- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಅಕ್ಟೋಬರ್ ೯: ವಿಶ್ವ ಅಂಚೆ ದಿನದ ನೆನಪಿಗಾಗಿ ಈ ವಿಶೇಷ ಲೇಖನ
ಅಕ್ಟೋಬರ್ 9 ವಿಶ್ವ ಅಂಚೆ ದಿನ. ಈ ಸಂದರ್ಭದಲ್ಲಿ ಅಂಚೆಯಣ್ಣನ ಬಗ್ಗೆ ಮಾತನಾಡೋಣ ಅಲ್ವ!.ಖಾಕಿ ಯೂನಿಫಾರಂ ಹಾಕಿಕೊಂಡು ಹೆಗಲ ಮೇಲೆ ಬ್ಯಾಗಲ್ಲಿ, ಕೈಯಲ್ಲೊಂದಷ್ಟು ಪತ್ರಗಳನ್ನು ಹಿಡಿದುಕೊಂಡು ಇಲ್ಲವೆ ಸೈಕಲನ್ನು ಆಯಾಸದಿಂದ ತುಳಿಯುವ, ಅಂಚೆಯಣ್ಣನ ಪರಿಚಯ ಎಲ್ಲರಿಗೂ ಇರುತ್ತದೆ.ನನ್ನ ಸ್ನೇಹಿತೆ ಅಂಚೆಯಣ್ಣನನ್ನು ‘ಪೋಸ್ಟಪ್ಪ’ ಎಂದೇ ಕರೆಯುತ್ತಿದ್ದಳು.ಪರಿಸರ ಸ್ನೇಹಿ ಅಂತಾರಲ್ಲ ಹಾಗೆ ಈ ವ್ಯಕ್ತಿ ಜನಸ್ನೇಹಿ.ಇಂತಹ ಅಂಚೆಯಣ್ಣನನ್ನು ಕುರಿತು ಶಿಶುಪದ್ಯಗಳು ನಮ್ಮಲ್ಲಿವೆ.
೧. ಅಂಚೆಯ ಅಣ್ಣ
ಬಂದಿಹೆ ಅಣ್ಣ
ಅಂಚೆಯ ಹಂಚಲು ಮನೆ ಮನೆಗೆ
ಸಾವಿರ ಸುದ್ದಿಯ
ಬೀರುತ ಬರುವನು
ತುಂಬಿದ ಚೀಲವು ಹೆಗಲೊಳಗೆ
ಬಾಗಿಲು ತಟ್ಟಿ ಚಿಲಕವ ಕುಟ್ಟಿ
ಸದ್ದನು ಮಾಡುತ ಕರೆಯುವನು
೨. ಅಂಚೆ ಅಣ್ಣ ಬಂದ
ನನಗೆ ಅಂಚೆ ತಂದ
ಪದ್ದು ಮದುವೆ ಅಂದ
ದೂರದೂರಿನಿಂದ ಅಣ್ಣ ಬರುವನಂದ
… … ಹೀಗೆ
ಕೇಳಲು ಚೆನ್ನಾಗಿವೆಯಲ್ಲವೆ !
ಈ ನುಡಿಗಳೆಲ್ಲ ಮಕ್ಕಳಿಗೆ, ನಾವಂದುಕೊಂಡಂತೆ ಇಂತಹ ಅಂಚೆಯಣ್ಣರ ಬದುಕು ಸುಖಮಯವಲ್ಲ. ಗುರಿ ಮುಟ್ಟುವವರೆಗೂ ನಿಲ್ಲದಿರು ಅನ್ನುತ್ತಾರಲ್ಲ ಹಾಗೆ ಪತ್ರ ತಲುಪಿಸುವವರೆಗೂ ಇವರು ನಡೆಯುತ್ತಿರಲೇಬೇಕು.ಪೂರ್ಣಚಂದ್ರ ತೇಜಸ್ವಿಯವರು ‘ಕೃಷ್ಣೇಗೌಡರ ಆನೆ’ ದೀರ್ಘ ಗದ್ಯದಲ್ಲಿ ಅಂಚೆಯಣ್ಣ ಜಬ್ಬಾರ್ಗೆ “ನೀನು ಇಷ್ಟು ದಿನ ನಡೆದಿದ್ದು ಭೂಮಿಯನ್ನು ಒಂದು ಸುತ್ತು ಬಂದ ಹಾಗೆ” ಎನ್ನುತ್ತಾರೆ.ಬಡಪಾಯಿ ಜಬ್ಬಾರ್ ಅಂಚೆ ಇಲಾಖೆಯ ಖಾಯಂ ನೌಕರ ಅಲ್ಲ. ಬರುವ ಸಂಬಳ ಸಾಕಾಗದೆ ಅಂಚೆಯ ಜೊತೆಗೆ ಪತ್ರಿಕೆ ಹಾಗು ಮ್ಯಾಗಜಿ಼ನ್ ಏಜೆನ್ಸಿ ತೆಗೆದುಕೊಂಡು ಚಂದಾದಾರರ ಮನೆಗೆ ಪತ್ರಿಕೆಗಳನ್ನು, ಪತ್ರಗಳನ್ನು ತಲುಪಿಸುವ ಅವನ ಕಷ್ಟ ಹೇಳತೀರದು.ಸೈಕಲ್ ಅಲ್ಲಿ ಮೊಪೆಡ್ ಬಂದರೂ ಅವನು ಅವನೇ ಆಗಿರುತ್ತಾನೆ. ಪೋಸ್ಟ್ ಕೊಡೋಕೆ ಹೋದಾಗ ಸಾಕು ನಾಯಿಗಳು ಕಳ್ಳನನ್ನು ಕಂಡAತೆ ಬೊಗಳುತ್ತಿವೆ ಎನ್ನುತ್ತಾನೆ. ಇದು ಎಲ್ಲರ ಸಮಸ್ಯೆಯೂ ಹೌದು.ಇನ್ನೊಂದು ತಬರನ ಕತೆ.ಅಲ್ಲೂ ಪಿಂಚಣಿ ಹಣ ಪಡೆಯಲು ಬಾಗಿಲು ಸವೆಸುವ ಕಥಾನಾಯಕ, ಹಣಕ್ಕಾಗಿ ಅವನು ಪಡುವ ಪರಿಪಾಟಲು, ಹೆಂಡತಿಯ ಖಾಯಿಲೆ ಉಲ್ಬಣಿಸಿದಾಗ ಆತನಾಡುವ ಮಾತುಗಳು ಕರುಳು ಹಿಂಡುವಂತಿದೆ.
ಅಂಚೆ ಪತ್ರಗಳು ಸರಿಯಾದ ಕಾಲದಲ್ಲಿ ಬಟವಾಡೆಯಾಗಬೇಕು. ವ್ಯಕ್ತಿಯೊಬ್ಬ ಅಸ್ವಸ್ಥನಾದಾಗ ಬರೆದ ಪತ್ರ ಆ ವ್ಯಕ್ತಿ ಸತ್ತ ನಂತರ ಹೋದರೆ ಏನು ಪ್ರಯೋಜನ ?. ಸಂದರ್ಶನ ಮುಗಿದ ಮೇಲೆ ಸಂದರ್ಶನ ಪತ್ರ ದೊರೆತರೆ ಅದು ದುರ್ವಿಧಿಯ ದರ್ಶನ ತಾನೆ !. ಒಂದೇ ಹೆಸರು ಅನ್ನುವ ಕಾರಣಕ್ಕೆ ಅಂಚೆ ಅದಲು ಬದಲಾದರೆ, ಯಾರು ಹೊಣೆ ?ಇಂತಹ ಅವಾಂತರಗಳಿಗೆ ಆಧುನೀಕತೆಯೆ ಕಡಿವಾಣ ಹಾಕಿರುವುದನ್ನೂ ಅಲ್ಲಗಳೆಯುವಂತಿಲ್ಲ. ಪೋಸ್ಟ್ಮ್ಯಾನ್ ಅಂಚೆ ಪತ್ರಗಳನ್ನು ಸರಿಯಾಗಿ ಕೊಡಬೇಕು.ಯಾರು ಇಲ್ಲ ಎಂದು ಮನೆ ಬಾಗಿಲಲ್ಲಿ ಹಾಕಿ ಅದು ಮಳೆಯಲ್ಲಿ ನೆನೆದೋ, ಸಾಕುನಾಯಿಗಳು ಕಚ್ಚಿ ಹಾಳು ಮಾಡಿದರೋ ಬೈಗುಳವಂತು ಅಂಚೆಯಣ್ಣನಿಗೆ ಕಟ್ಟಿಟ್ಟ ಬುತ್ತಿ.ವಿಪರ್ಯಾಸ ಎಂದರೆ ತಂದಿಟ್ಟು ತಮಾಷೆ ನೋಡುವ ಜನರಿಗೆ ‘ಪೋಸ್ಟ್ಮ್ಯಾನ್’ ಎಂದು ವ್ಯಂಗ್ಯವಾಗಿ ಕರೆಯುತ್ತಾರೆ.
ಅಂಚೆ ಇಲಾಖೆಯಿಂದ ಗ್ರಾಹಕರಿಗೆ ತೊಂದರೆಯಾದಲ್ಲಿ ಆ ನಷ್ಟವನ್ನು ಸೂಕ್ತ ದಾಖಲೆ ತೆಗೆದುಕೊಂಡು ಭರಿಸಿಕೊಡುತ್ತದೆ.ಅಂತಹ ಸಂದರ್ಭದಲ್ಲಿ ಅಡಕತ್ತರಿಯಲ್ಲಿ ಸಿಲುಕಿ ಸಮಸ್ಯೆಯಿಂದ ಹೊರಬಾರಲಾರದೆ “ಇನ್ನೂ ದಯ ಬಾರದೆ ಅಂಚೆಯಣ್ಣನ ಮೇಲೆ ಎಂದು ಹರಿಯನ್ನು ಆತ ಮಧ್ಯೆ ಕರೆತರಬೇಕು.
ಪುರಂದರದಾಸರ ಕೀರ್ತನೆಯ ತುಣುಕು ಅಣಕವಾಗಿ ಏಕೆ ಬಂತು ಎನ್ನುವಿರಾ ? ಕಾರಣ ಇಷ್ಟೆ. ಪುರಂದರದಾಸರು ಕಾಗದದ ಕುರಿತು “ಕಾಗದ ಬಂದಿದೆ ಪದುಮನಾಭನಾಭನದು ತಾಮಸ ಜನರ ಕೂಡಿರೆಂದು ಕಾಗದ ಬಂದಿದೆ” ಎಂದು ಸೊಗಸಾದ ಕೀರ್ತನೆಯನ್ನು ಬರೆದಿದ್ದಾರೆ. ಹವ್ಯಕರಲ್ಲಿ “ಓಲೆ ಹಾಡು” ಎಂಬುದಾಗಿಯು ಹಾಡೊಂದಿದೆ.
ಓಲೆಯ ಬರೆದಳು ರುಕುಮಿಣಿಯು
ನಾರಾಯಣ ಹರಿ ದ್ವಾರಕೆಯ ಕೃಷ್ಣನಿಗೆ
ವಾಸುದೇವ ದೇವಕಿಯ ತನಯನಿಗೆ
ಓಲೆಯ ಬರೆದಳು
ಸುತ್ತ ದೀವಿಗೆಯ ಬೆಳಕಿನಲ್ಲಿ ಬರೆದಳು
ವಾರುಜನಾಭನಿಗೆ ಭಿನ್ನಪದ ಎಂದು ಹಾಡುವುದಿದೆ.
ಅಂದರೆ ‘ಓಲೆ’ ಎಂಬ ಪದ ಕ್ರಿ.ಶ. ೧೫ನೇ ಶತಮಾನದವರೆಗೂ ಇತ್ತು.ಆನಂತರ ‘ಕಾಗದ’ ಪದ ಬಳಕೆಗೆ ಬಂದಿತು ಎಂಬುದು ವೇದ್ಯವಾಯಿತಲ್ಲ. ಕನ್ನಡದಲ್ಲಿ ಚಾಲ್ತಿಯಲ್ಲಿರುವ ಈ ಕಾಗದಕ್ಕೆ ಇಂಗ್ಲೀಷ್ನಲ್ಲಿ ‘ಲೆಟರ್’ ಎಂದು ಕರೆಯುವುದಿದೆ.ಅಕ್ಷರಗಳನ್ನೂ ‘ಲೆಟರ್’ ಎಂದು ಪತ್ರಗಳನ್ನು ಲೆಟರ್ ಎಂದು ಅವರು ಕರೆದುದರ ಔಚಿತ್ಯ ಇಲ್ಲಿ ಅನಗತ್ಯ.ಕಾರಣ ನನಗೀಗ ನೆನಪಾಗುತ್ತಿರುವುದು ಕಾಳಿದಾಸ, ಆತನ ಶಾಕುಂತಲೆ. ಪದ್ಮ ಪತ್ರವನ್ನು ತನ್ನ ಸಂವೇದನೆಯ ಸಂದೇಶ ಕಳುಹಿಸಲು ಬಳಸಿದಳು ಎನ್ನುತ್ತಾನೆ. ಅದಕ್ಕಿಂತ ಕುತೂಹಲವಾಗಿರುವುದು ಕಾಳಿದಾಸನ ‘ಮೇಘದೂತ’.ಇಲ್ಲಿ ಶಾಪಕ್ಕೆ ಗುರಿಯಾದ ಯಕ್ಷ ತನ್ನ ಪ್ರಿಯತಮೆಗೆ ವಿರಹ ತಾಳಲಾರದೆ ಚಲಿಸುವ ಮೋಡಗಳ ಬಳಿಯೇ ತನ್ನ ಯಕ್ಷಿಗೆ ಸಂದೇಶ ಕಳುಹಿಸುತ್ತಾನೆ. ಈ ಕೃತಿಯ ಕನ್ನಡ ರೂಪಾಂತರ ಬೇಂದ್ರೆಯವರದಾಗಿದೆ.ಕಾಳಿದಾಸನ ಮೇಘದೂತ ಕೃತಿಯ ಮೇಲೆ ಇನ್ನೂ ಅದ್ಭುತ ಕೆಲಸ ಮಾಡಿರುವವರು ದಕ್ಷಿಣ ಕನ್ನಡ ಜಿಲ್ಲೆಯ ಗಣಪತಿ ಭಟ್ಟ ಮೊಳಿಯಾರ್ ಎಂಬುವವರು.ಗಧ್ಯ, ವಾರ್ಧಕ ಹಾಗು ಮಂದಾಕ್ರಾಂತ ಛಂದಸ್ಸಿನಲ್ಲಿ ಓದುಗರಿಗೆ ರಸವತ್ತಾದ ಅಡುಗೆ ಬಡಿಸಿದ್ದಾರೆ.ಈಗ ಮೇಘದೂತ ‘ಅಲ್ಲ ಬರೇ ವೇಗಧೂತ!
ಕನ್ನಡದ ಮೊದಲ ಗ್ರಂಥ ವಡ್ಡಾರಾಧನೆಯಲ್ಲಿ ‘ಓಲೆ’ ಎಂಬ ಪದವನ್ನು ಪತ್ರ ಎಂಬ ಅರ್ಥದಲ್ಲಿ ಬಳಸಿದ್ದಾರೆ. ಭದ್ರಬಾಹು ಭಟ್ಟಾರರ ಕಥೆಯಲ್ಲಿ ಅಶೋಕನ ಮಗ ಕುಣಾಲ ಹುಟ್ಟಿನಿಂದ ಚೆನ್ನಾಗಿಯೇ ಇರುತ್ತಾನೆ. ಕಾಲಾನಂತರ ಅಶೋಕ ಶತ್ರುಗಳ ರಾಜ್ಯದ ಮೇಲೆ ದಂಡೆತ್ತಿ ಹೋದಾಗ ಮಂತ್ರಿಗಳಿಗೆ, ಪರೋಹಿತರಿಗೆ, ನಗರ ರಕ್ಷಕರಿಗೆ ಪತ್ರವನ್ನು ಕಳಿಸುತ್ತಾನೆ. “ಉಪಾಧ್ಯಾಯನಿಗೆ ಕಳಮೆಯ ಅನ್ನ, ತುಪ್ಪ ತೊವ್ಟೆಗಳನ್ನು ಉಣಲಿಕ್ಕೆ ಕೊಟ್ಟು ರಾಜಕುಮಾರನನ್ನು (ಅಧ್ಯಾಪಯೇತ್) ಓದಿಸತಕ್ಕದು” ಎಂದು ಬರೆದಿರುತ್ತಾನೆ. ಆದರೆ ಅದನ್ನು ಓದುವವನು ಪತ್ರದ ಅರ್ಥ ತಿಳಿಯದೆ ವ್ಯತ್ಯಾಸವಾಗಿ “ಉಪಾಧ್ಯಾಯನಿಗೆ ಶಾಲ್ಯನ್ನವನ್ನು ಮಸಿಯನ್ನು ತುಪ್ಪವನ್ನು ಕೊಟ್ಟು ರಾಜಕುಮಾರನನ್ನು (ಅಂಧಾಪಯೇತ್)” ಎಂದು ಓದುತ್ತಾನೆ. ಎಲ್ಲರೂ ಸೇರಿ ರಾಜಾಜ್ಞೆ ಎಂದು ಕುಣಾಲನ ಕಣ್ಣು ಕೇಳುತ್ತಾರೆ. ಅಶೋಕ ಯುದ್ಧದಿಂದ ಹಿಂತಿರುಗಿ ಬಂದಮೇಲೆ ಆಭಾಸವಾಗಿರುವುದು ತಿಳಿಯುತ್ತದೆ ಇಲ್ಲಿ ಅನಾನುಕೂಲವಾಗುತ್ತದೆ.
ಇನ್ನೊಂದು ಪ್ರತ್ಯಯವನ್ನು ಹೇಳುವುದಾದರೆ ಚಂದ್ರಹಾಸನ ಕತೆಯಲ್ಲಿ ಬಾಲ್ಯದಿಂದಲೂ ದುಷ್ಟಬುದ್ಧಿಯಿಂಗ ಅನ್ಯಾಯಕ್ಕೆ ಒಳಗಾದವನು ಚಂದ್ರಹಾಸನೆ ಪ್ರಾಪ್ತ ವಯಸ್ಕನಾದ ಮೇಲೆ ಇನ್ನೊಮ್ಮೆ ಭೇಟಿಯಾದ ದುಷ್ಟಬುದ್ಧಿ ಇವನಿಂದ ಉಳಿಗಾಲವಿಲ್ಲ ಎಂದು ಯೋಚಿಸಿ ಅವನ ಬಳಿಯೇ ಮಗನಿಗೆ ಈ ಓಲೆ ತಂದೆ ಓಲೆಕಾರ ಚಂದ್ರಹಾಸನಿಗೆ ಹೊತ್ತು ಮೂಡುವುದರೊಳಗಾಗೆ ವಿಷವನ್ನು ಕೊಡತಕ್ಕದ್ದು ಎಂದು ಬರೆದಿರುತ್ತಾನೆ. ವನವಿಹಾರಕ್ಕೆಂದು ಬಂದ ಮಂತ್ರಿಯ ಮಗಳು ಆಯಾಸದಿಂದ ನಿದ್ರಿಸಿದ್ದ ಚಂದ್ರಹಾಸನ ಬಳೀಯಿದ್ದ ಪತ್ರವನ್ನು ಕದ್ದು ಓದಿ ಇಂತಹ ಸುಂದರಾಂಗನಿಗೆ ವಿಷವೇ ? ಎಂದು ‘ವಿಷವನ್ನು’ ಇದ್ದದ್ದನ್ನು ತನ್ನ ಕಾಡಿಗೆ ಹಾಗೂ ಉಗುರಿನ ಸಹಾಯದಿಂದ ‘ವಿಷಯೆಯನ್ನು’ ಎಂದು ತಿದ್ದಿಬಿಡುತ್ತಾಳೆ. ಎಷ್ಟೊಂದು ಉಪಯೋಗ ಅಲ್ವ ಹೆಣ್ಣು ಮಕ್ಕಳೂ ಉದ್ದ ಉಗುರು ಬೆಳೆಸುವುದರಿಂದ . . . ಅಲ್ವ! ಇರಲಿ ಮಂತ್ರಿಯ ಮಗನಿಗೆ ಚಂದ್ರಹಾಸ ಪತ್ರ ತಲುಪಿಸಿದ ಬಳಿಕ ಆ ಮಗ ನಿಧಾನಿಸದೆ ತಂಗಿಯನ್ನು ಚಂದ್ರಹಾಸನಿಗೆ ಧಾರೆ ಎರೆಯುತ್ತಾನೆ. ದುಷ್ಟಬುದ್ಧಿ ಬಂದು ವಿಷಯ ತಿಳಿದು ಹಾರಿ ಹಾರಿ ಬೀಳುತ್ತಾನೆ. ಇಲ್ಲಿ ಅನೂಕೂಲವೇ ಆಗುತ್ತದೆ.
ಒಂದಕ್ಷರ ಏರುಪೇರಾದರೆ ಎಂತಹ ಅನಾಹುತ! ಇನ್ನೂ ಸರಳವಾಗಿ ಹೇಳಬೇಕೆಂದರೆ ಜಮೀನು ಖರೀದಿಸು ಎಂದು ಅಪ್ಪ ಬರೆದದ್ದನ್ನು ಮಗ ‘ಜ’ ಅಕ್ಷರ ಬಿಟು ಮೀನಿ ಎಂದೋದಿ ಬರೇ ಮೀನು ಖರೀದಿಸಿದರೆ ಗತಿ . . .? ನೀವೇ ಯೋಚಿಸಿ.ಪತ್ರಗಳು ಓದುವಂತಿದ್ದರೆ ಖುಷಿ.ಕೆಲ ಪತ್ರಗಳು ಬ್ರಹ್ಮಲಿಪಿಯೊ, ಶಾಸನಲಿಪಿಯೊ ಎಂಬAತೆ ಇರುತ್ತವೆ. ಓದಲು ಸಾಹಸ ಪಡಬೇಕು.“ಲಿಖಿತಂ ಲಿಖಿತಂ ಮಮಲಿಖಿತಂ ಓಲಿಕ್ಕಿದುಂ ಅಸಾಧ್ಯಂ” ಎಂಬಂತೆ ಬರೆದವರಿಗೇ ಓದಲಾಗುವುದಿಲ್ಲ. ವಿಪರ್ಯಾಸ ಎಂದರೆ ನಮ್ಮ ಮಕ್ಕಳಿಗೆ ಪತ್ರಗಳನ್ನು ನೋಡಿ, ಓದಿ, ಬರೆದು ಗೊತ್ತಿಲ್ಲ. ಪರೀಕ್ಷೆಯಲ್ಲಿ ಅಂಕಗಳ ದೃಷ್ಠಿಯಿಂದ ಮಾತ್ರ ಪತ್ರಲೇಖನ ಮಾಡುತ್ತಾರೆ.
ಪತ್ರಗಳು ಸಂದೇಶವಾಹಕಗಳಿಗೆ ಮಾತ್ರ ಸೀಮಿತವಾಗಿಲ್ಲ, ಗಂಭೀರವಾದ, ಮನೋಜ್ಞವಾದ ಪತ್ರಸಾಹಿತ್ಯ ಎಂಬ ಸಾಹಿತ್ಯ ಪ್ರಕಾರಕ್ಕೂ ನಾಂದಿ ಹಾಡಿವೆ. ಜೈಲಿನಲ್ಲಿದ್ದ ನೆಹರೂ ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಗೆ ಬರೆದ ಕಾಗದಗಳು (Letters from a Father ti His Daughter) ‘ಮಗಳಿಗೆ ತಂದೆಯ ಓಲೆಗಳೂ’ ಎಂಬ ಶೀರ್ಷಿಕೆಯಲ್ಲಿ ಬಂದಿದೆ. ಹೊಸಗನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ ಹೆಚ್.ವಿ. ಚಂದ್ರಶೇಖರ್ ತಮ್ಮ ತಂಗಿಗೆ ಬರೆದಿರುವ ಪತ್ರ ‘ಪಣಯದ ಹಾದಿಯಿಂದ’ ವೀಕ್ಷಕರ ವಿವರಣೆಯಂತಿದೆ.೧೯೫೦ರಲ್ಲಿ ನಾಡಿಗೆ ಕೃಷ್ಣಮೂರ್ತಿಯವರ ‘ನಮ್ಮ ಕಾಗದಗಳು’ ಅಮೇರಿಕದ ಜನ ಅವರ ಸಂಸ್ಕೃತಿ, ಲಂಡನ್ನಿನ ಜನಜೀವನ ಕುರಿತು ಹೇಳುತ್ತದೆ.೧೯೭೪ರಲ್ಲಿ ಕುವೆಂಪುರವರು ಬೇರೆ ಬೇರೆಯವರಿಗೆ ಬರೆದ ಪತ್ರಗಳ ಸಂಕಲನ ಬಂದಿದೆ.೧೯೭೫ರಲ್ಲಿ ದೇಜಗೌ ಅವರ ‘ಕುಲಪತಿಯ ಪತ್ರಗಳು’ ಪ್ರಮುಖವಾದುದು.ಸಿಂಪಿ ಲಿಂಗಣ್ಣರವರು ಸಂಪಾದಿಸಿದ ‘ಅರವಿಂದರ ಪತ್ರಗಳು’ ಆಧ್ಯಾತ್ಮ ಸಂಗತಿ ಹೇಳುವಂತಹದು. ವಿ.ಕೃ.ಗೋಕಾಖರ ‘ಜೀವನ ಪಾಠಗಳು’ ಎಂಬ ಕೃತಿ ಬಹು ದೀರ್ಘ ಪತ್ರಗಳನ್ನು ಒಳಗೊಂಡಿರುವ ಕೃತಿ ದೇಜಗೌರವರು ವಿದೇಶದಲ್ಲಿದ್ದ ತಮ್ಮ ಮಗಳಿಗೆ ಬರೆದ ಪತ್ರಗಳು ತಂದೆ-ಮಗಳ ಭಾವನಾತ್ಮಕತೆಗೆ ಕನ್ನಡಿ ಹಿಡಿದಂತಿದೆ.೧೯೭೮ರಲ್ಲಿ ಎ.ಎನ್. ಮೂರ್ತಿರಾಯರ ‘ಚಿತ್ರ ಪತ್ರಗಳು’ ಕೂಡ ಗಮನಾರ್ಹ ಕೃತಿ.
‘ಪ್ರೇಮ ಕವಿ’ ‘ಒಲವಿನ ಭಕ್ತ’ ಎಂದೇ ಕರೆಸಿಕೊಂಡಿರುವ ಕೆ.ಎಸ್.ನರಸಿಂಹಸ್ವಾಮಿ ‘ಹೆಂಡತಿಯ ಕಾಗದ’ ಎಂಬ ಕವಿತೆಯನ್ನು ಬರೆಯುತ್ತಾರೆ. ತಂಗಿಯ ಮದುವೆಗೆಂದು ಊರಿಗೆ ಹೋದ ಹೆಂಡತಿಗೆ ಗಂಡ ಬರೆದ ಬಿರುನುಡಿಯ ಪತ್ರಕ್ಕೆ ಮರುಪತ್ರ ಬರೆದಂತೆ ರಚನೆಯಾಗಿದೆ ಕವಿತೆ. “ತವರ ಸುಖದೊಳಗೆನ್ನ ಮರತಿಹ ಎನ್ನದಿರಿ ನಿಮ್ಮ ನೆನಪೆ ನನ್ನ ಹಿಂಡುವುದು ಹೆಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು” ಎಂದು ಕವಿ ಮಡದಿಯಾಗಿ ಏಕಾಂಗಿತನ ಅನುಭವಿಸಿದಂತೆ ಗಂಡನಿಗೆ ಸಮಾಧಾನಿಸುವಂತೆ ಸೊಗಸಾದ ಸಾಲುಗಳನ್ನು ಬರೆದಿದ್ದಾರೆ.
ಕೊಡಗಿನ ಗೌರಮ್ಮನವರ ‘ವಾಣಿಯ ಸಮಸ್ಯೆ’ ಎಂಬ ಕತೆಯಲ್ಲಿ ಡಾಕ್ಟರ್ ರತ್ನ ಇಂದುವಿಗೆ ಬರೆದ ಪತ್ರವೇ ಅವಳೀಗೆ ಸಮಸ್ಯೆಯಾಗುತ್ತದೆ.ಇಂದು ಆ ಪತ್ರದಲ್ಲಿ ಏನಿದೆ ಎಂದು ತಿಳಿಯುವುದರ ಬದಲು ಕಣ್ಣೀರಿನಲ್ಲಿ ತೋಯಿಸಿ ಉರಿವ ಒಲೆಗೆ ಇಡುತ್ತಾಳೆ.ಆನಂತರ ಅವಳ ಬಗ್ಗೆ ಯಾವೊಂದು ಸುಳಿವು ಯಾರಿಗೂ ತಿಳಿಯುವುದಿಲ್ಲ, ಪತ್ರವೇ ಸಮಸ್ಯೆಯಾಗುತ್ತದೆ.
ಈ ಪತ್ರಗಳ ನಂತರ ಬಂದದು ‘ತಂತಿ’. ಲೆಟರ್ಹೆಡ್ಗಳಲ್ಲಿ ತಂತಿ ಎಂದು ಇರುತ್ತಿದ್ದ ಜಾಗ ಈಗ ಇ-ಮೇಲ್ ಎಂದಾಗಿದೆ.
ಪ್ರಬಂಧದ ಪ್ರಾರಂಭಕ್ಕೆ ಕೇವಲ ಅಂಚೆ ಇಲಾಖೆ ಎಂದೇ ಹೇಳಿದ್ದೆ.ಅಂಚೆ ಮತ್ತು ತಂತಿ ಇಲಾಖೆ ಎಂದು ಇದ್ದದ್ದು ಈಗ ಬರೆ ಅಂಚೆ ಇಲಾಖೆ ಆಗಿದೆಯಲ್ಲ ಹಾಗಾಗಿ.ತಂತಿ ಅಥವಾ ಟೆಲಿಗ್ರಾಂ ಭೌತಶಾಸ್ತ್ರದ ತಳಹದಿಯ ಮೇಲೆ ಕಾರ್ಯಾಭಾರ ಮಾಡುತ್ತಿತ್ತು. ಕಾರ್ಯಾಭಾರ ಏಕೆ ರಾಜ್ಯಭಾರ ಅನ್ನಿ. ೧೬೩ ವರ್ಷಗಳ ಸುದೀರ್ಘ ಇತಿಹಾಸ ಹೊಂದಿ ೨೦೧೩ ಜುಲೈ ತಿಂಗಳಲ್ಲಿ ನೇಪಥ್ಯಕ್ಕೆ ಸರಿದಿದೆ. ಅಕ್ಷರಗಳ ಸಂದೇಶ ಇಲ್ಲಿ ಒಂದೊAದು ಅಕ್ಷರಕ್ಕೂ ದುಡ್ಡೇ.ಸ್ಥಿತಿವಂತರು ಹೋಗಿದ್ದಕ್ಕೆ ಬಂದದ್ದಕ್ಕೆ ಟೆಲಿಗ್ರಾಂ ಕಳಿಸುತ್ತಿದ್ದರು.ಬಡವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇದರ ಉಪಯೋಗ ಪಡೆಯುತ್ತಿದ್ದರು.ಶುಭ ಸಮಾರಂಭ ಅನ್ನುವುದಕ್ಕಿಂತ ಅಶುಭ ಸಂದೇಶ ಕಳುಹಿಸಲೇ ಇದರ ಬಳಕೆಯಾಗುತ್ತಿತ್ತು.
ಶಾಲಾ ಮಾಸ್ತರ್ ಒಬ್ಬರು ಟೆಲಿಗ್ರಾಂ ಬಗ್ಗೆ ಅದರ ಉಪಯೋಗದ ಕುರಿತು ವಿವರಿಸಿ. “ಗುಂಡನಿಗೆ ನೀನು ಅತ್ಯಂತ ಕಡಿಮೆ ಬೆಲೆಯಲ್ಲಿ ಸಂದೇಶ ಹೇಗೆ ಕಳುಹಿಸುವೆ ?”ಎಂದರಂತೆ ಅದಕ್ಕೆ ಬುದ್ಧಿವಂತ ಗುಂಡ “ತಾತ ಶೀತ, ನೆಗಡಿ, ಕೆಮ್ಮು ಬಂದು ಹಾಸಿಗೆ ಹಿಡಿದು ನರಳಿ ಕೊನೆಯುಸಿರು ಎಳೆದರು ಎನ್ನುವುದಕ್ಕೆ ‘ತಾತ ಶೀತ ಗೋತ’ ಎಂದು ಕಳುಹಿಸುತ್ತೇನೆ” ಎಂದು ಹೇಳಿದನಂತೆ.ಕೇವಲ ಒಂದೇ ಒಂದು ಬಿಂದುವಿನಿಂದ ಜೀವ ಉಳಿಸುವ ಜೀವ ತೆಗೆಯುವ ಸಾಮರ್ಥ್ಯ ಈ ತಂತಿಗೆ ಇತ್ತು.ರಾಷ್ಟ್ರಪತಿಗಳು ನೇಣಿಗೇರುವ ಖೈದಿಗೆ ಸಹಾಯವಾಗಲಿ ಎಂದು ಟೆಲಿಗ್ರಾಂ ಕಳಿಸಬೇಕಿದ್ದರೆ “Hang him not, Leave him”ಎಂದು ಕಳುಹಿಸಬೇಕಾಗಿತ್ತು. ಅದೇ “hang him,not leave him”ಎಂದು ಕಳಿಸಿದ್ದರೆ ಖೈದಿಯ ಪಾಡನ್ನು ನೀವೇ ಯೋಚಿಸಿ.
ಈ ಟೆಲಿಗ್ರಾಂ ದಿಸೆಯಿಂದ ನಾನೂ ಪೇಚಿಗೆ ಸಿಲುಕಿದ್ದೆ, ನನ್ನ ಮದುವೆಯ ದಿನ, ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಅದೇ ಸಮಯಕ್ಕೆ ಅಂಚೆಯಣ್ಣ ಮದುವೆ ಮಂಟಪಕ್ಕೇ ಬಂದು “Telegram” ಅಂದರು.ಅಲ್ಲಿದ್ದವರೆಲ್ಲ ಆ ಕ್ಷಣ ಅವಾಕ್ಕಾಗಿದ್ದರು ಎಲ್ಲಿ? ಏನೋ? ಅಂತ. ಸಾವಧಾನದಿಂದ ಓದಿದರೆ ಅಂದಿನ ಡಿ.ಜಿ.ಪಿ. ಹೆಚ್.ಆರ್. ಕಸ್ತೂರಿರಂಗನ್ರವರು ನನಗೆ ಆಶೀರ್ವದಿಸಿ, ಶುಭಾಶಯ ಹೇಳಿ ಸಂದೇಶ ಕಳುಹಿಸಿದ್ದರು.ಓದಿ ವಿಷಯ ತಿಳಿದ ನಂತರ ಎಲ್ಲರೂ “close-up smile” ಕೊಟ್ಟರು. ಮೊದಲು ಗಾಬರಿಯಾಗಿದ್ದ ನಮ್ಮಪ್ಪ ಧಾರೆ ಎರೆದೇ ಬಿಟ್ಟರು. . . . ಹೋಗಿ ಬಿಡಲಿ ಅಂತ.
ಇಂತಹ ಟೆಲಿಗ್ರಾಂಗಳು ತುರ್ತು ಸಂದರ್ಭಗಳಲ್ಲಿ ರಜೆ ಪಡೆದುಕೊಳ್ಳಲು ಸತ್ತವರನ್ನು ಇನ್ನೊಮ್ಮೆ ಸಾಯುವಂತೆ ಮಾಡಿ ಅದರ ದುರುಪಯೋಗ ಇದೆ.ಪತ್ರಗಳ ತಾಪತ್ರಯ, ಕಳೆದು ನಂತರ ಬಂದದ್ದು ಫ್ಯಾಕ್ಸ್.ಪುಟಗಟ್ಟಲೆ ಸಂದೇಶವನ್ನು ನಿಮಿಷಗಳಲ್ಲಿ ರವಾನಿಸುತಿತ್ತು.ನಂತರ ಮೊಬೈಲ್ ಸಂದೇಶ, ನಂತರ ಮಲ್ಟಿ ಮೀಡಿಯಾ ಮೆಸೇಜ್, ಇವುಗಳ ಜೊತೆಗೆ ಇಮೇಲ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಗ್ರಾಂಎಲ್ಲವೂ ವಾಟ್ಸಪ್ ಒಳಗೊಂಡಂತೆ, ಆಡಿಯೋ, ವೀಡಿಯೊ, ಚಿತ್ರ, ಅಕ್ಷರ ಏನು ಬೇಕಾದರೂ ಕಳಿಸಬಹುದು. ಇವೆಲ್ಲವೂ ಕ್ಷಣಾರ್ಧದಲ್ಲಿ ಪರಿಣಾಮ ಬೀರುತ್ತವೆ. ಒಳ್ಳೆಯ ವಿಚಾರ ಬಹುಬೇಗ ಹರಡುವುದೇ ಇಲ್ಲ. ಸಮಾಜದಲ್ಲಿ ದೊಂಬಿ ಗಲಾಟೆಗಳು ಅಘದುವುದಕ್ಕೆ ಆಧುನಿಕ ಸಂದೇಶ ವ್ಯವಸ್ಥೆಯೂ ಒಂದು ಕಾರಣವಾಗುತ್ತದೆ.ಈ ಪತ್ರ ಬರೆಯುವ ಕಲೆಯನ್ನು ಉತ್ತೇಜಿಸಲು ಪೋಸ್ಟ್ಕಾರ್ಡ್ ಕಥಾ ಸ್ಪರ್ದೆ, ಕವನ, ಚಿತ್ರಸ್ಪರ್ದೆಗಳನ್ನು ಏರ್ಪಡಿಸುತ್ತಾರೆ.ಸರಕಾರದ ಗಮನ ಸೆಳೆಯಲು ಕೆಲವು ಸಂಘಟನೆಗಳು ಕೆಲವೊಮ್ಮೆ ಶಾಲಾ ಮಕ್ಕಳು ಪತ್ರ ಚಳುವಳಿ ನಡೆಸುವುದೂ ಇದೆ.
ಏನೇ ತಂತ್ರಜ್ಞಾನ ಬಂದರೂ ಲೇಖನಿಯಿಂದ ಬರೆದ ಸಂದೇಶಗಳೆ ನಮ್ಮ ಸಂವೇದನೆಯ ಜೀವಾಳ ಹಾಗು ಪ್ರತಿಬಿಂಬಗಳು.ಒಂದು ವೇಳೆ ತಪ್ಪು ಬರೆದಿದ್ದರೂ ತಪ್ಪುಗಳನ್ನು ತಿದ್ದುವ, ತಿದ್ದಿಕೊಳ್ಳುವ ಅವಕಾಶವಿತ್ತು.ಈಗ ಹಾಗಲ್ಲ ದುಡುಕಿನಲ್ಲಿ ಏನೇ ಟೈಪ್ ಮಾಡಿ ಓಕೆ ಕೊಟ್ಟುಬಿಟ್ಟರೆ ಅಂತಹ ಸಂದೇಶಗಳು ಮನೆ ಮತ್ತು ಮನಸ್ಸುಗಳನ್ನು ಮುರಿದುಬಿಡುತ್ತದೆ.ಗಾಂಧೀಜಿ ಕೆಟ್ಟ ಚಟಗಳನ್ನು ರೂಢಿಸಿಕೊಂಡಿದ್ದಾಗ ಅದನ್ನು ಅವರು ತನ್ನ ತಂದೆಯ ಬಳಿ ಹೇಳಿಕೊಳ್ಳಬೇಕೆಂದಾಗ ಅವರು ಪತ್ರದ ಮೂಲಕವೇ ಹೇಳಿಕೊಳ್ಳುವುದು. ಪ್ರಾಯಶ್ಚಿತ್ತಕ್ಕೂ ಈ ಪತ್ರಗಳು ಸಹಕಾರಿ ಎಂದಾಯಿತಲ್ಲ. ಗಣ್ಯವ್ಯಕ್ತಿಗಳು ಕಳಿಸುವ ಸಂದೇಶಗಳಲ್ಲಿ ಶುಭ ಸಂದೇಶ ಎಂದೇ ಕರೆದು ಅವರ ಸಂದೇಶವನ್ನು ಸಮಾರಂಭಗಳಲ್ಲಿ ಓದುವುದಿದೆ.ಒಟ್ಟಾರೆಯಾಗಿ ಈ ಓಲೆ ಪತ್ರ, ಕಾಗದ ಏನಾದರೂ ಕರೆಯಿರಿ ನಮ್ಮ ಸಂವೇದನೆಯ ಸಂವಾಹಕ ತಡ ಮಾಡಬೇಡಿ ನಿಮ್ಮ ಸಂವೇದನೆಯನ್ನು ಪತ್ರದ ಮೂಲಕ ನಿಮ್ಮ ಇಷ್ಟ ಮಿತ್ರರಿಗೆ ಸಂವಹಿಸಿ. ಪತ್ರಗಳು ಇತಿಹಾಸ ಹೇಳುತ್ತವೆ. ಪತ್ರ ಮುಖೇನ ತಾವೂ ಇತಿಹಾಸ ಸೃಜಿಸಿ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್