- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ನುಣ್ಣಗಿನ ಮುಖ ಮಲ್ಲಿಗೆಯರಳಿಸಿ
ಪ್ರಜ್ನಾ ಮತ್ತಿಹಳ್ಳಿ
ಬಂದನೊ ದೇವರ ದೇವ ಸಂಜೀವ….
ಪ್ರಸಂಗ ಯಾವುದಿದ್ದರೂ
ಭಾಗವತದಲ್ಲಿ ಕೃಷ್ಣನ ವೇಶ
ಬೇಕೇ ಬೇಕಲ್ಲವೆ
ಕಿರುಗೆಜ್ಜೆಯ ಪ್ರವೇಶ
ಸಣ್ಣಗೆ ಬಿಳಿನಗೆಯಾಡುತ್ತ
ನುಣ್ಣಗಿನ ಮುಖ ಮಲ್ಲಿಗೆಯರಳಿಸಿ
ಬಂದನೊ ದೇವರ ದೇವ ಸಂಜೀವ….
ಚೌಕಿಯ ಬೆಳಕೆಲ್ಲ ಕನ್ನಡಿಗಿಳಿದು
ಫಳಫಳ ಹೊಳೆಯುತ್ತದೆ
ನೀಲ ವದನ ಕಮಲ ನಯನ
ಕೊಳಲನೂದುತ್ತ ಬಂದ
ಚೆಲುವ ಗೋಪಿಯ ಕಂದ
ಆಹಾ ಪ್ರವೇಶ ಮಾಡಿದೊಡನೆಯೇ
ಸಿಳ್ಳೆ ಚಪ್ಪಾಳೆ ಮುಗಿಲು ಮುಟ್ಟಿ
ಪಗಡೆಯ ತಾವರೆ ನೆಲಕ್ಕೆ ತಾಗುವಷ್ಟು
ಬಾಗಿ ಬಳುಕಿ ಮಂದಹಾಸ ಬೀರುತ್ತ
ಗಾಢಾಂಧಕಾರದ ಇರುಳಲ್ಲಿ
ಸುರಿವ ಘೋರ ಮಳೆಯಲ್ಲಿ
ಹಿಂಸೆ ಕಾಯುವ ಸೆರೆಯಲ್ಲಿ
ನೀನು ಹುಟ್ಟಿದೆಯಂತೆ
ಅನಾದಿಯಿಂದ ಕಾಯುತ್ತಿದ್ದವರು
ಆ ಕ್ಷಣವೇ ವಿಸ್ಮರಣೆಗೆ ಜಾರಿದರು
ಭೋರ್ಗರೆವ ಯಮುನೆಗೂ
ಕಾಲ್ದಾರಿಯಾಗಿ ಕರಕೊಳ್ಳುವಾಸೆ
ಸುರಿವ ಹನಿ ಸೋಂಕದಂತೆ
ಹೆಡೆಯಗಲಿಸಿ ಪೊರೆವ ಶಕ್ತಿ
ಭೀತಿ ಮಿತಿ ಮೀರಿದಾಗ ಒಳಿತನ್ನು
ಸೃಷ್ಟಿಸಲು ತುದಿಗಾಲಲ್ಲಿರುವುದು ಜಗ
ಹಾಲು ಮಾರಲು ಹೊರಟವರಿಗೆ
ದಾರಿಯುದ್ದಕ್ಕೂ ಚಡಪಡಿಕೆ
ನೀ ಬಾರದಿದ್ದರೆ ಮನಸಿನೊಸಗೆಯ
ಕೆನೆಭಾವ ತಿಳಿದು ಹೀರದಿದ್ದರೆ
ಕಪಟಸಂತೆಯಲ್ಲಿ ಬೆಲೆ ಕಟ್ಟುವರ್ಯಾರು?
ಹೆಪ್ಪಿಟ್ಟ ಕನಸು ಚಿಂತೆಯ ಮಂತು
ನವನೀತ ಮುದ್ದೆ ಮೆಲುವ ತಿಳಿವು
ಅನ್ಯರಿಗಿಲ್ಲ ಎಂದರಿತೇ ಉತ್ತುಂಗ
ಭಕ್ತಿಯ ನಿಲುವಿಗೆ ನೇತಾಡಿಸಿದ್ದೇವೆ
ಸಾಧುಭಾವದ ಗೋವು ಮೇಯುವ
ಹುಲ್ಲು ನದಿ ದಂಡೆಗುಂಟ
ದುಷ್ಟ ಕಾಳಿಂಗನಾಟದ ಕಾಟ
ಧುಮುಕಿ ಧಿಮಿಕಿಟ ಮರ್ದನದ
ಕುಣಿತಕ್ಕೆ ನೀನೇ ಸೈ
ಬಾವಿ ಬಚ್ಚಲು ಒಲೆಯೆದುರು ಸುಡು
ಆತ್ಮಕೊಂದು ಸಾಥಿಯ ತಲಾಶಿಯಲ್ಲಿರುವ
ನಾಗವೇಣಿಯರ ಸಹಜೀವದ ಸಾಂತ್ವನ
ಬಿದಿರು ರಂದ್ರಗಳಿಗೆ ಉಸಿರೂದುವ ಕಲೆ
ನೀನಷ್ಟೇ ತಿಳಿದ ಜೀವನೆಲೆ ಮಾಧವಾ
ಉಳಿದ ವೇಷಗಳು ದೊಡ್ಡ ಕಿರೀಟ
ಭಾರೀ ಕತ್ತಿ ಹೊತ್ತು ಹಾರಿ ಕುಣಿದು
ಆರ್ಭಟಿಸಿ ತ್ರಾಸು ಪಟ್ಟಿದ್ದ ಮರೆತೇ
ಹೋದಂತೆ ಜನ ಖುಷಿಯಿಂದ ಕರೆದರು
ನೀನೇ ಕುಣಿಸುವೆ ಜೀವರನು
ಕಾಯುತ್ತಿದ್ದಾರೆ ಭಾಗವತರು
ಆಡ ಪೋಗೋಣ ಬಾರೊ ರಂಗ
ಬೇರೆ ಬೇರೆ ಸ್ಥಾಯಿಯಲ್ಲಿ ಹಾಡಿ
ಚಪ್ಪಾಳೆ ಗಿಟ್ಟಿಸಿ ಹೆಮ್ಮೆಯಿಂದೊಮ್ಮೆ
ಮದ್ದಳೆಗಾರನೆಡೆ ಹುಬ್ಬೇರಿಸಿ ನಗಲು
ಇನ್ನೂ ಪಾಗು ಕಟ್ಟಿಯಾಗಿಲ್ಲವೆ ಶ್ಯಾಮ
ಝಂಝಣ ನೂಪುರ ಸರ ಬಿಗಿದು
ವೀರಗಾಸೆಯ ಉದ್ದನೆ ಮಿಂಚುಗೊಂಡೆ
ಕೈಲಿ ಹಿಡಿದು ತುಟಿಗೆ ತಾಗಿಸುವ ಕೊಮ್ಮಣೆ
ನಗೆ ಹಾಯಿಸುತ್ತ ಬಾರಯ್ಯ ರಂಗಸ್ಥಳಕ್ಕೆ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..