- ಹೀಗೂ ತ್ಯಾಗಜೀವಿಯಾಗಿ… - ಆಗಸ್ಟ್ 2, 2021
ನಟಿಸುವ ನಗುವು ಈಗೀಗ
ಸೋತುಬಿಟ್ಟಿದೆ…
ಅವರ ಇಚ್ಚೆಗಳಿಗೆ ಅಚ್ಚಾಗಿ
ಮುದ್ರೆಯೊಂದಿಗೆ ಬಹಿರಂಗ
ಮಾರಾಟದ ಸರಕಾಗಿ.!!
ನಿತ್ಯ ಇರುಳೋದಯ
ಸ್ಫುರಿಸುವ ಕತ್ತಲ ಮೌನದಂಕಣ
ಮಾರುವ ರಾತ್ರಿಗಳ ವೇದಿಕೆಗೆ
ನಲುಗುವ ಕರುಳ ವೇದನೆ.!!
ಹಳಸಿದೆದೆಯ ಕನಸುಗಳು
ಮುಡಿದ ಆಸೆಗಳ
ಎಳೆದು ಇರಿದು ಕೊಲ್ಲುವ
ಮುಳ್ಳಿನ ಹಾಸಿಗೆಗಳ ಮೇಲೆ
ಹಾಸಿದ ಸೆರಗಿನ ಸುಕ್ಕು,
ಸಿಕ್ಕು ನಲುಗುತ್ತಿದೆ
ಸಭ್ಯತೆಯ ಎಲ್ಲೆ ದಾಟಿಸಿದೆ.
ಅಸಭ್ಯ ಸೊಕ್ಕಿನ ಸೀಳು ಕಣಿವೆಗಳಲ್ಲಿ
ಕೆಟ್ಟ ಹಸಿವಿನ ಚಟಗಳಿಗೆ
ಇದೇ ದೇಹದ ಇಂಚಿಂಚು
ಗುಟುಕಿಸಿ, ಭವ್ಯ ಸಮಾಜದೊಳು
ಹೀಗೂ ತ್ಯಾಗಜೀವಿಯಾಗಿ, ಅನಾಥಳಾಗಿ
ಉಳಿದು ಬಿಟ್ಟಿದ್ದು, ವಾಡಿಕೆಯಂತೆ
ಬೆಳೆಸುವ ಪಟ್ಟು ಸಂಸ್ಕೃತಿಗೆ ಹೊರತಾದಂತೆ….!!
ಹೆತ್ತು ಹೊತ್ತು ಮಮತೆ ಎರೆವ ಒಡಲು
ಒಸರುವ ಕ್ಷಣಿಕ ಬಯಕೆಗೂ
ಎಗ್ಗಿಲ್ಲದೆ ಕಬಳಿಸುವ ಹಕ್ಕು
ಕರಾರುನಾಮೆಯ ಪಟ್ಟು..!
ಚಪಲಗಳ ತೆಕ್ಕೆಗೆ ಸಿಕ್ಕಿ
ಇಳಿದ ಕಾಮದ ಬಿಳಲುಗಳ
ಬಲವಾದ ಬಳಸಿಗೆ, ಹಿಂಡಿದ ಬದುಕು
ನಿಸ್ಸಾರವಾಗಿದೆ,
ತುಸು ನಿರಾಳವೂ ಕನಸಾಗಿದೆ….
ಜಗವ ಪೊರೆಯುವವಳಿಗೆ
ನೋವ ಸರಣಿಗಳ ಎಣಿಕೆಗಳು ಒಂದೊಂದೇ
ನಾರಿಯ ಪೂಜಿಸೋ ಧರೆಯಲ್ಲಿ
ಅರಿವಿನೊಳಗೇ ಹರವಿಕೊಂಡ
ಕಾಮಕೂಪಗಳು ಸಮಾಜದ ಕೊಡುಗೆಗಳೇ..!!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ