ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮತ್ತೆ ಹುಟ್ಟುವುದಾದರೆ ಮೊದಲೇ ಹೇಳಿಬಿಡು

ಶುಭಶ್ರೀ ಭಟ್ಟ

ಅದೊಂದು ಅಮಲಿನ ರಾತ್ರಿಯಲಿ
ಯಶೋಧರೆಯ ಕಡುನೀಲಿ ಮೋಹವ
ಸುಪ್ಪತ್ತಿಗೆಯ ಸುಖವ ತೊರೆದು
ಸದ್ದಿಲ್ಲದೆ ಎದ್ದುಹೋದ ಬಗೆಯನ್ನೊಮ್ಮೆ ಕಾಣಬೇಕಿದೆ|

ಜಗದಿರುಹನೇ ಮರೆತು
ಮಂದಸ್ಮಿತನಾಗಿ ಕೂತು
ಜ್ಞಾನಮುದ್ರೆಯಲಿ ಧ್ಯಾನಿಸುತಾ
ಬೋಧಿಯಡಿಯಲ್ಲಿ ಜಗಮಗಿಸಿದ ಬೆಳಕನ್ನೊಮ್ಮೆ ನೋಡಬೇಕಿದೆ|

ನೋವಿಗದ್ದಿದ ಬದುಕ
ಆಸೆಯಲ್ಲಡಗಿದ ದುಃಖವ
ಶಾಂತಿಮಂತ್ರವ ಪಠಿಸಿ
ಪೂರ್ಣಿಮೆಯಂತೆ ತಂಪಾಗಿಸಿದವನೊಮ್ಮೆ ಕಣ್ತುಂಬಿಕೊಳ್ಳಬೇಕಿದೆ|

ಏನೇ ಹೇಳು ನಿನ್ನಂತಾಗುವುದು ಸುಲಭವೇ ಅಲ್ಲ
ಅಪರಾತ್ರಿಯಲೆದ್ದರೂ ನಿದ್ದೆ ಕುಸಿಯುತ್ತದೆ
ಮೋಹ ಕಳಚುವ ಬಗ್ಗೆ ಯೋಚಿಸಿದಷ್ಟೂ ಸರಪಳಿಯಾಗುತ್ತದೆ
ಸಹನೆ ತಂದುಕೊಂಡಷ್ಟು ಕೆಂಡದ ಮಳೆ ಸುರಿಯುತ್ತದೆ|

ಮತ್ತೆ ಹುಟ್ಟುವುದಾದರೆ ಮೊದಲೇ ಹೇಳಿಬಿಡು
ತಿರುವಿನಲ್ಲಿ ಹಿಂತಿರುಗಿ ನೋಡುತ್ತಾ
ದಣಪೆಯಲ್ಲಿ ನಿಂತು ಇಣುಕುತ್ತಾ
ಬಾಗಿಲಿಗೆ ಮಿಡವಿಕ್ಕದೇ ಕಾಯುವೆ|
ಒಮ್ಮೊಮ್ಮೆ ಯಶೋಧರೆಯೂ
ಬುದ್ಧನಾಗಬಯಸುತ್ತಾಳೆ