ಇತ್ತೀಚಿನ ಬರಹಗಳು: ಅನುಸೂಯ ಎಂ.ಆರ್. (ಎಲ್ಲವನ್ನು ಓದಿ)
ಸಿಕ್ಕು
ಹೆಣ್ಣು ಮಕ್ಕಳ ಕೂದಲಲ್ಲಿ
ಬಿಡಿಸ ಬಾರದು ಸಿಕ್ಕು
ಹಸಿಯಿರುವಾಗ ಕೂದಲು
ಆಡಬಾರದು ಮಾತುಗಳ
ಬಿಸಿಯೇರಿದಾಗ ಸಿಟ್ಟು
ಆರಲು ಬಿಡಬೇಕು ಕೂದಲು
ಬಿಡಿಸಲು ಸಿಕ್ಕು
ಆಡಬೇಕು ಮಾತುಗಳ
ತಣ್ಣಗಾದಾಗ ಸಿಟ್ಟು
ಬೆರಳ ತುದಿಯಿಂದ ನಾಜೂಕಾಗಿ
ಬಿಡಿಸಬೇಕು ಕೂದಲ ಸಿಕ್ಕು
ತೂಗ ಬೇಕು ಮಾತುಗಳ
ತೂಕದ ಬಟ್ಟುಗಳನಿಟ್ಟು
ಇಲ್ಲವಾಗಲು ಸಿಕ್ಕು
ಸಿಕ್ಕಟ್ಟಿಗೆಯಿಂದ ಬಾಚಬೇಕು ಮೆಲ್ಲನೆ
ಬಿಡಿಸಲು ಬಂಧನಗಳ ಸಿಕ್ಕು
ಸೂಕ್ಷ್ಮ ಭಾವಗಳಿರಬೇಕು ಸುಮ್ಮನೆ
ಕಾಣದಂತೆ ನೆರೆ, ಒಡಕು ಕೂದಲು
ಹಣೆಯಬೇಕು ಶಿಸ್ತಾಗಿ ಜಡೆ
ಕಾಣದಂತೆ ಬಂಧನಗಳ ಬಿರುಕು
ಮೆತ್ತಬೇಕು ನಂಟಿನ ಅಂಟು
ಸಿಕ್ಕಟ್ಟಿಗೆಯಿರುವುದೇ
ಹೆಣ್ಣಿಗಾಗಿ
ಗಂಡಿಗಂತೂ ಅಲ್ಲ !
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು