ಇತ್ತೀಚಿನ ಬರಹಗಳು: ನಾಗರಾಜ ಕಡಲು (ಎಲ್ಲವನ್ನು ಓದಿ)
- ನನ್ನ ಕವಿತೆ… - ಜನವರಿ 14, 2021
ಅಕ್ಕಿ ಆರಿಸುವಾಗ ಅವ್ವನಿಗೆ ಸಿಕ್ಕ
ನುಚ್ಚು ನನ್ನ ಕವಿತೆ
ತನ್ನ ತಾನೇ ಸುಟ್ಟುಕೊಂಡು
ಅನಾಥವಾಗಿ ಬಿದ್ದ
ಅಪ್ಪ ಎಳೆದೆಸೆದ ಬೀಡಿಯ ಚೂರೂ ನನ್ನ ಕವಿತೆ.
ಎಡೆಬಿಡದೆ ಮಳೆ ಸುರಿವಾಗ
ಧಾವಂತದಲಿ ಶಾಲೆಗೆ ಹೊರಟ
ಪುಟ್ಟ ಪೋರನ ಬಿರುಸು ನನ್ನ ಕವಿತೆ.
ಫರ್ಲಾಂಗು ಅಂತರದಿ ಕೊಡೆ ಹಿಡಿದು ಕೂಗುವ
ಬಾಲೆಯೊಬ್ಬಳ ಕಕ್ಕುಲತೆ ನನ್ನ ಕವಿತೆ.
ದಿಕ್ಕುಗಳಿಗೆ ಹುಚ್ಚು ಹಿಡಿಸೊ
ಕಡಲ ತೀರದ ಗಾಳಿಯ ಉರುಬು ನನ್ನ ಕವಿತೆ.
ಒಮ್ಮೆ ಶಾಂತವಾಗಿ
ಮತ್ತೊಮ್ಮೆ ಕ್ರೋಧ ಹೆಚ್ಚಿಸಿಕೊಂಬ
ನೀರಿನ ಅಲೆ ನನ್ನ ಕವಿತೆ.
ಕಿಡಿಗೇಡಿ ರಾತ್ರಿಯ ಕುರುಹು
ಈ ರಂಗಿನೋಕುಳಿಯ ಸಂಜೆ ನನ್ನ ಕವಿತೆ
ಅಗಾಧ ನೆನಪ ಕೆದಕೊ
ಭಂಗವಾದ
ಹರೆಯದ ಅರುಳು ಮರುಳಿನ ಪ್ರೇಮ
ನನ್ನ ಕವಿತೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ