ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಫರ್ಹಾನಾಜ್ ಮಸ್ಕಿ
ಇತ್ತೀಚಿನ ಬರಹಗಳು: ಫರ್ಹಾನಾಜ್ ಮಸ್ಕಿ (ಎಲ್ಲವನ್ನು ಓದಿ)


ಚಹಾವೆಂದರೆ ಸುಮ್ಮನೆಯೇ?
ಅವಳ ಸಹಜ ಸ್ವಾದಕೆ,
ಏನೇನು ಬೇಕು‌ ನಿಮಗೆ!
ಸಕ್ಕರೆಯೊಂದಿದ್ದರೆ‌ ಸಾಕೆ?

ಬೆಳ್ಳನೆಯ ಹಾಲಿನಲಿ
ರುಚಿ, ರೂಢಿ ಎಂದು
ತಮ್ಮ ತಮ್ಮ ಇಷ್ಟದಂತೆ
ಏನೇನೋ ಬೆರೆಸಿ
ಬದಲಾಯಿಸಿ ಬಿಟ್ಟರು ಅವಳನು..

ಕುಟ್ಟಿ ಜಜ್ಜಿ ಅಂಗ ಅಂಗ
ಬೆರೆಸಿ ಏಲಕ್ಕಿ, ಶುಂಠಿ,ಲವಂಗ
ಒಂದಿಷ್ಟು ಕಹಿ ಒಂದಿಷ್ಟು ಸಿಹಿ
ಅವಳಿಂದಲೇ ಬೇಕು
ನಿಮಗೆ, ಯಾವ ಯಾವ ಸವಿ?

ಕೆಲವರಿಗೆ ಬೇಡದ ಹಾಲು
ಅವಳೆಂದರೆ‌ ಬರೀ ನೀರು…….
ನೀರೆಂದರೂ ಎಲ್ಲಿದೆ ಬಿಡುವು?
ಹಾಲೇ ಇಲ್ಲದ ಕಪ್ಪು ಚಹಾವು!
ಕೋತ ಕೋತ‌ ಕುದಿಸಿ,
ಎಲೆಗಳನು‌ ಸೇರಿಸಿ
ಅವಳ ನೋವಿಗೆ
ನಿಂಬೆಯೂ ಬೆರೆಸಿ,
ಇಷ್ಟಬಂದ ಬಟ್ಟಲಿನಲಿ ಸೋಸಿ
ಸೇರಿಸುವರು ಜೇನುತುಪ್ಪದ ಸವಿಯು

ಕುದಿ ಕಡಿಮೆ ಆಯಿತೋ
ಸ್ವಾದ ಸ್ವಲ್ಪವಾಯಿತೋ
ಸಿಹಿ ಕಹಿ‌ ಸಮವಿದೆಯೋ?
ನೋಡಿ ದೂರದಿಂದಲೇ ಬಣ್ಣ
ನಿರ್ಧರಿಸಿ ಬಿಡುವಿರಲ್ಲ ಅವಳ ಗುಣ?
ನೀವೆಷ್ಟು ಮಹಾನುಭವಿರಣ್ಣ!!!

ತಯಾರಿಸಲು ಅವಳನು
ಅದೆಷ್ಟು ಸಮಯ ಬೇಕು
ಇಷ್ಟ ಬಂದರೆ ಗುಟಕ್ಕನೆ ಕುಡಿ
ಕಷ್ಟವೆಂದರೆ ಬಿಸಾಡಿ
ಯಾಕೆ ಮತ್ತೇ ಮತ್ತೇ ಕುದಿಸುವಿರಿ?

ಅವಳಿಲ್ಲದೇ ಇಲ್ಲ ಹಗಲು?
ಏಕಾಂತ ಇರುಳಲಿ ಸಂಗಾತಿ ಅವಳು
ತಲೆನೋವಿಗೆ ಅವಳೇ ಮುಲಾಮು
ದಣಿವಾದರೂ ಅವಳದೇ ನೆನಪು
ಸಂತಸದಲೂ ಹೇಗೆ ಮರೆವು
ಚಹಾವಿಲ್ಲದೇ ಹೇಗೆ ಉಳಿವು?
ಎಲ್ಲೆಡೆ, ಬೇಕೇ ಬೇಕು ಚಹಾವು.