- ಅಪ್ಪನೇ ಬದುಕಿನ ಹೀರೋ! - ಜೂನ್ 19, 2022
- ಅಸ್ಮಿತೆಯ ಹಣತೆ - ಆಗಸ್ಟ್ 15, 2021
ನಮ್ಮ ತಂದೆಯನ್ನು ನಾವು ಕರೆಯುತ್ತಿದ್ದುದು ಅಣ್ಣ ಎಂದು. ಅವರ ಬಗ್ಗೆ ಬರೆಯಬೇಕೆಂದರೆ ಏನು ಬರೆಯುವುದು. ಎಷ್ಟು ಬರೆದರೂ ಅದು ಸಾಗರದಲ್ಲಿನ ಬೊಗಸೆ ನೀರಿನಷ್ಟೇ. ಕಣ ಕಣದಲ್ಲೂ ಅಣು ಅಣುವಿನಲ್ಲೂ ಅವರದೇ ನೆನಪು ತುಂಬಿರುವಾಗ ಏನನ್ನಾದರೂ ಬರೆಯುತ್ತೇನೆ ಅಂದುಕೊಂಡರೆ ಅದು ಬರೀ ಕ್ಲೀಷೆಯಾಗಬಹುದೇನೋ ಎಂಬ ಭಯ. ಪ್ರತಿ ಹೆಣ್ಣು ಮಗುವಿಗೂ ಅವಳ ಅಪ್ಪನೇ ಬದುಕಿನ ಹೀರೋ ಎಂದರೆ ತಪ್ಪಾಗಲಾರದು. ನನಗೂ ಹಾಗೇ.
ಚಿಕ್ಕಂದಿನಿಂದ ಅಪ್ಪ ಎಂಬ ಈ ಅದ್ಭುತ ನನ್ನ ಕಣ್ಣ ಮುಂದೆ ಮಾಯಾ ಲೋಕವನ್ನೇ ಬಿಚ್ಚಿಟ್ಟ ಮಾಂತ್ರಿಕ.ಅ ಆ ಇ ಈ, ಎ ಬಿ ಸಿ ಡಿ ಇಂದ ಹಿಡಿದು ಬಾಳಿನೆಲ್ಲಾ ಗಹನ ವಿಷಯಗಳಿಗೆಲ್ಲಾ ಅವರೇ ನನ್ನ ಶಿಕ್ಷಕˌಬೀಜಗಣಿತದಿಂದ ಹಿಡಿದು ಬೈರಪ್ಪರವರೆಗೂˌಕುವೆಂಪು ರಾಮಾಯಣ ದರ್ಶನಂ ನಿಂದ ಹಿಡಿದು ಗುಲ್ಜಾರರ ಗಜಲ್ ವರೆಗಿನ ದಾರಿಯ ಮಾರ್ಗದರ್ಶಕ. ಜೀವನದ ಪ್ರತಿಯೊಂದು ವಿಷಯಗಳನ್ನು ಆಸ್ವಾದಿಸುತ್ತಿದ್ದ ಪರಿˌ ಮತ್ತದೇ ಕಲೆಯನ್ನು ನಾವು ಮೂವರು ಜನ ಅಕ್ಕ ತಂಗಿಯರಲ್ಲೂ ಬೆಳೆಸಿದ ರೀತಿ ಅನನ್ಯ. ಮೂರೂ ಹೆಣ್ಣೇ? ಎಂದು ಮೂಗು ಮುರಿದವರ ಮುಂದೆ ನನ್ನ ಮೂರೂ ಮಕ್ಕಳು ಮೂರು ಮುತ್ತುಗಳು ಎಂದು ಹೇಳಿ ಅಂತೇ ಬೆಳೆಸಿದ ಮಹಾನ್ ವ್ಯಕ್ತಿ ನನ್ನಪ್ಪ. ನನ್ನಲ್ಲಿನ ಸಾಹಿತ್ಯಾಸಕ್ತಿ ನನ್ನಪ್ಪನಿತ್ತ ವರವೇ. ಇಂದು ಅವರಿದ್ದಿದ್ದರೆ ಈ ಸಾಹಿತ್ಯಿಕ ಬಳಗಗಳಲ್ಲಿ ಮತ್ತು ಅಡುಗೆ ಗುಂಪುಗಳಲ್ಲಿ ಆಸಕ್ತಿ ವಹಿಸಿ ಹೆಚ್ಚಿನ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದ್ದರೇನೋ. ಪದಬಂಧಗಳನ್ನು ಬಿಡಿಸಲೆಂದೇ ಭಾನುವಾರದ ದಿನ ಹೆಚ್ಚಿನ ಪತ್ರಿಕೆಗಳನ್ನು ತರಿಸಿ ನಮ್ಮಲ್ಲಿ ಆ ಹುಚ್ಚನ್ನು ತುಂಬಿದರು. ಬದುಕಿನಲ್ಲಿ ಹಣವೊಂದೇ ಮುಖ್ಯವಲ್ಲˌ ಸಂಬಂಧಗಳು ಮೌಲ್ಯಗಳು ಆದರ್ಶಗಳು ಮುಖ್ಯ ಎಂದು ನಂಬಿˌ ನಡೆದು ನಮ್ಮಲ್ಲೂ ಅದೇ ಮನೋಭಾವ ತುಂಬಿದರು. ಇಂದು ಜೀವನದಲ್ಲಿ ನಾವೇನಾದರೂ ಯಶಸ್ಸು ಕಂಡಿದ್ದರೆ ಅದಕ್ಕೆಲ್ಲಾ ನನ್ನ ಅಪ್ಪ ಚಿಕ್ಕಂದಿನಲ್ಲಿ ಕಲಿಸಿದ ಪಾಠಗಳೇ ಕಾರಣ. ಇಂದಿನ ವ್ಯಕ್ತಿತ್ವ ವಿಕಸನ ಲೇಖನಗಳಲ್ಲಿ ಬರಹಗಳಲ್ಲಿ ಕಾಣಬರುವ ಎಷ್ಟೋ ವಿಷಯಗಳನ್ನು (ಉದಾಹರಣೆಗೆ ಥಿಂಕ್ ಔಟ್ ಆಫ್ ದಿ ಬಾಕ್ಸ್ ಕಾನ್ಸೆಪ್ಟ್) ನಮ್ಮಪ್ಪ ಚಿಕ್ಕಂದಿನಲ್ಲೇ ಹೇಳಿದ್ದ ನೆನಪು. ಇನ್ನು ಅವರ ನಳಪಾಕವಂತೂ ಮರೆಯಲೇ ಸಾಧ್ಯವಿಲ್ಲ. ಪ್ರೀತಿಯಿಂದ ನಮ್ಮಿಷ್ಪದ ತಿಂಡಿಗಳನ್ನು ಮಾಡಿಕೊಡುತ್ತಿದ್ದ ಮಮತೆ ಮರೆಯಲು ಸಾಧ್ಯವೇ?ಮಂಗಳೂರು ಬಜ್ಜಿಯಂತೂ ಅವರ ಸಿಗ್ನೇಚರ್ ಡಿಶ್ ಆಗಿ ಆಪ್ತವಲಯದಲ್ಲೆಲ್ಲಾ ಪ್ರಖ್ಯಾತಿ ಹೊಂದಿತ್ತು.
ನೀವು ತೋರಿಸಿದ ಪರಾನುಭೂತಿ ಪರರ ಕಷ್ಟದ ಕಡೆಗೆ ಸಂಕಟದ ಕಡೆಗೆ ಮಿಡಿಯುವ ಮನಸ್ಸು ಜೀವನದುದ್ದಕ್ಕೂ ನಮಗೆ ಬೆಂಗಾವಲಾಗಿ ಕಾದಿದೆ. ನೀವು ಬಿತ್ತಿದ ಅಕ್ಷರ ಪ್ರೀತಿಯ ಬೀಜ ಈಗ ಹೆಮ್ಮರವಾಗಿದೆ. ಆದರೆ ಫಲ ಕಾಣುವ ಮೊದಲೇ ಕಾಲನ ಕರೆಗೆ ನೀವು ಹೋಗುತ್ತಿದ್ದುದು ಮಾತ್ರ ಎಂದಿಗೂ ಅಳಿಸಲಾಗದ ವಿಷಾದದ ಬರಹ.
ನಿಮ್ಮ ಬಗ್ಗೆ ಏನೆಂದು ಬರೆಯಲಿ ಹೇಗೆಂದು ಬರೆಯಲಿ? ಬರೆಯುವಾಗಲೆಲ್ಲಾ ಕಣ್ಣಂಚು ಆರ್ದ್ರವಾಗುತ್ತದೆ, ಕಣ್ಣೀರ ಹನಿಗಳಲ್ಲಿ ಅಕ್ಷರಗಳು ಮಂಜಾಗುತ್ತವೆ. ಅಕ್ಷರ ತಿದ್ದಿಸಿದಾಗಿನಿಂದ ಹಿಡಿದು ಅಧ್ಯಾತ್ಮದ ಬೋಧೆಯವರೆಗಿನ ಗುರುವೆಂದೇ? ಜೀವನದ ಪ್ರತಿ ಹೆಜ್ಜೆಯಲ್ಲೂ ಕೈಹಿಡಿದು ನಡೆಸಿದ ಮಾರ್ಗದರ್ಶಿಯೆಂದೇ? ಈಗಲೂ ಮೇಲಿಂದ ನಮ್ಮ ಕಷ್ಟ ಸುಖಗಳನ್ನು ನೋಡಿ ನಲಿವಲ್ಲಿ ಸಂತೋಷಿಸಿ ನೋವಿಗೆ ಧೈರ್ಯತುಂಬಿ ದಾರಿ ತೋರುತ್ತಿರುವ ಆ ದೇವರ ಪ್ರತಿರೂಪವೆಂದೇ… ಶಬ್ದಗಳು ಅಸಮರ್ಥ ಪದಗಳು ಅಸಹಾಯಕ ಭಾವವೊಂದೇ ಪ್ರಾಧಾನ್ಯ ಅನುಭಾವವಷ್ಟೇ ಶಾಶ್ವತ.
ಅಣ್ಣˌ ನೀವಿಂದು ನಮ್ಮೊಂದಿಗೆ ಭೌತಿಕವಾಗಿ ಇರದಿದ್ದರೂ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿದ್ದೀರಿ. ಸಂತಸದ ಸಂಧರ್ಭಗಳಲ್ಲಿ ನಿಮ್ಮ ನೆನೆದು ಕಣ್ಣಂಚು ಆರ್ದ್ರ. ದುಃಖದ ವಿಷಯಗಳನ್ನಂತೂ ನಿಮ್ಮೊಡನೆ ಹಂಚಿಕೊಳ್ಳುತ್ತಾ ಕಂಬನಿ. ಮುಂದೆಲ್ಲಾ ಜನ್ಮಗಳಲ್ಲೂ ನೀವೇ ನನ್ನ ಅಪ್ಪನಾಗಬೇಕು. ಇಲ್ಲವೇ ನಾ ನಿಮಗೆ ಅಮ್ಮನಾಗಿ ಈ ಜನ್ಮದ ಋಣಭಾರ ಕಡಿಮೆ ಮಾಡಿಕೊಳ್ಳಬೇಕು. ಅದಕ್ಕೇ ಅಣ್ಣಾˌ ಸಾವೆಂದರೆ ನನಗೆ ಅಂಜಿಕೆಯಿಲ್ಲ. ಏಕೆಂದರೆ ಆಗ ನಾನು ಮತ್ತೆ ನಿಮ್ಮನ್ನು ಭೇಟಿ ಆಗಬಹುದಲ್ಲಾ!
ಅಮ್ಮ ಅಪ್ಪ ಬದುಕಿನ ಪ್ರಮುಖ ಪಾತ್ರಗಳು. ಅಮ್ಮ ಭೂಮಿತಾಯಿಯಂತಿನ ಸಹನೆಯ ಒಡಲಾದರೆ ಅಪ್ಪ ಅಂತಃಕರಣದ ಕಾಳಜಿಯ ಕಡಲು. ಅಪ್ಪನೆಂದರೆ ಅದ್ಬುತ! ಅಪ್ಪನೆಂದರೆ ಆಕಾಶ. ಈ ಆಕಾಶದ ಹಂದರದಡಿ ಬಾಲ್ಯ ನಿಶ್ಚಿಂತ, ನಿರ್ಭೀತ, ಸುಲಲಿತ . ಅಷ್ಟಲ್ಲದೇ ನಮ್ಮ ಜಾನಪದರು ಹೀಗೆಂದಾರೇ?
“ತಂದೀಯಾ ನೆನೆದಾರೆ ತಂಗಳ ಬಿಸಿಯಾಯ್ತು
ಹಡೆದವ್ವ ನಿನ್ನ ತಾಯಿ ಗಂಗವ್ವ ನೆನೆದರೆ
ಮಾಸಿದ ತಲೆಯು ಮಡಿಯಾಯ್ತು”
ತಮ್ಮ ಮಕ್ಕಳ ಯಶಸ್ಸಿನಲ್ಲಿ ತಮ್ಮ ಜೀವನದ ಸಾಫಲ್ಯ ಕಾಣಲು ಅಪ್ಪನ ಎನ್ನುವ ಭಾವಋಷಿಗೆ ರಸಋಷಿ ಕುವೆಂಪು ಅವರ ಈ ನುಡಿಗಳು ಸಲ್ಲುವ ಗೌರವವೇ ತಾನೆ?
“ನೀ ಕಲಿಸಿದುಲಿಯನ್ನೆ ನಾನುಲಿಯಲೊಮ್ಮೊಮ್ಮೆ
ನನಗೆ ಹೆಮ್ಮೆ
ರವಿಯ ಮರುಬಿಂಬಿಸುವ ಕನ್ನಡಿಗೆ ನನ್ನಂತೆ ಬಿಂಕವಂತೆ”
~ಕುವೆಂಪು
ಅಮ್ಮನ ಸೀರೆ ಮಡಚೋಕಾಗಲ್ಲ ಅಪ್ಪನ ದುಡ್ಡು ಎಣಿಸೋಕಾಗಲ್ಲ” ಎಂಬ ಅಲಂಕಾರದಂತೆಯೇ ಅಪ್ಪ ಅಮ್ಮನ ಬಗ್ಗೆ ಮನದಲ್ಲಿ ಮಡುಗಟ್ಟಿದ ಆಪ್ತ ಭಾವಗಳನ್ನೆಲ್ಲಾ ಶಬ್ದಕ್ಕಿಳಿಸಲಾಗದ ಅಸಹಾಯಕತನ ಆರ್ತತೆಯನ್ನು ತಂದೊಡ್ಡುತ್ತದೆ, ಆರ್ದ್ರರನ್ನಾಗಿಸುತ್ತದೆ. ಆ ಹಪಹಪಿ ಸ್ವಲ್ಪವಾದರೂ ಬರೆಯುವ ಮೂಲಕ, ಹೀಗೆ ಬರೆದವುಗಳನ್ನು ಓದುವ ಮೂಲಕ ನೀಗಿಸಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳೋಣ.
ತೆಲುಗು ಮೂಲದ ಅನುವಾದದ ಕವಿತೆಯ ಕಡೆಯ ಸಾಲುಗಳು ನಿಮ್ಮ ಓದಿಗಾಗಿ
“ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ
ಅವರೇ ನಮ್ಮೆಲ್ಲರ ಬೆನ್ನೆಲುಬು
ಬೆನ್ನೆಲುಬು ಹಿಂದಿರುವ ನಾವೆಲ್ಲರೂ ಬೆಟ್ಟದ
ಹಾಗೆ ನಿಂತಿರುವುದು
ಆದ್ದರಿಂದಲೇ ಏನೋ ಅಪ್ಪಾ ಹಿಂದೆಯೇ ಉಳಿದುಬಿಟ್ಟ”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್