ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸದ್ಯದ ಪದ್ಯ

ಸದ್ಯದ ಪರಿಸ್ಥಿತಿಯಲ್ಲಿ ಪದ್ಯ ಹುಡುಕಿದ ಮಂಜುನಾಥ್ ಲತಾ ಅವರು ಗುಡಿ, ಬಯಲು, ಪರದೆ, ಕುಡಿಕೆ, ರಸ್ತೆಗಳನ್ನು ದಾಟಿ ಆಟಕೆ ಕರೆಯದ ಬೀದಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೀಗೆ...
ಮಂಜುನಾಥ್ ಲತಾ
ಇತ್ತೀಚಿನ ಬರಹಗಳು: ಮಂಜುನಾಥ್ ಲತಾ (ಎಲ್ಲವನ್ನು ಓದಿ)

ಮುಚ್ಚಿದ ದೇಗುಲದೊಳಗೆ
ದೇವರು ಬೇಸರಗೊಂಡಿದ್ದಾನೆ.
ಗಂಟೆ ಸದ್ದು, ಮಂತ್ರಘೋಷ
ನಿಂತಿದೆ ಎಂದಲ್ಲ;
ದೇಗುಲದಾಚೆಯ ಭಿಕ್ಷುಕರ
ದೈನೇಸಿ ದನಿಗಳು ಕೇಳುತ್ತಿಲ್ಲವೆಂದು!


ಬಯಲು, ಬಿಸಿಲು, ಗಾಳಿ, ಮರ
ಎಂದಿಗಿಂತ ಸನಿಹ ಕುಳಿತು
ಕಷ್ಟ ಸುಖ ಹಂಚಿಕೊಳ್ಳುತ್ತಿವೆ;
ಮನುಷ್ಯರ ಸುಳಿವಿನ ಭಯವಿಲ್ಲದೆ!


ಮನೆಯೊಳಗೆ ಇಷ್ಟೂ ಮಂದಿ
ಮೌನವಾಗಿ ಕೂತಿದ್ದೇವೆ;
ಪರದೆಯ ಚಿತ್ರಗಳು ಮಾತ್ರ
ಮಾತಾಡುತ್ತಿವೆ!


ಕೂತು ಉಣ್ಣುವಷ್ಟು
ಕುಡಿಕೆಗಳಿದ್ದವು ಹಟ್ಟಿಯಲ್ಲಿ.
ನೆನ್ನೆ ಎಲ್ಲವನ್ನೂ ಮಾರಿದೆವು
ಉಣ್ಣಲು ಕಾಸಿಲ್ಲದೆ ಉಡಿಯಲ್ಲಿ!

ಮಲಗಿರುವ ರಸ್ತೆಗಳು
ಇಂದಿನ ನಿರಾಳತೆಯ
ಸುಖಿಸುತ್ತಿಲ್ಲ;
ನಾಳೆಯಿಂದ ಹಾಯುವ
ಭಾರಗಳ ನೆನೆದು
ಭಯಗೊಂಡಿವೆ.

ನಿದ್ದೆಯಿಂದ ಎದ್ದ ಮಗು
ಹೊಸ್ತಿಲಲ್ಲಿ ನಿಂತು ನೋಡುತ್ತಿದೆ
ಇನ್ನೂ ಆಟಕ್ಕೆ ಕರೆಯದ ಬೀದಿಯನ್ನು.