- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಆಷಾಢದ ಮಳೆ ವಾತಾವರಣದಲ್ಲಿ ಅಜ್ಜಿ ಜೊತೆಗೆ ಅಜ್ಜಿಯ ರೈಲು ಚೆಂಬಿನೊಂದಿಗೆ ಬಸ್ಸಲ್ಲಿ ಮಡಿಕೇರಿಯಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಆ ದಿನಗಳು ದೀಢೀರನೆ ನೆನಪಾಗುತ್ತಿವೆ. ಮಡಿಕೇರಿಯಲ್ಲಿ ಮಳೆ ಹೆಚ್ಚು ಅನ್ನುವ ಕಾರಣಕ್ಕೆ ನಮಗೆ ಮಳೆಗಾಲದ ರಜೆಯನ್ನು ಜುಲೈ ಹದಿನೈದರಿಂದ ಒಂದು ವಾರ ಕೊಡುತ್ತಿದ್ದರು. ಅದನ್ನೆ ಕಾಯುತ್ತಿದ್ದ ನಾನು ನನ್ನ ದೊಡ್ಡ ತಮ್ಮ ಅಜ್ಜಿ ಜೊತೆಗೆ ಹೋಗುತ್ತಿದ್ದೆವು. ಚಿಕ್ಕ ತಮ್ಮ ನಮ್ಮಮ್ಮನ ಬಾಲ ನಮ ಜೊತೆಗೆ ಬರುತ್ತರಲಿಲ್ಲ. ಅಮ್ಮ ಎಲ್ಲಿ ಹೋದರು ಅಲ್ಲಿಗೆ ಹೋಗದೆ ಇರುತ್ತಿರಲಿಲ್ಲ. ಪ್ರಯಾಣದ ನಡುವೆ ನೀರು ಕುಡಿಯಲು ಆಗೆಲ್ಲಾ ಈಗಿನ ಹಾಗೆ,ಬಿಸಿಲೆರಿ ವಾಟರ್ ಬಾಟಲ್ಸ್, ಪ್ಲಾಸ್ಟಿಕ್ ಬಾಟಲ್ಗಳು, ವಾಟರ್ಕ್ಯಾನ್ಗಳು ಇರಲಿಲ್ಲ. ತೀರ್ಥಯಾತ್ರೆಗಳ ಸಂದರ್ಭದಲ್ಲಿ, ರೈಲು ಪ್ರಯಾಣದ ವೇಳೆಯಲ್ಲಿ ಕುಡಿಯುವ ನೀರನ್ನು ಒಯ್ಯಲು ರೈಲು ಚೆಂಬು ಒಯ್ಯುತ್ತಿದ್ದರು. ಕ್ರಮೇಣ ಬಸ್ಸಲ್ಲಿ ಪ್ರಯಾಣ ಮಾಡಿದರೂ ರೈಲು ಚೆಂಬು ಎಂದೇ ಕರೆಯುತ್ತಿದ್ದರು. ಇರಲಿ ಒಟ್ಟಾರೆ ಪ್ರಯಾಣದ ಸಂದರ್ಭದಲ್ಲಿ ಹಿರಿಯರು ತೆಗೆದುಕೊಂಡು ಹೋಗುತ್ತಿದ್ದ ಚೆಂಬಾಗಿತ್ತು. ಇದು ವರಸೆಯಲ್ಲಿ ಋಷಿಮುನಿಗಳ ಕಮಂಡಲು, ಸಂಪ್ರದಾಯಸ್ಥರ ಮನೆಯ ಚೆಂಬು ಎರಡರ ಲಕ್ಷಣವನ್ನು ಹೊಂದಿತ್ತು. ಜೊತೆಗೊಂದು ಮುಚ್ಚಳ ಅದರೊಳಗೊಂದು ನೀರು ಕುಡಿಯಲು ಚಿಕ್ಕ ಕಪ್ ಕೂಡ ಇರುತ್ತಿತ್ತು. ರೈಲುಚೆಂಬಿನ ಹೊರಭಾಗದ ಮುಚ್ಚಳಕ್ಕೆ ಹಿಡಿದುಕೊಂಡು ಹೋಗಲು ಸುಲಭವಾಗುವಂತೆ ಹ್ಯಾಂಡಲ್ ಕೂಡ ಈಗಿನ ವಾಟರ್ ಕ್ಯಾನಗಳಿಗೆ ಇರುವಂತೆ ಇರುತ್ತಿತ್ತು. ಈಗಂತೂ ನಾವು ಪ್ರಯಾಣಿಕರು ಎಂದು ಶೋಕಿ ತೋರಿಸಲೇ ಕೆಲವರು ನೀರಿನ ಬಾಟಲ್ಗಳನ್ನು ಖರೀದಿಸಿ, ಒಂದೇ ಬಾರಿಗೆ ಘಟಘಟ ಎಂದು ನೀರು ಕುಡಿದು ಬಾಟಲನ್ನು ಎಲ್ಲೆಂದರಲ್ಲಿ ಎಸೆಯುವುದು. ಇದು ಒಂದಷ್ಟು ಪ್ಲಾಸ್ಟಿಕ್ ವಿಷವನ್ನು ಭೂಮಿಯ ಒಡಲಿಗೆ ಸೇರಿಸುವ ಅವಿವೇಕವಲ್ಲದೆ ಮತ್ತೇನು?
ಹಿಂದಿನವರು ರೈಲು ಚೆಂಬನ್ನು ಪ್ರಯಾಣಕ್ಕೆ ಕೊಂಡೊಯ್ಯುತ್ತಿದ್ದುದರ ಹಿಂದೆ ಎಷ್ಟು ಲಾಜಿಕ್ ಇದೆ ಅಲ್ವ! ಒಂದು ಮನೆಯಿಂದಲೇ ನೀರನ್ನು ಒಯ್ಯಿರಿ ಎಂದು ಇನ್ನೊಂದು ನೀರನ್ನು ಗುಟುಕುಗುಟುಕಾಗಿ ಕುಡಿಯಿರಿ ಎಂದು. ಇತ್ತೀಚಿನ ವರ್ಷಗಳಲ್ಲಿ ರೈಲುಚೆಂಬಿನ ಕೆಲಸವನ್ನು ಸ್ಟೀಲ್ ವಾಟರ್ ಬಾಟಲ್ ಮಾಡುತ್ತಿದೆ . ತುಸು ಎಚ್ಚರ ತಪ್ಪಿದರೆ ಬಾಟಲ್ಗಳು ಸ್ಟೀಲ್ ಆಗುತ್ತವೆ ಆ ರೀತಿಯ ಬಾಟಲ್ ಒಯ್ಯುವವರು ಸ್ವಲ್ಪ ಜಾಗೃತೆ ವಹಿಸಬೇಕು. ಹೇಳಕ್ಕಾಗಲ್ಲ ಕೊರೊನಾ ವೈರಸ್ ಭೀತಿಯಿಂದ ಮುಟ್ಟದೆ ಇರಲೂ ಬಹುದು ಯಾರಿಗೆ ಗೊತ್ತು?
ಹೌದು ಅಂಥ ರೈಲು ಚೆಂಬು ಕೂಡ ನನ್ನಜ್ಜಿಯ ಪರಮಾಪ್ತ ವಸ್ತುಗಳಲ್ಲಿ ಒಂದಾಗಿತ್ತು. ಅದಿಲ್ಲದೆ ಯಾವ ಪ್ರಯಾಣವನ್ನೂ ಮಾಡುತ್ತಿರಲಿಲ್ಲ. “ಹಿತ್ತಾಳೆ ರೈಲುಚೆಂಬು ಬೆಸುಗೆ ಬಿಟ್ಟಿದೆ ಸ್ಟೀಲ್ ರೈಲುಚೆಂಬೇ ವಾಸಿ” ಎಂದು ನನ್ನಜ್ಜಿ ಅದಕ್ಕೆ ನೀರು ತುಂಬಿಸಿಕೊಂಡು ವಯರ್ಬುಟ್ಟಿ ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ರೈಲುಚೆಂಬು ಹಿಡಿದುಕೊಂಡು ಬಸ್ ಹತ್ತಲಾರದೆ ಹೇಗೂ ಸಾಹಸ ಮಾಡಿ ಮಡಿಕೇರಿ- ಚಿಕ್ಕಮಂಗಳೂರು ಬಸ್ ಹತ್ತಿದರು ಆ ದಿನ ನಮ್ಮ ಜೊತೆ. ಮೊಮ್ಮೊಕ್ಕಳ ಸಂಗಡ ಕಿಟಕಿ ಪಕ್ಕದ ಆಸನವೇ ಬೇಕೇಂದು ಹಠ ಮಾಡಿ ಕುಳಿತು ಪ್ರಯಾಣಿಸುವುದು ಆಕೆಯ ಹೆಗ್ಗಳಿಕೆ. ನನಗೆ ಅಜ್ಜಿಯ ಊರಿಗೆ ಜೊತೆ ಪ್ರಯಾಣಿಸುವುದು ಎಂದರೆ ಖುಷಿ, ಪ್ರಯಾಣವೂ ಖುಷಿ ಆದರೆ ಅಜ್ಜಿಯ ಜೊತೆಯಲ್ಲಲ್ಲ. ಕಂಡಾಕ್ಟರ್ ಟಿಕೇಟ್ ಕೊಟ್ಟಾಗಲೇ ಅಜ್ಜಿಯ ತಕರಾರು ಶುರು “ಎಷ್ಟು ತೆಗೆದುಕೊಂಡಿದ್ದಾರೆ, ಚಿಲ್ರೆ ಸರಿಯಾಗಿ ಕೊಟ್ಟಿದ್ದಾರ, ಟಿಕೇಟ್ನಲ್ಲಿ ಎಷ್ಟು ಬರೆದಿದ್ದಾರೆ. ಒಂದು ಫುಲ್ ಎರಡು ಆಫ್ ಟಿಕೇಟ್ತಾನೆ? ನೋಡು! ನೋಡು!” ಎಂದು ಕೇಳುವುದು.
ಮಡಿಕೇರಿ ಬಿಟ್ಟು ಮಕ್ಕಂದೂರು, ಮಾದಾಪುರ ಬರವವರೆಗೂ ಅಕೆಗೆ ಕೊಟ್ಟ ಹಣ ತೆಗೆದುಕೊಂಡ ಚಿಲ್ಲರೆ ಇತ್ಯಾದಿಗಳ ಚರ್ಚೆಯೆ ಆಗಿಬಿಡುತ್ತಿತ್ತು. ಮೊದಲೆ ಮಡಿಕೇರಿ ಸೋಮವಾರಪೇಟೆಯ ರಸ್ತೆ ತಿರುವು ಮುರುವಿನ ರಸ್ತೆ. ರಸ್ತೆ ತಿರುವಿನಲ್ಲಿ ಬಸ್ ತಿರುಗಿದಾಗ ನಮಗೆ ಖುಷಿ ಆದರೆ ಅಜ್ಜಿ “ಸುಮ್ಮನೆ ಕೂರಲಾಗಲ್ವೇ ಮೈಮೇಲೆ ಬೀಳುತ್ತೀರಲ್ಲ” ಎಂದು ಸಿಡುಕೋರು . ಹಾಗೂ ಹೀಗೂ ಮಡಿಕೇರಿಯಿಂದ ಬೆಳಗ್ಗೆ ಆರು ಗಂಟೆಗೆ ಹೊರಟ ಬಸ್ ಸೋಮವಾರಪೇಟೆ ತಲುಪುವುದು ಏಳುವರೆ ಗಂಟೆ ಆಗಿಬಿಡುತ್ತಿತ್ತು. ಆಗ ಡ್ರೈವರ್ ಕಂಡಾಕ್ಟರ್ “ತಿಂಡಿಗೆ ಹತ್ತು ನಿಮಿಷ ಟೈಮ್” ಎಂದು ಇಳಿದು ಹೋಗೋರು. ಮತ್ತೆ ಅಜ್ಜಿಯ ಬಲವಂತ ನಮ್ಮಗಳ ಮೇಲೆ ಶುರು .ನನ್ನಮ್ಮ ಮಾಡಿಕೊಟ್ಟ ಇಡ್ಲಿಯ ಬಾಕ್ಸನ್ನು ತೆಗೆದು ಬಾಳೆಎಲೆಗೆ ಹಾಕಿ ಬೇಡವೆಂದರೂ ಕೊಡುವುದು. ಮನೆಯಿಂದ ಅಷ್ಟಾಗಿ ಆಚೆ ಬಾರದ ನಮಗೆ ಜನ,ಊರು,ರಸ್ತೆ ನೋಡಿ ಎಂಜಾಯ್ ಮಾಡಬೇಕು ಅಂತಾದರೆ . ಅಜ್ಜಿಗೆ ಮಕ್ಕಳಿಗೆ ತಿಂಡಿ ತಿನ್ನಿಸಬೇಕು ಅನ್ನುವ ಧಾವಂತ. ಹಾಗೂ ಹೀಗು ಮುಖ ಸಿಂಡರಿಸಿಕೊಂಡು ತಿಂಡಿ ತಿನ್ನುವ ಹೊತ್ತಿಗೆ ಬಸ್ ಮತ್ತೆ ಹೊರಟು ಬಿಡುತ್ತಿತ್ತು.
ಆತುರದಿಂದ ಕೈ ತೊಳೆಯುವಾಗ ರೈಲು ಚೆಂಬಿನ ನೀರು ಮತ್ತೆ ಅಜ್ಜಿ ಮೇಲೆ ಸಿಂಚನವಾಗಿಬಿಡುತ್ತಿತ್ತು. ಕೈ ತೊಳೆದ ನೀರು ಸಿಂಚನವಾದರೆ ಸುಮ್ಮನೆ ಬಿಡುತ್ತಾರೆಯೇ? ಸುಮ್ಮನೆ ಬಿಡುತ್ತಿರಲಿಲ್ಲ! ಹಾಗೆ ಚಿವುಟಿ ಬಿಡೋರು! ನಾನು ನನ್ನ ತಮ್ಮ ಮತ್ತೆ ಮಾತನಾಡದೆ ಎದ್ದ ಸ್ಪೀಡಲ್ಲಿ ಹಾಗೆ ಮೆಲ್ಲಗೆ ಮುಖಮುಖ ನೋಡಿ ಕುಳಿತುಕೊಳ್ಳುತ್ತಿದ್ದೆವು. ಸ್ವಲ್ಪ ಹೊತ್ತು ಕಳೆದ ಮೇಲೆ ಬೇಲೂರಿಗೆ ಹೋಗೊವರೆಗೂ ಅಷ್ಟೇ ತಾನೆ. ಹೋದಮೆಲೆ ಈ ಅಜ್ಜಿ ಕೈಗೆ ಸಿಗೋರು ಯಾರು ಎಂಬ ಹುಂಬತನ ನಮಗೆ ಇದ್ದೇ ಇತ್ತು.
ಬಸ್ ಮುಂದೆ ಹೋದಂತೆಲ್ಲ ಅಜ್ಜಿ “ನನಗೆ ಕಣ್ಣು ಕಾಣಿಸಲ್ಲ ಯಾವೂರು ಇದು ಅದೇ ಇಂಗ್ಲೀಷಲ್ಲಿ ಏನು ಬರೆದಿದ್ದಾರೆ?” ಎಂದು ಪದೇ ಪದೇ ಕೇಳುವುದು. ನನಗೆ ಸಿಟ್ಟು ಬಂದು “ಗೊತ್ತಿಲ್ಲ..” ಎಂದರೆ “ಅದು ಯಾರು ನಿಮ್ಮ ಮೇಡಮ್ಮ ಅವರ ಹತ್ತಿರನೇ ಬರ್ತೀನಿ ಇಷ್ಟೆನಾ… ಓದಕೆ ಹೇಳ್ಕೊಟ್ಟಿರೋದು” ಎಂದು ಆವಾಜ್ ಹಾಕೋರು.ಶನಿವಾರಸಂತೆ, ಕೊಡ್ಲಿಪೇಟೆ ಕಳೆಯುತ್ತಿದ್ದಂತೆ ನಮಗೆ ಮೆಲ್ಲನೆ ನಿದ್ದೆಯ ಜೋಂಪು ಆದರೆ ನಿದ್ರೆ ಮಾಡಲು ಅಜ್ಜಿ ಬಿಡಬೇಕಲ್ಲ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ನಾಳೆ ಊರಿಗೆ ಹೋಗುವುದು ಅನ್ನುವ ಖುಷಿಯಲ್ಲಿ ಹಿಂದಿನ ರಾತ್ರಿ ನಾವೂ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ.ನನ್ನಮ್ಮ , ಅಜ್ಜಿಯರೂ ಬಿಡುತ್ತಿರಲಿಲ್ಲ. ಬೇಗನೆದ್ದು ಬಾಧೆಗಳು ಇದ್ದರೆ ಇಲ್ಲೇ ತೀರಿಸಿಕೊಳ್ಳಲಿ ಎಂದು.
ಅಜ್ಜಿಗೋ ಪ್ರತಿ ಊರು ಬಂದಾಗಲೂ ಬೋರ್ಡ್ ಓದಿ ಸರಿಯಾಗಿ ಹೇಳಬೇಕಾಗುತ್ತಿತ್ತು. ನನಗೆ ಆಗ ಬಹಳ ಕಷ್ಟವಾಗುತ್ತಿತ್ತು. ಬಸ್ ಹೋಗುವಾಗ ನಿದ್ರೆ ಬಂದು ಬಂದು ಅಜ್ಜಿ ಮೇಲೆ ಬೀಳುತ್ತಿದ್ವಿ. ಪಾಪ !ಒಂದು ಹಂತಕ್ಕೆ ಸಹಿಸೋರು .ಸಕಲೇಶಪುರ ಬಂದ ಮೇಲೆ ನಮಗೂ ನಿದ್ರೆ ಹೊರಟು ಹೋಗುತ್ತಿತ್ತು. ಅಲ್ಲಿ ಒಂದು ಕಾಫೀ ಬ್ರೇಕ್ ಇರುತ್ತಿತ್ತು ಅಜ್ಜಿಗೆ ಕಾಫಿ ಚಟ! ಕಾಫಿ ಕುಡಿಯಬೇಕಲ್ಲ ಅದಕ್ಕೆ ಫ್ಲಾಸ್ಕ್ನ ಮುಚ್ಚಳ ತೆಗೆದು ನಿಮಗೆ ಬೇಕ? ನಿಮಗೆ ಬೇಕ? ಎನ್ನುವುದು ನಾವು ಇಲ್ಲ! ನೀವು ಕುಡಿಯಿರಿ ಅಂದರೆ ಬೇಗ ಬೇಗ ಕುಡಿದು ಬಿಡುವರು. ಮತ್ತದೆ ಬಸ್ ಹೊರಡುವ ಸಮಯಕ್ಕೆ ನಾವಿಬ್ಬರೂ ಕುಡಿಯಲು ನೀರು ಕೇಳಿದರೆ ಮೆಲ್ಲನೆ ಮುಚ್ಚಳ ತೆಗೆದು ಅದರದೆ ಕಪ್ಗೆ ಸ್ವಲ್ಲ ಹಾಕಿ ಕೊಡುವಷ್ಟರಲ್ಲಿ ಬಸ್ ಸಕಲೇಶಪುರ ಬಸ್ ಸ್ಟ್ಯಾಂಡ್ ಅಪ್ ಹತ್ತೋದು ಆಗಂತು ನೀರೆಲ್ಲ ಮೂಗಿಗೆ ಹೋಗಿ ಬಟ್ಟೆ ಮೇಲೆಲ್ಲಾ ಚೆಲ್ಲಿಕೊಂಡು ಮುಜುಗರ ಅನುಭವಿಸುತ್ತಿದ್ದೆವು. ಇದೆಲ್ಲಾ ಕಳೆದು ನಮಗೆ ಮತ್ತೆ ಒಂದು ರೀತಿಯ ಜೋಷ್ ಏನೆಂದರೆ ಅಜ್ಜಿ ಮನೆಗೆ ಹೋಗುತ್ತಿದ್ದೇವೆ ಎಂದು .ಸಕಲೇಶಪುರದಿಂದ ಮುಂದಕ್ಕೆ ಒಂದೂವರೆ ಗಂಟೆಯ ದಾರಿ. ಅಜ್ಜಿ ಸುಮ್ಮನೆ ಇರುತ್ತಿರಲಿಲ್ಲ ಪದೇ ಪದೇ ಟೈಂ ಕೇಳೋರು. ಕಂಡಾಕ್ಟರ್ ಚಿಲ್ಲರೆ ಎಲ್ಲ ಕೊಟ್ಟಿದ್ದಾರ ಹೇಗೆ ಎಂದು ಕೇಳಿ ಕೇಳಿ ತಲೆ ಬಿಸಿ ಮಾಡೋರು. ನಮಗೆ ಇನ್ನು ಈ ಅಜ್ಜಿಯ ಜೊತೆಗೆ ಪ್ರಯಾಣ ಸಾಕು ಅನ್ನಿಸಿಬಿಡುತ್ತಿತ್ತು.
ಬೇಲೂರಿಗೆ ಇನ್ನೇನು ಹದಿನೈದು ಕಿಲೋಮೀಟರ್ ದೂರವಿದೆ ಎನ್ನುವಾಗಲೆ ಅಜ್ಜಿ ಲಗೇಜ್ ಸರಿ ಮಾಡಿಸುವ ಕಾರ್ಯಕ್ರಮಕ್ಕೆ ನಾಂದಿ ಹಾಡಿಬಿಡುತ್ತಿದ್ದರು. ಪದೇ ಪದೇ ಟೈಮ್ ಕೇಳುವುದು ಆನಂತರ ಯಾವ ಊರು ಎಂದು ಹೇಳಬೇಕಾಗಿತ್ತು. “ಕರ್ಚಿಫ್ ಹಿಡಿದುಕೊಳ್ಳಿ, ಚಪ್ಪಲ್ ಎಲ್ಲಾ ಸರಿಯಾಗಿ ಹಾಕಿಕೊಳ್ಳಿ ಇಲ್ಲಾಂದ್ರೆ ಮುಂದುಕ್ಕೋಗುತ್ತೆ” ಎಂದು ಎಚ್ಚರಿಸೋರು. ಕೊನೆಗೆ ಅಜ್ಜಿಯ ಆರ್ಭಟ, ನಮ್ಮ ಪೀಕಲಾಟ ನೋಡಲಾಗದ ಕಂಡಾಕ್ಟರ್ “ಸುಮ್ಮನಿರಿ ಅಜ್ಜಿ ಸ್ಟಾಪ್ ಬಂದಾಗ ನಾನೇ ಹೇಳಿ ಇಳಿಸಿಕೊಡುತ್ತೇನೆ” ಎಂದು ಆಶ್ವಾಸನೆ ಕೊಟ್ಟಮೇಲೆ ಅಜ್ಜಿ ಸುಮ್ಮನಾದರೂ ಸುಮ್ಮನಾಗದೇ ಮತ್ತೆ ಮತ್ತೆ ಕಣ್ಸನ್ನೆಯಲ್ಲೇ ವಾರ್ನಿಂಗ್ ಕೊಡುವುದನ್ನು ಮುಂದುವರೆಸೋರು. ಅಂತೂ ಬೇಲೂರಿನ ಮೊದಲನೆ ಸ್ಟಾಪ್ ಬಂದಾಗಂತೂ ಅಜ್ಜಿ ಎದ್ದೇ ನಿಂತುಬಿಡುತ್ತಿದ್ದರು ನಮ್ಮನ್ನೂ ನಿಲ್ಲಿಸಿಕೊಂಡು ಆಗ ಕಂಡಾಕ್ಟರ್ಗೆ ನಗುವೇ ನಗು “ಅಜ್ಜೀ.. ಮೊಮ್ಮಕ್ಕಳನ್ನೆಲ್ಲ ಕರೆದುಕೊಂಡು ಹೋಗುತ್ತಾ ಇದ್ದೀರ ಹುಷಾರಾಗಿ” ಎಂದರೆ ಅಜ್ಜಿ “ಹ್ಞೂಂ ಕಣಪ್ಪ ಅದಕ್ಕೆ ನಾನು ಒದ್ದಾಡುತ್ತಿರುವುದು. ಇವಳು ನನ್ನ ಎರಡನೆ ಮಗಳ ಮಗಳು ಉದ್ದಕ್ಕೆ ಇದ್ದಾಳೆ ತಲೆ ಮೇಲಿಂದ ಸುರಿದರೂ ನೋಡಕೆ ಇಷ್ಟೆ ದಪ್ಪ ಇರದು. ಇಷ್ಟು ಉದ್ದ ಇದ್ದಾಳೆ ಅವರಮ್ಮಂಗೆ ಸ್ವಲ್ಪವೂ ಕೆಲಸ ಮಾಡಿಕೊಡಲ್ಲ ನನ್ನ ಮಗಳು ಕತ್ತೆ ತರ ದುಡಿಬೇಕು” ಎಂದು ನಾನ್ ಸ್ಟಾಪ್ ಪ್ರವರ ಪ್ರಾರಂಭಿಸೋರು. ನನ್ನ ತಮ್ಮನನ್ನು ಕಂಡು ಕಂಡಾಕ್ಟರ್ ಸರಿ! “ಈ ಹುಡುಗ ಯಾರು?” ಅಂದರೆ ಅಯ್ಯೋ! ಇವನಾ ಎಂಟು ತಿಂಗಳಿಗೆ ಹುಟ್ಟಿದವನು ರಾಮಚಂದ್ರ ಡಾಕ್ಟರ್ ಕೊಟ್ಟ ಎಣ್ಣೆ ಉಜ್ಜಿ ಉಜ್ಜಿ ಈ ಹಂತಕ್ಕೆ ತಂದಿದ್ದೀನಿ”. ಎಂದು ಇನ್ನೊಂದು ಕತೆ ಪ್ರಾರಂಭಿಸೋರು. ಅಷ್ಟರಲ್ಲಿ ಬೇಲೂರು ಬಸ್ ಸ್ಟ್ಯಾಂಡ್ ಬಂದೇ ಬಿಡೋದು. ಇಷ್ಟೆಲ್ಲಾ ಮಾತಿಗೆ ನಿಲ್ಲಿಸಿಕೊಂಡ ಕಂಡಾಕ್ಟರ್ ಮಹಾಶಯನೇ ಆಗ ಅವಸರ ಮಾಡಿ “ಬೇಗ ಬೇಗ ಇಳಿರಿ ಎಷ್ಟು ಹೊತ್ತು?” ಎಂದರೆ ಹೇಗಾಗಬೇಡ ಅಜ್ಜಿಗೆ . ಅಜ್ಜಿ ಮತ್ತೆ ನಮ್ಮಗಳ ಮೇಲೆ ಗದರೋರು. ಊರು ತಲುಪಿದ ನಂತರ ನಾವದಕ್ಕೆಲ್ಲಾ ಹೆದರುತ್ತಿರಲಿಲ್ಲ ಬಿಡಿ! ಲಗೇಜ್ ತೆಗೆದುಕೊಂಡು ಅಜ್ಜಿಗಿಂತ ಮೊದಲೆ ಆಟೋ ಕರೆದು ಕುಳಿತು ಮನೆ ಅಡ್ರೆಸ್ ಹೇಳುತ್ತಿದ್ದೆವು.
ಮನೆಗೆ ಹೋಗಿ ಕೈ ಕಾಲು ತೊಳೆದು ಅಜ್ಜಿ ಮನೆಯ ಅಪರೂಪದ ವಸ್ತುಗಳನ್ನು ಮುಟ್ಟುವಂತಿರಲಿಲ್ಲ. ಅಷ್ಟು ಬೇಗ ಮತ್ತೆ “ಬರೆಯಿರಿ ಬರೆಯಿರಿ ನಿಮ್ಮಮ್ಮನಿಗೆ ಕಾಗದವನ್ನು ನಾವು ತಲುಪಿದ್ದಕ್ಕೆ”. ಎಂದು ಅರ್ಜಂಟ್ ಮಾಡುವುದು. ಮಡಿಕೇರಿಯಿಂದಲೇ ಮೊದಲೇ ಅಡ್ರಸ್ ಬರೆದುತೆಗೆದುಕೊಂಡು ಹೊಗಿದ್ದ ಖಾಲಿ ಇನ್ಲ್ಯಾಂಡ್ ಕಾಗದವನ್ನು ನಮ್ಮಿಂದಲೇ ಬರೆಸಿ ಆ ಕಾಗದವನ್ನು ಯಾರ ಬಳಿಯಾದರೂ ಕೊಟ್ಟು ಪೋಸ್ಟ್ ಮಾಡಿಸುವವರೆಗೂ ಆಕೆಗೆ ಸಮಾಧಾನವಿರುತ್ತಿರಲಿಲ್ಲ. ಆನಂತರದ ವರ್ಷಗಳಲ್ಲಿ ನಮ್ಮ ಮನೆಗೆ ಬಿಎಸ್ಎನ್ಎಲ್ ಫೋನ್ ಬಂದ ನಂತರ ಎಸ್ಟಿಡಿ ಕಾಲ್ ಮಾಡಿ ತಲುಪಿದ್ದೇವೆ ಎಂದು ಹೇಳುತ್ತಿದ್ದೆವು.
ಇದಿಷ್ಟು ಆ ದಿನದ ಕಾರ್ಯಕ್ರಮ . ಮರುದಿನ ಬೇಗ ಏಳಿಸಿಕೊಂಡು ಸ್ನಾನ ಮಾಡಿಸಿ ನಮಗೆ ಚೆಂದದ ಬಟ್ಟೆ ಹಾಕಿಸಿಕೊಂಡು ಪರಿಚಯದವರ ಮನೆಗಳಿಗೆಲ್ಲಾ ಕರೆದುಕೊಂಡು ಹೋಗೋರು. ಎಲ್ಲಾ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಪರೋಹಿತರ ಬಳಿಯೆಲ್ಲಾ ಇವರಿಗೆ ಸ್ವಲ್ಪ ತೀರ್ಥ ಹಾಕಿ ಎಂದು ಹಾಕಿಸುವುದು. ಮನೆಗೆ ಕರೆದುಕೊಂಡು ಬಂದು ದೃಷ್ಟಿ ತೆಗೆಸುವುದು. ಹಿತ್ತಲಲ್ಲಿ ಯಾವಾಗಲೂ ಬಿಡುತ್ತಿದ್ದ ಕಾಕಡ ಹೂವಿನ ಮಾಲೆಯನ್ನು ಕಟ್ಟಿ ಮುಡಿಸುವುದು, ಶೆಟ್ಟರ ಅಂಗಡಿಯಲ್ಲಿ ಕೊಬ್ಬರಿ ಮಿಠಾಯಿ ತಂದು ಕೊಡುತ್ತಿದ್ದದ್ದು ಎಲ್ಲ ಈಗ ನೆನಪಾಗಿ ಕಾಡುತ್ತಿದೆ. ಮಳೆಗಾಲದ ರಜೆ ಕಳೆದು ಮತ್ತೆ ಮಡಿಕೇರಿಗೆ ಹೊರಡುವಾಗ ಅಜ್ಜಿ ಬರುತ್ತಿರಲಿಲ್ಲ . ನಾವೆ ಅಕ್ಕ ತಮ್ಮ ಬರುತ್ತಿದ್ದೆವು. ಬೇಲೂರಿನಲ್ಲ್ಲಿ ಆಗ ಶ್ರಾವಣ ಸ್ವಾಗತಿಸಲು ಸಜ್ಜಾಗಿರುತ್ತಿದ್ದ ಹಸಿ ಕಡಲೇಕಾಯಿ,ಬದನೆಕಾಯಿ, ಆಲೂಗೆಡ್ಡೆ, ಸಬ್ಬಸ್ಸಿಗೆ ಸೊಪ್ಪು, ಸಿಹಿ ಗೆಣಸು, ಬೀನ್ಸ್ ಕಾಯಿಗಳನ್ನು ಸಂತೆಗೆ ಹೋಗಿ ಚರ್ಚೆ ಮಾಡಿ ಕೊಂಡು ಬ್ಯಾಗಿಗೆ ಹಾಕುತ್ತಿದ್ದ, ತನ್ನ ಹಿತ್ತಲಲ್ಲೇ ಬೆಳೆದ ಕರಿಬೇವಿನ ಸೊಪ್ಪನ್ನು, ಕಾಕಡ, ಕನಕಾಂಬರ ಹೂವನ್ನು ಬಿಡಿಸಿ ಜಿರಿ ಕವರ್ ( ಪ್ಲಾಸ್ಟಿಕ್ನಲ್ಲಿ) ಕೊಡುತ್ತಿದ್ದ ಆಕೆಯ ಮುಖ ಈಗಲೂ ನೆನಪಿಗೆ ಬರುತ್ತದೆ. ಆ ಕರಿಬೇವಿನ ಘಮ ಮತ್ತೆ ಮತ್ತೆ ಆಘ್ರಾಣಿಸಿದಂತಾಗುತ್ತದೆ,ಆಕೆ ಇಲ್ಲೇ ….ಎಲ್ಲೋ… ಇದ್ದಾಳೇನೋ…..! ಅನ್ನಿಸುತ್ತದೆ. “ಸೊ$ರಿ ಅಜ್ಜಿ! ಸಾಧ್ಯವಾದರೆ ಒಂದು ಬಾರಿ ಬರ್ತಿಯಾ….. ನೀನು ಹೇಳಿದ ಹಾಗೆ ಕೇಳುವೆ! ಹಠ ಮಾಡಲ್ಲ ಪ್ಲೀಸ್….” ಎನ್ನುವ ಹಾಗಾಗುತ್ತದೆ.
ಮಳೆಗಾಲದ ರಜೆ ಕಳೆದ ನಮ್ಮನ್ನು ಮತ್ತೆ ಊರಿಗೆ ಕಳುಹಿಸಬೇಕು ಅಂದರೆ ಆಕೆಗೆ ಸಂಕಟ, ನಾಳೆ ಮಕ್ಕಳು ಹೊರಡುತ್ತಾರೆ ಎಂದು ಚಡಪಡಿಸೋಳು ಆದರೆ ತೋರಿಸುತ್ತಿರಲಿಲ್ಲ. ತಾನೆ ಬಟ್ಟೆಗಳನ್ನು ಜೋಡಿಸಿ ಕೊಡುವುದು. “ಮಳೆಗಾಲದ ರಜೆಯಲ್ಲಿ ಸ್ವಲ್ಪವೂ ಟೈಂ ವೇಸ್ಟ್ ಮಾಡಲ್ಲ” ಎಂದು ನಾವು ತೆಗೆದುಕೊಂಡು ಹೋಗಿ ಬ್ಯಾಗಲ್ಲೆ ಇರಿಸಿಕೊಂಡಿದ್ದ ಪುಸ್ತಕಗಳನ್ನು ಮರೆತು ಹೋಗಬೇಡಿ! ಎಂದು ಎಚ್ಚರಿಸುತ್ತಿದ್ದ ಆ ಧ್ವನಿ… ಇನ್ನೊಮ್ಮೆ ಕೇಳಬಾರದೆ ಅನ್ನಿಸುತ್ತದೆ. ನಾಳೆ ಮಡಿಕೇರಿಗೆ ಹೊರಡಬೇಕು ಅಂದರೆ ರಾತ್ರಿ ಬಿಸಿಬೇಳೆ ಬಾತ್ ಮಾಡಿ ತುಪ್ಪ ಹಾಕಿ ತಿನ್ನಿಸುತ್ತಾ “ನಾಳೆ ಊರಿಗೆ ಹೋಗುತ್ತೀರಿ ಹುಷಾರು! ದಾರಿಯಲ್ಲಿ ಯಾರು ಏನು ಕೊಟ್ಟರು ತಿನ್ನಬೇಡಿ…” ಎಂದು ಜಾಗೃತೆ ಹೇಳುತ್ತಿದ್ದರೆ ನಮಗೂ ದುಃಖವಾಗುತ್ತಿತ್ತು ಈಗಲೂ ನೆನಪಾದರೆ ಅಳು ಬರುತ್ತದೆ. . ಮರುದಿನ ಬೆಳಿಗ್ಗೆ ಐದು ಗಂಟೆಗೇ ನಮ್ಮನ್ನು ಬಸ್ ಸ್ಟ್ಯಾಂಟ್ಗೆ ಕರೆದುಕೊಂಡು ಹೋಗಿ ಬಸ್ ಬಂದ ಕೂಡಲೆ ಬಸಲ್ಲಿ ಕೂರಿಸಿ ಟಿಕೇಟ್ ತೆಗೆದುಕೊಟ್ಟು, ದಾರಿ ಖರ್ಚಿಗೆ ಹಣ ಕೊಟ್ಟು,ಟಾ ಟಾ ಹೇಳಿದ ಅಜ್ಜಿ ಈಗಿಲ್ಲ. ಸೋ ಸ್ಯಾಡ್! ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.
ಪ್ಯಾರಲಿಸಿಸ್ ಆಗಿ ಕಡೆ ದಿನಗಳನ್ನು ಎದುರಿಸುತ್ತಿದ್ದ ಆ ದಿನಗಳಲ್ಲೂ ನನ್ನನ್ನು ಗುರುತು ಹಿಡಿದ ಆ ಧ್ವನಿ ಇನ್ನೂ ಇನ್ನು ಕೇಳಿಸುತ್ತಿದೆ! ಆಕೆ ಎಣ್ಣೆ ಹಾಕಿ ಕೂದಲು ಬಾಚುತ್ತಿದ್ದ ಕೈಗಳ ಸ್ಪರ್ಶ ಮತ್ತೆ ಮತ್ತೆ ಬೇಕೆನಿಸುತ್ತಿದೆ. ಮಾಡಿದರೆ ನನ್ನಜ್ಜಿಯೇ ಮಾಡಬೇಕು ಅನ್ನುವ ಹುಳಿಯನ್ನ, ತಿಳಿಸಾರು ಈಗಲೂ ನೆನಪಾಗುತ್ತದೆ. ಹುಳಿಯನ್ನ ಅಂತೂ ಆಕೆಯ ಸಿಗ್ನೇಚರ್ ಡಿಶ್ ಆಗಿತ್ತು. ಎಷ್ಟೋ ಬಾರಿ “ನನಗೂ ಹುಳಿಯನ್ನದ ಗೊಜ್ಜು ಮಾಡೋದು ಹೇಳ್ಕೊಡು” ಎಂದಿದ್ದೆ ಕಡೆಗೂ ನನಗೆ ರೆಸಿಪಿ ಹೇಳಲೇ ಇಲ್ಲ. ಹೇಳುತ್ತಾಳೆ ಅಜ್ಜಿ ಅನ್ನುವ ಹಾಗಿಲ್ಲ. ಆಕೆ ರೈಲು ಹತ್ತಿ ಬಹಳ ವರ್ಷಗಳಾಗಿವೆ. ಬರೆ ನೆನಪು ಅನ್ನುವ ಚೆಂಬನ್ನು ನಮ್ಮ ಕೈಗೆ ನೀಡಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್