ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಣ್ಣು-ಬೀಜ

ವಸಂತ​ ಕುಲಕರ್ಣಿ
ಇತ್ತೀಚಿನ ಬರಹಗಳು: ವಸಂತ​ ಕುಲಕರ್ಣಿ (ಎಲ್ಲವನ್ನು ಓದಿ)

ಮೊನ್ನೆ ಯಾರೋ ಎಸೆದ ಬೀಜವಿಂದು ಮೊಳೆತಿದೆ.
ಕರಿಯದೋ, ಬಿಳಿಯದೋ ಅದು ಯಾವ ಬಣ್ಣದ್ದು,
ಬೀಜವದು ಹಸಿರಾಗಿ ಇಂದು ತಲೆಯನೆತ್ತಿದೆ.
ಅದು ಯಾವ ಆಸೆಯದು, ಅದು ಯಾವ ಭಾವವದು
ಮಣ್ಣ ಒಡಲಲ್ಲಿ ಅಂಕುರಿಸಿದೆ? ಚಿಗುರಾಗಿದೆ?
ಮಣ್ಣ ಮಮತೆಯೋ ಒಳಗಿನ ಬಯಕೆಯೋ ಕುಡಿಯು
ಮೊಳಕೆಯೊಡೆದಿದೆ, ಆಗಸದತ್ತ ಮುಖ ಮಾಡಿದೆ.
ಮಳೆ ಬಿಸಿಲುಗಳ ನಡುವೆ ಬೆಳೆವ ತವಕ ಮೂಡಿದೆ.

ಕಾಳುಗಳ ಕಾತರಿಕೆ ಒತ್ತಾಸೆ ಭೂತಾಯಿ
ಹನಿಯುಣಿಸಿ, ಆಸರೆಯ ನೀಡುತ್ತ ಬೆಳೆಸುವಳು.
ಬೀಜವದು ಸಸಿಯಾಗಿ ಮರವಾಗಿ ಮಾರ್ಪಡುತ
ಗಟ್ಟಿನೆಲೆ ಪಡೆವಂತೆ ಮಾಡುವಳು ಮಾತಾಯಿ.
ಅಚ್ಚರಿಯ ವಿಷಯವಿದು ನಿಸರ್ಗದ ನಿಜತಿರುಳು
ನಿಸ್ವಾರ್ಥದಲಿ ನಡೆವ ಸೇವೆಯಿದು ಅನವರತ.