ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿ. ವೆಂಕಟಸುಬ್ಬಯ್ಯ

ಶಂಕರನಾರಾಯಣ ಉಪಾಧ್ಯಾಯ
ಇತ್ತೀಚಿನ ಬರಹಗಳು: ಶಂಕರನಾರಾಯಣ ಉಪಾಧ್ಯಾಯ (ಎಲ್ಲವನ್ನು ಓದಿ)

ಆಲೆಮನೆ ಕೊಪ್ಪರಿಗೆಯಲ್ಲಿ ಉಕ್ಕುಕ್ಕುತಿಹ
ಸೊದೆಯ ಕಬ್ಬಿನಹಾಲು ನಿಮ್ಮ ನಗುವು
ತಿರುತಿರುವಿ ಮರಮರಳಿ ನೊರೆ ಚೆಲ್ಲಿ ಹಬೆ ಹರಡಿ
ಮಧುಗಂಧ ಪಸರಿಸುವ ನಿಮ್ಮ ನಗುವು

ನಿರ್ಮೇಘದಾಕಾಶದಲ್ಲಿ ನಿರ್ಮಲವಾಗಿ
ಸುಪ್ರಸನ್ನತೆಯಲ್ಲಿ ತೇಲಿ ಸಾಗಿ
ಲೋಕಾವಲೋಕನದಿ ತಂಪುಮಳೆಗರೆವಂಥ
ರಾಕಾಶಶಾಂಕನೊಲು ನಿಮ್ಮ ನಗುವು

ಏನು ಭಾಷಾಚರ್ಚೆ, ಏನು ಕಾವ್ಯಾಸ್ವಾದ
ಏನು ಶಾಸ್ತ್ರಾರ್ಥ ವಾಙ್ಮಯವಿಹಾರ
ಏನು ಲೋಕಾಭಿರಾಮದ ಹರಟೆ ನಗುತಮಟೆ
ನಿಮ್ಮ ಒಡನಾಡಿತನ ಮರೆಯಲುಂಟೇ

ಜೀವನದ ಪಡಿಚಣದ ಸ್ವಾರಸ್ಯವನು ಹೀರಿ
ಸಂವೃದ್ಧರಾಗಿ ಧೀರಾಸಿಕ್ಯದಿ
ಹೊಸಚಿಗುರ ಬೆಳೆಸುತ್ತ ನುಡಿದೋಟದಲಿ ನಡೆದ
ನಿಮ್ಮ ನೇಹದ ನೋಟ ಮರೆಯಲುಂಟೇ

ಧೀವರರ ಜೊತೆಗಿದ್ದು ಧೀವರರೆ ತಾವಾಗಿ
ಕನ್ನಡ ನಿಘಂಟುವನ್ನಿತ್ತ ತವಸಿ
ಮೊಗದಿ ಗಂಟಿಕ್ಕದಿಹ ನೂರೆಂಟರಾಯುಸಿನ
ಕನ್ನಡದ ನುಡಿಗಂಟು ಧನ್ಯ ‘ಜೀವಿ’