- ಮಹಾಸಾಗರವಾದಳು - ಸೆಪ್ಟೆಂಬರ್ 13, 2024
- ಅಂಟಿಗೆ ಪಿಂಟಿಗೆ: - ನವೆಂಬರ್ 16, 2020
- ಮಾರಿಬಲಿ - ಜುಲೈ 16, 2020
“ನೋಡಿ, ಮಿಸ್ಟರ್ ಚಿತ್ತರಂಜನ್, ದೀಪಾವಳಿಯ ೩ ನೇ ರಾತ್ರಿ ಒಟ್ಟು ೫ ಕಡೆ ಕಳ್ಳತನ ಆಗಿದೆ. ಅಂದಾಜು ೨೦ ಲಕ್ಷ ರೂಪಾಯಿ ಮೌಲ್ಯದ ಹಣ, ಬಂಗಾರ ನಾಪತ್ತೆ ಆಗಿದೆ. ಇದು ನಕ್ಸಲರ ಕೆಲಸ ಅಲ್ಲ ಅನ್ನೋದು ನನ್ನ ಥಿಂಕಿಂಗ್. ಯಾಕಂದ್ರೆ ನಕ್ಸಲರು ಮಾಡಿದ್ರೆ ಕರಪತ್ರ ಸಿಗಬೇಕಿತ್ತು. ಮೋರ್ಅವರ್ ನಾನು ಚಾರ್ಜ್ ತಗೊಂಡು ೮ ತಿಂಗಳಾಗಿದೆ ಇಲ್ಲಿ. ಈ ತನಕ ನಕ್ಸಲರ ಕೃತ್ಯದ ಬಗ್ಗೆ ರಿಪೋರ್ಟ್ ಆಗಿಲ್ಲ. ಸೋ, ಇದು ಅಂತರ್ರಾಜ್ಯ ಕಳ್ಳರ ಕೈವಾಡ ಇರಬಹುದು ಅನ್ಸತ್ತೆ..”
ಒಂದು ಸರಣಿ ಕಳ್ಳತನದ ಹಿಂದೆ ಬೆನ್ನು ಹತ್ತಿದ ಚಿತ್ತರಂಜನ್ ಗೆ ಕೊನೆಗೆ ಬಯಲಾಗಿದ್ದು ಏನು.. ? ಓದಿ ವಿಶ್ವಾಸ್ ಭಾರದ್ವಾಜ್ ಅವರ ಕುತೂಹಲಭರಿತ ಕಥೆ. ಇಲ್ಲಿ ಮಲೆನಾಡಿನ ಪ್ರಸಿದ್ಧ ಅಂಟಿಗೆ ಪಿಂಟಿಗೆ ಜನಪದದ ಹಿನ್ನೆಲೆ ಇದೆ.
“ಸುವ್ವೇರು ಸಾಂಗಯ್ಯ,
ಸುವ್ವೇರು ಲಿಂಗಯ್ಯ
ಶಿವ ಬಂದಲ್ಲಿ ಬಾರೋ ಬಸವಯ್ಯ
ಮನೆಸುತ್ತ ಮಲ್ಲಿಗೆ
ಕೆರೆಸುತ್ತಾ ಕೇದಿಗೆ
ಅರಮನೆ ಸುತ್ತಾ ಅರಗಿಳಿ
ಅಂದಾದ ಮನೆಮುಂದೆ
ಚೆಂದಾದ ರಂಗೋಲಿ
ಎಡೆ ನೀಡುವೆ ಬಾರೋ ಶಿವಲಿಂಗಯ್ಯ”
ಬೆಳ್ಳಂಬೆಳಿಗ್ಗೆ ಎದ್ದ ಚಿತ್ತರಂಜನ್ ಮನಸಿನಲ್ಲಿ ಇದೇ ಜನಪದೀಯ ಹಾಡು ಗುಂಯ್ ಗುಡುತ್ತಿತ್ತು. ಇಂತಹದ್ದೊಂದು ಜನಪದೀಯ ಆಚರಣೆಯನ್ನು ಈ ಸೋಶಿಯಲ್ ಮೀಡಿಯಾ ನೆಟ್ವರ್ಕಿಂಗ್ ಜಮಾನದಲ್ಲೂ ಆಸ್ಥೆಯಿಂದ ಮುಂದುವರೆಸಿಕೊಂಡು ಬರುತ್ತಿದ್ದ ಹೊಸೂರಿನ ಅಂಟಿಕೆ ಪಿಂಟಿಗೆ ತಂಡದ ಯುವಕರ ಬಗ್ಗೆ ಒಂದು ಭಗೆಯ ದಿವ್ಯ ಮೆಚ್ಚುಗೆ ಮೂಡಿತು.
“ನಿಂಗೂ ಈ ಹಾಡಿನ ಗೀಳು ಅಂಟಿಕೊಳ್ತಲ್ಲ ಮಾಣಿ. ಈ ಅಂಟಿಕೆ ಪಿಂಟಿಕೆ ತಂಡದ ಹಾಡಿನ ಸೊಗಡೇ ಹೀಗ್ ನೋಡು. ನಂಗಿನ್ನು ಬರೋ ದೀಪಾವಳಿ ತನಕ ಈ ಹಾಡು ಕೊರಿತಾ ಇರತ್ತೆ” ಅಂಗಳದಲ್ಲಿ ಅದಾಗ ತಾನೆ ಅರಳಿದ ಕೆಂಪು ಡೇರೆ ಹೂವನ್ನು ದಿಟ್ಟಿಸುತ್ತಾ ಅಂಟಿಗೆ ಪಿಂಟಿಗೆ ತಂಡದವರ ನುಡಿಯನ್ನು ಮೆಲುಕುಹಾಕುತ್ತಿದ್ದಾಗಲೇ ಹಿಂದಿನಿಂದ ಬಂದ ಕೇಶವ ಮಾವ ಮಾತನಾಡಿದ್ದರು. ಮುಗುಳ್ನಗೆ ಬೀರಿ ಸುಮ್ಮನೆ ನಿಂತ ಚಿತ್ತರಂಜನ್..
“ಮುಖ ಮಾರ್ಜನ ಆಗಿದ್ರೆ ಕಾಫಿ ಕುಡಿ, ತೋಟದ್ ಕಡೆ ಹೋಗಿ ಬರೋಣ.. ಏ ಇವ್ಳೇ ಅಪ್ಪಿಗೆ ಕಾಫಿ ಕಾಯಿಸೇ” ಅಂಗಳದಲ್ಲಿ ನಿಂತುಕೊಂಡೇ ಪತ್ನಿಗೆ ಆರ್ಡರ್ ಮಾಡಿದ್ದ ಕೇಶವ ಮಾವ. ಮಾವನ ಜಾಗಟೆಯಂತಹ ಘಟವಾಣಿ ಮುಂದಿನ ತೋಟದಲ್ಲೂ ಹಿಂದಿನ ಗುಡ್ಡದ ಕಾಡಿನ ಧರೆಗೂ ಬಡಿದು ಪ್ರತಿಧ್ವನಿಸಿತು.
“ಅಪ್ಪಿ, ಆ ಕಡೆ ಮುಂದ್ ಹೋಗ್ಬೇಡಾ, ಅಲ್ಲೇ ಮೊನ್ನೆ ನಾಗರ, ಕೆರೆಬುಡ್ಡ ತಳುಕು ಹಾಕಿಕೊಂಡಿತ್ತು.” ಧರೆಯ ತುದಿಯಲ್ಲಿ ನಿಂತ ಚಿತ್ತರಂಜನ್ಗೆ ದಾಸವಾಳದ ಸಣ್ಣ ಹೋತೋಟದ ಕಡೆಗೆ ಕೈ ತೋರಿಸಿ ಎಚ್ಚರಿಸಿದ ಕೇಶವ ಮಾವ. ಅಷ್ಟರಲ್ಲಿ ನಾಗತ್ತೆ ಉರುಫ್ ನಾಗವೇಣಿ ಕಡು ಕಷಾಯದಂತಹ ಕಾಫಿ ತಂದುಕೊಟ್ಟಳು. ತೋಟದ ಕಾಫೀ ಬೀಜವನ್ನು ಮನೆಯಲ್ಲಿ ಕುಟ್ಟಿ ಪುಡಿಮಾಡಿ, ಹದಕ್ಕೆ ಬೇಕಾದಷ್ಟು ಚಿಕೊರಿ ಬೆರೆಸಿ, ಮಾಡಿದ ವಿಪರೀತ ಸ್ಟ್ರಾಂಗ್ ಹೋಂ ಮೇಡ್ ಕಾಫಿ ಪುಡಿಯ ಅದ್ಭುತ ಪೇಯ. ಆಗುಂಬೆಯ ಮಳೆ ಹಾಗೂ ಮೈ ನಡುಗಿಸುವ ಚಳಿಗೆ ಆ ಖಡಕ್ ಕಾಫಿ ನಿಜಕ್ಕೂ ರಾಮಭಾಣ. ಅಂಗಳದಲ್ಲಿ ಶತಮಾನಗಳಿಂದಲೂ ರಾಮನ ಪಾದಸ್ಪರ್ಶಕ್ಕೆ ಕಾದು ಬಿದ್ದಿದ್ದಂತಹ ಅಹಲ್ಯಾ ಶಿಲೆಯಂತಹ ಹಾಸುಗಲ್ಲಿನ ಮೇಲೆ ಕುಳಿತು ಗಂದರ್ವ ಪಾನೀಯ ಗುಟುಕರಿಸತೊಡಗಿದ ಚಿತ್ತರಂಜನ್. ಕವರಿಹಕ್ಕಲು ಕಡೆಯಿಂದ ಬಂದ ಕೊನೆಯ ಮಾವ ಮಾಧವ ಅಂದಿನ ದಿನಪತ್ರಿಕೆಯನ್ನು ಕೊಟ್ಟ. ಶಿವಮೊಗ್ಗ ಅಡಿಷನ್ ವೃತ್ತಪತ್ರಿಕೆಯದು, ಅದರ ಪೇಜ್ ತ್ರೀ ಕಾಲಂನಲ್ಲಿ ಸಣ್ಣಗೆ ಅಚ್ಚಾಗಿದ್ದ ಸುದ್ದಿಯೊಂದು ಚಿತ್ತರಂಜನ್ನನ್ನು ಆಕರ್ಷಿಸಿತು.
“ದೀಪಾವಳಿ ಕಳೆದ ರಾತ್ರಿ ಆಗುಂಬೆ ಗ್ರಾಮದ ಕೆಲವು ಒಂಟೀ ಮನೆಗಳಲ್ಲಿ ಕಳ್ಳತನ: ನಕ್ಸಲರ ಕೃತ್ಯದ ಶಂಕೆ” ಅದೊಂದು ಸುದ್ದಿಯನ್ನು ಎರಡ್ಮೂರು ಬಾರಿ ಓದಿದ ಅವನ ಮನಸಿನಲ್ಲಿ ಇದು ನಕ್ಸಲರ ಕೃತ್ಯವಾಗಿರಲಾರದು ಅನ್ನುವ ಅನುಮಾನ ಕಾಡತೊಡಗಿತು. ಅಷ್ಟರಲ್ಲಿ ಅಡಿಕೆ ಹಾಳೆ ಕಟ್ಟಲು ಮಾಧವ ಕತ್ತಿ ತೆಗೆದುಕೊಂಡು ತೋಟದ ಕಡೆಗೆ ಹೊರಟ. ವೀಳ್ಯದ ಎಲೆ ಕುಯ್ಯಲು ಕೇಶವ ಮಾವ ಮೋಟು ಕುಡುಗೋಲು ಕಟ್ಟಿದ ವಾಟೆ ದೋಟಿ ಹೆಗಲಿಗೆ ನೇತು ಹಾಕಿಕೊಂಡು ಹಳ್ಳ ದಾಟುತ್ತಿದ್ದ. ಚಿತ್ತರಂಜನ್ಗೆ ಇಬ್ಬರೂ ಮಾವಂದಿರು ತೋಟಕ್ಕೆ ಬರುವಂತೆ ಸನ್ನೆ ಮಾಡಿದ್ದು ಕಾಣಿಸಿತು; ಮೆಟ್ಟು ಮೆಟ್ಟಿದವನೇ ಜಗುಲಿ ಗುಡಿಸುತ್ತಿದ್ದ ಸೂರ್ಯಕಾಂತಿ ಅತ್ತೆಗೆ ತೋಟಕ್ಕೆ ಹೋಗಿ ಬರೋದಾಗಿ ಹೇಳಿ ಹೊರಟ.
“ಜಾಗೃತೆ ಮಾಣಿ, ಇಂಬ್ಳ ಹತ್ತೀತು” ಸೂರ್ಯಕಾಂತಿ ಅತ್ತೆ ಕೂಗಿದ್ದು ಕೇಳಿಸಿತು. ತೋಟಕ್ಕೆ ಹೋಗುವ ಮಾರ್ಗದಲ್ಲಿ ದೊಡ್ಡ ಮಾವ ಲಕ್ಷ್ಮೀ ನರಸಿಂಹ, ಅಂದಿನ ಪೂಜೆಗೆ ಬಾವಿಯಿಂದ ನೀರು ಸೇದುತ್ತಿದ್ದ. ಅವನ ಬಾಯಲ್ಲೂ ಸುವೇರು ಸಾಂಗಯ್ಯ ಉದುರುತ್ತಿದ್ದಿದ್ದನ್ನು ಕಿರುಗಣ್ಣಲ್ಲಿ ನೋಡಿ ಅಂಟಿಗೆ ಪಿಂಟಿಗೆ ಮಹಿಮೆಯನ್ನು ಶ್ಲಾಘಿಸುತ್ತಾ ತೋಟದ ಕಡೆಗೆ ನಡೆದ ಚಿತ್ತರಂಜನ್..
“ಹೋಯ್ ಕಿಟ್ಭಟ್ರೇ ಎಂಥ ಮಾರಾಯ್ರೆ ಇದು..? ಮೊನ್ನೆ ರಾತ್ರಿ ದೋಣಿಹಕ್ಕಲು ಪರಮೇಶ್ವರಯ್ಯ ಮನೆಯಲ್ಲಿ ಕಳ್ತನ ಅಂತೆ. ಅವರೇಮನೆ ಮಧುಸೂದನ್ ಮನೆಗೆ ಕೂಡಾ ಕಳ್ಳರು ಹೊಕ್ಕಿದಾರಂತೆ, ಇವತ್ತು ಪೇಪರಲ್ಲಿ ಬಂದಿದೆ ಗುಡ್ಡೇಕೇರಿ, ಹಂದಲಸು, ನಡೆಬಾರಲ್ಲೂ ಒಂದೆರಡ್ ಮನೆಯಲ್ಲಿ ಕಳ್ತನ ಅಂತೆ ಮಾರಾಯ್ರೆ.. ಏನ್ ಕಥೆ ಇದು ಅಂತ..”
ಅಡಿಕೆ ಆರಿಸುತ್ತಿದ್ದ ಪಕ್ಕದ ಮನೆಯ ನಾಗರಾಜಯ್ಯ ಆಶ್ಚರ್ಯ ಗಾಬರಿಯಿಂದ ಕೇಶವ ಮಾವನ್ನ ಕೇಳುತ್ತಿದ್ರು. ಕೇಶವ ಮಾವನನ್ನು ಸಿರಿಮನೆಯ ಸುತ್ತಮುತ್ತ ಕರೀತಾ ಇದ್ದಿದ್ದೇ ಕಿಟ್ಟು ಭಟ್ರು ಅಂತ. ಆ ಬದಿಯಲ್ಲಿ ದೊಡ್ಡ ಮಾವ ಲಕ್ಷ್ಮೀ ನರಸಿಂಹ ದೊಡ್ಡ ಭಟ್ರು, ಅಜ್ಜಯ್ಯ ಶೃಂಗೇಶ್ವರಯ್ಯ ಅಯ್ನೋರು, ಕೊನೆಯ ಮಾವ ಮಾಧವ, ಸಣ್ಣ ಭಟ್ರು ಆಗಿ ದಶಕಗಳೇ ಉರುಳಿದ್ದವು.
ಉದ್ದನೆಯ ವಾಟೇ ಕೋಲಿಗೆ ತುಂಡು ಕತ್ತಿ ಸಿಕ್ಕಿಸಿ ಅಡಿಕೆ ಮರಕ್ಕೆ ಹಬ್ಬಿದ್ದ ವೀಳ್ಯದ ಎಲೆ ಬಳ್ಳಿಯಲ್ಲಿ ಎಲೆ ಕತ್ತರಿಸುವತ್ತ ಕಣ್ಣು ನೆಟ್ಟಿದ್ದ ಕೇಶವ ಮಾವ “ಹೋಯ್! ನಿಮ್ ಮನೆ ಕಡೆ ಒಂಚೂರು ನೋಡ್ಕೊಳಿ ಮಾರಾಯ್ರೆ. ಅಡಿಕೆ ರಾಶಿಗೇನಾದ್ರೂ ಕೈ ಹಾಕಿದ್ರಾ ಕಳ್ ಬಡ್ಡಿಮಕ್ಳು ಅಂತ. ನೀವು ಈ ಸಲ ಅಡಿಕೆಯನ್ನು ಮಂಡೀಗೂ ಹಾಕಿಲ್ಲ” ಕಾಳಜಿಯಿಂದ ವಿಚಾರಿಸಿದ ಕೇಶವ ಮಾವ.
“ಈ ಅಂಟಿಗೆ ಪಿಂಟಿಗೆ ಮೇಳ ಬಂತಲ್ಲ, ರಾತ್ರಿ 2 ಆಗಿತ್ತು ಕಣ್ರೀ ಮುಗೀತಾ. ಅದೆಲ್ಲಾ ಮುಗಿಸಿ ಮಲಗಿದ್ರೆ ಜೋರು ನಿದ್ರೆ. ಬೆಳಿಗ್ಗೆ ಕವರಿಹಕ್ಕಲಿಗೆ ಹಾಲು ಹಾಕಕ್ಕೆ ಹೋದಾಗ್ಲೇ ಗುಸು ಗುಸು ಕೇಳ್ತು. ಕೂಡ್ಲೇ ಮನೆಗೆ ಬಂದು ಕೊಟ್ಟಿಗೆ ಸುತ್ತಾ ನೋಡಿದೆ. ಅಡಿಕೆ, ಕಾಳು ಮೆಣಸು, ಒಂದ್ ನಾಲ್ಕು ಬಾಳೇಗೊನೆ, ಲಿಂಬೇ ಹೀಚು ಬಿಟ್ರೆ ಕಳ್ರು ಹೊರೋ ಅಂತದ್ದು ಏನಿಲ್ಲ ನಮ್ ಮನೆಯಲ್ಲಿ. ಆದ್ರು ನಮ್ಮನೆಯವ್ಳು ಗಾಬರಿ ಗಾಬರಿ ಮಾಡ್ಕಂಡು ಮನೆ ಪೂರಾ ಜಾಲಾಡಿದ್ಳು. ಎಲ್ಲವೂ ಇದ್ದ ಜಾಗದಲ್ಲೇ ಇತ್ತು..” ನಾಗರಾಜಯ್ಯನ ಮಾತು ಮುಂದುವರೆದಿತ್ತು.
ಬೇರೇನೋ ತರ್ಕಿಸುತ್ತಿದ್ದ ಚಿತ್ತರಂಜನ್ನ ಪತ್ರಕರ್ತನ ಮನಸ್ಸಿಗೆ ಸುಳಿವೊಂದು ಸಿಕ್ಕಂತಾಯ್ತು. ತಕ್ಷಣ ಕೆಲವು ಇನ್ಫಾರ್ಮೇಶನ್ ಕಲೆ ಹಾಕಲು ಅಲ್ಲಿಂದ ತೋಟದ ಇನ್ನೊಂದು ಬಂದಿಯಲ್ಲಿ ಅಡಿಕೆ ಹಾಳೆ ಕಟ್ಟುತ್ತಿದ್ದ ಮಾಧವ ಮಾವನ ಬಳಿ ಹೋದ. “ಮಾವ, ಈ ಅಂಟಿಗೆ ಪಿಂಟಿಗೆ ತಂಡದ ಹಿನ್ನೆಲೆ ಎಂಥ..?” ತನ್ಮಯನಾಗಿ ಹಾಳೆ ಸಿಗಿದು ಒಟ್ಟು ಕಟ್ಟುತ್ತಿದ್ದ ಮಾಧವ ಮಾವ, ಪ್ರಶ್ನೆ ಕೇಳಿದ ಚಿತ್ತರಂಜನ್ ಕಡೆಗೆ ತಿರುಗಿ, ಬಾಯಲ್ಲಿ ತುಂಬಿಕೊಂಡಿದ್ದ ಪಾನ್ಪರಾಗ್ ಉಗುಳಿ ಉತ್ತರಿಸಿದ. “ಸುಮಾರ್ ವರ್ಷದಿಂದ ಈ ಕಡೆ ಯುವಕರು ಅಂಟಿಗೆ ಪಿಂಟಿಗೆ ತಂಡ ಕಟ್ಟಿಕೊಂಡು ದೀಪಾವಳಿ ಟೈಮಲ್ಲಿ 5 ದಿನ ಮನೆ ಮನೆಗೂ ಹೋಗಿ ಹಾಡು ಹೇಳ್ತಾರೆ. ಎರ್ಕಳೋ ದಿನ ಅಂದ್ರೆ ನರಕ ಚತುರ್ದಶಿ ದಿನ ಇಲ್ಲೇ ಗುಡ್ಡೇಕೇರಿ ಹತ್ರ ಹೊಸೂರು ಕೇಳಿದ್ಯಲ್ಲ, ಅಲ್ಲಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಡಿಪು ಕಟ್ತಾರೆ. ದೇವಸ್ಥಾನದಿಂದ ಜ್ಯೋತಿಯನ್ನು ದೀವಟಿಗೆಯಲ್ಲಿ ತರ್ತಾರೆ. ನರಕ ಚತುರ್ದಶಿ, ದೀಪಾವಳಿ ಅಮಾವಸ್ಯೆ, ಪಾಡ್ಯದ ಗೋಪೂಜೆ, ಬಿದಿಗೆ ಹಬ್ಬದ ಕರಿ, ತದಿಗೆ ವರ್ಷದ ತೊಡಕು ಒಟ್ಟು 5 ರಾತ್ರಿ ದೀವಟಿಗೆ ಆರದಂತೆ ರಕ್ಷಣೆ ಮಾಡ್ತಾ ಪ್ರತೀ ಮನೆ ಮನೆಗೆ ಹೋಗಿ ಹಾಡು ಹೇಳ್ತಾರೆ. ಅಕ್ಕಿ, ಬೆಲ್ಲ, ರಾಗಿ, ದವಸ ಧಾನ್ಯ, ದುಡ್ಡು, ಹೊಸ ಬಟ್ಟೆ ಏನು ಬೇಕಾದ್ರೂ ಕೊಡಬಹುದು. ಕೊನೆಗೆ 5 ದಿನ ಕಳೆದ ನಂತರ ಕಲೆಕ್ಟ್ ಮಾಡಿದ್ದನ್ನು ಒಟ್ಟು ಮಾಡಿ ದೇವರ ಹೆಸರಲ್ಲಿ ಕಟ್ಟಿಕೊಂಡ ಹರಕೆಯನ್ನು ತೀರಿಸ್ತಾರೆ.
ಶಿವನ ದೇವಸ್ಥಾನಕ್ಕೆ ಮುಡಿಪು ಕಟ್ಟೋದು ಹೆಚ್ಚು ಹಾಗಾಗಿ ಶಿವನ ಹಾಡುಗಳನ್ನೇ ಹೇಳ್ತಾರೆ. ಇದೊಂದು ಜನಪದ ಸಂಸ್ಕ್ರತಿ.” ಅಂಟಿಗೆ ಪಿಂಟಿಗೆ ತಂಡದ ಹಿನ್ನೆಲೆಯನ್ನು ಕ್ಲುಪ್ತವಾಗಿ ಅರ್ಥ ಮಾಡಿಸಿದ್ದ ಮಾಧವ ಮಾವ.
ಹೆಗ್ಗೋಡಿನ ನೀನಾಸಂನಲ್ಲಿ ನಾಟಕದ ಕಲಿಕೆ, ನಿರ್ದೇಶನ ಕಲಿತು ಬಂದಿದ್ದ ಮಾಧವ ಮಾವ ದೊಡ್ಡ ರಂಗಕರ್ಮಿ ಆಗಬಹುದಿತ್ತು. ಆದರೆ ಶೃಂಗೇಶ್ವರ ಅಜ್ಜಯ್ಯ ತೀರಿಕೊಂಡ ಬಳಿಕ ತೋಟದ ನಿರ್ವಹಣೆಗೆ ವಾಪಾಸು ಬಾ ಅಂತ ದೊಡ್ಡ ಮಾವ ತಾಕೀತು ಮಾಡಿದ್ದರಿಂದ ಈ ಸಿರಿಮನೆಯಂತಹ ಕುಗ್ರಾಮದಲ್ಲಿ ತನ್ನ ಪ್ರತಿಭೆ ಬಲಿಕೊಟ್ಟು ತೋಟದ ಕೆಲಸ ಮಾಡಿಕೊಂಡಿದ್ದ. ಬಿಎ ಗ್ರಾಜ್ಯುಯೇಟ್ ಮಾಧವ ಮಾವನ ಕಮ್ಯುನಿಕೇಶನ್ ಎಕ್ಸಲೆನ್ಸಿಗೆ ತಲೆದೂಗುತ್ತಾ ಅವನಿಗಿದ್ದ ಕೆಲವು ಸಂದೇಹಗಳನ್ನು ನಿವಾರಿಸಿಕೊಳ್ಳತೊಡಗಿದ ಚಿತ್ತರಂಜನ್.
“ಯೆಸ್! ಅಂದ್ರೆ ಈ ಅಂಟಿಗೆ ಪಿಂಟಿಗೆ ತಂಡದ ಸದಸ್ಯರು ಹೊಸೂರು ಹಾಗೂ ಸುತ್ತಮುತ್ತಲಿನ ಯುವಕರು. ರಾತ್ರಿ ಹೊತ್ತು ಮಾತ್ರ ಇವರು ಕಾರ್ಯಾಚರಣೆ ನಡೆಸ್ತಾರೆ. ಅದೂ ದೀಪಾವಳಿಯ 5 ದಿನ ಮಾತ್ರ. ಇಂಪಾರ್ಟೆಂಟ್ ಥಿಂಗ್ ಈಸ್ ಈ ಯುವಕರಿಗೆ ಈ ಸುತ್ತಮುತ್ತಲಿನ ಹಳ್ಳಿಗಳ ಎಲ್ಲಾ ಮನೆಗಳ ಪರಿಚಯ ಇದೆ. ಐ ಕ್ಯಾನ್ ಫ್ರೀಜ್ ಆನ್ ದಿಸ್”
“ನೀನು ಯಾವ ವಿಷ್ಯದ ಬಗ್ಗೆ ತರ್ಕ ಮಾಡ್ತಿದ್ದೀಯಾ ಅಂತ ನಂಗೊತ್ತು. ಆದ್ರೆ ನೀನ್ ತಿಳ್ಕೊಂಡ್ ಹಾಗೆ ಈ ಅಂಟಿಗೆ ಪಿಂಟಿಗೆ ತಂಡದವ್ರು ಕಳ್ರಲ್ಲ. ಎಲ್ಲರಿಗೂ ಉದ್ಯೋಗ ಇದೆ. ಊರುಮನೆ ಗುರುತು ಪರಿಚಯ ಇರೋ ಒಳ್ಳೆ ಹುಡುಗ್ರು. ಜನಪದವನ್ನು ಉಳಿಸಬೇಕು ಅನ್ನೋ ಆಸಕ್ತಿ ಇರೋ ಕ್ರಿಯಾಶೀಲ ಯುವಕರು. ಹಂಗಾಗಿ ಈ ಯುವಕರು ಕಳ್ಳತನ ಮಾಡಿರೋಕೆ ಸಾಧ್ಯ ಇಲ್ಲ ಬಿಡು.” ಚಿತ್ತರಂಜನ್ ಲಾಜಿಕ್ ಅನ್ನು ಸರಿಯಾಗಿ ಗ್ರಹಿಸಿ ಉತ್ತರ ಕೊಟ್ಟಿದ್ದ ಮಾಧವ ಮಾವ.
“ಮಾವ, ನಾನು ಅಂಟಿಗೆ ಪಿಂಟಿಗೆ ತಂಡದವ್ರೇ ಕಳ್ಳತನ ಮಾಡಿದ್ದಾರೆ ಅಂತ ಸಸ್ಪೆಕ್ಟ್ ಮಾಡ್ತಿಲ್ಲ. ಈ ತಂಡದಲ್ಲಿರಬಹುದಾದ ಯಾವ್ದಾದ್ರೂ ಕೆಲವು ಕಿಡಿಗೇಡಿಗಳು ಮಾಡಿರಬಹುದು. ಅಥವಾ ಅಂಟಿಗೆ ಪಿಂಟಿಗೆ ತಂಡದ ಹಿಂದೆ ಸಂಚು ಹೂಡಿ ಬಂದು ಕದ್ದಿರಬಹುದು. ನಂಗೇನೋ ಇದು ನಕ್ಸಲರು ಮಾಡಿದ್ದು ಅನ್ಸೋದಿಲ್ಲ. ನಕ್ಸಲರು ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ದೋಚ್ತಾರೆ ರೈಟ್!! ಆದ್ರೆ ಒಂದೇ ದಿನ ಸರಣಿ ದರೋಡೆ ಮಾಡೋದಿಕ್ಕೆ ನಕ್ಸಲರಿಗೂ ಧೈರ್ಯ ಇಲ್ಲ. ಅವರಲ್ಲಿ ಪಶ್ಚಿಮ ಘಟ್ಟದ ಈ ಭಾಗದಲ್ಲಿ ಅಷ್ಟು ಸದಸ್ಯರೂ ಇಲ್ಲ. ಒಂದ್ ವಿಷಯ ಕನ್ಫರ್ಮ್ ಮಾಡಿ ಮಾವ, ಅಂಟಿಗೆ ಪಿಂಟಿಗೆಯವರು ಒಂದೇ ತಂಡ ಎಲ್ಲಾ ಕಡೆ ಹೋಗೋದಕ್ಕಾಗಲ್ಲ ಅಲ್ವಾ..?” ಅಷ್ಟರಲ್ಲಿ ಅಲ್ಲಿಗೆ ಬಂದು ನಿಂತು ನಮ್ಮ ಚರ್ಚೆ ಕೇಳುತ್ತಿದ್ದ ಕೇಶವ ಮಾವ ಕೂಡಾ ಮಾತಿಗೆ ನಿಂತ್ರು.
“ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಡಿಪು ಕಟ್ಟೋದು ಒಂದೇ ತಂಡ. ಆದ್ರೆ ರೂಟ್ ಬೇರೆ ಬೇರೆ ಮಾಡಿಕೊಂಡು ನಾಲ್ಕೈದು ಗುಂಪು ಮಾಡಿಕೊಂಡು ಹೋಗ್ತಾರೆ. ಕವರಿಹಕ್ಲು, ಕೈಮರ, ಸಿರಿಮನೆ ಗುಂಡಿ, ದೋಣೆಹಕ್ಲು, ಬೆಟ್ಟದ ಮಲ್ಲಿಗೆ ದೊಡ್ಡಮನೆ, ಅವರೇಮನೆ ಈ ಕಡೆಗೆ ಒಂದ್ ತಂಡ ಹೋಗುತ್ತೆ. ಹುಲ್ಕೋಡು, ದಂಟಕ, ನಡಬಾರು, ಹಂದಲಸು, ಮಾದ್ಲುಬೈಲು ಕಡೆಗೆ ಒಂದ್ ತಂಡ ಕಳಿಸ್ತಾರೆ. ಹೊಸೂರು, ಗುಡ್ಡೇಕೇರಿ ಮೇಗರವಳ್ಳಿ ಪೇಟೆ ಕಡೆಗೆ ಒಂದ್ ತಂಡ ಹೊರಡ್ತಾರೆ. ಕೆಂದಾಳಬೈಲು, ತಲ್ಲೂರಂಗಡಿ ಕಡೆಗೆ ಒಂದ್ ತಂಡ ಹೋಗುತ್ತೆ. ಎಲ್ಲರೂ ಒಂದೇ ತಂಡದವ್ರೇ, ಬೇರೆ ಬೇರೆ ದೀವಟಿಗೆ ಹಿಡ್ದು ಹೊರಡ್ತಾರೆ. ಯಾವ ದೀವಟಿಗೆ ಆರಿದ್ರೂ ಅಲ್ಲಿಗೆ ಅಂಟಿಗೆ ಪಿಂಟಿಗೆ ಕೈದು ಅಂತ ಅರ್ಥ.” ಕೊಯ್ದಿದ್ದ ವಿಳ್ಯದ ಎಲೆಗಳನ್ನು ಗುಡ್ಡೆ ಮಾಡಿ ಗೊಬ್ಬರದ ಚೀಲಕ್ಕೆ ತುಂಬಿಕೊಂಡೇ ಮಾಹಿತಿ ನೀಡಿದ್ದ ಕೇಶವ ಮಾವ. ನಾಗರಾಜಯ್ಯ ಕೂಡಾ ಹೌದು ಹೌದೆನ್ನುವಂತೆ ತಲೆ ಆಡಿಸುತ್ತಿದ್ದರು.
ಯಾಕೋ ತನ್ನ ತರ್ಕ ಸರಿಯಾದ ಕಡೆ ಸಾಗುತ್ತಿದೆ ಅನ್ನುವ ಬಲವಾದ ನಂಬಿಕೆ ಮಾತ್ರ ಚಿತ್ತರಂಜನ್ ಗಿತ್ತು. ಅಂಗಳದಿಂದ ಸೂರ್ಯಕಾಂತಿ ಅತ್ತೆ ಕೂಗು ಹಾಕಿದ್ದು ಕೇಳಿತು. “ಮಾಣಿ, ದೊಡ್ಮಾವಂದು ಪೂಜೆ ಆಯ್ತು. ಎಲೆ ಹಾಕದಾ ಕೇಳ್ತ್ರು.” ಆಗ ಅವನಿಗೆ ಹೊಟ್ಟೆಯ ಹಸಿವು ಅರಿವಿಗೆ ಬಂದಿತು. ನಾಗರಾಜಯ್ಯ ತೀರ್ಥಹಳ್ಳಿ ಪೇಟೆಗೆ ಹೋಗಬೇಕು ಅಂತ ಹೇಳಿ ಬೀಳ್ಕೊಟ್ಟರು. ಮಾವಂದಿರು ಹಾಗೂ ಅಳಿಯ ಬೆಳಗಿನ ಉಪಹಾರಕ್ಕೆಂದು ಮನೆಗೆ ಬಂದರು.
“ಹ್ಹೆ ಹ್ಹೆ ಇಲ್ಲಪ್ಪ, ಅಂಟಿಗೆ ಪಿಂಟಿಗೆಯವು ಕಳ್ಳತನ ಮಾಡಕ್ಕೆ ಸಾಧ್ಯ ಇಲ್ಲ ಮಾಣಿ!!.. ಹೊಸೂರು ಗಿರೀಶ, ಗುಡ್ಡೇಕೇರಿ ಮಾಬ್ಲ, ನಟೇಶ ಎಲ್ಲಾ ಕೊನೆ ಕುಯ್ಲಿಗೆ, ಔಷಧಿ ಹಾಕಕ್ಕೆ, ಗೊಬ್ಬರಕ್ಕೆ, ಬೇಸಾಯಕ್ಕೆ ಖಾಯಂ ಬರೋರು. ನೀನು ಕ್ರೈಂ ರಿಪೋರ್ಟರ್ ಅಂತ ಗೊತ್ತು. ಹಗಾಂತ ನಮ್ ಬದಿ ಹುಡುಗ್ರನೆಲ್ಲಾ ಕಳ್ರುನ್ ಮಾಡಬೇಡ ಅಪ್ಪಿ.” ತಿಂಡಿ ತಿಂತಾ ನನ್ನ ವಾದವನ್ನು ಮುಲಾಜಿಲ್ಲದೆ ಕಿತ್ತು ಬಿಸಾಡಿದ್ದ ಲಕ್ಷ್ಮೀ ನರಸಿಂಹ ಮಾವ.
“ಮಾವ, ಕಳ್ಳತನ ಆಗಿದ್ದ ರೂಟ್ ನೋಡಿ, ಅಂಟಿಗೆ ಪಿಂಟಿಗೆ ತಂಡ ಹೋದ ದಾರಿಯಲ್ಲೇ ಕಳ್ಳತನ ಆಗಿದೆ. ಹಾಗಂತ ಅವರೇ ಕಳ್ಳತನ ಮಾಡಿದ್ದಾರೆ ಅನ್ನೋದು ನನ್ ವಾದ ಅಲ್ಲ. ಅವರ ಜೊತೆ ಬಂದ ಯಾರೋ ಕಳ್ಳತನ ಮಾಡಿರಬಹುದು. ಅಥವಾ ಅವರನ್ನು ಹಿಂಬಾಲಿಸಿಕೊಂಡು ಬಂದ ಇನ್ನೊಂದು ತಂಡ ಈ ಕೃತ್ಯ ಎಸಗಿರಬಹುದು. ಈ ಅಂತರ್ರಾಜ್ಯ ಕಳ್ಳರು ನೆಟ್ವರ್ಕ ಆಗಿ ಪ್ಲಾನ್ ಮಾಡ್ತಾರೆ. ಇದೂ ಅದೇ ರೀತಿಯ ಒಂದು ಸರಣಿ ಕಳ್ಳತನ ಯಾಕಿರಬಾರ್ದು.? ಬೇಕಿದ್ರೆ ಸರಿಯಾಗಿ ಗಮನಿಸಿ ನೋಡಿ ಅಂಟಿಗೆ ಪಿಂಟಿಗೆ ತಂಡ ಬಂದ ರಾತ್ರಿ ಬಹುತೇಕ ಎಲ್ಲಾ ಕಡೆ ಕಳ್ಳತನ ಆಗಿದೆ. ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ಇಲ್ಲೂ ಯಾವ್ದಾದ್ರೂ ವಸ್ತು ಕಳ್ಳತನ ಆಗಿದ್ರೂ ಆಗಿರಬಹುದು..”
“ಹೌದೇನೋ ಮಾಣಿ, ಅಂಗಳದಲ್ಲಿ ಜಗುಲಿ ವರಸೋ ಬಟ್ಟೆ ಕಾಣ್ತಿಲ್ಲ. ಕಡ್ಡಿ ಹಿಡೀನೂ ನಾಪತ್ತೆ ಮಾರಾಯ..!!” ಸೂರ್ಯಕಾಂತಿ ಅತ್ತೆ ನೆನಪಿಸಿಕೊಂಡು ಹೇಳಿದ್ರು. ಹಿಂದೆಯೇ ನಾಗವೇಣಿ ಅತ್ತೆಯೂ “ಅಪ್ಪಿ, ನೀನು ಹೇಳದು ಸರಿ ಕಣ. ಮುಂಡು ಹಾರೆ ಮೋಟುಗತ್ತಿ ಕಾಣ್ತಿಲ್ಲ, ಸೌದೆ ಕೊಟ್ಟಿಗೆಯಲ್ಲಿ ಒಂದ್ ಹೊರೆ ಸೌದೆ ಮಾಯ ಆಗಿದ್ದು ಮಾರಾಯ..!!”
ಒತ್ತರಿಸಿಕೊಂಡು ಬಂದ ನಗುವನ್ನು ನಿಯಂತ್ರಿಸಿಕೊಳ್ಳುತ್ತಿದ್ದಂತೆ ಕೇಶವ ಮಾವನ ಘರ್ಜನೆ ಕೇಳಿಸಿತು. “ನೀವ್ ಸ್ವಲ್ಪ ಮುಚ್ಕಂಡ್ ಇರ್ತೀರಾ..? ಏನ್ ಮಹಾ ಬಾದರಾಯಣ ಕಾಲದ ಅಮೂಲ್ಯ ಸಂಪತ್ತು ನಿಮ್ ಜಗುಲಿ ಒರೆಸೋ ಬಟ್ಟೆ, ಕಡ್ಡಿ ಹಿಡಿ, ಮೋಟುಗತ್ತಿ, ಮುಂಡುಹಾರೆ, ಯಾರಾದ್ರೂ ಕಟ್ಟಿಗೆ ಸೌದೆ ಕದೀತಾರಾ??”
“ನಿಮ್ ಸಂಪತ್ತು ಇಷ್ಟರಲ್ಲಿ ಹಡಗು ಹತ್ತಿ ವಿದೇಶಕ್ಕೆ ಸ್ಮಗ್ಲಿಂಗ್ ಆಗ್ತಿರಬಹುದು..” ಮಾಧವ ಮಾವ ಕಾಮೆಂಟ್ ಹೊಡೆದ.
“ಅದ್ರ ಹೊಂಡಕ್ ಹಾಕ, ಆ ಮುಂಡೇ ಕುರ್ದೆ ಬೊಗ್ಗಿ ಲಾಲೂ ಪ್ರಸಾದ್ ಯಾದವ್ ಅಡಿಕೆ ಕೊಟ್ಟಿಗೆಯಲ್ಲಿ ಹಿಡಿ ಕಡ್ಡಿನ ತುಂಡ್ ತುಂಡ್ ಮಾಡಿ ಹಾಕಿತ್ತು. ಅದ್ರ ಅಮ್ಮ ಮಾಯಾವತಿ ಜಗುಲಿ ಒರೆಸೋ ಚಪ್ಪು ಬಟ್ಟೆಯನ್ನು ಧರೆ ಕೆಳಗೆ ಬಿಸಾಕಿದೆ. ಮುಂಡು ಹಾರೆ ಮೋಟುಗತ್ತಿ ಹೂವ ತಗೊಂಡ್ ಹೋಗಿದ್ದಾನೆ..” ಕಳೆದುಕೊಂಡ ಅಮೂಲ್ಯ ವಸ್ತುಗಳ ಬಗ್ಗೆ ಮಾಹಿತಿ ನೀಡಿದ ನರಸಿಂಹ ಮಾವ.
“ಆಂ, ಮಾಯಾವತಿ, ಲಾಲೂಪ್ರಸಾದ್ ಯಾದವ್..??” ಉದ್ಘರಿಸಿದ ಚಿತ್ತರಂಜನ್.
“ಅಪ್ಪಿಗೆ ತಲೆ ಕೆಡ್ತು. ತಾಯಿ ನಾಯಿ ಮಾಯಾವತಿ ಅದ್ರ ಮರಿ ಲಾಲೂ ಪ್ರಸಾದ್ ಯಾದವ್. ನಿಮ್ ಬಿಜೆಪಿ ಸಣ್ಣ ಮಾವ ಇಟ್ಟ ಹೆಸರು ಅದು” ಮಾಧವ ಮಾವನ ಹೆಂಡತಿ ವೈಶಾಲಿ ಅತ್ತೆ ಸಮಜಾಯಶಿ ನೀಡಿದ್ರು.
“ಒಹ್ಹೋಹ್ಹೋ! ಬಿಎಸ್ ಪಿ ಅಮ್ಮ, ಆರ್ಜೆಡಿ ಮಗ. ವಂಡರ್ಫುಲ್ ಕಾಂಬಿನೇಷನ್ ಮಾಧವ ಮಾವ” ಒತ್ತರಿಸಿಕೊಂಡು ಬಂದ ನಗುವನ್ನು ನಗುತ್ತಲೇ ಹೇಳಿದ ಚಿತ್ತರಂಜನ್. ಉಪಹಾರ ಮುಗಿಸಿ ಜಗುಲಿಯಲ್ಲಿ ಚಿತ್ತರಂಜನ್ ಕುಳಿತ. ಕೇಶವ ಮಾವ ವೀಳ್ಯದೆಲೆಗಳನ್ನು 25ರ ಕೌಳಿಗೆಗಳಂತೆ ಜೋಡಿಸಿ ಕಟ್ಟತೊಡಗಿದ. ಮಾಧವ ಮಾವ ದೋಣಿಹಕ್ಕಲು ಶಾಲೆಯ ಮಕ್ಕಳಿಗೆ ಕಲಿಸಲು ಗಿರೀಶ್ ಕಾರ್ನಾಡರ ತುಘಲಕ್ ನಾಟಕವನ್ನು ಮತ್ತೆ ಓದಿಕೊಳ್ಳತೊಡಗಿದ. ನರಸಿಂಹ ಮಾವ ಪೌರೋಹಿತ್ಯದ ಸಾಮಾನುಗಳನ್ನು ಜೋಡಿಸತೊಡಗಿದ.
ಅಂದು ರಾತ್ರಿಯೇ ಬೆಂಗಳೂರಿಗೆ ಹೊರಡಬೇಕಿದ್ದ ಅಪರೂಪದ ಅಳಿಯನಿಗೆ ಹಲಸಿನ ಹಣ್ಣಿನ ಮುಳುಕ, ಹಲಸಿನ, ಅಕ್ಕಿಯ ಹಪ್ಪಳ, ಸಂಡಿಗೆ, ಮಿಡಿಗಾಯಿ ಉಪ್ಪಿನಕಾಯಿ, ಮಾವಿನಶುಂಟಿ ತೊಕ್ಕು, ಮನೆಯಲ್ಲಿ ಕಾಯಿಸಿದ್ದ ತುಪ್ಪ, ತೋಟದ ಏಲಕ್ಕಿ, ಲಿಂಬೇಕಾಯಿ, ಹೋಂ ಮೇಡ್ ಕಾಫಿಪುಡಿ, ದಿಂಡುಮಾವಿನ ಹಣ್ಣಿನ ರಸ ಕಟ್ಟುವ ಕೆಲಸದಲ್ಲಿ ಸಿರಿಮನೆಯ ಸೊಸೆಯಂದಿರು ಮಗ್ನರಾದ್ರು. ಒಂದು ಗಳಿಗೆ ಮಲಗುವ ಅಂತ ಕಣ್ಮುಚ್ಚಿದ ಚಿತ್ತರಂಜನ್ಗೆ ಅಂಟಿಗೆ ಪಿಂಟಿಗೆ ತಂಡದ ಬಗ್ಗೆ ಇದ್ದ ಅನುಮಾನ ನೀಗಲಿಲ್ಲ. ದಡಕ್ಕನೆ ಎದ್ದವನೇ, ಮರದ ಮೇಜಿನ ಮೇಲೆ ತುಘಲಕ್ ನಾಟಕದ ಕಡೆಗೆ ಕಣ್ಣಿಟ್ಟು ಕುಳಿತಿದ್ದ ಮಾಧವನ ಮಾವನ ಮಾತನಾಡಿಸಿದ.
“ಈ ಅಂಟಿಕೆ ಪಿಂಟಿಗೆ ತಂಡದಲ್ಲಿ ಒಂಚೂರು ಅಡ್ಡ ದಾರಿ ಹಿಡದ ಯಾರಾದ್ರೂ ಇದ್ದಾರಾ ಮಾವ..?”
“ನಿಂಗ್ಯಾಕೆ ಆ ಪಾಪದ ಪ್ರಾಣಿಗಳ ಅನುಮಾನಿಸೋ ರೋಗ ಹಿಡಿತೋ ಮಾರಾಯಾ..?” ಅಂದ ಮಾಧವ ಮಾವ ಕೆಲವು ಕಾಲ ತನ್ನಷ್ಟಕ್ಕೆ ತಾನೇ ಆಲೋಚಿಸಿ ಉತ್ತರಿಸಿದ.
“ಒಬ್ಬ ತರ್ಲೆ ಸುಬ್ಬ ಇದ್ದಾನೆ. ಕೈಮರದ ಜೋಯಿಸರ ಮಗ. ಅಪ್ಪ ಸುಂದ್ರ ಜೋಯ್ಸ ಮಾಟ ಮಾಡಿ ಕೆಲವ್ ಮನೆ ಹಾಳು ಮಾಡಿದ. ಆ ಪಾಪ ಎಲ್ಲಿ ಹೋಗುತ್ತೆ..?? ಮಗ ಸುಬ್ಬಾ ಜೋಯಿಸ ಉಡಾಳ ಆದ. ಬರೀ ಹಾಳು ತಂಟೆ. ಈ ನಡುವೆ ಅಡಿಕೆ, ವೆನಿಲ್ಲಾ ಕದೀತಾನೆ ಅಂತ ಸುದ್ದಿ ಇದೆ. ಮಾಡಕ್ಕೆ ಒಂದ್ ಉದ್ಯೋಗ ಇಲ್ಲ. ಆಗುಂಬೆಯಲ್ಲಿ ಆರ್ಎಸ್ಎಸ್ ಸಂಘ, ಶಾಖೆ ಮಾಡ್ತೀನಿ ಅಂತ ಬಡಾಯಿ ಕೊಚ್ಕೋಂಡು ಕೆಲವು ದಿನ ಓಡಾಡಿದ..” ಮಾತು ಮುಗಿಸಿ ಪಾನ್ ಪರಾಗ್ ಒಂದರ ಪ್ಯಾಕೇಟ್ ಹರಿದು ಬಾಯಿಗೆ ಹಾಕಿಕೊಂಡ ಮಾಧವ ಮಾವ.
“ಈ ಹರುಕು ಅಸಾಮಿ, ಕೈ, ಬಾಯಿ, ಕಚ್ಚೆ ಶುದ್ಧ ಇಲ್ಲದ ಪುಡಾರಿಯನ್ನು ಅವರಾದ್ರೂ ಯಾಕೆ ಇಟ್ಕೊಂಡಾರು..? ಆರ್ಎಸ್ಎಸ್ನವ್ರು ಒದ್ದು ಓಡಿಸಿದ್ರು. ಹಾಂ! ಒಂದು ಗುಟ್ಟಿನ ಸುದ್ದಿ ಇದೆ ಮಾರಾಯ. ನೀನು ಪ್ರೆಸ್ನವ್ನು ಅಂತೇಳಿ ಎಲ್ಲಾರೂ ಹೇಳ್ ಗೀಳೀಯಾ!! ಬೆಟ್ಟದ ಮಲ್ಲಿಗೆ ದೊಡ್ಡಮನೆಯ ಸುರೇಂದ್ರ ಕಾಮತರ ಮಗಳು ನಿರುಪಮಾನ ಲವ್ ಮಾಡ್ತೀನಿ, ಹಾರಿಸ್ಕೊಂಡು ಹೋಗಿ ಮದುವೆ ಆಗ್ತೀನಿ ಅಂತಿದ್ನಂತೆ. ಈಗೀಗ ಕುಡಿತ ಕೂಡಾ ಇದ್ಯಂತೆ. ಪಾಪ ಸುರೇಂದ್ರ ಕಾಮತ್ರು ಒಳ್ಳೇ ಜನ. ಆ ಹುಡುಗಿ ಒಂಚೂರು ಹಾಗೆ ಹೀಗೆ ಇದೆ. ಮಗಳು ಕೈ ತಪ್ಪಿ ಹೋಗ್ತಾಳೆ ಅಂತ ಕಾಲೇಜಿಗೂ ಕಳಿಸದೇ ಕೂಡಿ ಹಾಕಿದಾರಂತೆ” ಮಾತು ಪೂರ್ತಿಗೊಳಿಸಿದ ಕೇಶವ ಮಾವ. ಅತ್ತೆ ಬಾಯಾರಿಕೆಗೆ ಅಂತ ಶುಂಟಿಯ ಕಷಾಯ ಮಾಡಿ ತಂದ ಕಾರಣ ಅವರ ಮಾತಿಗೆ ಬ್ರೇಕ್ ಬಿತ್ತು.
ಅಂದು ರಾತ್ರಿಯ ಬಸ್ಸಿಗೆ ಬೆಂಗಳೂರಿಗೆ ಹೋಗಬೇಕಿದ್ದರಿಂದ ಆಗುಂಬೆಯಿಂದ ಹೊರಡುವ ಒಂದೇ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಟಿಕೇಟ್ ತೆಗೆದುಕೊಳ್ಳಲು ಆಗುಂಬೆಗೆ ಬಂದಿದ್ದ ಚಿತ್ತರಂಜನ್. ಕೆಲಸ ಮುಗಿಸಿದವನೇ ಕುತೂಹಲ ತಡೆದುಕೊಳ್ಳಲಾಗದೆ ಆಗುಂಬೆಯ ಪೊಲೀಸ್ ಸ್ಟೆಷನ್ಗೆ ಹೋಗಿ ಸಬ್ ಇನ್ಸ್ಪೆಕ್ಟರ್ ಶಾಮಸುಂದರ್ ಬಳಿ ತನ್ನ ಪರಿಚಯ ಮಾಡಿಕೊಂಡು ಕಳ್ಳತನದ ವಿಚಾರ ಕೇಳಿದ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಖಾಸಗಿ ವಾಹಿನಿಯಲ್ಲಿ ಕ್ರೈಂ ರಿಪೋರ್ಟಿಂಗ್ ಮಾಡುವ ಪತ್ರಕರ್ತ ಅಂತ ತಿಳಿದ ಮೇಲೆ ಶಾಮ್ ಸುಂದರ್ ಗೌರವದಿಂದ ಮಾತನಾಡಿಸಿ ಮಾಹಿತಿ ನೀಡಿದ್ರು.
“ನೋಡಿ, ಮಿಸ್ಟರ್ ಚಿತ್ತರಂಜನ್, ದೀಪಾವಳಿಯ 3ನೇ ರಾತ್ರಿ ಒಟ್ಟು 5 ಕಡೆ ಕಳ್ಳತನ ಆಗಿದೆ. ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಹಣ, ಬಂಗಾರ ನಾಪತ್ತೆ ಆಗಿದೆ. ಇದು ನಕ್ಸಲರ ಕೆಲಸ ಅಲ್ಲ ಅನ್ನೋದು ನನ್ನ ಥಿಂಕಿಂಗ್. ಯಾಕಂದ್ರೆ ನಕ್ಸಲರು ಮಾಡಿದ್ರೆ ಕರಪತ್ರ ಸಿಗಬೇಕಿತ್ತು. ಮೋರ್ಅವರ್ ನಾನು ಚಾರ್ಜ್ ತಗೊಂಡು 8 ತಿಂಗಳಾಗಿದೆ ಇಲ್ಲಿ. ಈ ತನಕ ನಕ್ಸಲರ ಕೃತ್ಯದ ಬಗ್ಗೆ ರಿಪೋರ್ಟ್ ಆಗಿಲ್ಲ. ಸೋ, ಇದು ಅಂತರ್ರಾಜ್ಯ ಕಳ್ಳರ ಕೈವಾಡ ಇರಬಹುದು ಅನ್ಸತ್ತೆ..”
ಅವರ ಮಾತನ್ನು ಕೇಳಿದ ಚಿತ್ತರಂಜನ್ ಅಂಟಿಗೆ ಪಿಂಟಿಗೆ ತಂಡದ ಬಗ್ಗೆ ತನಗಿದ್ದ ಡೌಟ್ ಹಾಗೂ ಅಂಟಿಗೆ ಪಿಂಟಿಗೆಯವರ ರೂಟ್ ಮ್ಯಾಪ್ನ ಮೂರು ಮನೆಯಲ್ಲಿ ಕಳ್ಳತನ ಆಗಿದ್ದ ವಿಚಾರ ಮನವರಿಕೆ ಮಾಡಿಕೊಟ್ಟ. “ನೋಡಿ ಸಾರ್! ನಂಗೆ ಅಂಟಿಗೆ ಪಿಂಟಿಗೆಯಂತಹ ಜನಪದ ತಂಡದ ಬಗ್ಗೆ ಗೌರವ ಇದೆ. ಸಂಸ್ಕ್ರತಿ ಉಳಿಸ್ತಿರೋ ಅವರ ಬಗ್ಗೆ ಮೆಚ್ಚುಗೆ ಇದೆ. ಅವರು ಕಳ್ಳರು ಅಂತಲ್ಲ, ಅವರ ಜೊಂತೆ ಸೇರಿ ಯಾರೋ ಸ್ಟ್ರಾಟೆಜಿಕ್ ಆಗಿ ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಿರಬಹುದು ಅಂತ ಡೌಟ್ ಅಷ್ಟೆ. ಒಂದ್ ಸಲ ಸೂಕ್ಷ್ಮವಾಗಿ ಅವರಲ್ಲಿ ಯಾರನ್ನಾದ್ರೂ ವಿಚಾರಿಸಿ. ಬಟ್ ಒಂದ್ ರಿಕ್ವೆಸ್ಟ್, ಅವರಲ್ಲಿ ತುಂಬಾ ಜನ ಒಳ್ಳೆಯ ಯುವಕರಿದ್ದಾರೆ. ಪ್ಲೀಸ್ ಅವರ ಮನಸಿಗೆ ಹರ್ಟ್ ಆಗದೇ ಇರೋ ತರ ಎನ್ಕ್ವಯಿರಿ ಮಾಡಿ ಸರ್..”
ಅವನ ಮಾತನ್ನು ಒಪ್ಪಿಕೊಂಡ ಸಬ್ ಇನ್ಸ್ಪೆಕ್ಟರ್ ಹಾಗೇ ವಿಚಾರಿಸುವಂತೆ ಭರವಸೆ ಕೊಟ್ಟರು.
ಅಲ್ಲಿಂದ ವಾಪಾಸು ಸಿರಿಮನೆಯ ಕಡೆಗೆ ಹೆಜ್ಜೆ ಹಾಕಿದ ಚಿತ್ತರಂಜನ್, ಅದೇ ರಾತ್ರಿ ಬೆಂಗಳೂರಿಗೆ ಬಸ್ ಹತ್ತಿದ. ಒಲ್ಲದ ಮನಸಿನಲ್ಲಿ ಸೋದರಳಿಯನನ್ನು ಬೀಳ್ಕೊಟ್ಟರು ಸಿರಿಮನೆಯ ಜನ. ಬೆಂಗಳೂರಿಗೆ ಮರಳಿ ಎಂದಿನ ಮಾಮೂಲಿ ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ತರಂಜನ್. ಸಿರಿಮನೆಯಿಂದ ಬಂದು ಅದಾಗಲೇ 4 ದಿನ ಕಳೆದುಹೋಗಿತ್ತು. ಚಾನಲ್ ಕೆಲಸದ ಒತ್ತಡದ ಮಧ್ಯೆ ಸಿರಿಮನೆಯ ದೀಪಾವಳಿ, ಆಗುಂಬೆ ಸೀಮೆಯ ಅಂಟಿಗೆ ಪಿಂಟಿಗೆ, ಅಲ್ಲಿ ನಡೆದಿದ್ದ ಸರಣಿ ಕಳ್ಳತನ ಎಲ್ಲವೂ ಮರೆತಂತಾಗಿತ್ತು. ಆ ವೇಳೆಗೆ ಅವನ ಮೊಬೈಲ್ಗೆ ಆಗುಂಬೆ ಪೊಲೀಸ್ ಸ್ಟೇಷನ್ನ ಸಬ್ ಇನ್ಸ್ಪೆಕ್ಟರ್ ಶಾಮ್ಸುಂದರ್ ಕರೆ ಮಾಡಿದ್ರು. ಧ್ವನಿ ಗುರುತಿಸಿ ಕುಶಲೋಪರಿ ವಿಚಾರಿಸಿದ ಚಿತ್ತರಂಜನ್.
“ನೀವು ಸಸ್ಪೆಕ್ಟ್ ಮಾಡಿದ್ದು ಸರಿ ಇದೆ ಚಿತ್ತರಂಜನ್. ಕಳ್ಳರು ಫೈಂಡ್ ಔಟ್ ಆದ್ರು. ಆದ್ರೆ ಅಂಟಿಗೆ ಪಿಂಟಿಗೆ ತಂಡದವ್ರು ಯಾರೂ ಕಳ್ಳತನ ಮಾಡಿಲ್ಲ. ಅವರ ಜಾಡು ಬೆನ್ನು ಹತ್ತಿದ ಒಂದು ಗುಂಪು ಕಳ್ತನ ಮಾಡಿದೆ. ಅಂಟಿಗೆ ಪಿಂಟಿಗೆ ತಂಡ ಹೋದ ದಾರಿಯಲ್ಲೇ ಹೋಗಿದ್ದಾರೆ. ಸುಮಾರು ಬೆಳಗಿನ ಜಾವ 3ರಿಂದ 5 ಗಂಟೆ ಮಧ್ಯೆ ಕಳ್ಳತನ ಆಗಿದೆ. ನಾಲ್ಕು ಬೇರೆ ಬೇರೆ ಟೀಂ ಮಾಡಿ ಕಳ್ಳತನ ಮಾಡಿದ್ದಾರೆ. ಎಲ್ಲರೂ 30 ವರ್ಷದ ಒಳಗಿನವ್ರು. ರಾಯಚೂರು, ಬೀದರ್ ಕಡೆಯವ್ರು. ಒಟ್ಟು 18 ಜನ ಟ್ರೇಸ್ ಆಗಿದ್ದಾರೆ. 3 ಜನ ಹಿಂದೂ ಯುವಕರು ಉಳಿದವ್ರು ಬೇರೆ ಕೋಮಿನವ್ರು. ಗೊತ್ತಾಯ್ತಲ್ಲ. 9 ಜನರನ್ನು ಅರೆಸ್ಟ್ ಮಾಡಿದ್ದೀವಿ. ಕೆಲವು ಥಿಂಗ್ಸ್ ರಿಕವರ್ ಆಗಿದೆ ಇನ್ನೂ ಕೆಲವು ಬೇರೆ ಕಡೆಗೆ ಮೂವ್ ಮಾಡಿದ್ದಾರೆ. ಆದ್ರೆ ಇವರಿಗೆ ಇಲ್ಲಿ ಇಂಟೀರಿಯರ್ ಮನೆಗಳ ಮಾಹಿತಿ ಸಿಕ್ಕಿದ್ದು ಹೇಗೆ ಅಂತ ಗೊತ್ತಾಗಿಲ್ಲ. ಅಂಟಿಗೆ ಪಿಂಟಿಗೆ ಟೀಮಿನ ಒಬ್ಬ ಯುವಕನ ಮೇಲೆ ಅನುಮಾನ ಇದೆ. ಕ್ಲಾರಿಫೈ ಮಾಡಿಕೊಳ್ತಾ ಇದ್ದೀವಿ. ಶಾರ್ಟ್ಲೀ ವಿ ವಿಲ್ ಫೈಂಡ್ ದ ವೇಯ್ ಆಫ್ ಎಕ್ಸಿಕ್ಯೂಷನ್” ಮಾತು ಮುಗಿಸಿದರು ಶಾಮ್ ಸುಂದರ್. ಅವರ ದಕ್ಷ ಕಾರ್ಯಾಚರಣೆಗೆ ಶಹಬ್ಬಾಸ್ ಹೇಳಿದ ಚಿತ್ತರಂಜನ್, ಅದನ್ನು ಕ್ರೈಂ ಪ್ರೋಗ್ರಾಂನಲ್ಲಿ ಸ್ಟೋರಿ ಮಡಿಸೋದಾಗಿ ಹೇಳೆ ಕರೆ ಕಟ್ ಮಾಡಿದ. ತನ್ನ ಎಣಿಕೆ ಸರಿಯಾಗಿತ್ತು ಅಂದುಕೊಂಡ ತನ್ನ ಬೆನ್ನು ತಾನೇ ತಟ್ಟಿಕೊಂಡ.
ಮತ್ತೆರಡು ದಿನದ ಬಳಿಕ ಸಿರಿಮನೆಯ ಲ್ಯಾಂಡ್ ಲೈನ್ ಫೋನ್ನಿಂದ ಚಿತ್ತರಂಜನ್ಗೆ ಕರೆ ಮಾಡಿದ್ದರು ಮಾಧವ ಮಾವ. “ಮಾಣಿ, ಕಳ್ಳ ಯಾರು ಗೊತ್ತಾ..?
“ಹುಂ ಗೊತ್ತಾಯ್ತು. ಆಗುಂಬೆ ಸಬ್ ಇನ್ಸ್ಪೆಕ್ಟರ್ ಫೋನ್ ಮಾಡಿದ್ರು ಮೊನ್ನೆ. ಅಂತರ್ರಾಜ್ಯ ಕಳ್ಳರ ಕೆಲಸ. ಅಂಟಿಗೆ ಪಿಂಟಿಗೆ ತಂಡದವ್ರ ಹಿಂದೆ ಹೋಗಿ ಕಳ್ಳತನ ಮಾಡಿದ್ದಾರೆ ಅಂದ್ರು. ಸುಮ್ಮನೆ ಅಂಟಿಗೆ ಪಿಂಟಿಗೆ ತಂಡವನ್ನು ಅನುಮಾನ ಪಟ್ನಲ್ಲ ಅಂತ ಬೇಜಾರಾಗ್ತಿದೆ ಮಾವ” ಅಂದ.
“ಅಯ್ಯೋ ಅದು ಹಳೆ ಕಥೆ ಮಾರಾಯ. ನಿಜವಾದ ಕಳ್ಳ ಬೇರೆ. ಹೊಸ ಬ್ರೇಕಿಂಗ್ ನ್ಯೂಸ್ ಹೇಳ್ತೀನಿ ಕೇಳು. ಅಂಟಿಗೆ ಪಿಂಟಿಗೆ ತಂಡದವ್ರು ಬಂದಿದ್ರಲ್ಲ ಅದೇ ರಾತ್ರಿ ಬೆಟ್ಟದ ಮಲ್ಲಿಗೆ ನಿರುಪಮಾ, ಅದೇ ಕಾಮತ್ರ ಮಗಳು, ಮನೆಯಿಂದ ಪರಾರಿ. ವಿಷ್ಯ ಎಲ್ಲೂ ಹೇಳದೆ ಮಗಳ ಹುಡುಕಾಟಕ್ಕೆ ಹೋಗಿದ್ರು ಸುರೇಂದ್ರ ಕಾಮತ್ರು. ಕೊನೆಗೆ ಗೊತ್ತಾಗಿದ್ ಎಂತ ಗೊತ್ತಾ..? ಸುಬ್ಬಾ ಜೋಯಿಸ, ಓಡಿಸ್ಕಂಡು ಹೋಗಿದ್ದು ಅವಳನ್ನು..”
“ಹಾಂ! ಇದ್ ನಿಜಕ್ಕೂ ಬ್ರೇಕಿಂಗ್ ನ್ಯೂಸ್ ಬಿಡು ಮಾವ.. ಅದೇನೋ ಕಳ್ಳ ಬೇರೆ ಅಂದ್ರಲ್ಲಾ..!! ಯಾರದು??”
“ಇನ್ಯಾರು ಸುಬ್ಬಾ ಜೋಯಿಸ..!!”
“ವಾಟ್!! ಅದ್ ಹೇಗೆ? ಒಬ್ಬನೇ ಒಂದೇ ರಾತ್ರಿಲ್ಲಿ 5 ಬೇರೆ ಬೇರೆ ದಿಕ್ಕಲ್ಲಿರೋ ಮನೆ ಕಳ್ಳತನ ಮಾಡೋಕೆ ಹೇಗೆ ಸಾಧ್ಯ ಮಾವ..?”
“ಅವನು ಮಾಡಲಿಲ್ಲ ಮಾಡ್ಸಿದ. ಶಿವಮೊಗ್ಗದ ಜೈಲಿಗೆ ನಾಲ್ಕು ಸಲ ಹೋಗಿದ್ನಂತೆ. ಅಲ್ಲಿ ಯಾರಿಂದನೋ ಈ ಕಳ್ಳರ ಗುಂಪಿನ ಪರಿಚಯ ಆಗಿದೆ. ರೂಟ್ ಮ್ಯಾಪ್ ಹಾಕಿಕೊಟ್ಟು, ಅಂಟಿಗೆ ಪಿಂಟಿಗೆ ತಂಡದ ಹಿಂದೆ ಬಂದು ಕಳ್ತನ ಮಾಡಕ್ಕೆ ಪ್ಲಾನ್ ಮಾಡಿಕೊಟ್ನಂತೆ. ಖಂಡಾಪಟ್ಟೆ ದುಡ್ಡಿದ್ದ ದೊಡ್ಡ ಜನಗಳ ಮನೆಯನ್ನು ಅವನೇ ತೋರಿಸಿಕೊಟ್ಟಿದ್ನಂತೆ. ಇದೆಲ್ಲಾ ಎಂತಕ್ಕೆ ಮಾಡಿದ್ದು ಗೊತ್ತಾ..? ಪೋಕರಿ ಮರಿ ಜೋಯ್ಸನ್ ಪ್ಲಾನ್ ಕೇಳಿದ್ರೆ ನೀನ್ ದಂಗಾಗ್ತೀಯಾ..!!”
“ಹೌದಾ!! ಏನ್ ಪ್ಲಾನ್ ಇತ್ತು ಜೋಯಿಸ್ರದ್ದು..??” ಕುತೂಹಲ ತಡೆದುಕೊಳ್ಳಲಾರದೆ ಕೇಳಿದ.
“ಸುರೇಂದ್ರ ಕಾಮತ್ರು ಮಗಳನ್ನು ಕಾಲೇಜಿಗೆ ಕಳಿಸದೇ 2 ತಿಂಗಳಿಂದ ಕೂಡಿ ಹಾಕಿದ್ರಲ್ಲ. ಅವಳನ್ನು ಕರ್ಕೊಂಡು ಓಡಿ ಹೋಗೋದಕ್ಕೆ ಪ್ಲಾನ್. ಅದಕ್ಕೆ ಕಳ್ಳರೊಟ್ಟಿಗೆ ಒಪ್ಪಂದ. ಕಂಡೀಷನ್ ಅದೇ; ಜೋಯಿಸ 5 ಮನೆ ದಾರಿ ಅವರಿಗೆ ತೋರಿಸಿಕೊಡುಕ್ಕು. ಬದಲಿಗೆ ಬೆಟ್ಟದ ಮಲ್ಲಿಗೆ ದೊಡ್ಡ ಮನೆಯಿಂದ ಕಾಮತ್ರ ಮಗಳನ್ನು ಅವ್ರು ಹಾರಿಸಿಕೊಂಡು ಬಂದು ಜೋಯಿಸಂಗೆ ಒಪ್ಸಕ್ಕು ಅಂತ. ಪಾಪ ಕಾಮತ್ರು ಪೊಲೀಸ್ ಕಂಪ್ಲೆಂಟೂ ಕೊಟ್ಟಿರ್ಲಿಲ್ಲ. ಅದೇ ಆಗುಂಬೆ ಪೊಲೀಸ್ರು 9 ಕಳ್ರನ್ನು ಅರೆಸ್ಟ್ ಮಾಡಿದ್ರಲ್ಲ. ವಿಚಾರಣೆ ಮಾಡ್ದಾಗ ಇದು ಹೊರಬಿತ್ತು ನೋಡು. ಸುಬ್ಬಾ ಜೋಯಿಸ ಘಟ್ಟದ ಕೆಳಗೆ ಅಲ್ಲೆಲ್ಲೋ ಅವಳೊಟ್ಟಿಗೆ ಇದಾನೆ ಅಂತ ವರ್ತಮಾನ. ಕೇಶವಣ್ಣ ಮತ್ತೊಂದಿಷ್ಟ ಜನ ಹೆಡೆಮುರಿ ಕಟ್ಟಿ ಎಳ್ಕಂಡ್ ಬರೋಕೆ ಹೋಗಿದ್ರು. ಇನ್ನೇನು ಆ ಹುಡುಗಿಗೆ ಅವನನ್ನೇ ಕಟ್ಬೇಕು ಗತಿ ಇಲ್ಲ. ಆದ್ರೆ ಪುಂಡ ಜೋಯಿಸ ಮಾತ್ರ ಅರೆಸ್ಟ್ ಆಗ್ತಾನೆ ನೋಡು..”
“ಅರೆ ಈ ವಿಷಯ ನಂಗೆ ಸಬ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೇಳೇ ಇಲ್ವಲ್ಲ” ಅಂದ ಚಿತ್ತರಂಜನ್.
“ಹೇಗೆ ಹೇಳ್ತಾರೆ ಹೇಳು. ಸುರೇಂದ್ರ ಕಾಮತ್ರು ಗೌರವ ಇಟ್ಕೊಂಡ ಜನ. ನೀನು ಟೀವಿಲಿ ಹಾಕಿದ್ರೆ ಅವ್ರ ಮರ್ಯಾದೆ ಹೋಗುಲ್ವಾ ಮಾರಾಯ..? ಅದಕ್ಕೆ ಇನ್ಸ್ಪೆಕ್ಟ್ರು ಹೇಳಿಲ್ಲ..” ಮಾವ ಇನ್ನೂ ಏನೋ ಮಾತಾಡುತ್ತಲೇ ಇದ್ದ ಅಷ್ಟರಲ್ಲಿ ಲೈನ್ ಡಿಸ್ಟರ್ಬೆನ್ಸ್ ಆಗಿ ಕಾಲ್ ಕಟ್ ಆಯ್ತು.
ಸುಮ್ಮನೆ ಸೋಫಾದಲ್ಲಿ ಒರಗಿ ಕಣ್ಮುಚ್ಚಿಕೊಂಡ ಕುಸಿದು ಕುಳಿತ ಚಿತ್ತರಂಜನ್ಗೆ ಮತ್ತೆ ಸಕಾರಣವಾಗಿ ಸುವ್ವೇರು ಸಾಂಗಯ್ಯ, ಸುವ್ವೇರು ಲಿಂಗಯ್ಯ ಅಂಟಿಗೆ ಪಿಂಟಿಗೆಯವರ ಹಾಡು ನೆನಪಾಯ್ತು.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಮಗುಚಿತೊಂದು ಮೀನು ಬುಟ್ಟಿ