಇದ್ದಾಗ ಇಲ್ಲದೇ ಇರುವ ಅ್ಯಂಬ್ಯುಲೆನ್ಸ್ ಈಗ ಬೇಡ” ಎನ್ನುತ್ತಾನೆ. ವೈದ್ಯರ ನಿರ್ಲಕ್ಷದಿಂದ ಮಗ ಸತ್ತಿದ್ದಾನೆ ಅದೂ ಮೂರು ವರ್ಷದ ತೊದಲು ನುಡಿಯ ಮಗ . ಬಿರು ಬೇಸಿಯಲ್ಲಿ ಶವ ಹಿಡಿದುಕೊಂಡು ಆ ತಾಯಿ ಹೇಗೆ ನಡೆದಿರಬಹುದು ಊಹಿಸಲೂ ಸಾಧ್ಯವಿಲ್ಲ. ಈ ಘಟನೆ ಹೆಚ್ಚು ಸಾರ್ವಜನಿಕ ಟೀಕೆಗೆ ಗುರಿಯಾಯಿತು. ಅಧಿಕಾರಿಗಳಿಗೆ ಷೋಕಾಸ್ ನೋಟೀಸ್ ಕೂಡ ನೀಡಲಾಯಿತು. ಅಡುಗೆ ಆದ ಮೇಲೆ ಒಲೆ ಉರಿದು ಪ್ರಯೋಜನವಿದೆಯೇ?, ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೆ ಪ್ರಯೋಜನವಿದೆಯೇ? ಇಲ್ಲಿಯೂ ಹಾಗೆ ಆದದ್ದು.

ಇದನ್ನು ಕೇಳಿದ ಮೇಲೆ ನನಗೆ ಚಂದ್ರಮತಿ ಮತ್ತು ತಿರುಕೊಳವಿನಾಚಿಯರು ನೆನಪಾದರು. ಚಂದ್ರಮತಿ-ಲೋಹಿತಾಶ್ವರ ಹೆಸರನ್ನು ಕೇಳದವರಿಲ್ಲ. ಆದರೆ ತಿರುಕೊಳವಿನಾಚಿ-ಶಂಕರರ ಪರಿಚಯ ಅಷ್ಟಾಗಿ ಯಾರಿಗೂ ಇರುವುದಿಲ್ಲ ಎಂದು ನನ್ನ ಅನಿಸಿಕೆ. ಈ ಇಬ್ಬರನ್ನು ಪರಿಚಯ ಮಾಡಿಕೊಳ್ಳ ಬೇಕೆಂದರೆ ಕನ್ನಡ ಸಾಹಿತ್ಯ ಚರಿತ್ರೆಯ ನಡುಗನ್ನಡ ಕಾಲಘಟ್ಟ ಅದರಲ್ಲೂ ಷಟ್ಪದಿ, ಕಾವ್ಯಗಳ ಬಗ್ಗೆ ತಿಳಿಯಲೇ ಬೇಕು. ಷಟ್ಪದಿ ಎಂದರೆ ಹೆಸರೇ ಹೇಳುವಂತೆ ಆರು ಸಾಲಿನ ಪದ್ಯ. ಅಕ್ಷರಗಣ ಛಂದಸ್ಸಿಗೆ ಸೇರುವಂಥದ್ದು. ಈ ಕಾಲಘಟ್ಟದ ಪ್ರಮುಖ ಕವಿ ರಾಘವಾಂಕ. ಕರುಣಾರಸಕ್ಕೇ ಮೀಸಲಿರಿಸಿದ ಹಾಗೆ ಕಾವ್ಯವೊಂದನ್ನು ರಚಿಸಿದ್ದಾನೆ. ಇದರ ಹೆಸರು ಷಟ್ಪದಿ ಕಾವ್ಯಗಳ ರಾಜನೆಂಬ ಖ್ಯಾತಿಗೆ ಒಳಗಾಗಿರುವ “ಹರಿಶ್ಚಂದ್ರ ಕಾವ್ಯ”. “ಚಂದ್ರಮತಿಯ ಪ್ರಲಾಪ” ಎಂಬ ಕಾವ್ಯಭಾಗ ಎಂಥ ಭಾವಹೀನರನ್ನೂ ಭಾವುಕರನ್ನಾಗಿ ಮಾಡುತ್ತದೆ.

ಹುಲು-ಹುಳ್ಳಿಗಳನ್ನು ತರಲು ಕಾಡಿಗೆ ಹೋಗಿದ್ದ ಮಗ ಇನ್ನೂ ಬಂದಿಲ್ಲವೆಂದು ತನುವನು ಮರೆದು ಹೊರಗನಾಲಿಸಿ ಮಂದಮತಿಯಾಗಿದ್ದ ಚಂದ್ರಮತಿಗೆ ಬಾಲನೊಬ್ಬ ಬಂದು “ ನಿನ್ನ ಕಂದನನೊಂದುಗ್ರ ಫಣಿ ತಿಂದು ಜೀವಂಗಳೆದನೆಂದು” ಹೇಳುವಾಗ ಚಂದ್ರಮತಿಯ ಪರಿಸ್ಥಿತಿ ಏನಾಗಿರಬಹುದು ಊಹೆಗೂ ನಿಲುಕದು. “ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕನೇಕ ಭಲ್ಲುಕ, ಜಂಭುಕಂ ಘೂಕ ವೃಕಗಳೆಳೆಯದೆ ಬಿಡವು” ಎಂದಾಗ ಹೆತ್ತ ತಾಯಿಗೆ ಯಾವ ರೀತಿಯ ಆಘಾತ ಉಂಟಾಗಿರಬಹುದು ಊಹಿಸಲೂ ಅಸಾಧ್ಯ. ಮಗನ ಶವ ಕಾಡು ಪ್ರಾಣಿಗಳ ಪಾಲಾಗುತ್ತದೆ ಎಂದಾಗ ಅವಳ ಒಡಲಿನ ಬೆಂಕಿ ಯಾವ ತೆರನಾಗಿ ಹೊತ್ತಿ ಉರಿದಿರಬಹುದು.

ಒಡೆಯನಾದವನು ಲೋಹಿತಾಶ್ವನ ಸಾವಿನ ವಿಷಯ ಕೇಳಿ ಸಾಂತ್ವನ ಹೇಳುವ ಬದಲು” ಲೇಸಾಯ್ತು ಮಡಿದಡೆ” ಎನ್ನುತ್ತಾನೆ. “ಭಂಟರನು ಕೊಟ್ಟು ಅರಸಿಸೈ ತಂದೆ” ಎಂದು ಚಂದ್ರಮತಿ ಒರಲಿದರೆ “ ನಡುವಿರುಳು ಬಂಟರುಂಟೇ ನಿದ್ದಗೈಯಬೇಕು ಕಾಡದಿರು” ಎಂದು ಬಿಡುತ್ತಾನೆ ಉಳ್ಳವರ ಸಾಮಾಜಿ ಮೌಲ್ಯಗಳು ಹೀಗೆನೆ. ಅಂತೂ “ನರಿಗಳೆಳೆಯದ ಮುನ್ನ ದಹಿಸಬೇಡವೇ ತಂದೆ” ಎಂದು ಒಡೆಯನ ಎಲ್ಲ ಷರತ್ತುಗಳಿಗೆ ಬದ್ಧಳಾಗಿ ಮನೆಯಿಂದ ಹೊರಹೊರಟು’” ಬಿಟ್ಟತಲೆಯಂ ಬಿಚ್ಚಿದುಡುಗೆಯಂ ಮರೆದು ಗೋಳಿಟ್ಟು” ಎಂದಾಗ ಬಿಹಾರದ ಹೆಣ್ಣುಮಗಳೇ ಕಂಡಿತ ಕಣ್ಣೆದುರು ಬರುತ್ತಾಳೆ. ಹಸಿದವನೇ ಬಲ್ಲ ಹಸಿವಿನ ಶೂಲಿ ಸಂಕಟವನ್ನು ಅನುಭವಿಸಿದವರಿಗೆ ಮಾತ್ರ ಅದರ ತೀವ್ರತೆ ಅರಿವಾಗುತ್ತದೆ.

ಲೋಹಿತಾಶ್ವ ಕಾಡಿನಲ್ಲಿ ಕಾಣದಿದ್ದಾಗ “ಪೇಳಾವ ಠಾವೊಳಕೊಂಡುದಯ್ಯ ….. ಎನ್ನನೊಲ್ಲದಡೆ ಸಾಯೆಂಬುದೇನುಸುರದಿರಲೇಕೆ “ ಎಂದು ಒರಲುತ್ತಾಳೆ, ಮಗನ ಶವ ಸಿಕ್ಕಿದ ಮೇಲೂ ಇನ್ನೂ ಜೀವವಿದೆ ಎಂದು ಮುಂಡಾಡುತ್ತಾಳೆ ಮುದ್ದುಗರೆಯುತ್ತಾಳೆ. ಉಸಿರು ಇನ್ನೂ ನಿಂತಿಲ್ಲ ಎಂದು ನಾನಾ ಬಗೆಯ ಪರೀಕ್ಷೆಗಳನ್ನು ಮಾಡುತ್ತಾಳೆ. ಸಮಯ ನೋಡಿ ನನ್ನ ಗೋಣನ್ನು ಕತ್ತರಿಸಿಬಿಟ್ಟೆ ನಿನಗಾಗಿರಾಜ್ಯ ಕೋಶ ಎಲ್ಲ ಹೋದರೂ ಕಡೆಗೆ ಗಂಡ ದೂರವಾದರೂ ಸಹಿಸಿದೆ ಈಗ ನೀನೆ ಹೀಗಾದರೆ ಇನ್ಯಾರ ಮುಖವನ್ನು ನೋಡಿ ನನ್ನ ದುಃಖವನ್ನು ಮರೆಯಲಿ, ಹರಿಶ್ಚಚಂದ್ರ ಬಂದು ಕೇಳಿದರೆ ನಿನ್ನ ಮಗನನ್ನು ಉಗ್ರ ಫಣಿಯೊಂದು ಅಗಿಯಿತು ಎನ್ನಲೇ ಯಾರನ್ನ ತೋರಿಸಿ ಆ ರಾಯನ ದುಃಖವನ್ನು ಮರೆಯಿಸಲಿ ಎಂದು ಚೀತ್ಕರಿಸುತ್ತಾಳೆ. ಇಲ್ಲಿ ತಾಯಿ ಮಕ್ಕಳ ನಡುವಿನ ಭಾಂಧವ್ಯ ಹೇಗಿರುತ್ತದೆ . ಎಲ್ಲಕ್ಕಿಂತ ಕರುಳ ಸಂಬಂಧ ಮಿಗಿಲು ತಾನಿಟ್ಟ ತತ್ತಿ ತನ್ನೆದುರುಗೆ ನಾಶವಾದರೆ, ತಾ ಬೆಳೆದ ಫಲ ತನ್ನೆದುರೆ ರಣಹದ್ದಿಗೆ ಆಹುತಿಯಾಗಿ ಹೋದರೆ ಯಾವ ಮಾತೃ ಹೃದಯ ತಾನೆ ಸಹಿಸೀತು…? ಮುಂದೆ ಮಾತುಗಳು, ಶಬ್ದಗಳು ಬರಲಾರವು.

ಇದರ ಹಾಗೆ ಪುತ್ರ ಶೋಕವನ್ನು ಅನುಭವಿಸುವ ವಸ್ತುವುಳ್ಳ ಇನ್ನೊಂದು ಕನ್ನಡ ಸಾಹಿತ್ಯ ಚರಿತ್ರೆಯ ಚಂಪೂ ಕಾವ್ಯ ಷಡಕ್ಷರ ಕವಿಯ “ರಾಜಶೇಖರ ವಿಳಾಸ” ಇದರಲ್ಲಿ ಬರುವ 13ನೆ ಆಶ್ವಾಸದ ತಿರುಕೊಳವಿನಾಚಿಯ ಪ್ರಸಂಗ ಈ ಕಾವ್ಯ ಕಂದ ಪದ್ಯದಲ್ಲಿದೆ. ಕತೆಯಲ್ಲಿ ಚೋಲಮಂಡಲಾಧಿಪತಿ ಸತ್ಯೇಂದ್ರಚೋಳ ಹಾಗು ಅಮೃತಮತಿ ಮಹಾದೇವಿಯರಿಗೆ ರಾಜಶೇಖರನೆಂಬ ಮಗ ಇರುತ್ತಾನೆ. ಇವನ ಸ್ನೇಹಿತ ಮಿತವಚನ ಅಂದರೆ ಮಂತ್ರಿಯ ಮಗ. ಇಬ್ಬರೂ ಸ್ನೇಹಿತರು ಆತ್ಮವೊಂದೇ ದೇಹ ಬೇರೆ ಎಂಬಂತೆ ಇರುತ್ತಾರೆ. ಸಿಂಧೂರಾಜ ಕಾಣಿಕೆಯಾಗಿ ಕುದುರೆಗಳನ್ನು ನೀಡಿರುತ್ತಾನೆ. ಅಂಥ ಕುದುರೆಗಳ ಸವಾರಿಗೆ ಹೋದ ಪ್ರಾಣ ಸ್ನೇಹಿತರಿಂದ ಅನಾಹುತವೊಂದು ಸಂಭವಿಸುತ್ತದೆ. ಮಿತವಚನನ ಕುದುರೆ ತುಳಿತಕ್ಕೆ ಸಿಕ್ಕಿ ಶಿವಭಕ್ತೆ ತಿರುಕೊಳವಿನಾಚಿಯ ಮಗ ಶಂಕರ ಸಾಯುತ್ತಾನೆ.
ಆ ಮಗು ಶಂಕರ ಐದು ವರ್ಷದ ಮಗನಾಗಿರುತ್ತಾನೆ. ಏನೋ ಸದ್ದಾಗುತ್ತದೆಯಲ್ಲಾ ಎಂದು ರಸ್ತೆ ಬದಿಗೆ ಬಂದು ನಿಂತಿರುತ್ತಾನೆ ಅಮ್ಮ ನೀರಿಗೆ ಹೋಗಿರುತ್ತಾರೆ. ನೂಕುನುಗ್ಗಲಿನಲ್ಲಿ ಸಿಕ್ಕಿ ನೆಲಕ್ಕೆ ಬೀಳುತ್ತಾನೆ. ಗಾಬರಿಯಿಂದ ಕಂಗೆಟ್ಟು ದಾರಿ ತೋಚದೆ ತನ್ನ ತಾಯಿಯನ್ನು ಕರೆ ಕರೆದು ಅಳುತ್ತಾ ಇನ್ನೇನು ಎದ್ದೇಳುವಷ್ಟರಲ್ಲಿ ಮಂತ್ರಿಪುತ್ರನ ಖುರಪುಟದ ಬೀಸಿನಿಂದ ಶಂಕರನ ತಲೆ ಕತ್ತರಿಸಿ ಹೋಗುತ್ತದೆ. ರಾಜಶೇಖರ ಬಿದ್ದಿದ್ದ ಮಗುವನ್ನು ನೋಡಿ ನಿಲ್ಲಿಸುತ್ತಾನೆ. ಸ್ನೇಹಿತನಿಗೆ ತಿಳಿಸುವಷ್ಟರಲ್ಲಿ ಮಿತವಚನನ ಕುದುರೆಯ ಕಾಲಿಗೆ ಸಿಲುಕಿ ಶಂಕರನ ಕೊರಳಿನಿಂದ ರಕ್ತ ಚಿಲ್ಲನೆ ಚಿಮ್ಮುತ್ತದೆ. ಇಬ್ಬರೂ ಸ್ನೇಹಿತರು ಪ್ರಾಯಶ್ಚಿತ್ತ ಎಂಬಂತೆ ಶಿವ ಪೂಜೆಯಲ್ಲಿ ನಿರತರಾಗುತ್ತೇವೆ ಎಂದು ಹೋಗುತ್ತಾರೆ .
ನೆರೆದಿದ್ದ ಜನರೆಲ್ಲಾ ಸತ್ಯೇಂದ್ರ ಚೋಳ ಬಾಲವಧೆಯನ್ನು ಸಹಿಸುವವನಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ತಿರುಕೊಳವಿನಾಚಿ ಮನೆಯಲ್ಲಿ ಮಗ ಇಲ್ಲದೆ ಇರುವುದನ್ನು ನೋಡಿ “ಎಲ್ಲಿ ಹೋಗಿರಬಹುದು?”ಎಂದು ಗಾಬರಿಯಾಗಿ ಬೀದಿಯಲ್ಲಿ ಹುಡುಕುತ್ತಾ “ ಹಾ ಮಗನೆ ಹಾ ಮನೋಜ್ಞನೆ ಹಾ ಮುದ್ದು ಮಗ ಹಾ ಮಧುರವಾಣಿ” ಎಂದು ಕರೆಯುತ್ತಾ ಬರುತ್ತಾಳೆೆ.
ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ರುಂಡ ,ಮುಂಡಗಳನ್ನು ನೋಡಿದ ಜನರೆಲ್ಲಾ ಯಾರ ಮಗ ಹೀಗಾಗಿದ್ದಾನಲ್ಲ ಎಂದು ರೋಧಿಸುತ್ತಿರುವಾಗ ಜನರ ಗುಂಪನ್ನು ಸೀಳಿಕೊಂಡು ತಿರುಕೊಳವಿನಾಚಿ ಹೋಗುತ್ತಾಳೆ. ವೈಹಾಳಿಯ ದಾಳಿಗೆ ಮಗನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ ಆಕೆಯ ಎದೆ ನುಚ್ಚುನೂರಾಗುತ್ತದೆ. ಆ ಮಗನ ಶವವನ್ನು ಕಂಡ ಕೂಡಲೆ ತಿರುಕೊಳವಿನಾಚಿ ಕಾಡ್ಗಿಚ್ಚನ್ನು ನೋಡಿದ ಜಿಂಕೆಯಂತೆ, ಹದ್ದು ಮೇಲೇರಿ ಬಂದ ಹಾವಿನಂತಾಗುತ್ತಾಳೆ. ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಹಾಳಾದೆ ಎಂದು ಗೋಳಿಡುತ್ತಾಳೆ.
ತನ್ನ ಮಗನ ಕಳೇಬರವನ್ನು ಎತ್ತಿಕೊಂಡ ತಿರುಕೊಳವಿನಾಚಿ ಬೇರೆ ಬೇರೆಯಾಗಿದ್ದ ಮಗನ ರುಂಡ ಮುಂಡವನ್ನು ಅಂಟಿಸಿ ನೋಡುತ್ತಾಳೆ. ಯಾವ ಹೆತ್ತವರಿಗೂ ಬರಬಾರದ ಸಂಕಟ ಇದು. “ಪಸಿದೆಯೆಲೆ ಕಂದ ಬತ್ತಿತು, ಸರಿವರೆಯದ ಮಕ್ಕಳ್ ಶಂಕರನೆಲ್ಲಿ ಎಂದರೆ ಏನೆನ್ನಲಿ ಅರಸನ ಹಯಕ್ಕೆ ಆಹುತಿಯಾಗಿ ಹೋದ ಎನ್ನಲೇ? ನೀನಾಡಿದೆಡೆಗಳಂ ಸುತ ನೀನೊರಗಿದ ಪಾಸುವಂ, ನೀನುಂಡ ತಾಣವನ್ನು ಇನ್ನು ಹೇಗೆ ನೋಡಲಿ” ಎಂದು ಅರಚುತ್ತಾಳೆ ಬೀದಿಯಲ್ಲಿ ಬಿದ್ದು ಹೊರಳಾಡುತ್ತಾಳೆ. ರಾಜಹಾಗು ಮಂತ್ರಿಮಗನ ದರ್ಪಕ್ಕೆ ಇಲ್ಲಿ ಶಂಕರ ಸಾವನ್ನಪ್ಪುತ್ತಾನೆ.

ಈಗಲೂ ಪಡ್ಡೆ ಹುಡುಗರ ಬೈಕ್ ರೇಸ್ ಖಯಾಲಿಗೆ, ವ್ಹೀಲಿಂಗ್ ಖಯಾಲಿಗೆ ಬಲಿಯಾಗುವ ರಸ್ತೆಯಲ್ಲಿ ಆಠವಾಡುವ ಮಕ್ಕಳ ಸಂಖ್ಯೆ ಇಲ್ಲದಿಲ್ಲ. ಆದರೆ ಬಿಹಾರದ ಕಂದ ಅಸ್ವಸ್ಥನಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಷ್ಟರಲ್ಲಿ ಇಹಲೋಕ ತ್ಯಜಿಸಿಬಿಡುತ್ತದೆ. ಜೀವದ ಮಗುವನ್ನು ಎತ್ತಿಕೊಳ್ಳುವುದು ಬೇರೆ. ಸತ್ತ ಮಗನನ್ನು ಎತ್ತಿಕೊಂಡು ಬಿಸಿಲಲ್ಲಿ ರೋಧಿಸುತ್ತಾ ಆ ಸಂಕಟದಲ್ಲಿ ಹೇಗೆ ಹೆಜ್ಜೆ ಹಾಕಿರಬಹುದು ಊಹೆಗೆ ನಿಲಕುವುದಿಲ್ಲ. ಈ ಕಾವ್ಯದಲ್ಲಿ ಸತ್ತ ಬಾಲಕ ಮರಳುತ್ತಾನೆ. ಆದರೆ ಕೊರೊನಾದಂಥ ಹೆಮ್ಮಾರಿಯ ಅಟ್ಟಹಾಸದ ಸಲುವಾಗಿ ಬಿಹಾರದ ಬಾಲಕನ ಕತೆ ಜೀವಂತಕಾವ್ಯ ಸಮಾಧಿಯಾಗಿದೆ.

ಮಗನನ್ನು ಕಳೆದುಕೊಂಡ ತಾಯಿ ಹೃದಯದ ವೇದನೆ ಎಷ್ಟು ಹೇಳಿದರೂ ಕಡಿಮೆಯೇ. ಇಲ್ಲಿಯವರೆಗೆ ಹೇಳಿದ ಎರಡು ಸನ್ನಿವೇಶಗಳು ಕಾವ್ಯದಲ್ಲಿ ಉಲ್ಲೇಖವಾಗಿರುವಂಥದ್ದು ಇಲ್ಲಿಯ ತಾಯಿಯರ ದುಃಖ ಸಹೃದಯರಲ್ಲಿ ದುಃಖವನ್ನು ತರಿಸುತ್ತವೆ ಆದರೆ ಕಡೆಗೆ ಸುಖಾಂತ್ಯವಾಗುತ್ತದೆ. ಸತ್ತ ಬಾಲಕರು ಮರಳಿ ಬದುಕುತ್ತಾರೆ. “ಹ್ಯಾಪಿ ಎಂಡಿಂಗ್”, “ದಿ ಎಂಡ್” ಆಗುತ್ತದೆ. ಆದರೆ ಪ್ರತಿನಿತ್ಯ ಇಂಥ ಮಕ್ಕಳನ್ನು ಕಳೆದುಕೊಂಡು ನಿರಂತರ ದುಃಖವನ್ನು ಅನುಭವಿಸುವ ಅನೇಕ ಪೋಷಕರನ್ನು ನೋಡುತ್ತೇವೆ. ಈ ವರ್ಷ ಲಾಕ್ ಡೌನ್ ಇದೆ ಮಕ್ಕಳಿಗಾಗುತ್ತಿರುವ ಅವಘಢ ಕಡಿಮೆಯಾಗುತ್ತಿವೆ. ನೀರಿನಲ್ಲಿ ಈಜಲು ಹೋಗಿ ಸಾಯುವುದು. ಇಲ್ಲ ಕಾರುಗಳ ಒಳಗೆ ಲಾಕ್ ಆಗುವುದು. ಬಯಲು ಸೀಮೆಯಲ್ಲಿ ತೆರೆದ ಕೊಳವೆ ಬಾವಿಗಳಲ್ಲಿ ಬಿದ್ದು ಸಾಯುವುದು. ಮನೆ ಮುಂದೆ ಇಲ್ಲವೇ ರಸ್ತೆ ಬದಿಯಲ್ಲಿ ನಿಲ್ಲಿಸಿದ ವಾಹನಗಳನ್ನು ಚಾಲೂ ಮಾಡುವಾಗ ಅಕಸ್ಮಾತಾಗಿ ಚಕ್ರಗಳಿಗೆ ಸಿಲುಕಿಸಾಯುವುದು, ಇಲ್ಲ ನೀರಿನ ತೊಟ್ಟಿಗಳಿಗೆ ಬಿದ್ದು ಸಾಯುವುದು. ಲಿಫ್ಟ್ಗಳಲ್ಲಿ ಆಗುವ ಅನಾಹುತಗಳು, ಹಾವುಕಚ್ಚಿ ಸಾಯುವುದು ಹೀಗೆ…. . ಮುಖ್ಯ ರಸ್ತೆ ದಾಟಲು ಹೋಗಿ ಅಪಘಾತಗಳಾಗುವುದು, ಶಾಲಾ ವಾಹನಗಳ ಅಚಾತುಯರ್ಯದಿಂದ ಸಾವುಗಳಾಗುವುದು ಏನೇ ಆದರೂ ಸಾವು ಸಾವೇ .
ಇತ್ತೀಚಿನ ವಿಭಜಿತ ಕುಟುಂಬಗಳಲ್ಲಿ ಒಂದೇ ಮಗುವಿರುತ್ತದೆ. ಅದು ಹೆಣ್ಣು ಮಗು ಆಗಿರಬಹುದು. ಇಲ್ಲವೇ ಗಂಡು ಮಗು ಆಗಿರಬಹುದು.

ಅಚಾತುರ್ಯಗಳು ಸಂಭವಿಸಿದಾಗ ಬುದ್ಧಿ ಓಡುವುದಿಲ್ಲ ಯಾರಿಗೆ ಏನು ಮಾಡಬೇಕೆಂದು ತೋಚುತ್ತಿರುವುದಿಲ್ಲ. ಅದಕ್ಕೆ ರಾಘವಾಂಕ ತನ್ನ ಕಾವ್ಯದಲ್ಲಿ ಮಗನನ್ನು ಕಾಣದ ಚಂದ್ರಮತಿ ‘ಮಂದಮತಿ’ಯಾಗಿದ್ದಳು ಎನ್ನುವುದು. ಗರ ಬಡಿದಂತೆ, ಜಡವಾಗಿ ಹೋಗುತ್ತಾರೆ ಎಂಥವರೂ ಕೂಡ. ಏನಾದರೂ ಅಂಥ ಸಮಯವನ್ನು ಹೇಗೆ ನಿಭಾಯಿಸಬೇಕು ಎನ್ನುವ ಅರಿವಿರಬೇಕು . ಮತ್ತು ಸಾಮಾಜಿಕ ಬದ್ಧತೆ ಇರೆಬೇಕು. ಅದಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಇರಬೇಕು ಇಲ್ಲವಾದರೆ ಬಿಹಾರದಲ್ಲಿ ನಡೆದ ಮನಃಕಲಕುವ ಘಟನೆಗಳು ಮರುಕಳಿಸುತ್ತವೆ. ಆನಂತರ ಕಾಸ್ ಕೇಳಿ ನೋಟೀಸ್ ನೀಡಿದರೂ ಅಷ್ಟೆ! ಬಿಟ್ಟರು ಅಷ್ಟೆ! ಕಾಸ್ ಹೇಳಿದರೂ ಹೋದ ಜೀವ ಬರುತ್ತದೆಯೇ?