ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಶ್ರುತಾತ್ಮನ ಮುಕ್ತಕಗಳು

ವತ್ಸಲಾ ಶ್ರೀಶ
ಇತ್ತೀಚಿನ ಬರಹಗಳು: ವತ್ಸಲಾ ಶ್ರೀಶ (ಎಲ್ಲವನ್ನು ಓದಿ)

ನಗುನಗುತ ಬಂದವರ ಮತಿಗೆಟ್ಟು ನಂಬುತಿರೆ
ಮಗು ಶಿರದ ಮೇಲ್ಖಡ್ಗ ತೂಗುತಿರುವಂತೆ
ಹಗುರಾಗಿ ಬಳಸದಿರು ನಿನ್ನ ಸದ್ಗುಣಗಳನು
ಜಗವಿದುವೆ ಮಾಯೆಯೋ ವಿಶ್ರುತಾತ್ಮ||

ಹವನ ಮಾಡಿದರೇನು ತಪದಿ ಕುಳಿತಿರಲೇನು
ಬುವಿಯ ನಿಜ ದೇವ ತಾನೆನ್ನುತಿರಲೇನು
ಕವಿಯಲರಿಷಡ್ವರ್ಗ ಬಣ್ಣಗೆಡುವುದು ಕಾವಿ
ಭವದ ಬದುಕೇ ಭ್ರಾಂತಿ ವಿಶ್ರುತಾತ್ಮ||

ನೋಯಿಸಲು ಜನರವರು ನೋಯಿಸದೆ ಸುಮ್ಮನಿರು
ಕಾಯುವವ ಉತ್ತರವ ನೀಡುವನು ತಾಳು
ಗಾಯದಲಿ ನೊಂದಾಗ ಮಾಗುವರು ಬದುಕಿನಲಿ
ನಾಯಕನು ಎಲ್ಲರಿಗು ವಿಶ್ರುತಾತ್ಮ||

ಮಾನಿನಿಯ ಮಾಯೆಯದು ಮತಿಗೆಡಿಸಿ ಕೊಲ್ಲುವುದು
ಕಾನನದಿ ಕಣ್ಕಟ್ಟಿ ಬಿಟ್ಟಂತೆ ಬಾಳು
ಹಾನಿಗೊಳೆ ಚಾರಿತ್ರ್ಯ ಜಗ ನಗಲು ನಿನ್ನೆಡೆಗೆ
ಬೋನಿನಲಿ ಸಿಕ್ಕಂತೆ ವಿಶ್ರುತಾತ್ಮ||

ಬಂದುಹೋಗುವ ನೂರು ಬಂಧಗಳು ನಿಜವಲ್ಲ
ಚಂದ ನುಡಿಯುವ ಮಾತು ಕೇಳಲಿಂಪಂತೆ
ನಿಂದಿಸದೆ ಬದುಕ ಬಂದಂದದೋಳ್ ಸ್ವೀಕರಿಸೆ
ಕುಂದು ಕಾಣದು ಇಹದಿ ವಿಶ್ರುತಾತ್ಮ||

ಅಂದದಲಿ ಮಾತಾಡಿ ತಾಯಿ ತಂಗಿಯರೆಂದು
ಚಂದದಿಂದಲಿ ಪಕ್ಕ ನಿಲ್ಲುವರು ಜನರು
ಕುಂದಿರುವ ಮನದಲ್ಲಿ ಇರುವುದಿನ್ನೊಂದು ಮುಖ
ಮುಂದೆ ನೀ ತುಸು ತಾಳು ವಿಶ್ರುತಾತ್ಮ||

ವಿಶ್ರುತಾತ್ಮಎಂಬ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಬರೆಯುವ ವತ್ಸಲಾ ಶ್ರೀಶ