- ಅಪೂರ್ಣವಲ್ಲ ಎಂಬ ಕಥಾಸಂಕಲನದ ಕುರಿತು - ಫೆಬ್ರುವರಿ 19, 2023
ಅಪೂರ್ಣವಲ್ಲ ಎಂಬ ಪರಿಪೂರ್ಣ ಕಥಾ ಸಂಕಲನ
‘ಅಪೂರ್ಣವಲ್ಲ’ ಸುಧಾ ಎಂ ಅವರ ಪ್ರಕಟಿತ ಕಥಾ ಸಂಕಲನ. ಸ್ವಸ್ತಿ ಪ್ರಕಾಶನದಿಂದ ಪ್ರಕಟಿಸಿರುವ ಈ ಕಥಾ ಸಂಕಲನ ಮಲೆನಾಡಿನ ಜನ ಜೀವನದ ಮಿಡಿತವನ್ನು ಅರಿತು ಬರೆದಂತಿದೆ. ಕಲ್ಪನೆ, ಅತಿ ರಂಜನೆಯನ್ನು ಬಳಸದೆ ಸರಳವಾಗಿ ಆಪ್ತವಾಗಿ ವಾಸ್ತವಿಕ ನೆಲಗಟ್ಟಿನ ಮೇಲೆ ಕಥೆಗಳನ್ನು ಕಟ್ಟಿ ಕೊಟ್ಟಿರುವ ಸುಧಾ ಎಂ ಓದುಗರಿಗೆ ಆಪ್ತ ಕಥೆಗಳನ್ನು ನೀಡಿರುವ ಉತ್ತರ ಕನ್ನಡದ ಭರವಸೆಯ ಕಥೆಗಾರ್ತಿ.
ತಮಗೆ ಪರಿಚಯವಿರುವ ಸಾಮಾಜಿಕ ಜೀವನವನ್ನು ಆಧರಿಸಿ ವಾಸ್ತವದ ಜನಜೀವನವನ್ನೇ ಬಳಸಿ ಕಥೆಗಳನ್ನು ಹೆಣೆದಿರುವುದು ವಿಶೇಷ. ಪ್ರತಿ ಕಥೆಯಲ್ಲೂ ಒಂದು ಎಚ್ಚರದ ದನಿ ಇದೆ. ಹಳ್ಳಿ ಹಳ್ಳಿ ತಿರುಗುವ ಕಣಿ ಹೇಳುವವರು, ಸುಡುಗಾಡು ಸಿದ್ದರು ಇವರೆಲ್ಲರ ಮಾತು ಸತ್ಯವಾಗಲೂ ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಲೇ ಅವರ ಮಾತಿನ ಮೋಡಿಗೊಳಗಾಗಿ ಅವರು ಕೇಳಿದ್ದನ್ನೆಲ್ಲ ಕೊಡುವ ಹಳ್ಳಿಯ ಪರಿಸರದ ಮುಗ್ಧ ಹೆಣ್ಣು,ಕಣಿ ಹೇಳುವವರ ಚಾಲಾಕಿತನ,ಇವೆಲ್ಲವೂ ನಮ್ಮ ಸುತ್ತವೇ ನಡೆದಂತೆ ಭಾಸವಾಗುತ್ತದೆ. ಒಂಬತ್ತು ಕಥೆಗಳಲ್ಲಿ ಎಲ್ಲಾ ಕಥೆಗಳಲ್ಲೂ ಆಡು ಭಾಷೆ ಇದ್ದು ಕಥೆಯ ಸೊಬಗು ಹೆಚ್ಚಿಸುವಂತಿದೆ. ವಿಶೇಷವಾಗಿ ಹವಿಗನ್ನಡ, ಬುಡಕಟ್ಟು ಸಿದ್ದಿಗರ ಆಡು ಭಾಷೆ, ಮಲೆನಾಡಿನ ಒಕ್ಕಲಿಗರ ಆಡು ಭಾಷೆ, ಬಯಲು ಸೀಮೆಯ ಭಾಷೆಯ ಬಳಕೆಯು ಓದುವವರನ್ನು ರಂಜಿಸುತ್ತದೆ.
ಕೊನೆಗೌಡ ಮತ್ತು ಚಂದ್ರಿ, ಸಿದ್ದಿ ಜನಾಂಗದ ಫೀರ್ಖಾನ್ ಮತ್ತು ಸೋಮಿಯರು ಅನಕ್ಷರಸ್ಥರಾಗಿದ್ದರೂ ಅವರಲ್ಲಿನ ಪ್ರೀತಿಯ ಪರಿ ತುಂಬಾ ಆಳವಾಗಿ, ನವಿರಾಗಿ, ಬದ್ಧ ಪ್ರೀತಿಯ ಬಾಂಧವ್ಯವಾಗಿ ಮೂಡಿದೆ. ಚಂದ್ರಿಗೆ ಮಕ್ಕಳಾಗದೇ ಇದ್ದಾಗ ಕನ್ನ ಚಂದ್ರಿಯನ್ನು ಪ್ರೀತಿಸುವ ಪರಿ, ಆಕೆಯ ಬಗ್ಗೆ ಯಾರಾದರೂ ಏನಾದರೂ ಅಂದಾಗ ಸಿಟ್ಟಿಗೇಳುವುದು, ಆಕೆಯ ಪ್ರೀತಿಯನ್ನು ಕೃತಜ್ಞತಾ ಭಾವದಿಂದ ಕಾಣುವುದು. ಆಕೆಯನ್ನು ಮಗುವಂತೆ ನೋಡಿಕೊಳ್ಳುತ್ತೇನೆ ಎನ್ನುವ ಅವನ ಕಾಳಜಿಯ ಮಾತು. ಕೊನೆಯಲ್ಲಿ ಚಂದ್ರಿ ಸತ್ತಾಗ ಹೆಚ್ಚು ಕಾಲ ಉಳಿಯದ ಕನ್ನ. ಇದರಂತೆ ಸೋಮಿ ಮತ್ತು ಫೀರ್ಖಾನರ ಸಂಸಾರ. ಕಾಡುಮೇಡು ಅಲೆವಾಗ ತೋರಿಸಿಕೊಳ್ಳುವ ಪರಸ್ಪರ ಕಾಳಜಿ. ತೀರ ವೈಯಕ್ತಿಕವಾಗಿ ಕಾಲ ಕಳೆವಾಗ ಆಡುವ ಮಾತುಕತೆ ಫೀರ್ಖಾನ್ ಬಡಿಯುವ ಡಪ್ಪು ಅದಕ್ಕೆ ತಕ್ಕಂತೆ ಸೋಮಿಯ ಪುಗಡಿ ನೃತ್ಯ ಎಲ್ಲವೂ ಅಶೀಲ್ಲತೆಯನ್ನು ಸೋಕಗೊಡದೆ ಶುದ್ಧ ಪ್ರೇಮವಾಗಿ ಮನತಟ್ಟುವಂತಿದೆ. ಎಲ್ಲವೂ ನಮ್ಮ ಸುತ್ತಮುತ್ತಲು ಬೆರೆತು ಹೋದ ವಿಷಯಗಳನ್ನೇ ಗ್ರಹಿಸಿ ಚಂದದ ರೂಪ ಕೊಟ್ಟು ಕಥೆಯಾಗಿಸಿ ನಮ್ಮ ಮುಂದಿಟ್ಟಿರುವುದು ಕಥೆಗಾರ್ತಿ ಸುಧಾ ಎಂ ಅವರ ಸೂಕ್ಷ್ಮ ಗ್ರಹಿಕೆ ಹಾಗೂ ಬರವಣಿಗೆಯ ಪ್ರತಿಭೆ. ಅಪೂರ್ಣವಲ್ಲ ಕಥೆಯಲ್ಲಿ ಪ್ರೀತಿಯ ಆರಾಧನೆಯಿದೆ. ಎಷ್ಟೋ ವರ್ಷಗಳ ನಂತರ ಭೇಟಿಯಾದಾಗಲೂ ಅದೇ ತಲ್ಲಣ, ಉತ್ಸಾಹ, ರೋಮಾಂಚನ ಅನುಭವಿಸುವ ಪ್ರೇಮಿ ಒಂಟಿಯಾದ ನಂತರವೂ ಖುಷಿ ಪಡುವ ರೀತಿ ಕಾಲ್ಪನಿಕ ಎನ್ನಿಸದೆ ಕಥೆಯನ್ನು ಕಲಾತ್ಮಕವಾಗಿಸಿದೆ.
ಸಂಬಂಧಗಳು ಯಾವಾಗ ಹತ್ತಿರವಾಗುತ್ತದೆ, ಮನುಷ್ಯ ಸೋತಾಗ ಹೇಗೆ ಎಲ್ಲರೂ ನಡೆಸಿಕೊಳ್ಳುತ್ತಾರೆ ಎಂಬುದು ಬಿದ್ದಾಗ ಬರೆದವರು ಹಾಗೂ ಹಿಸೆ ಕಥೆಯಲ್ಲಿ ಕಾಣಬಹುದು. ಹಾಗೆಯೇ ಗೆದ್ದಾಗ ಹೇಗಿರಬೇಕು ಎಂಬುದು ಕೂಡ ಈ ಕಥೆಗಳು ಮನುಷ್ಯನಿಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಕಥೆಗಳಲ್ಲಿ ಸಾಕಷ್ಟು ಸ್ತ್ರೀ ಪಾತ್ರಗಳಿದ್ದರೂ ಮಹಿಳೆಯರ ಕಷ್ಟಕ್ಕೆ ದನಿಯಾಗಿಲ್ಲ. ಯಾವೊಂದು ಕಥೆಯು ಸ್ತ್ರೀ ಕೇಂದ್ರಿತವಾಗಿಲ್ಲ. ಸಂಸಾರದಲ್ಲಿ ಹೆಣ್ಣು ಎಷ್ಟು ಶಕ್ತಳು ಹೇಗೆ ವಿಭಿನ್ನವಾಗಿ ಯೋಚಿಸಬಲ್ಲಳು, ನಿರ್ಧಾರವನ್ನು ತೆಗೆದುಕೊಳ್ಳಬಲ್ಲಳು ಎಂಬುದನ್ನು ಹೇಳಿದ್ದಲ್ಲದೇ ಸಮಾಜದಲ್ಲಿ ಸಂಸಾರದಲ್ಲಿ ಗಂಡು ಅನುಭವಿಸುವ ನೋವು ಸೋಲು ಒಂಟಿತನಕ್ಕೆ ದನಿಯಾಗಿರುವುದು ಈ ಕಥಾ ಸಂಕಲನದ ವಿಭಿನ್ನ ಗುರುತಾಗಿದೆ.
ಕಥೆಗಳಲ್ಲಿ ತಣ್ಣನೆಯ ಬಂಡಾಯವಿದೆ. ಸಾಮಾಜಿಕ ವ್ಯವಸ್ಥೆಯನ್ನು ಲೋಪ ದೋಷಗಳನ್ನು ಖಂಡಿಸುವಿಕೆ ಇದೆ. ಬದಲಾವಣೆಯ ಒತ್ತಾಸೆಯಿದೆ. ವಿಧವೆಯನ್ನು ಮದುವೆಯಾದಾಗ ಸಮಾಜವೇ ಆತನನ್ನು ಬಹಿಷ್ಕರಿಸುತ್ತದೆ. ಮಠದಿಂದ ಹೊರಗಿಡಲಾಗುತ್ತದೆ. ‘ವಿಧವೆಯನ್ನು ಮದುವೆಯಾದವ’ ಎನ್ನುವ ವ್ಯಂಗ್ಯ ಮಾತು ಆತನ ಗುರುತಾಗುತ್ತದೆ. ಆತ ಜಗ್ಗದೆ ಕುಗ್ಗದೆ ನಿಂತಾಗ ನಿಧಾನಕ್ಕೆ ಮಠ, ಸಮಾಜ ಎಲ್ಲವೂ ಆತನನ್ನು ಒಪ್ಪಿಕೊಳ್ಳುತ್ತದೆ. ಒಳ್ಳೆಯ ವಿಚಾರಗಳು ತಡವಾಗಿಯಾದರೂ ಸರಿ ಗೆದ್ದೇ ಗೆಲ್ಲುತ್ತದೆ ಎಂಬ ಆಶಾವಾದದೊಂದಿಗೆ ಸಂಕಲನದ ಕೊನೆಯ ಕಥೆ ಮುಕ್ತಾಯಗೊಳ್ಳುತ್ತದೆ.
ಬಲಿ ಕಥೆಯಲ್ಲಿ ಮತಾಂತರ, ಕಳ್ಳ ಸಾಗಾಣಿಕೆ ಏನು ಅರಿವಿಲ್ಲದವರನ್ನು ಹೇಗೆ ನಿಧಾನಕ್ಕೆ ಬಲಿಯಾಗಿಸಿಕೊಳ್ಳುತ್ತದೆ ಎಂಬುದನ್ನು ನಿಧಾನಕ್ಕೆ ಹೇಳುತ್ತಾ ಓದುಗರನ್ನು ನಿಧಾನಕ್ಕೆ ಇಳಿಸಿಕೊಳ್ಳುತ್ತಾ ಹೋಗುವುದಲ್ಲದೇ ಓದುಗರಲ್ಲಿ ಕುತೂಹಲ ಹುಟ್ಟು ಹಾಕುವಷ್ಟು ನೈಜ ನಿರೂಪಣೆ ಇದೆ. ಹಾಗೆ ಅದನ್ನು ಅವರದೇ ಶೈಲಿಯಲ್ಲಿ ಹೇಗೆ ಖಂಡಿಸುತ್ತಾರೆ ಎಂಬುದು ಕೂಡ ಕಥೆ ಹೇಳುವಲ್ಲಿ ಯಶಸ್ವಿಯಾಗಿದೆ.
ಕಥೆಗಳು ಬಹಳಷ್ಟು ವಿಷಯಗಳ ವೈಚಾರಿಕ ವಿಷಯಗಳನ್ನು ಒಳಗೊಂಡಿದೆ. ಕಲ್ಪನೆಯನ್ನೇ ಹೂರಣ ಮಾಡಿಕೊಳ್ಳದೆ ಸಾಮಾಜಿಕ ವ್ಯವಸ್ಥೆ, ಆಧುನಿಕ ಜೀವನಶೈಲಿಯಿಂದ ಹಳ್ಳಿಗಳಲ್ಲಾಗುತ್ತಿರುವ ಬದಲಾವಣೆಗಳು, ಜನರ ಮನಸ್ಥಿತಿ, ಪ್ರೀತಿಯ ಸಹಜ ನಿರೂಪಣೆ, ಪ್ರಾದೇಶಿಕತೆ ಮತ್ತು ಆಡು ಭಾಷೆಯ ಸೊಗಡು, ಮಲೆನಾಡಿಗರ ಬದುಕು ಬವಣೆ, ಮಳೆಗಾಲದ ಜೀವನಶೈಲಿ ಹಾಗೂ ಮಳೆಯೊಂದಿಗಿನ ಕೃಷಿಕರ ಬಾಂದವ್ಯ ಎಲ್ಲವನ್ನು ಹಿಡಿದಿಟ್ಟು ಕೊಂಡಿರುವುದು ಕಥೆಗಳಲ್ಲಿನ ವಿಶಿಷ್ಟ. ಪುಸ್ತಕ ಓದುಗರಿಗೆ ಕಥಾಸಕ್ತರಿಗೆ ಖಂಡಿತ ಈ ಕಥಾ ಸಂಕಲನ ನೀರಸವೆನಿಸದೇ ಓದಿಸಿಕೊಳ್ಳುತ್ತದೆ.
ವಿಮರ್ಶಕರು: ಶ್ರೀಮತಿ ಸುಧಾರಾಣಿ ನಾಯ್ಕ
ಸಿದ್ದಾಪುರ.
ಪುಸ್ತಕಕ್ಕಾಗಿ ಸಂಪರ್ಕಿಸಿ.
ಸ್ವಸ್ತಿ ಪ್ರಕಾಶನ : 9483617879,9945546615
ಸುಧಾ ಎಂ 9353483724
8088255075
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್