- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಮುದ್ದುಮಗುವೊಂದು ಅಕ್ಕರೆಯಲಿ
ನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿ
ನೋವಿನ ಸೊಂಟ ನೀವುತ್ತಲೇ ದೂರದ
ಕಾಗೆಗೆ ಹುಶ್ ಅಂದಿದ್ದಾಳೆ ಶಕ್ಕೂಬಾಯಿ
ಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರ
ಗೋಡೆ ಮೇಲೆ ಒಂಟಿನರಸಿಂಹನಿಗೆ ಅಭಯದ
ಕುಂಕುಮವಿಟ್ಟು ಸಿಕ್ಕದ ದುಶ್ಯಂತನ
ಎಂದೂ ನೆನೆಸದೆ ಅಚ್ಚುಕಟ್ಟಾಗಿ ಅವಲಕ್ಕಿ
ಕಲೆಸಿ ಪಟ್ಟಗೆ ತಿಂದು ಗಟ್ಟಿಯಾಗಿ ನಕ್ಕಿದ್ದಾಳೆ
ಸುಕ್ಕು ಗಟ್ಟಿದ ಕೆನ್ನೆಯೂದುವಂತೆ
ನಾಭಿಯಾಳದ ಕೂಗು ಮೊಳಗಿಸುತ್ತಾನೆ
ನಡುಮದ್ಯಾಹ್ನದ ರಣಬಿಸಿಲನ್ನೂ
ಸೋಲಿಸುವ ಉಮೇದಿಯಲ್ಲಿ ಹೆಜ್ಜೆಯೂರುತ್ತ
ಏಳು ದಶಕದ ಕುಲ್ಫಿ ಗಾಡಿ ದಬ್ಬುತ್ತಾನೆ ಜಾನಿ
ಕೊವಿಶೀಲ್ಡಿನ ಕೊನೆಯ ಡೋಸಿಳಿದ
ರಟ್ಟೆಗೆ ಅಂಗಿಯಿಳಿಸಿ ಆಟೊ ಹತ್ತಿದ
ಪಾಟೀಲಜ್ಜನಿಗೆ ಕೈಯಾಸರೆ ಕೊಟ್ಟು
ಬಾಗಿದ ಬೆನ್ನಿಗೆ ಆರು ದಶಕದ ಬಿಸಿಲುಂಡ
ಖಾಕಿಯಂಗಿ ಹಾಕಿಕೊಂಡು
ಚಾಲೂ ಆಗಲೊಪ್ಪದ ಗಾಡಿಯ
ಇಳುಕಲಿನಲ್ಲಿ ದಬ್ಬಿ ಡುರ್ ಅನ್ನಿಸಿ
ನಗೆಯಾಡುತ್ತಲೇ ಬೈಯುವ ಹುಸೇನಿ
ಅಕ್ಕಯ್ಯ ಜೋ ಎಂದು ಐದು ಮನೆ ಬಾಗಿಲಲಿ
ಜೋಳಿಗೆಯೊಡ್ಡಿ ಉಳಿದಂತೆ ಭಾರದ ಚೀಲದಲಿ
ತಿಂಡಿ ತಿನಿಸು ತುಂಬಿ ಮಾರುತ್ತ ಮಗಳ ಶಾಲೆಗೆ
ಫೀಸು ಕಟ್ಟಿ ಬಾಡಿಗೆ ಹೆಚ್ಚಿಸಿದ ಮಾಲಿಕನೊಂದಿಗೆ
ಜಗಳವಾಡಿ ಸ್ವಾಟೆ ತಿರುವಿ ಜನ್ಮ ಜಾಲಾಡಿದ್ದಾಳೆ ರೇಣಿ
ಮಂದಿ ಮನೆ ಮುಸುರೆ ತಿಕ್ಕುವ ಅವ್ವನ ಕಣ್ಣು
ತಪ್ಪಿಸಿ ಲಿಪ್ಸಿಟಿಕ್ ಬಳಿದು ಸೆಲ್ಫಿ ತೆಗೆದು ಸ್ಟೇಟಸ್
ಏರಿಸಿ ಆಚೀಚೆ ಏನೂ ಆಗಿಲ್ಲವೆಂಬಂತೆ ಸುಳಿದು
ಮೆಲ್ಲಗೆ ಫೋನಲ್ಲಿಣುಕಿ ಅವನು ನೋಡಿದನೊ
ಇಲ್ಲವೊ ಚಿಂತಿಸುತ್ತಲೇ ರಂಗೋಲಿಯೆಳೆಯುವ ವೇಣಿ
ಮೈತುಂಬ ಚಿಗುರಿದ ಮಾಮರದ ಪೊಟರೆಯಲಿ
ಕೂತು ಮೊಟ್ಟೆಯಿಟ್ಟು ಕೂಗುತಿದೆ ಕೋಗಿಲೆ
ಹಚ್ಚಗೆ ಮೊಗ್ಗರಳಿಸಿದ ಕಸ್ತೂರಿ ಮಲ್ಲಿಗೆ ತೂಗಿದೆ ತಲೆ
ಬಣ್ಣ ಹಚ್ಚಿ ರಂಗಕ್ಕಿಳಿದ ಪ್ಲವ ಪ್ರವೇಶ ಈಗಲೆ
ಧೀಗಣಕ್ಕೆ ಮೆಚ್ಚಿ ಶಿಳ್ಳೆ ಹಾಕುತ್ತಾರೆ ಭಲೆಭಲೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ