ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹೇಶ್ ಹೆಗಡೆ ಹಳ್ಳಿಗದ್ದೆ
ಇತ್ತೀಚಿನ ಬರಹಗಳು: ಮಹೇಶ್ ಹೆಗಡೆ ಹಳ್ಳಿಗದ್ದೆ (ಎಲ್ಲವನ್ನು ಓದಿ)

ಹಸಿವು……!!?
ಎಲ್ಲ ಜೀವಿಗಳ ಜಾತಕದಲ್ಲಿ
ಕಾಡುವ ಶನಿ ಗ್ರಹ

ಬಿಸಿಯೂಟವಿರಲಿ ಬಾಡೂಟವಿರಲಿ
ಹೊಟ್ಟೆ ಹಸಿದವನಿಗೆ ವ್ಯತ್ಯಾಸವಿಲ್ಲ
ನಾಲಿಗೆಯಲಿನ್ನೂ ಚಪಲವಿದ್ದರೆ
ಅದು ಬೇರೆ ರೀತಿಯ ಹಸಿವು

ಸೂರ್ಯನಿಗಿಂತಲೂ ಮೊದಲೇ ಎದ್ದು
ಸಮಯಕ್ಕಿಂತಲೂ ವೇಗವಾಗಿ
ಎದ್ದು ಬಿದ್ದು ಓಡುತ್ತಿರುವವರ ಹಸಿವು
ಅವರವರಿಗೆ ಮಾತ್ರ ಗೊತ್ತು

ಕಂಡ ಕನಸುಗಳನೆಲ್ಲ
ನನಸಾಗಿಸಿಕೊಳ್ಳುವ ಧಾವಂತದಲ್ಲಿ
ಧರೆಗಿಳಿದು ಬಂದ ಮೂಲ ಕಾರಣ
ಕಂಡುಕೊಳ್ಳುವ ಹಸಿವು
ಮರೆತೇ ಹೋಗುತ್ತದೆ

ಎಷ್ಟು ಮಸಿ ತುಂಬಿದರೂ ಮತ್ತೆ ಮತ್ತೆ
ಬರಿದಾಗುವ ಲೇಖನಿ.
ಅಕ್ಷರಗಳ ಹಸಿವಿದ್ದಲ್ಲಿ
ಹಸಿವು, ನಿರ್ಜೀವ ವಸ್ತುಗಳಿಗೂ
ವಿಸ್ತರಿಸಿಕೊಳ್ಳುವುದು ವೇದ್ಯ

ಮತ್ತೆ ಮತ್ತೆ ಮನಬಂದಂತೆ ವಕ್ಕರಿಸುವ
ಹಸಿವನಿಂಗಿಸಲು ಹಗಲಿಡೀ ಹೋರಾಡಿ
ರಾತ್ರಿ ಉಂಡು ಮಲಗಿದರೆ,
ಚಿಗುರುವುದು ಅಲ್ಲಿ ಮತ್ತೊಂದು ಹಸಿವು…!