ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಾವಸೆ ಸೀರೆಯ ಪಾಗಾರ

ಪ್ರಜ್ಞಾ ಮತ್ತಿಹಳ್ಳಿ ಅವರ ಕವಿತೆ....
ಪ್ರಜ್ಞಾ ಮತ್ತಿಹಳ್ಳಿ
ಇತ್ತೀಚಿನ ಬರಹಗಳು: ಪ್ರಜ್ಞಾ ಮತ್ತಿಹಳ್ಳಿ (ಎಲ್ಲವನ್ನು ಓದಿ)

ಪತ್ರ ಹಾಕದೆ ಬಂದಿಳಿದ ನೆಂಟನ ಸಂಕೋಚದ ನಗೆಯ ಹೂ ಬಿಸಿಲು …

ಪ್ರಜ್ನಾ ಮತ್ತಿಹಳ್ಳಿ ಅವರ ‘ಹಾವಸೆ ಸೀರೆಯ ಪಾಗಾರ’ ಕವಿತೆಯಿಂದ…

ಯಾರು ಎತ್ತಿಕೊಂಡರೂ ಅಳದ
ಮಗುವಂತೆ ಬಂದುಬಿಟ್ಟಿದೆ ಶ್ರಾವಣ
ಕುಡಿದು ರಂಪ ಎಬ್ಬಿಸಿದ ಗಂಡ
ಮೂಲೆಗುರುಳಿದಂತೆ ಸುಮ್ಮಗಾದ ಮಳೆ
ಹೆದರಿ ಅಡಗಿದ ಚಳ್ಳೆಗಳಂತೆ ಒಂದೊಂದೇ
ತಲೆಯೆತ್ತುವ ಚಿಗುರುಗಳು..

ಪತ್ರ ಹಾಕದೆ ಬಂದಿಳಿದ ನೆಂಟನ
ಸಂಕೋಚದ ನಗೆಯ ಹೂ ಬಿಸಿಲು
ನೆಗ್ಗಿದ ಪಾತ್ರೆಯ ಪುರಾವೆಗೆ ಹೊಂಡಗಳು
ಗಾಯ ಮರೆ ಮಾಡಿ ಸೆರಗೆಳೆದು
ಶ್ಯಾವಿಗೆ ಒತ್ತಿದೆ ಹಸಿರೊಡಲು

ಕಾಲುವೆ ನೀರಲಿ ಕೊಚ್ಚಿ ಬಂದು
ಬಿದ್ದ ಒಂಟಿ ಚಪ್ಪಲಿ
ಮೂಸಲು ಬಂದ
ನಾಯಿಯ ಹೆಸರು ಕೇಳುತ್ತ ಕಚ್ಚುವ
ಎಸೆಯುವ ಆಟಕ್ಕೆ ಕರೆಯುತ್ತಿದೆ
ಬೇಜಾರು ಕಳೆಯಲಿಕ್ಕೆ..

ಕಾಲಬುಡದಲ್ಲಿ ತುಂಬಿ ಹೋದ ಕಳೆ-ನೆಂಟರ
ಗೌಜಿಗೆ ತಲೆ ಕೆಡುತ್ತಿದೆ ತೆಂಗಿನ ಮರಕ್ಕೆ
ದಬಾರನೆ ಕಾಯಿ ಬೀಳಿಸಿ ಅಪ್ಪಚ್ಚಿಗೊಳಿಸಿ
ಇಳಿಸಿಕೊಳ್ಳುತ್ತಿದೆ ಉದ್ವೇಗ..

ಹಾವಸೆಯ ಹೊಸ ಸೀರೆಯುಟ್ಟ ಪಾಗಾರ
ಡೌಲು ಮಾಡುತ್ತ ಮಾತು ಬಿಟ್ಟಿದೆ ಗೇಟಿನ ಜೊತೆ
ದುಖ: ಹೆಚ್ಚಾಗಿ ತುಕ್ಕು ಹಿಡಿದಿದೆ ಪಾಪದ ಗೇಟಿಗೆ

ಅಂತೂ ಮುಗಿದಿದೆ ಆಶಾಢದ ಒಂಟಿತನ
ಪತಿಗೆ ತಿರುಗಿ ದೊರೆತ ಸಾನಿಧ್ಯದವಸರ
ಹೊಸ ಸೊಸೆಗೆ ವೃತ ಪೂಜೆ ಸಡಗರ
ಹೊಳಪುಗೆನ್ನೆಯ ಮೇಲೆ
ಹೊಂಚುಗಣ್ಣಿನ ಉತ್ತರ

ಜರಿಸೀರೆ ನಿರಿಹಿಡಿದು ಹೊರಡುತ್ತಾಳಿನ್ನು
ಗಿರಿಜೆ ಭೂಲೋಕ ನೀರೆಯರ ಮನೆಮನೆಗೆ
ಉಪ್ಪುಚಪ್ಪೆ ತಿಳಿಯದ ಶಂಕರನ ಕೈಯಡುಗೆ
ಉಂಡು ಬೇಸರಿಸಿ ಕಾಯುತ್ತಾನೆ
ಬಡಗಣಪ ಭಾದ್ರಪದವನ್ನು

ಉಸಿರು ಕಟ್ಟಿ ಓಡೋಡಿ ಹತ್ತಿದ ರೈಲಲ್ಲಿ
ಕಾಲು ಚಾಚಿ ನಿರಾಳವಾಗುವಂತೆ
ಒಂದೊಂದೇ ಹೂ ಅರಳಬೇಕಿದೆ
ಇನ್ನು ಈ ಹೊಸ ಗಿಡದಲ್ಲಿ
ಕಟ್ಟಿದ ಜೋಕಾಲಿಯ ಜೊತೆ ಜೀಕುವುದ
ಕಲಿಯಬೇಕಿದೆ ಹಸಿ ಕೊಂಬೆ ಗಾಳಿಯಲ್ಲಿ