ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಿಲುಗಡೆಗಳ ಲೆಕ್ಕ ಹಾಕುತಿದೆ ದೀಪ

ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ದೂರದಲ್ಲೊಂದು
ದೀಪ ಉರಿಯುತಿದೆ
ರಾತ್ರಿ ಜಾರಿದ ಮೇಲೂ.
ಕತ್ತಲೆಯ ಕಳೆಯಲು ಅಲ್ಲ
ನೀರವತೆಯ ಸರಿಸಲೂ ಅಲ್ಲ
ಒಂದೊಂದು ಉಸಿರಿಗೂ ಲೆಕ್ಕ ಬರೆಯುತಿದೆ

ಅಲ್ಲೆಲ್ಲೋ ರೈಲಿನ ಕ್ಷೀಣ ಸದ್ದು
ಯಾರು ಯಾರೋ ಯಾರಿಗಾಗಿಯೋ ಹೊರಟಿದ್ದಾರೆ
ಮಂಪರಿನಲ್ಲೂ ಅರೆ ತೆರೆದ ಕಣ್ಣುಗಳು
ಹುಡುಕುತ್ತೇವೆ, ಬಯಸುತ್ತವೆ
ನಿಂತಾಗ ಹೊರ ನೋಡುತ್ತವೆ
ಅರೆ ಬರೆ ಜನರ ಸಂದಿನಲ್ಲಿ

ಎಲ್ಲೂ ದಕ್ಕದ್ದು ಇಲ್ಲಿ ದಕ್ಕೀತೆ?
ಒಪ್ಪಲು ಸಿದ್ಧವಿಲ್ಲ ಮನ
ಮತ್ತೆ ಮುಂದಿನ ನಿಲುಗಡೆ
ಅದರ ಮುಂದಿನದು…

ಕಳೆದ ನಿಲುಗಡೆಗಳನ್ನು ದೀಪ ಎಣಿಸುತಿದೆ
ಉಸಿರಿಗೆ ತಾಳೆ ಹಾಕಿ.
ದೀಪವಾರಿ ನಸುಕಿನ ನಿದ್ದೆಯಲ್ಲಿ
ಇನ್ನೊಂದು ನಿಲುಗಡೆಯ ಕನಸು.