- ರಸ್ತೆಯ ಉಬ್ಬುಗಳು - ಜುಲೈ 18, 2025
- ಬೆರಳ ತುದಿಯಲ್ಲಿ ಹಣಪಾವತಿ - ಜನವರಿ 13, 2025
- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
ನೀವು ರಸ್ತೆಯಲ್ಲಿ ನಿಮ್ಮ ಗಾಡಿಯಲ್ಲಿ ಅಥವಾ ಕಾರಿನಲ್ಲಿ ಒಂದು ಅಳತೆ ವೇಗದಲ್ಲಿ, ಯಾವುದೋ ಮನಕ್ಕೆ ಹಿಡಿಸಿದ ಹಾಡನ್ನು ಗುನುಗುನಾಯಿಸಿಕೊಳ್ಳುತ್ತಾ ಹೋಗುತ್ತಿರುತ್ತೀರಿ. ಅಥವಾ ನಿಮ್ಮ ಮಡದಿಯ ಮನದನ್ನೆಯ ಜತೆಯಲ್ಲಿ ಲಲ್ಲೆ ಹೊಡೆಯುತ್ತ ಅಥವಾ ಸುದ್ಧಿ ಹೇಳುತ್ತಾ ಹೋಗುತ್ತಿರುತ್ತೀರಿ. ‘ಆಜ್ ಮೌಸಮ್ ಬಡಾ ಬೇ ಇಮಾನ್ ಹೈ’ ಅಂತ ಹಾಡೊಂದು ನಿಮ್ಮ ತುಟಿಗಳ ಮೇಲೆ ತಂತಾನೇ ಸುಳಿದು ಬರುತ್ತಾ ಸರಾಗ ಹೋಗುತ್ತಿರುವಾಗ ಅಕಸ್ಮಾತ್ತಾಗಿ ಒಮ್ಮೆ ಗಾಡಿ ಏನೋ ಏರಿ ’ಗಚಕ್’ ಅಂತ ಕೆಳಗಿಳಿಯುತ್ತದೆ. ನೀವು ಬೆಚ್ಚಿ ಬೀಳುತ್ತೀರಿ. ಬೆನ್ನು ಮೂಳೆಯೋ, ಕತ್ತೋ ಉಳುಕಿದ ಹಾಗಾಗುತ್ತದೆ. ಗಾಡಿಯ ಯಾವುದೋ ಭಾಗ ಕಳಚಿದ ಹಾಗೆ ಅನಿಸುತ್ತದೆ. ಅಥವಾ ಕಿರ್ ಎಂದು ತನ್ನ ಅಸಮಾಧಾನ ಸೂಚಿಸುತ್ತದೆ. ನಿಮ್ಮಾಕೆ ಅಥವಾ ಸಾಥಿ ಮುಖ ಮುರುಟಿಕೊಳ್ಳುತ್ತಾಳೆ. ಗಾಡಿಯ ಹಿಂಭಾಗ ನೋಡುತ್ತೀರಿ ನಿಮ್ಮ ಜೊತೆ ಕೂತವರು ಇದಾರಾ ಇಲ್ಲ ಅಂತ. ತುಂಬಾ ಸಲ ಹಿಂದೆ ಕೂತವರು ಹಾರಿ ಬಿದ್ದು ಕೈ ಕಾಲು ಜಖಂ ಆಗುವುದಿದೆ. ಸಾವರಿಸಿಕೊಂಡು ಏನಾಯಿತು ಅಂತ ನೋಡಿದಾಗ ನಿಮಗೆ ಕಾಣದಂತೆ ರಸ್ತೆಯ ಬಣ್ಣದಲ್ಲೇ ಅಡಗಿಕೊಂಡಿದ್ದು ನಿಮ್ಮನ್ನು ಗೊಂದಲಕ್ಕೀಡು ಮಾಡಿದ ರಸ್ತೆ ಉಬ್ಬು ನಿಮ್ಮನ್ನು ಅಣಕಿಸಿ ನಕ್ಕ ಹಾಗಾಗುತ್ತದೆ. ಇದು ಬಹುತೇಕ ಎಲ್ಲ ವಾಹನ ಚಾಲಕರೂ ನಮ್ಮ ದೇಶದಲ್ಲಿ ದಿನಕ್ಕೊಂದು ಸಲ ಅನುಭವಿಸಲೇಬೇಕಾದ ಸನ್ನಿವೇಶ.. ಪಾದಚಾರಿಗಳಿಗೂ ಕತ್ತಲಿನಲ್ಲಿ ಇದು ಸ್ವಲ್ಪ ಕಿರುಕುಳ ಕೊಡುತ್ತದೆ. ಆದರೆ ನೆನಪಿಡುವಷ್ಟು ಮಾತ್ರ ಅಲ್ಲ.
ನಾನಿರುವ ಹೈದರಾಬಾದ್ ನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಕಂಡು ಬರುವ ಅಪಾಯಕಾರಿ ರಸ್ತೆ ಉಬ್ಬುಗಳನ್ನು ಅನುಭವಿಸಿದ್ದೇನೆ. ಒಂದರ್ಧ ಕಿಲೋಮೀಟರ್ ರೋಡಿನಲ್ಲಿ, ಅನೇಕ ಕಾರಣಗಳಿಂದಾಗಿ ಎಂಟು ರಸ್ತೆ ಉಬ್ಬುಗಳನ್ನು ದಾಟಿ ಬಂದಾಗ ನನ್ನ ಕತ್ತು ಸ್ವಲ್ಪ ಹೊತ್ತಿನವರೆಗೆ ಮೇಲಕ್ಕೆ ಕೆಳಕ್ಕೆ ಅಲುಗಾಡುತ್ತಲೇ ಇತ್ತು. ಈಗ ಸಾಧ್ಯ ಆದಷ್ಟು ಆ ದಾರಿ ತಪ್ಪಿಸಿಯೇ ಹೋಗುತ್ತೇನೆ. ಮತ್ತೆ ಸುಮ್ಮನೆ ಸಿಮೆಂಟು ಮತ್ತು ಜೆಲ್ಲಿಕಲ್ಲು ಕಲಿಸಿ ಸುರಿದ ಉಬ್ಬುಗಳು. ಅವು ಎತ್ತರವಾಗಿ ಮತ್ತು ಮೊನಚಾಗಿದ್ದು ನನ್ನ ಗಾಡಿಯ ಜಖಂ ಮಾಡುವಂತಿದ್ದವು.
ದೇಶದಲ್ಲಿ ಇಷ್ಟೆಲ್ಲ ಜ್ವಲಂತ ಸಮಸ್ಯೆಗಳಿರುವಾಗ ನಾನು ಈ ಉಬ್ಬುತಗ್ಗುಗಳ ಬಗ್ಗೆ ಏಕೆ ಲೇಖನ ಬರೆಯುತ್ತಿದ್ದೇನೆ ಅಂತ ನಿಮಗೆ ಅನಿಸಿರಬಹುದು. ಆದರೆ ನಾನು ದ್ವೇಷಿಸುವ ಅನೇಕ ವಿಷಯಗಳಲ್ಲಿ ಇವೂ ಒಂದು. ರಸ್ತೆಯ ಮೇಲೆ ಹೋಗುವಾಗ ಇವು ನನಗೆ ದೈತ್ಯಾಕಾರ ವಾಗಿ ಕಾಣುತ್ತವೆ. ಒಂದೊಂದೂ ಉಬ್ಬು ದಾಟುವಾಗ ನನಗೆ ಸಿಟ್ಟು ಇಮ್ಮಡಿಯಾಗುತ್ತದೆ. ಯಾಗೆ ಇಷ್ಟು ಸಿಟ್ಟು? ಗಾಡಿಗಳ ವೇಗ ನಿಯಂತ್ರಣಕ್ಕೆ ತರುತ್ತವೆ, ಅಪಘಾತಗಳಾಗದ ಹಾಗೆ ಮಾಡುತ್ತವೆ. ಪಾದಚಾರಿಗಳಿಗೆ ರಕ್ಷಣೆಯಾಗುತ್ತವೆ ಎನ್ನುವ ವಾದನೆ ಸಮಂಜಸವೆನಿಸಿದರೂ, ಇವೆಲ್ಲ ಉಬ್ಬುಗಳನ್ನು ಸರಿಯಾಗಿ ಹಾಕಿ, ಬಳಸಿದರೆ ಮಾತ್ರ ಅಲ್ಲವೇ ? ಎಲ್ಲಿ. ಹೇಗೆ ಸಿಕ್ಕರೆ ಹಾಗೆ, ಎಲ್ಲಂದರಲ್ಲಿ, ಎಷ್ಟೆತ್ತರ ಬೇಕಾದರೆ ಅಷ್ಟು ಹಾಕಿದಾಗ ಅನನುಕೂಲವೇ ಜಾಸ್ತಿ.
ಇಷ್ಟೆಲ್ಲ ತೊಂದರೆಗಳು ಅನುಭವಿಸಿದ ಮೇಲೆ ನಾನು ಇವುಗಳ ಇತಿಹಾಸದ ಬಗ್ಗೆ ತಿಳಿಯಲು ಹೊರಟೆ.
11 ವರ್ಷಗಳ ಹಿಂದೆ ಅಂದರೆ 1906 ರಲ್ಲಿ ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ಚಾಥಮ್ ನಗರ ಪಾಲಿಕೆಯವರು ಪಥಿಕರು ರಸ್ತೆ ದಾಟವ zebra crossing ಅನ್ನು ಐದು ಇಂಚು ಎತ್ತರಿಸುವ ಮೂಲಕ ಈ ರಸ್ತೆ ಉಬ್ಬುಗಳಿಗೆ ನಾಂದಿ ಹಾಡಿದರೆನ್ನಬಹುದು. ಕಾರುಗಳನ್ನ ಅತಿಯಾಗಿ ಬಳಸುವ ಅಮೆರಿಕದಲ್ಲಿ ಇವುಗಳ ವೇಗವನ್ನು ನಿಯಂತ್ರಿಸುವುದರ ಬಗ್ಗೆ ಮತ್ತು ಈ ತರದ ಉಬ್ಬಗಳನ್ನು ರಸ್ತೆಗಳಲ್ಲಿ ಅಳವಡಿಸುವ ಬಗ್ಗೆ ಹಲವಾರು ನಗರ ಪಾಲಿಕೆಗಳು ಚರ್ಚೆ ಮಾಡುತ್ತಿದ್ದರೂ, ಚಾಥಮ್ ಮೊದಲ ಬಾರಿಗೆ ಇದನ್ನ ಕಾರ್ಯಾಚರಣೆಗೆ ತಂದಿತು. ಆರ್ಥರ್ ಹಾಲಿ ಕಾಂಪ್ಟನ್ ಎನ್ನುವ, ಭೌತ ವಿಜ್ಞಾನದಲ್ಲಿ ನೊಬೆಲ್ ಪಾರಿತೋಷಿಕವನ್ನ ಪಡೆದ ವಿಜ್ಞಾನಿ 1953 ರಲ್ಲಿ ವೈಜ್ಞಾನಿಕ ರೀತಿಯ ಉಬ್ಬಗಳನ್ನು ರೂಪಿಸಿದ. ಯೂರಪ್ ನಲ್ಲಿ ಇವುಗಳನ್ನು ಮತ್ತೊಂದು ಇಪ್ಪತ್ತು ವರ್ಷಗಳ ನಂತರ ಮೊದಲ ಬಾರಿಗೆ ನೆದರ್ ಲ್ಯಾಂಡ್ಸಿನ ಡೇಲ್ಫ್ಟ್ ನಗರದಲ್ಲಿ ಬಳಸಲಾಯಿತು. ಇವಕ್ಕೆ ಬೇರೇ ಬೇರೇ ದೇಶಗಳಲ್ಲಿ ಬೇರೇ ಬೇರೇ ಹೆಸರುಗಳಿಂದ ಕರೆಯುತ್ತಾರೆ ಎಂದರೆ ನಿಮಗೆ ಸೋಜಿಗವಾಗಬಹುದು. ಅವುಗಳ ಹೆಸರು ಸಹ ವಿಚಿತ್ರ. ರೋಡ್ ಹಂಪ್ಸ್, ಸ್ಪೀಡ್ ಹಂಪ್ಸ್, ಸ್ಲೀಪಿಂಗ್ ಪೋಲಿಸ್ ಮ್ಯಾನ್, ಜಡ್ಡರ್ ಬಾರ್, ಲೋಲೈಯಿಂಗ್ ಪೋಲಿಸ್ ಮ್ಯಾನ್ ( ನಾವು ಸಹ ಕನ್ನಡಕ್ಕೆ ಇದನ್ನು ತಂದು ರಸ್ತೆಯ ಉಬ್ಬುಗಳು ಎಂದು ಕರೆಯುತ್ತಿಲ್ಲವೇ ) ಎಂಬ ಹೆಸರುಗಳಿವೆ. ಈಗ ಗೊತ್ತಾಯ್ತಲ್ಲ ಈ ರಸ್ತೆ ಉಬ್ಬುಗಳು ಯಾಕೆ ಕಾಣಿಸದ ಹಾಗೆ ಇರುತ್ತವೆ ಅಂತ. ಸ್ಲೀಪಿಂಗ್ ಪೋಲಿಸ್ ಮೆನ್ ಇವು. ಗಪ್ಪನೆ ಹಿಡಿಯುತ್ತವೆ, ಹಿಡಿತಕ್ಕೆ ತರುತ್ತವೆ ನಿಮ್ಮ ವೇಗವನ್ನು. ಈಗೀಗ ರಬ್ಬರಿನ, ಗಟ್ಟಿ ಪ್ಲಾಸ್ಟಿಕಿನಿಂದ ಮಾಡಿದ ಉಬ್ಬುಗಳನ್ನು ಸಹ ಬಳಸಲಾಗುತ್ತಿದೆ.
ಈ ಉಬ್ಬುಗಳು ವಾಹನಗಳನ್ನು ಸರಿಯಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವ ಮತ್ತು ವಾಹನ ಮತ್ತು ಅವುಗಳ ಸವಾರಿ ಮಾಡುವವರ ಯೋಗಕ್ಷೇಮವನ್ನು ಗಮನಿಸುವುದು ಇವುಗಳ ಉದ್ದೇಶ ಉದ್ದೇಶ ತುಂಬಾ ಉತ್ತಮವಾದ್ದು ಆದರೆ ಅದರ ಅಚರಣೆಯಲ್ಲಿ ವಿಕೃತ ರೂಪಗಳಾಗಿ ಈಗ ರಸ್ತೆಗಳೊಳಗೆ ಈ ಉಬ್ಬುಗಳು ದುಃಸ್ವಪ್ನಗಳಾಗಿವೆ ಎಂದರೆ ಅತಿಶಯೋಕ್ತಿ ಅಲ್ಲ.
ಉಬ್ಬುಗಳು ಹೇಗಿರಬೇಕು ? ನೆಮ್ಮದಿಯಾಗಿ ಏರಿ ನೆಮ್ಮದಿಯಾಗಿ ಇಳಿಯುವ ಹಾಗಿರಬೇಕು.ಅವುಗಳ ಮೇಲೆ ಕತ್ತಲಲ್ಲೂ ಕಾಣುವ ಹಾಗೆ ಪಟ್ಟಿಗಳು ಹಾಕಿರಬೇಕು. ಸ್ವಲ್ಪ ದೂರದಿಂದಲೇ ನಮ್ಮ ವಾಹನಗಳನ್ನು ನಿದಾನ ಮಾಡಿ, ಇವುಗಳನ್ನು ಸಂತೋಷದಿಂದ ದಾಟಿದರೆ ಅವುಗಳನ್ನು ಹಾಕಿದವರಿಗೂ ಸಂತೋಷ, ವಾಹನ ನಡೆಸುವವರಿಗೂ ಸಂತೋಷ. ಆದರೆನಮ್ಮ ದೇಶದಲ್ಲಿ ಎರಡೇ ತರದ ಉಬ್ಬುಗಳು ಕಾಣುತ್ತವೆ. ಒಂದು ವೇಗ ತಡೆಯುವ ಉಬ್ಬು ಮತ್ತೊಂದು ಗಾಡಿಯನ್ನು ಹದಗೆಡಿಸುವ ಉಬ್ಬು.
ಸಾಧಾರಣವಾಗಿ ಉಬ್ಬುಗಳನ್ನು ಅತಿ ವೈಜ್ಞಾನಿಕ ರೀತಿಯಲ್ಲಿ ಶಿಫಾರಸು ಮಾಡಲಾಗಿದೆ. ಅವುಗಳು ವೇಗ ನಿಯಂತ್ರಣವನ್ನು ಸಮರ್ಥವಾಗಿ ಮಾಡಬೇಕು, ಜೊತೆಗೆ ಗಾಡಿಗಳಿಗೆ ಮತ್ತು ಅದರ ಸವಾರರಿಗೆ ಯಾವುದೇ ತರದ ಧಕ್ಕೆ ಬರದ ಹಾಗೆ ಇರಬೇಕು. ಸಾಧಾರಣವಾಗಿ ಇವು 3 ರಿಂದ 4 ಇಂಚು ಎತ್ತರವಿರುವ ಮತ್ತು ಸುಮಾರು 1 ಅಡಿ ಅಗಲವಿರುವಹಾಗೆ ಹಾಕುವುದು ಸರಿ. ಅವುಗಳ ಮೇಲೆ ಬಿಳಿ ಅಥವಾ ಹಳದಿ ಪಟ್ಟಿಹಾಕಿ, ಅವುಗಳ ಉಪಸ್ಥಿತಿಯನ್ನು ತಿಳಿಸುತ್ತಾರೆ. ಇನ್ನೂ ಕೆಲ ಕಡೆ ಅವುಗಳು ಸಾಧಾರಣ ಇಷ್ಟು ದೂರದಲ್ಲಿವೆ ಎಂದು ಒಂದು ಕಾಣುವ ಬೋರ್ಡನ್ನು ಸಹ ಹಾಕುತ್ತಾರೆ. ಇವುಗಳೆಲ್ಲವೂ ವಾಹನಗಳ ವೇಗ ನಿಯಂತ್ರಿಸಿ, ಅಪಘಾತಗಳು ಮತ್ತು ಅವುಗಳಿಂದಾಗುವ ಆಸ್ತಿ ಮತ್ತು ಜೀವ ನಷ್ಟ ಆಗದ ಹಾಗೆ ನೋಡಿಕೊಳ್ಳಲಿಕ್ಕೆ. ಆದರೆ ಭಾರತದ ಅನೇಕ ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಇವುಗಳ ಬಗ್ಗೆ ಯಾವ ತರದ ಗಮನ ನೀಡದೆ ಉಬ್ಬುಗಳನ್ನು ಹಾಕಲಾಗಿ ವಾಹನ ಚಾಲಕರು ಅನೇಕ ರೀತಿಯ ಪಡಿಪಾಟಲುಗಳನ್ನು ಪಡುತ್ತಿದ್ದಾರೆ. ನಾವು ಭಾರತೀಯರು ಅದೆಷ್ಟೋ ನ್ಯೂನತೆಗಳನ್ನು ತಡೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದೇವೆ. ಇವುಗಳನ್ನು ಸಹ ಭರಿಸಿ ನಮ್ಮ ಜೀವನ ಸಾಗಿಸುತ್ತಿದ್ದೇವೆ.
ಮೊದಮೊದಲು ಈ ರಸ್ತೆ ಉಬ್ಬುಗಳು ರೋಡಿನ ಮಟ್ಟಕ್ಕಿಂತ ಒಂದು ಐದು ಇಂಚಿನಷ್ಟು ಎತ್ತರವಿರುತ್ತಿದ್ದು, ಮೊದಲ ದಿನಗಳಲ್ಲಿ ಸಿಗ್ನಲ್ ಗಳಲ್ಲಿ ಮಾತ್ರ ಇದ್ದವು. ಆದರೆ ಬರ್ತಾ ಬರ್ತಾ ಗಾಡಿಗಳ ಸಂಖ್ಯೆ ಜಾಸ್ತಿಯಾಗಿ ಈಗ ಹಳ್ಳಿಗಳ ರೋಡ್ಡುಗಳಲ್ಲಿ ಸಹ ಕಾಣಿಸಿಕೊಳ್ಳುವುದು ತೀರ ಸಹಜವಾಗಿದೆ.
ಉಬ್ಬುಗಳು ಹೇಗಿರಬೇಕು ? ನೆಮ್ಮದಿಯಾಗಿ ಏರಿ ನೆಮ್ಮದಿಯಾಗಿ ಇಳಿಯುವ ಹಾಗಿರಬೇಕು.ಅವುಗಳ ಮೇಲೆ ಕತ್ತಲಲ್ಲೂ ಕಾಣುವ ಹಾಗೆ ಪಟ್ಟಿಗಳು ಹಾಕಿರಬೇಕು. ಸ್ವಲ್ಪ ದೂರದಿಂದಲೇ ನಮ್ಮ ವಾಹನಗಳನ್ನು ನಿದಾನ ಮಾಡಿ, ಇವುಗಳನ್ನು ಸಂತೋಷದಿಂದ ದಾಟಿದರೆ ಅವುಗಳನ್ನು ಹಾಕಿದವರಿಗೂ ಸಂತೋಷ, ವಾಹನ ನಡೆಸುವವರಿಗೂ ಸಂತೋಷ.
ಆದರೆ ನಮ್ಮಲ್ಲಿ ಹಾಕುವುದು ಹೇಗೆ ? ನಿಮಗೆಲ್ಲ ಗೊತ್ತೇ ಇದೆ ?ಒಂದಿಷ್ಟು ಸಿಮೆಂಟು, ಜೆಲ್ಲಿಕಲ್ಲುಗಳ ಮಿಶ್ರಣ ಮಾಡಿ ರಸ್ತೆ ಉದ್ದಕ್ಕೂ ಎತ್ತರಕ್ಕೆ ಹೊಯ್ಯುವುದೇ ರಸ್ತೆ ಉಬ್ಬು. ನಾನಿರುವ ಹೈದರಾಬಾದಿನಲ್ಲಂತೂ ಈ ತರದ ಉಬ್ಬುಗಳಿಗೆ ಯಾವ ಕಾರ್ಪೊರೇಷನ್ನಿನವರ ಅಥವಾ ಇನ್ಯಾವ ಸರಕಾರದ ಅನುಮತಿಯೂ ಬೇಡ. ನಮ್ಮ ಮನೆಮುಂದೆ ಯಾವುದೋ ಹುಡುಗನಿಗೆ ಅಥವಾ ವಯಸ್ಸಾದವರಿಗೆ ಗಾಡಿ ತಾಕಿತೋ, ಅಲ್ಲಿ ನಾನೇ ಒಂದು ಉಬ್ಬು ತಯಾರಿಸಿದೆ ಎಂತಾಗಿದೆ. ಹಾಗಾಗಿ ಒಂದು ಚಿಕ್ಕ ಗಲ್ಲಿಯಲ್ಲಿ ನೀವು ಎಂಟು ಉಬ್ಬುಗಳನ್ನು ದಾಟಬೇಕಾದಲ್ಲಿ ನಿಮಗೆ ತಲೆ ಕೆಡುವುದಿಲ್ಲವೇ ? ಅದೂ ಅವುಗಳನ್ನು ಪದ್ಧತಿಯಾಗಿ ಹಾಕದಾಗ. ನಿಮ್ಮ ಗಾಡಿ ಅಲೆಗಳ ಮೇಲೆ ತೇಲಿದಂತೆ ತೆಲುತ್ತ ಹೋಗುತ್ತಿರುತ್ತದೆ. ನಿಮಗೆ ಬ್ಯಾಲನ್ಸ್ ಹಿಡಿಯಲೂ ಕಷ್ಟ. ಅಕಸ್ಮಾತ್ ನೀವು ಯಾರಿಗಾದರೂ ನಿಮ್ಮ ಗಾಡಿ ತಾಕಿಸಿದರೆ ತೊಗೊಳ್ಳಿ ಮತ್ತೊಂದು ಸ್ಪೀಡ್ ಬ್ರೇಕರ್ ತಯಾರು. ಇವ್ಯಾವುಗಳಿಗೂ ಬಿಳಿ ಬಣ್ಣ ಇರುವುದಿಲ್ಲ. ಹಳದಿ ಪಟ್ಟಿಗಳು ಇರುವುದಿಲ್ಲ. ಮಳೆ ಬಂದಾಗಲಂತೂ ಇವುಗಳು ನೀರಲ್ಲಿ ಮುಚ್ಚಿಹೋಗುತ್ತವೆ. ಆಗ ಗಾಡಿಗಳ ಅವಸ್ಥೆ ಹೇಳಲಾಗದು. ಇವೆಲ್ಲದರ ಮೇಲೆ ರಸ್ತೆಗಳಲ್ಲಿರುವ ಕುಣಿಗಳು, ಹೊಂಡಗಳು ಬೇರೇ. ಅದಕ್ಕೊಂದು ಬೇರೇನೇ ಬರೆಯಬೇಕಾದೀತು.
ನಮ್ಮ ದೇಶದಲ್ಲಿಯ ಉಬ್ಬುಗಳ ಅವ್ಯವಸ್ಥೆಯನ್ನು ನೋಡೋಣ.
- ವೈಜ್ಞಾನಿಕ ರೀತಿಯಲ್ಲಿ ಹೇಳಲಾದ ಅಗಲ ಮತ್ತು ಎತ್ತರಗಳನ್ನು ಪಾಟಿಸದೇ ಉಬ್ಬುಗಳನ್ನು ಹಾಕುವುದು. ಇದರಲ್ಲಿ ಅತಿ ಎತ್ತರವಾಗಿರುವುದು, ಅಗಲ ಇಲ್ಲದಿರುವುದು ಮತ್ತು ವಾಹನಗಳಿಗೆ ಬೇಕಾದ ಗ್ರೇಡಿಯಂಟ್ ಸಿಗದಿರುವುದು. ಇದರಿಂದ ವಾಹನಗಳ ಷಾಕ್ ಅಬ್ಜಾರ್ಬರ್ ಗಳು ಪೆಟ್ಟು ತಿನ್ನುವುದು, ವಾಹನ ಚಾಲಕರ ಬೆನ್ನು ಮೂಳೆಗಳ ಮೇಲೆ ಪರಿಣಾಮ ಬೀರುವುದು, ಪಿಲಿಯನ್ ರೈಡರ್ ಗಳು ಆಯ ತಪ್ಪಿ ಬೀಳುವುದು ಮುಂತಾದವು ನಡೆಯುವ ಸಂಭವಗಳಿವೆ.
- ಉಬ್ಬುಗಳ ಬಗ್ಗೆ ಸ್ವಲ್ಪ ದೂರದಲ್ಲಿ ಬೋರ್ಡುಗಳನ್ನು ಹಾಕಿ ಮುನ್ಸೂಚನೆ ಕೊಡದಿರುವುದು. ಇದರಿಂದ ವೇಗವಾಗಿ ಬರುವ ವಾಹನಗಳು ಗಕ್ಕನೆ ನಿಲ್ಲಬೇಕಾದ ಪರಿಸ್ಥಿತಿ ಬಂದು ಅವುಗಳ ಟೈರುಗಳಿಗೆ ಮತ್ತು ಇತರೆ ಭಾಗಗಳಿಗೆ ಪೆಟ್ಟಾಗುತ್ತದೆ. ಮತ್ತು ವಾಹನದಲ್ಲಿರುವವರಿಗೆ ಸಹ ಪೆಟ್ಟಾಗುವ ಅಥವಾ ದ್ವಿಚಕ್ರ ವಾಹನಗಳ ಹಿಂಬದಿ ಕೂತವರು ಬಿದ್ದು ತಲೆಗೆ ಪೆಟ್ಟಾಗುವ ಸಂಭವಗಳಿವೆ. ಮತ್ತು ಗಕ್ಕನೆ ಬ್ರೇಕು ಹಾಕಿ ಗಾಡಿ ನಿಲ್ಲಿಸಿದಾಗ ಹಿಂದಿನ ಗಾಡಿ ಬಂದು ಹೊಡೆಯುವ ಸಂಭವ ಜಾಸ್ತಿ.
- ಚಿಕ್ಕ ರಸ್ತೆಗೆ ಸಹ ಅನೇಕ ಉಬ್ಬುಗಳು ಇರುವುದು. ಈ ಪರಿಸ್ಥಿತಿ ಈಗೀಗ ತುಂಬಾ ಕಾಣುತ್ತದೆ. ಸರಕಾರದವರು ಎಲ್ಲ ತರ ನೋಡಿ ಹಾಕಿದ ಉಬ್ಬುಗಳಿಗೆ ಸೇರಿಸಿ, ಜನ ತಾವೇ ಹಾಕಲು ಶುರು ಮಾಡಿದ್ದಾರೆ. ತಮ್ಮ ರಸ್ತೆಗಳಲ್ಲಿ ಇವು ಬೇಕಾದಲ್ಲಿ ಒಂದಿಷ್ಟು ಸಿಮೆಂಟ್, ಜೆಲ್ಲಿಕಲ್ಲು ಕಲಿಸಿ ಬರೀ ರಸ್ತೆ ಉದ್ದಕ್ಕೂ ಸುರಿಯುವುದೇ ಉಬ್ಬು ಎಂದೆಣಿಸಿ ತಮ್ಮ ತಮ್ಮ ಮನೆಗಳ ಮುಂದೆ ಹಾಕಿ ಬಿಡುತ್ತಾರೆ. ಈ ರೀತಿಯ ವರ್ತನೆಗೆ ಕಾರಣ ಆಯಾ ರಸ್ತೆಯ ಮಕ್ಕಳ ಬೇಜವಾಬ್ದಾರಿ ವರ್ತನೆ. ಇದರಿಂದ ಯಾರಿಗಾದರೂ ಅಪಘಾತವಾಗಿ ಪೆಟ್ಟಾದಲ್ಲಿ ಅಲ್ಲಿ ಮರುದಿನವೇ ಈ ತರದ ದಿಢೀರ್ ಉಬ್ಬು ತಯಾರ್. ಇದಕ್ಕೆ ಸರಕಾರದಿಂದ ಅನುಮತಿ ಇರುವುದಿಲ್ಲ. ಸರಕಾರವೂ ಹಿಡಿಸಿಕೊಳ್ಳುವುದಿಲ್ಲ.
- ನಗರ ಪಾಲಿಕೆ ಅಪುರೂಪಕ್ಕೆ ಅಚ್ಚುಕಟ್ಟಾಗಿ ಹಾಕಿಸಿದ ಉಬ್ಬುಗಳಿಗೆ ಬಣ್ಣ ಬಳೆದು ಸೂಚಿಸದೇ ಇರುವುದು. ಉಬ್ಬುಗಳಿಗೆ ಬಿಳಿ ಪಟ್ಟಿ ಹಾಕಿ ಅವುಗಳ ಅಸ್ತಿತ್ವದ ಬಗ್ಗೆ ಮಾಹಿತಿ ಕೊಡುವ ಜವಾಬ್ದಾರಿ ಸರಕಾರೀ ಸಂಸ್ಥಗಳಿಗಿದೆ. ಆದರೆ ಬರೀ ಉಬ್ಬುಗಳನ್ನು ಹಾಕಿ ಕೈ ಬಿಡುತ್ತಾರೆ. ಇದರಿಂದ ಕತ್ತಲಲ್ಲಿ ಬರುವ ವಾಹನ ಚಾಲಕರು ತುಂಬಾ ತೊಂದರೆಗೀಡಾಗುತ್ತಾರೆ. ಮೇಲೆ ಹೇಳಿದ ಹಾಗೆ ವಾಹನ ದುರುಸ್ತಿಗೆ ಬರುವುದೋ ಅಥವಾ ಹಿಂಬದಿ ಕೂತವರು ಹಾರಿ ಕೆಳಗೆ ಬೀಳುವುದೋ ಅಥವಾ ಚಾಲಕನ ಸಂತುಲನ ತಪ್ಪಿ ಬೀಳುವುದೋ ನಡೆಯ ಬಹುದು.
- ಇನ್ನು ಒಮ್ಮೊಮ್ಮೆ ತೀರ ತೆಳು ಉಬ್ಬುಗಳನ್ನು ನಿರ್ಲಕ್ಷಿಸುತ್ತ ಬಸ್ಸುಗಳು, ಆಟೋಗಳು ಅಥವಾ ಇತರೆ ಪ್ರಯಾಣಿಕರನ್ನು ಸಾಗಿಸುವ ವಾಹನಗಳನ್ನು ಚಾಲಕರು ಓಡಿಸುತ್ತಾರೆ. ಇದು ಅವರ ಅತಿ ಆತ್ಮವಿಶ್ವಾಸ. ಆದರೆ ಇದರಿಂದಾಗಿ ಪ್ರಯಾಣಿಕರಿಗೆ ಪೆಟ್ಟಾಗುವ ಅಥವಾ ಗೋಣು ಉಳುಕುವ ಸಂದರ್ಭಗಳಿರುತ್ತವೆ. ಇದು ಉಬ್ಬುಗಳಿಗೆ ಸಂಬಂಧಪಟ್ಟದ್ದಲ್ಲದಿದ್ದರೂ ತತ್ಸಂಬಂಧೀ ಅಂಶ.
ಈ ತೊಂದರೆಗಳ ಜೊತೆಗೆ ರಸ್ತೆಗಳಲ್ಲಿ ಮಳೆಗಾಲದಲ್ಲಿ ಆಗುವ ಕುಣಿಗಳು/ಹೊಂಡಗಳು. ಇವುಗಳಿಂದ ರಸ್ತೆ ಉಬ್ಬುಗಳ ಪ್ರಭಾವ ಇನ್ನೂ ಜಾಸ್ತಿ ಎನಿಸುತ್ತದೆ. ಒಂದು ಕುಣಿಯಲ್ಲಿ ವಾಹನ ಬಿದ್ದು ಸ್ವಲ್ಪ ದೂರ ಹೋಗಲಿಕ್ಕಿಲ್ಲ ಒಂದು ಉಬ್ಬು ಅಡ್ಡ. ಹೀಗೇ ರಸ್ತೆ ಇಡೀ ಹೊಂಡ, ಉಬ್ಬುಗಳಿದ್ದರೆ ಇನ್ನು ವಾಹನ ಚಲಿಸುವುದು ಹೇಗೆ? ಗಮ್ಯಸ್ಥಾನ ತಲುಪುವುದು ಯಾವಾಗ? ಸರಕಾರವಂತೂ ಈ ಹೊಂಡಗಳ ದುರುಸ್ತಿ ಮಳೆಗಾಲ ಆದಮೇಲೆ ಕೈಗೊಳ್ಳುತ್ತದೆ. ಆ ನಾಲ್ಕು ತಿಂಗಳೂ ನರಕಪ್ರಾಯ. ಕೆಲವೊಮ್ಮೆ ಒಳ ಚರಂಡಿ ವ್ಯವಸ್ಥಯ ಮ್ಯಾನ್ ಹೋಲ್ ಗಳಲ್ಲಿ ಸಿಕ್ಕು ಜನ ಸಾಯುವುದನ್ನು ಸಹ ನಾವು ವರದಿಗಳಲ್ಲಿ ಓದುತ್ತೇವೆ.


ಇವುಗಳಲ್ಲದೇ ದೊಡ್ಡ ರಸ್ತೆಗಳಲ್ಲಿ ಸರಣಿ ಚಿಕ್ಕ ಉಬ್ಬುಗಳು ಸಿಗುತ್ತವೆ ನಿಮಗೆ. ಅವಗಳನ್ನ “ರಂಬ್ಲರ್ಸ್” ಅಂತಾರಂತೆ. ರಸ್ತೆಗಳಲ್ಲಿ ಮುಂದೆ ಯಾವುದಾದರೂ ಬದಲಾವಣೆ ಇದ್ದಲ್ಲಿ, ಅದನ್ನು ಮುಂಚಿತವಾಗಿ ಸೂಚಿಸಲು ರಸ್ತೆಗಳ ಮೇಲೆ ಬಿಳಿ ಅಥವಾ ಹಳದಿ ಬಣ್ಣಗಳಿಂದ ಹಾಕುತ್ತಾರೆ. ಇವುಗಳು ಚಿಕ್ಕ ಚಿಕ್ಕ ಸರಣಿ ಗೆರೆಗಳಂತೆ, ಕೊಂಚ ಮಂದವಾಗಿದ್ದು, ಗಾಡಿಗಳಿಗೆ ಎಚ್ಚರಿಕೆ ನೀಡುತ್ತವೆ. ಯಾವುದೇ ಕಾರಣಕ್ಕೆ ಚಾಲಕ ಸ್ವಲ್ಪ ಅಜಾಗರೂಕತೆಯಾದಲ್ಲಿ ಇವುಗಳ ಕಂಪನ ಮತ್ತು ಶಬ್ದ ಅವನನ್ನು ಎಚ್ಚರ ವಹಿಸುವಂತೆ ಮಾಡುತ್ತವೆ. ಇವುಗಳ ಎತ್ತರ ೨೫ ಮಿಮೀ ಇರಬೇಕು ಅಂತ ಶಿಫಾರಸು ಮಾಡಲಾಗಿದೆ. ಆದರೆ ತುಂಬಾ ಕಡೆ ಇವುಗಳು ಅದಕ್ಕಿಂತ ಎತ್ತರವಿದ್ದು ಗಾಡಿ ಓಲಾಡುವಂತೆ ಮಾಡುತ್ತವೆ. ಇದರಿಂದ ಗಾಡಿ ಪೆಟ್ಟು ತಿನ್ನಬಹುದಾಗಿದೆ.
ಈ ತರದ ತೊಂದರೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ಬರೀ ಅವರ ಕಾರಣಗಳು ಮಾತ್ರ ಹೇಳುತ್ತಾರೆ. ವಾಹನ ಚಾಲಕರು ಜಾಗರೂಕರಾಗಿರಬೇಕು ಎಂದು ನಮಗೇ ಸಲಹೆ ನೀಡುತ್ತಾರೆ. ಆದರೆ ಇವುಗಳನ್ನು ಹಾಕಿಸುವ, ನಿರ್ವಹಿಸುವ ಹೊಣೆಗಾರಿಕೆ ಸರಕಾರಿ ಸಂಸ್ಥೆಗಳದ್ದೇ ಅಲ್ಲವೇ !
ನಮ್ಮ ದೇಶದಲ್ಲಿ ಎಲ್ಲವಕ್ಕೂ ಬೇಕಾದ ಕಾನೂನುಗಳಿವೆ. ಅವುಗಳನ್ನ ಕಾರ್ಯರೂಪಕ್ಕೆ ತರುವ ಸಂಕಲ್ಪವಿಲ್ಲ. ಈ ಅಧಿಕಾರ ಇರುವವರೆಲ್ಲರೂ ಲಂಚಾವತರಕ್ಕೆ ಗುಲಾಮರಾಗಿ ಕಣ್ಣು ಮುಚ್ಚಿಕೊಳ್ಳುತ್ತಾರೆ. ಜನರೇ ಕಾನೂನನ್ನು ಕೈಗೆ ತೊಗೊಂಡಾಗ ಈ ರೀತಿಯ ಅನನುಕೂಲಗಳಾಗುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಸರ್ತಿಗೊಮ್ಮೆ ರಸ್ತೆಗಳ ತಪಾಸಣೆ ಮಾಡಿ, ಅಲ್ಲಿಯ ಜನರ ಅಹವಾಲುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸರಿಯಾದ ದೂರದಲ್ಲಿ , ಬೇಕಾದ ಸೂಚನೆಗಳೊಂದಿಗೆ ಉಬ್ಬುಗಳನ್ನು ಹಾಕಬೇಕು. ಹಾಗಾದಾಗ ಮಾತ್ರ ಇವುಗಳ ಉದ್ದೇಶ ಪೂರೈಸಿದ ಹಾಗಾಗುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಬೆರಳ ತುದಿಯಲ್ಲಿ ಹಣಪಾವತಿ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..