ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬವಣೆಯ ಬೆದರು ಬೊಂಬೆ

ಸ್ವಭಾವ ಕೋಳಗುಂದ
ಇತ್ತೀಚಿನ ಬರಹಗಳು: ಸ್ವಭಾವ ಕೋಳಗುಂದ (ಎಲ್ಲವನ್ನು ಓದಿ)

ದಾರಿಗಳು ಕವಲು
ನಡೆದ ನಡೆವ ಕಾಲುಗಳು
ಗುರಿಯಿಲ್ಲದ ಸಹಪಯಣ
ಹಮ್ಮುಬಿಮ್ಮುಗಳ ಹಂಗಿಲ್ಲದೆ
ಬೆಸುಗೆ ಬೆರಳು ಹೃದಯದ ಮನ

ಗಾಳಿ ಗುದ್ದಿದರೂ
ಮಳೆ ತೋಯಿಸಿದರೂ
ಮಿಂಚು ಬೆಳಕಲ್ಲಿ
ದೂರದ ಆಸೆ
ಪ್ರಯಾಣ ಬೇಗ ಮುಗಿವುದೆಂದು

ಹೂವು ಬೇಲಿಯ ಸಿಂಗರಿಸಿ
ಶಿವನ ನೆತ್ತಿಯ ಮೇಲೂ ಸಾಗಿ
ಚಂದ್ರನ ಚಳಿಯ ಭಯವಿಲ್ಲದೆ
ಕೊರಳ ಸುತ್ತಿ ಕಂಪು ಹರಡಿದೆ
ದಾರಿ ಆಯಾಸ ಮರೆಸಲೆಂದು

ನೆಟ್ಟ ಮರ ಬಳ್ಳಿ
ಹಣ್ಣು ಕಾಯಿಗಳ ಸಿಹಿಯೊಗರು
ಹದವಾಗಿ ಬೆಂದ ಅಗುಳು
ನೈವೇದ್ಯಕ್ಕೆ ನಡೆದು
ಮೋಕ್ಷದ ಸುಖ

ಧಾವಂತದ ಬದುಕು
ದಿಗಿಲುಗಳ ಚೆಂಡಾಟದಲಿ
ತೂರಿ ತೂರಿ ಬೆನ್ನು ಬಡಿದು
ಮತ್ತೆ ಮತ್ತೆ ನೆನಪುಗಳ ಹಾದಿಯಲ್ಲಿ
ತಿರು ತಿರುಗಿ ನೋಡುತ್ತಲೇ ಪುಟಿಯುತ್ತಿದೆ

ಸಣ್ಣಗೆ ಹರಿದಂತೆ ತೊರೆ
ಚಳುಕು ಮೈಯೊಳಗೆ
ಇನ್ನೂ ಮುಗಿಯದ ಯಾನ
ನೂರುಗಳ ದಾಟಿತ್ತು
ನೆರಳ ನೀಡದ ಬಂಧುತ್ವದ ಕಲ್ಲು ಗೂಟ