ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಮೃತ್ಯುಂಜಯ ಸಾಲಿಮಠ
ಇತ್ತೀಚಿನ ಬರಹಗಳು: ಮೃತ್ಯುಂಜಯ ಸಾಲಿಮಠ (ಎಲ್ಲವನ್ನು ಓದಿ)

ಆಗ ತನ್ನಪ್ಪನಿಗೆ
ಆಮೇಲೆ ನನ್ನಪ್ಪನಿಗೆ
ಈಗೆಲ್ಲಾ ನನಗೆ
ಬೆಚ್ಚಿಯೋ ಮಮಕಾರಕ್ಕೋ
ಕಕ್ಕುಲಾತಿಗೋ ಚುರ‍್ರೆನ್ನುವ
ಕರುಳ ಕಾರಣಕ್ಕೋ
ಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇ
ಬಂದಿರುವ ನನ್ನಮ್ಮನೂ ಕವಿತೆಯೇ…;
ಧ್ವನಿ ಕಳೆದುಕೊಂಡ ಧ್ವನಿ!
ಮುಕ್ಕಾದ ಪ್ರತಿಮೆ;
ಸುಕ್ಕಾದ ಶಿಲ್ಪ!

ಎಲ್ಲಾ ಕಾಲಕ್ಕೂ ಸಂದುತ್ತಾಳೆ
ಎಲ್ಲಾ ಕಾಲಕ್ಕೂ ಹೊಂದುತ್ತಾಳೆ
ಸರ್ವ ಕಾಲದಲೂ ಸಿಕ್ಕುತ್ತಾಳೆ; ಶಬ್ಧ
ಹೊಸಲು ದಾಟದ ಹಾಗೆ ಬಿಕ್ಕುತ್ತಾಳೆ

ಗಂಡ ಮಕ್ಕಳು ಮನೆ
ಪೂಜೆ ಹಬ್ಬ ಹರಿದಿನ
ತಿಂಡಿ ಊಟ ಕಸ ಮುಸುರೆ;
ಅವಳ ಕನಸುಗಳಾವು ಅವಳೆದೆ
ದಾಟಿ ಅಡುಗೆ ಮನೆಯ ಸೂರ
ಸಂದಿ ಹಾದು ಆಕಾಶಕ್ಕೆ ಮುಖ
ಮಾಡಲೇಯಿಲ್ಲ!; ಆಲಯದೊಳಗಣದವಳ
ಬಯಲು; ಆಲಯ ದಾಟಲೇ ಇಲ್ಲ!

ಹುಟ್ಟುವ ಹೊತ್ತಿನೊಡನೆ
ಹುಟ್ಟುವವಳ ದಿನ;
ಮುಳುಗುವ ಹೊತ್ತೇನು ಖಾತರಿಯಿಲ್ಲ
ನಿರಂತರ ತಿರುಗುವ ಯಂತ್ರ; ಕಾಲನ ಹಂಗಿಲ್ಲ

ಪೂಜೆಯೊಳು ಶರಣೆ
ಅಂತರಂಗದೊಳ್ ಕರುಣೆ
ಮೈಯೆಲ್ಲಾ ಹೃದಯ
ಕಷ್ಟದರಿವೆ ಹೊತ್ತ ಕಾಯ
ಪ್ರೀತಿ ವಾತ್ಸಲ್ಯ; ಮೂಳೆ
ಮಾಂಸ ಉಸಿರು ತ್ವಕ್ಕು;
ಬೆಂಕಿಯೊಳು ಹಾದು ಬಂದ
ಬೆಂದ ಬದುಕ ವ್ಯಥೆ
ಕಥೆ ಹೇಳುವ ಸುಕ್ಕು!

ಕರುಳು ಬಳ್ಳಿಯಾಗಿ
ಹಬ್ಬಿ ತಬ್ಬಿ ಟಿಸಿಲು
ಒಡೆದೆಡೆಯೆಲ್ಲ ಎಲೆ ಹೂವು
ಕಾಯಿ ಹಣ್ಣು;
ಕಾಲಿಗಡರುವ ಮಕ್ಕಳು
ಕಾಲಿಗಡರಿದವೆಲ್ಲ ಮಕ್ಕಳು!

ಮೊಗೆ ಮೊಗೆದು
ಉಣಿಸಿದ್ದು ಎದೆ ಹಾಲು;
ಪ್ರೀತಿ ವಾತ್ಸಲ್ಯ ಪ್ರಾಣ
ಜೀವದುಸಿರು!;ಅವಳು
ಕಲಿಸಿದಕ್ಷರದ ಆ – ಆನೆ
-ಯೇರಿಕೊಂಡವಳ ಕನಸುಗಳಿಷ್ಟು
ಕಂಡು ಬಂದೆ; ಸುತ್ತೇಳು
ಕೆರೆಯ ನೀರ ಕುಡಿದು ನಿಂದೆ

ಅವಳು ಮಾತ್ರ ಒಳಕಲ್ಲಿನೊಳಗೆ
ಸಾರಿನ ಖಾರ ಅರೆಯುತ್ತ
ಹಸಿಯಾರದ ಕಟ್ಟಿಗೆಗಳೊಡನೆ
ಗುದ್ದಾಡುತ್ತಾ; ಬೆಂಕಿ ಬೆಳಕಾಗಿಸಿ
ಜಡದಕ್ಕಿ ಅನ್ನವಾಗಿಸುವತ್ತ;
ತಾ ಬೇಯುತ್ತಾ
ಎಸ್ ಪಿ ಬಿ ಎಸ್ ಜಾನಕಿಯರ ಯುಗಳ
ಸ್ವರದ ಹಿನ್ನೆಲೆಯಲ್ಲಿ ನಿತ್ಯದವಳ
ಕಥೆಯ ಪುಟವಾಗುತ್ತಿದ್ದಳು….

ಶಾಲೆಯಿಂದ ಓಡೋಡಿ
ಬರುವವಳ ಮಕ್ಕಳು
ಕೂಳು ನೆನಪಾಗಿ ಕುಂಯ್ ಗುಡುವ
ಕುನ್ನಿ
ಬಾಯಾರಿ ಬೊಬ್ಬಿಡುವ ಎಮ್ಮೆ;
ಹಸಿದು ಬಾಯಾರಿ ಬಂದ ಜೀವಿಗಳಿಗೆಲ್ಲ
ತಾಯಿ; ಕಾಮಧೇನು ಕಲ್ಪವೃಕ್ಷ!

ಮಿಕ್ಕಂತೆ..
ಅಬಲೆ
ಆದರ್ಶ ಭಾರತೀಯ ನಾರಿ
ಗ್ರಾಮೀಣ ಮಹಿಳೆ…

ಅವಳ ಕನಸುಗಳು;
ಅಪ್ಪನ ಕೈ ಹಿಡಿದು ಮನೆಯೊಳಗೆ
ಕಾಲಿಡುವಾಗ ಹೊಸಿಲಿಗೆ ಹೊಡೆದ
ಮೊಳೆಯೊಳಗೆ ಒಂದಿಷ್ಟು..
ನಿತ್ಯ ಅವಳು ಒಟ್ಟುವ ಒಲೆಯ ಆ
ಕಟ್ಟಿಗೆಗಳೊಳಗೊಂದಿಷ್ಟು…
ತುಕ್ಕು ಹಿಡಿದ ಅಟ್ಟದ ಮೇಲಿನ
ಟ್ರಂಕಿನೊಳಗೊಂದಿಷ್ಟು… ತಾ
ಜೀವ ಬಸಿದು ಹೆತ್ತ ಮಕ್ಕಳೊಳಗೊಂದಿಷ್ಟು
ನನ್ನಪ್ಪನೊಳಗೊಂದಿಷ್ಟು; ಕರಗಿದವು
ಕೊರಗಿದವು ಮರುಗಿದವು ಅರೆ ಬರೆ
ನನಸಾಗಿ ಇರಲೇ ಇಲ್ಲವೆನುವ ಹಾಗೆ ಸತ್ತಂತೆ
ಬದುಕಿದವು; ಸತ್ತವು!!

ಸ್ತ್ರೀ ಅಂದರೆ ಅಷ್ಟೇ ಸಾಕೆ
ಅಂದೆ
ಅಮ್ಮಾ ಅನ್ನು ಅಂದಳು
ಅಮ್ಮಾ ಅಂದೆ…
ಓ ಅಂದಳು.. ಓ ಅನುತ್ತಾ ಇರುತ್ತಾಳೆ..
ಇವಳು ನನ್ನಮ್ಮ
ಬಹುಶಃ ನಿಮ್ಮಮ್ಮನೂ ಇರುತ್ತಾಳೆ!