ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

Cliffs by Paul Nash (1889–1946). Original from The Yale University Art Gallery. Digitally enhanced by rawpixel.

ಪ್ರಕೃತಿ

ರೇವಣಸಿದ್ದಪ್ಪ ಜಿ.ಆರ್.
ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)

ಧಗಧಗ ದಹಿಸುತ್ತದೆ ಬೆಂಕಿ;
ಸುಯ್ಯನೆ ಸುಳಿಯುತ್ತದೆ ಗಾಳಿ;
ಜುಳುಜುಳು ಹರಿಯುತ್ತದೆ ನೀರು;
ಪರದೆ ಹೊದಿಸಿದಂತೆ ಪಸರಿಸಿದೆ ಬಾನು;
ಗಿರಗಿರ ತಿರುಗುತ್ತದೆ ಭೂಮಿ.
ಫರ್ಮಾನು ಹೊರಡಿಸಿಯಾರೆ
ಯಾರೋ
ಅವುಗಳಿಗೆ ಸುಮ್ಮನೆ ಇರಲು?

ಕಪ್ಪು ಬಿಳಿಯಲ್ಲ;
ನೀಲಿ ಹಸಿರಲ್ಲ;
ಹಳದಿ ಕೆಂಪಲ್ಲ.
ಈ ಬಣ್ಣಗಳೇಕೆ
ಅವವೇ ಬಣ್ಣಗಳಲ್ಲಿ
ಶೋಭಿಸುತ್ತವೆ?
ಹೇಳಬಹುದೆ
ಬಣ್ಣಗಳಿಗೂ
ಬಣ್ಣ ಬದಲಾಯಿಸಲು?

ಒದರುತ್ತದೆ ಕತ್ತೆ;
ಬೊಗಳುತ್ತದೆ ನಾಯಿ;
ಬುಸುಗುಡುತ್ತದೆ ಹಾವು;
ಕುಹೂ ಕುಹೂ ಹಾಡುತ್ತದೆ ಕೋಗಿಲೆ;
ಕಾವ್ ಕಾವ್ ಅನ್ನುತ್ತದೆ ಕಾಗೆ.
ಹಾಗಲ್ಲದೆ ಬೇರೆಯದೊಂದು
ನಾದ ಹೊಮ್ಮಿಸಬಹುದೆ?

ರಾಡಿಯಲ್ಲಿ ಮುಳುಗೇಳುತ್ತದೆ ಎಮ್ಮೆ;
ಚರಂಡಿಯಲ್ಲಿ ಆಡುತ್ತದೆ ಹಂದಿ;
ಗಾಳಿಯಲ್ಲಿ ಹಾರುತ್ತದೆ ಹಕ್ಕಿ;
ನೀರಿನಲ್ಲಿ ಈಸುತ್ತದೆ ಮೀನು.
ತಡೆಯಬಹುದೆ
ಅವುಗಳ ವಿಲಾಸವನು?

ಕೆಲವರು ದಪ್ಪ,
ಕೆಲವರು ತೆಳು;
ಕೆಲವರು ಬಿಳಿ,
ಮತ್ತೆ ಕೆಲವರು ಕಪ್ಪು;
ಕೆಲವರು ಗಿಡ್ಡ,
ಇನ್ನೂ ಕೆಲವರು ಉದ್ದ;
ಕೆಲವರು ಒಳ್ಳೆಯವರಂತೆ,
ಹಲವರು ಕೆಟ್ಟವರಂತೆ;
ಕೆಲವರು ಮಂದಬುದ್ಧಿಯವರು,
ಮತ್ತೆ ಕೆಲವರು ಅತೀ ಬುದ್ಧಿವಂತರು.

ಒಬ್ಬೇ ಒಬ್ಬ ದೇವರು;
ನಾಮಗಳು ಹಲವು.
ಒಬ್ಬನೇ ಕರ್ತನ ಸೃಷ್ಟಿ;
ತರಹೇವಾರಿ ಚರಾಚರಗಳು.


ರೇವಣಸಿದ್ದಪ್ಪ ಜಿ. ಆರ್.