- ಅಭಿಮುಖ: ಕನ್ನಡ ವಿಮರ್ಶಾ ಕ್ಷೇತ್ರದ ಆಳ-ಅಗಲಗಳ ವಿಸ್ತರಣೆ - ಸೆಪ್ಟೆಂಬರ್ 10, 2025
- ಕೆಂಡದ ನೆರಳು - ಫೆಬ್ರುವರಿ 18, 2025
- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ನಾಡಿನ ಪ್ರಸಿದ್ಧ ಕವಿ, ಕಥೆಗಾರ, ಅನುವಾದಕ ಮತ್ತು ವಿಮರ್ಶಕರು. ಅವರು ಕಥೆ, ಕಾವ್ಯ, ವ್ಯಕ್ತಿಚಿತ್ರಣ, ಜೀವನ ಚರಿತ್ರೆ, ಸಂಪಾದನೆ, ವಿಮರ್ಶೆ ಮತ್ತು ಅನುವಾದಗಳೂ ಸೇರಿದಂತೆ ಎಂಬತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಬರೆಯುತ್ತ, ಅನುವಾದಿಸುತ್ತ ಬಂದಿದ್ದು ನಮ್ಮ ಭಾವ ಮತ್ತು ಬೌದ್ಧಿಕ ಜಗತ್ತನ್ನು ಅರಳಿಸುತ್ತಾ ಬಂದಿದ್ದಾರೆ.


‘ಅಭಿಮುಖ’ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಹದಿನೈದನೇ ವಿಮರ್ಶಾ ಲೇಖನಗಳ ಸಂಕಲನ. ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಇಪ್ಪತ್ತೇಳು ವಿಮರ್ಶಾ ಲೇಖನಗಳು ಈ ಸಂಕಲನದಲ್ಲಿವೆ. ೧೯೭೭ರಿಂದ ೨೦೧೩ರ ಕಾಲಾವಧಿಯಲ್ಲಿ ಕಾವ್ಯ, ನಾಟಕ ಮತ್ತು ವಿಮರ್ಶೆ ಮುಂತಾದ ಸಾಹಿತ್ಯ ಕೃತಿಗಳನ್ನು ಕುರಿತು ಬರೆದ ಲೇಖನಗಳಲ್ಲಿ ಮತ್ತು ಮುನ್ನುಡಿಗಳಲ್ಲಿ ಕೆಲವನ್ನು ಆಯ್ದು ಈಗ ಒತ್ತಟ್ಟಿಗೆ ಸಂಕಲನಗೊoಡು ‘ಅಭಿಮುಖ’ದಲ್ಲಿ (೨೦೧೩) ಪ್ರಕಟವಾಗಿವೆ. ಪಟ್ಟಣಶೆಟ್ಟಿಯವರು ಈ ಲೇಖನಗಳನ್ನು ಮುನ್ನುಡಿ, ವಿಚಾರಸಂಕಿರಣ ಮುಂತಾದ ವಿವಿಧ ಸಂದರ್ಭಗಳ ಒತ್ತಾಸೆ ಕಾರಣವಾಗಿ ಬರೆದಿದ್ದಾರೆ. ಇವುಗಳಲ್ಲಿ ಹಲವು ಸಾಕಷ್ಟು ದೀರ್ಘವಾದವು. ಇದು ಅವರ ವಿಸ್ತಾರವಾದ ಓದು, ವ್ಯಾಪಕ ಜೀವನನಾನುಭವ, ಬರವಣಿಗೆಯ ಆಳ, ಆಸಕ್ತಿ ಮತ್ತು ವ್ಯಾಪ್ತಿಯನ್ನು ಪ್ರತಿನಿಧಿಸುವ ಕೃತಿ. ವಿಮರ್ಶೆಗೆ ಅಗತ್ಯವಾದ ಉತ್ತಮ ಓದನ್ನು ಪಟ್ಟಣಶೆಟ್ಟಿ ಹೊಂದಿದ್ದಾರೆ ಎಂಬುದನ್ನು ಇಲ್ಲಿನ ಲೇಖನಗಳು ಪ್ರತಿಫಲಿಸುವಂತಿವೆ. ಈ ಸಂಕಲನದಲ್ಲಿ ಹಿರಿಯ, ಸಮಾನ ವಯಸ್ಕರ ಹಾಗೂ ಕಿರಿಯ ಸಾಹಿತಿಗಳ ಕಾವ್ಯ ಮತ್ತು ನಾಟಕಗಳಿಗೆ ಬರೆದ ಇಪ್ಪತ್ತೆರಡು ವಿಮರ್ಶಾತ್ಮಕ ಮುನ್ನುಡಿಗಳಿವೆ. ಇನ್ನುಳಿದ ಐದು ವಿದ್ವತ್ಪೂರ್ಣ ಲೇಖನಗಳನ್ನು ವಿಚಾರ ಸಂಕಿರಣಗಳಿಗಾಗಿ ಬರೆದಿದ್ದಾರೆ. ಲೇಖಕರು ಅವು ಪ್ರಕಟಗೊಂಡ ಸಂದರ್ಭ ಮತ್ತು ಗ್ರಂಥದ ವಿವರಗಳನ್ನು ಅಡಿಟಿಪ್ಪಣಿಗಳಲ್ಲಿ ನಮೂದಿಸಿದ್ದಾರೆ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕಾವ್ಯದಿಂದ ಪ್ರಭಾವಿತರಾದ ಗದ್ಯ ಸಾಹಿತ್ಯಕ್ಕೆ ಒಲಿದಿರುವ ವಿಮರ್ಶಕ. ಪ್ರಸಿದ್ಧ ಮತ್ತು ಹಿರಿಯ ಬರಹಗಾರರ ಬಗ್ಗೆ ಬರೆದಷ್ಟೇ ಮುತುವರ್ಜಿ ಮತ್ತು ಪ್ರೀತಿಯಿಂದ ಹೊಸಪೀಳಿಗೆಯ ಲೇಖಕರ ಕೃತಿಗಳ ಬಗ್ಗೆಯೂ ಬರೆಯುವ ಅಪರೂಪದ ವಿಮರ್ಶಕರು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ. ಈ ಕೃತಿ ಅವರ ಬರಹಗಳ ಸಹಜ ಗುಣ. ಆದರೆ ಅದು ಸಾರಾಂಶ ಹೇಳುವುದಲ್ಲ. ಅವರ ಗ್ರಹಿಕೆಯೇ ವಿಶ್ಲೇಷಣಾತ್ಮಕ. ತಾವು ಕಾಣುವಂತೆ ಸಾಹಿತ್ಯ ಕೃತಿಯನ್ನು ಅವರು ಪುನಃ ಕಟ್ಟುತ್ತಾರೆ. ಸಾರಾಂಶ ನೀಡಿ ನಂತರ ವಿವರಿಸುವ ಸಾಮಾನ್ಯ ವಿಮರ್ಶಾ ಕ್ರಮಕ್ಕಿಂತ ಇದು ಸ್ವಲ್ಪ ಭಿನ್ನ. ಒಂದು ರೀತಿಯಲ್ಲಿ ಅವರದ್ದು ನವ್ಯ ವಿಮರ್ಶಾ ಪ್ರಜ್ಞೆಯ ಮುಂದುವರಿಕೆ. ಆದರೆ ಅವರ ಕೃತಿ ನಿಷ್ಠತೆ ಹೊರಗಿನ ಅಧ್ಯಯನ ಹಾಗೂ ಅವಲೋಕನಗಳ ಹೊಸ ಪ್ರಜ್ಞೆಯ ಸಂಯೋಗದಿoದ ಬೆಳೆಯುತ್ತದೆ. ಪಟ್ಟಣಶೆಟ್ಟಿಯವರಿಗೆ ಸಾಹಿತ್ಯ ಕೃತಿಗಳ ಓದೆಂದರೆ ಮನುಷ್ಯರ ಬಗ್ಗೆ ಮತ್ತು ಸಮಾಜದ ಬಗ್ಗೆ ಅರಿತುಕೊಳ್ಳುವುದು. ತಾವು ಅರಿತುದನ್ನು ಅವುಗಳ ವಿಮರ್ಶೆಯ ಮೂಲಕ ಎಲ್ಲರಿಗೂ ಹಂಚುವ ಪ್ರಯತ್ನವಿದು. ಅವರು ಇಲ್ಲಿ ಯಾವುದೇ ಸಿದ್ಧಾಂತಪರವಾದ ವಿಮರ್ಶೆಯನ್ನು ಮಾಡಿಲ್ಲ; ಬದುಕಿನ ಒಳವಿವರಗಳನ್ನು ಶುದ್ಧ ಮಾನವೀಯ ನೆಲೆಯಲ್ಲಿ ನಿಂತು ನೋಡಿದ್ದಾರೆ. ವಿಚಾರಗಳ ಜಗತ್ತಿನಿಂದ ನಿಜ ಜೀವನಕ್ಕೆ ಕಾಲಿಡುವ ಪರಿ ಇಲ್ಲಿಯ ವಿಮರ್ಶೆ.
ಈ ಕೃತಿಯಲ್ಲಿ ‘ಸಮಗ್ರ ಕಾವ್ಯ: ಸಾಲಿ ರಾಮಚಂದ್ರರಾಯ’, ‘ಮೇಘದೂತ: ಸಾಲಿ ರಾಮಚಂದ್ರರಾಯ’, ‘ಉದ್ಘಾಟನೆ: ಸುಮತೀಂದ್ರ ನಾಡಿಗ’, ‘ದೆವ್ವದ ಜೊತೆ ಮಾತುಕಥೆ: ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ’, ‘ಗಾಂಧೀಚರಿತಮಾನಸ: ಮ. ಸು. ಕೃಷ್ಣಮೂರ್ತಿ’, ‘ನನ್ನ ಪ್ರೀತಿಯ ಕವಿತೆ: ಎಸ್. ಜಿ. ಸ್ವಾಮಿ’, ‘ಮದಿರೆ ಮಂದಿರ: ಎಸ್. ಜಿ. ಸ್ವಾಮಿ’, ‘ಒಲವ ಋಣಭಾರ ಹೊತ್ತು: ಚಿದಾನಂದ ಕಮ್ಮಾರ’, ‘ನಮ್ಮ ನಮ್ಮಲ್ಲಿ ಮಾತ್ರ: ಮಾರ್ಕಂಡಪುರ ಶ್ರೀನಿವಾಸ’, ‘ಸಮಗ್ರ ನಾಟಕಗಳು: ಸಿದ್ಧಯ್ಯ ಪುರಾಣಿಕ’, ‘ಶ್ರೀಕೃಷ್ಣ ಗಾರುಡಿ: ಪುಟ್ಟರಾಜ ಗವಾಯಿ’, ‘ರಾಮಾಯಣ ದೃಶ್ಯಾವಳಿ: ಬಿ. ಎನ್. ಮಳಿಗಿ’, ‘ಗಾಂಧೀ ವಿರುದ್ಧ ಗಾಂಧೀ: ಡಿ. ಎಸ್. ಚೌಗಲೆ’, ‘ಬೆಳಗು: ಎಸ್. ಎಸ್. ಸಂಗೊಳ್ಳಿ’, ಖಗಾಯಣ: ಮ. ಸು. ಕೃಷ್ಣಮೂರ್ತಿ’, ‘ಮೈಥಿಲೀಶರಣ ಗುಪ್ತ: ತಿಪ್ಪೇಸ್ವಾಮಿ’ ಮುಂತಾದ ಕವಿಗಳ-ಲೇಖಕರ ಸಾಹಿತ್ಯ ಕೃತಿಗಳಿಗೆ ವಿಮರ್ಶಾತ್ಮಕ ಮುನ್ನುಡಿಗಳನ್ನು ಬರೆದಿದ್ದಾರೆ. ವಿವರಣೆ, ವಿಶ್ಲೇಷಣೆ, ವಿಮರ್ಶೆ ಮತ್ತು ವ್ಯಾಖ್ಯಾನಗಳ ಮಾದರಿಯಲ್ಲಿರುವ ಈ ಲೇಖನಗಳು ಆಯಾ ಕವಿಗಳ-ಲೇಖಕರ ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಉಪಯುಕ್ತ ಪ್ರವೇಶವನ್ನು ಕಟ್ಟಿಕೊಡುತ್ತವೆ. ಒಂದು ಕೃತಿಗೆ ಮುನ್ನುಡಿಯ ಅಗತ್ಯವೇನು? ಎಂಬ ಪ್ರಶ್ನೆಗೆ ಅನೇಕ ಉತ್ತರಗಳು ಸಿಗುತ್ತವೆ. ಪ್ರತಿಷ್ಠಿತ ಲೇಖಕರ ಮುನ್ನುಡಿಗಳಿಂದ ಕೃತಿ ಹೆಚ್ಚು ಓದುಗರ ಗಮನಕ್ಕೆ ಬಂದು ಅದರ ಘನತೆ ಹೆಚ್ಚುತ್ತದೆ ಎಂದು ಯುವ ಲೇಖಕರು ಭಾವಿಸುತ್ತಾರೆ. ಕೃತಿಯ ಓದಿಗೆ ಮುನ್ನುಡಿ ಒಂದು ಸೂಕ್ಷ್ಮ ಪ್ರವೇಶವನ್ನು ಕಲ್ಪಿಸಿ ಆ ಮೂಲಕ ಓದುಗರಿಗೆ ನೆರವಾಗುತ್ತದೆ. ಆದರೆ, ಮುನ್ನುಡಿಗಳು ಗಂಭೀರ ವಿಮರ್ಶೆಗಳೂ ಆಗಬಹುದು ಮತ್ತು ಒಂದು ಕಾಲಘಟ್ಟದ ಸಾಹಿತ್ಯಕ ಇತಿಹಾಸವನ್ನು ಸ್ಥೂಲವಾಗಿ ಕಟ್ಟಬಹುದು ಎಂಬುದನ್ನು ಈ ಸಂಕಲನದ ಮುನ್ನುಡಿಗಳು ದರ್ಶಿಸುತ್ತವೆ.
ಗೋಪಾಲಕೃಷ್ಣ ಅಡಿಗ, ದೇ. ಜವರೇಗೌಡ, ಜಿ. ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಅನಂತಮೂರ್ತಿ, ಮಾಧವ ಕುಲಕರ್ಣಿಯವರು ಇಂತಹ ಹಲವು ಲೇಖಕರು ಅನೇಕ ಕೃತಿಗಳಿಗೆ ಮುನ್ನುಡಿ ಬರೆದಿದ್ದಾರೆ. ನಂತರ ಅವರು ತಮ್ಮ ಮುನ್ನುಡಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಂತಹ ವ್ಯಕ್ತಿಗಳ ಸಾಲಿಗೆ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೂಡ ಸಹಜವಾಗಿ ಸೇರುತ್ತಾರೆ. ಪಟ್ಟಣಶೆಟ್ಟಿಯವರು ಮೆಚ್ಚುಗೆ ಮತ್ತು ವಸ್ತುನಿಷ್ಠ ವಿಮರ್ಶೆ ಇವೆರಡನ್ನೂ ಒಂದು ಆರೋಗ್ಯಪೂರ್ಣ ಹದದಲ್ಲಿ ಬೆರೆಸುತ್ತಾ ಬಂದಿರುವುದು ಈ ಸಂಕಲನದ ಓದುಗರಿಗೆ ಗೊತ್ತಾಗುತ್ತದೆ. ಅವರು ಕಾವ್ಯಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವುದರಿಂದ ಮುನ್ನುಡಿಗಳಲ್ಲೂ ಕೇವಲ ಪ್ರಶಂಸೆಯಿoದ ತೃಪ್ತರಾಗುವುದಿಲ್ಲ. ತಮ್ಮ ಮುನ್ನುಡಿಗಳನ್ನು ಪಟ್ಟಣಶೆಟ್ಟಿಯವರು ವಿಭಿನ್ನ ಕಾಲಘಟ್ಟಗಳ ಸಾಹಿತ್ಯಕ ವಾತಾವರಣವನ್ನು ದಾಖಲಿಸಲು ಮತ್ತು ಕಾವ್ಯವೆಂಬುದರ ಸ್ವರೂಪದ ಕುರಿತು ಚಿಂತಿಸಲೂ ಉಪಯೋಗಿಸಿಕೊಂಡಿದ್ದು ಕಂಡುಬರುತ್ತದೆ.
ಪಟ್ಟಣಶೆಟ್ಟಿಯವರು ಹಲವಾರು ವಿಚಾರ ಸಂಕಿರಣಗಳಲ್ಲಿ ಮಂಡಿಸಿರುವ ಪ್ರಬಂಧಗಳಲ್ಲಿ ಒಂದು ಬಗೆಯ ಶಾಸ್ತ್ರಿಯವಾದ , ಅಕಾಡೆಮಿಕ್ ಸ್ವರೂಪ ವ್ಯಕ್ತವಾಗಿದೆ. ವಿ. ಕೃ. ಗೋಕಾಕ, ತಿಪ್ಪೇಸ್ವಾಮಿ ಮತ್ತು ಬೇಂದ್ರೆ ಅವರ ಕುರಿತ ಪ್ರಬಂಧಗಳಿಗೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ. ‘ಗೋಕಾಕರ ಕಾವ್ಯ: ನವೋದಯದಿಂದ ನವ್ಯದೆಡೆಗೆ’, ‘ದಾಂಪತ್ಯಗೀತ: ಸುಮತೀಂದ್ರ ನಾಡಿಗ’, ‘ಬೇಂದ್ರೆ ರಸಗ್ರಹಣ’, ‘ಕಬೀರ್ ಕಾವ್ಯ: ಕನ್ನಡ ಅನುವಾದ’ ಮತ್ತು ‘ಉರಿಯ ನಾಲಗೆ: ಕೀರ್ತಿನಾಥ ಕುರ್ತಕೋಟಿ’ಯವರ ಸಾಹಿತ್ಯ ಕೃತಿಗಳ ಕುರಿತ ವಿಮರ್ಶಾ ಲೇಖನಗಳಿವೆ. ಈ ಕೃತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ವಿಮರ್ಶಾಪ್ರಜ್ಞೆಗೆ ನಿದರ್ಶನ. ಸಾಹಿತ್ಯ ವಿಮರ್ಶಕನ ಸತ್ವಪರೀಕ್ಷೆಯಾಗುವುದು ಸಮಕಾಲೀನ ಸಾಹಿತ್ಯದೊಡನೆ ಮುಖಾಮುಖಿಯಾದಾಗ. ಪಟ್ಟಣಶೆಟ್ಟಿಯವರು ತಮ್ಮ ಕಾಲದ ಹಿರಿಯ, ಸಮವಯಸ್ಸಿನ ಲೇಖಕರನ್ನು ಕುರಿತು, ಬಿಡಿ ಕೃತಿಗಳನ್ನು ಕುರಿತು ಸಮೃದ್ಧವಾಗಿ ಬರೆದಿದ್ದಾರೆ. ಅವುಗಳ ಶಕ್ತಿ, ಮಿತಿ, ಮಹತ್ವವನ್ನು ನಿಖರವಾಗಿ, ಮುಕ್ತವಾಗಿ ತಮ್ಮ ವಿಮರ್ಶೆಗಳಲ್ಲಿ ಲೇಖಕರು ಗುರುತಿಸಿದ್ದಾರೆ; ಹಾಗೆಯೇ ಆಯಾ ಕವಿಗಳ ವಿಶಿಷ್ಟ ಗುಣ-ಲಕ್ಷಣಗಳನ್ನು ಮತ್ತು ಅವರ ಕಾವ್ಯಕ್ಕಿರುವ ನೆಲೆ-ಬೆಲೆಗಳನ್ನು ಚರ್ಚಿಸಿದ್ದಾರೆ. ಪಟ್ಟಣಶೆಟ್ಟಿಯವರು ತಮ್ಮ ತೀರ್ಮಾನಗಳನ್ನು ಯಾವುದೇ ಪೂರ್ವಾಗ್ರಹಗಳಿಗೆ ಎಡೆ ಇಲ್ಲದೆ, ಸ್ಪಷ್ಟವಾಗಿ ಹೇಳಿರುವುದು ಲೇಖಕರ ಬರಹಗಳಲ್ಲಿ ಎದ್ದುಕಾಣುವ ಅಂಶ. ಈ ಚರ್ಚೆಗಳಲ್ಲಿ ಅವರ ಕಾವ್ಯಪ್ರೀತಿ, ಗದ್ಯಪ್ರೀತಿ ಮತ್ತು ವಿಮರ್ಶಕ ಪ್ರತಿಭೆ ಹೊಸ ಪುಷ್ಟಿಯನ್ನು ಪಡೆದಿದೆ.
ಸಾಹಿತ್ಯ ಪ್ರೇಮಿ ಮತ್ತು ವಿಮರ್ಶಕ ಇಬ್ಬರಿಗೂ ಸಂತೋಷ ಕೊಡುವ ಮತ್ತು ಇಬ್ಬರನ್ನು ಚಿಂತನೆಗೆ ಹಚ್ಚುವ ಲೇಖನಗಳು ಈ ಸಂಕಲನದಲ್ಲಿವೆ. ನಾನು ಈ ಸಂಕಲನದಲ್ಲಿನ ಪ್ರತಿಯೊಂದು ಲೇಖನಗಳ ಬಗ್ಗೆ ದೀರ್ಘ ವಿವರಣೆ ಮತ್ತು ವಿಶ್ಲೇಷಣೆಗೆ ಇಳಿಯದೇ ಮೂರು ಲೇಖನಗಳ ಕುರಿತು ಓದುಗರಿಗೆ ಪರಿಚಯಿಸುತ್ತೇನೆ.
ಕನ್ನಡಿಗರ ವಿಸ್ಮೃತಿ ಮತ್ತು ನಿರ್ಲಕ್ಷ್ಯಕ್ಕೆ ಈಡಾಗಿದ್ದ ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯವನ್ನು ಪಟ್ಟಣಶೆಟ್ಟಿಯವರು ಸಂಪಾದಿಸಿ ಪ್ರಕಟಿಸಿದ್ದಾರೆ. ‘ಸಮಗ್ರ ಕಾವ್ಯ: ಸಾಲಿ ರಾಮಚಂದ್ರರಾಯ’ ಕೃತಿಗೆ ಅವರು ಬರೆದಿರುವ ಮುನ್ನುಡಿ ಹೆಚ್ಚು ಮೌಲಿಕವೂ, ಅರ್ಥಪೂರ್ಣವೂ ಆಗಿದೆ. ಅವರ ಈ ಮುನ್ನುಡಿಯಿಂದ ‘ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ’ವನ್ನು ಓದಬೇಕೆಂಬ ಪ್ರೇರಣೆ ಆಗುತ್ತದೆ. ಮನಸ್ಸು ಕಲಕುವಂತೆ ಮಾಡುವ ಕವಿಯ ಹಾಡುಗಳು ಮತ್ತು ಕವಿಯ ಜೀವನ ದರ್ಶನವನ್ನು ಚೆನ್ನಾಗಿ ಪರಿಚಯಿಸಲಾಗಿದೆ.
‘ಗೋಕಾಕರ ಕಾವ್ಯ: ನವೋದಯದಿಂದ ನವ್ಯದೆಡೆಗೆ’ ಲೇಖನದಲ್ಲಿ ಪಟ್ಟಣಶೆಟ್ಟಿಯವರು ವಿ. ಕೃ. ಗೋಕಾಕರ ಕಾವ್ಯದ ವಿಶೇಷತೆಗಳನ್ನು ಮತ್ತು ಅದು ಕನ್ನಡ ಕಾವ್ಯ ಜಗತ್ತಿನಲ್ಲಿ ಉಂಟುಮಾಡಿದ ಪರಿಣಾಮಗಳನ್ನು ಕುರಿತು ವಿಶ್ಲೇಷಿಸಿದ್ದಾರೆ.
ವಿಮರ್ಶಕರಾಗಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ವಿಧಾನವನ್ನು, ಮುಖ್ಯ ಕಾಳಜಿಗಳನ್ನೂ ಗುರುತಿಸಲು ಇಲ್ಲಿರುವ ಅತ್ಯುತ್ತಮ ಲೇಖನಗಳಲ್ಲಿ ಒಂದಾದ ‘ಬೇಂದ್ರೆ ರಸಗ್ರಹಣ’ ಲೇಖನವನ್ನು ಗಮನಿಸಬಹುದು. ಇದು ಬೇಂದ್ರೆ ಅವರ ಬದುಕು-ಸಾಹಿತ್ಯ ಸೃಷ್ಟಿಯನ್ನು ಕುರಿತದ್ದು. ಪಟ್ಟಣಶೆಟ್ಟಿಯವರಿಗೆ ಪರಂಪರೆಯಲ್ಲಿ ಬಹಳ ಆಸಕ್ತಿ. ಅವರು ಸಾಮಾನ್ಯವಾಗಿ ಯಾವುದೇ ಸಾಹಿತಿ ಅಥವಾ ಕಲಾವಿದನನ್ನು ಕುರಿತು ಬರೆಯುವಾಗ ಪರಂಪರೆಯೊಡನೆ ಅವನ ಸಂಬoಧವನ್ನು ಗಮನಿಸುತ್ತಾರೆ. ಇದಕ್ಕೆ ಕಾರಣವಿದೆ. ಲೇಖಕನ ಪರಂಪರೆಯನ್ನು ಗುರುತಿಸಿ ಅದರ ಒಳಗಿನಿಂದ ಬರೆಯುತ್ತಲೇ ಅದನ್ನು ಹಿಗ್ಗಿಸಬಹುದು ಇಲ್ಲವೇ ಮಾರ್ಪಡಿಸಬಹುದು. ಬೇಂದ್ರೆಯವರ ಕಾವ್ಯ ಮತ್ತು ಬದುಕಿನ ಕುರಿತು ಹಲವು ಒಳನೋಟಗಳನ್ನು ಕೊಡುವ ವಿಮರ್ಶೆಯನ್ನು ಬರೆದಿರುವ ಪಟ್ಟಣಶೆಟ್ಟಿಯವರು, “ಬೇಂದ್ರೆ ಕಾವ್ಯವನ್ನು ಅರಿಯುವಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳು, ಆತಂಕಗಳೇ ಜಾಸ್ತಿ ಇವೆ. ಬೇಂದ್ರೆ ಬಳಸಿದ ಭಾಷೆಯನ್ನು ಅರಿಯುವಲ್ಲಿ, ಅರ್ಥೈಸುವಲ್ಲಿ ಇವತ್ತಿನ ಕವಿಗಳು, ವಿಮರ್ಶಕರು ಅಷ್ಟು ಮನಸ್ಸು ಮಾಡುತ್ತಿಲ್ಲ. ಉತ್ತರ ಕರ್ನಾಟಕದ ನಿರಭಿಮಾನ, ನಿರ್ಲಕಶ್ಯ , ತಾತ್ಸಾರಗಳೂ ಬೇಂದ್ರೆಗೆ ಆತಂಕಗಳೇ. ಈ ಭಾಗದ ಅಧ್ಯಾಪಕರಲ್ಲಿ ಅವರ ಬಗ್ಗೆ ಬೆಳೆದಿರುವ ಅನಾಸಕ್ತಿ ಒಂದೆಡೆಯಾದರೆ ಬೇಂದ್ರೆ ರಚಿತ ಕವನ ಸಂಗ್ರಹಗಳು ಇತ್ತೀಚಿನ ವರ್ಷಗಳಲ್ಲಿ ಓದುಗರಿಗೆ ಲಭ್ಯವಾಗದಿರುವುದು ದೊಡ್ಡ ಆತಂಕ” ಎಂದು ಹೇಳಿದ್ದಾರೆ. (ಬೇಂದ್ರೆ ರಸಗ್ರಹಣ’ ಲೇಖನ, ಪುಟ-೧೨೭).
ಸಾಲಿ ರಾಮಚಂದ್ರರಾಯ, ಬೇಂದ್ರೆ, ವಿ. ಕೃ. ಗೋಕಾಕ, ಸುಮತೀಂದ್ರ ನಾಡಿಗ, ಮ. ಸು. ಕೃಷ್ಣಮೂರ್ತಿ, ಎಸ್. ಜಿ. ಸ್ವಾಮಿ, ಎನ್. ಎಸ್. ಲ ನಾರಾಯಣ ಭಟ್ಟ ಮುಂತಾದ ಕವಿಗಳ ಕಾವ್ಯದ ಬಗೆಗಿನ ಲೇಖನಗಳ ಮೊದಲ ಭಾಗದಲ್ಲಿ ಪೀಠಿಕೆಯಂತೆ ಪಟ್ಟಣಶೆಟ್ಟಿಯವರು ನೀಡುವ ಪ್ರವೇಶ ಅವರ ವಿಮರ್ಶಾ ಕ್ರಮಕ್ಕೆ ಉತ್ತಮ ಉದಾಹರಣೆ. ಅವರು ಯಾವುದೇ ಸಾಹಿತ್ಯ ಕೃತಿಯನ್ನು ವರ್ತಮಾನದಲ್ಲಿ ಮಾತ್ರ ಹುಟ್ಟಿ ನಿಜವಾಗುವಂತಹದ್ದು ಎಂದು ತಿಳಿದವರಲ್ಲ. ಭಾಷೆಯ ಮೂಲಕ ಹರಿದು ಬರುವ ಪರಂಪರೆಯ ಸಾತತ್ಯವನ್ನು ಅವರ ವಿಮರ್ಶೆ ಸದಾ ಗುರುತಿಸುತ್ತದೆ. ಈ ದೃಷ್ಟಿಯಿಂದ ಪಟ್ಟಣಶೆಟ್ಟಿಯವರು ಭಾರತೀಯ ಕಾವ್ಯ ಮೀಮಾಂಸೆಯ ಶಕ್ತಿಯನ್ನು ಗುರುತಿಸುತ್ತಾರೆ. ಕೃತಿಗಳ ವಿವರಣೆ, ವಿಶ್ಲೇಷಣೆ ಮತ್ತು ಮೌಲ್ಯಮಾಪನಗಳ ಜೊತೆಗೆ ಸಮಗ್ರ ಗ್ರಹಿಕೆಯಿಂದ ಸಾಹಿತ್ಯವನ್ನು ಓದುಗರಿಗೆ ಪೂರ್ವಗ್ರಹವಿಲ್ಲದೆ ಪರಿಚಯಸುವುದು ವಿಮರ್ಶಕನ ಜವಾಬ್ದಾರಿ ಎಂದು ಅವರು ತಿಳಿಯುತ್ತಾರೆ. ಕೃತಿಯೊಂದನ್ನು ಒಂದು ಭಾಷಿಕ ಆಕೃತಿ, ಒಂದು ಭಾಷಿಕ ಜಗತ್ತು, ಒಂದು ಅನನ್ಯ ರಚನೆ ಎಂದೂ ಭಾವಿಸಿಯೂ ಒಣ ಪ್ರಾಯೋಗಿಕ ವಿಮರ್ಶೆಯ ನೆಲೆಗಳಿಂದ ಪಟ್ಟಣಶೆಟ್ಟಿಯವರ ವಿಮರ್ಶೆ ತುಂಬ ದೂರದಲ್ಲಿದೆ. ಕೃತಿಯೊಂದರ ಸಾಲುಗಳನ್ನು ಚಪ್ಪರಿಸುತ್ತಲೇ ಅವುಗಳನ್ನು ಚರ್ಚೆಯ ಉನ್ನತ ಸ್ತರಗಳಿಗೆ ಒಯ್ಯುವಲ್ಲಿ, ಭಾಷೆ-ಸಾಹಿತ್ಯದ ಪ್ರಶ್ನೆಗಳನ್ನು ಒಟ್ಟಾರೆ ಸಂಸ್ಕೃತಿ-ರಾಜಕೀಯದ ಪ್ರಶ್ನೆಗಳಾಗಿಯೂ ಗ್ರಹಿಸುವಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಬರವಣಿಗೆಯ ಪ್ರಾಮುಖ್ಯ-ಪ್ರಸ್ತುತತೆಗಳಿರುವುದನ್ನು ಓದುಗರು ಗಮನಿಸಬಹುದು.
ಈ ಕೃತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ವೈಯಕ್ತಿಕ ಸಾಹಿತ್ಯ ಸಂದರ್ಭದಲ್ಲಿ ಗಮನಿಸಬಹುದಾದ ಕೃತಿಯಾಗಿರುವಂತೆ, ಕನ್ನಡ ವಿಚಾರ-ವಿಮರ್ಶಾ ಸಾಹಿತ್ಯಕ್ಕೂ ಸ್ವಾಗತಾರ್ಹ ಸೇರ್ಪಡೆಯಾಗಿದೆ. ಕನ್ನಡ ವಿಮರ್ಶಾ ಕ್ಷೇತ್ರದ ಆಳ-ಅಗಲಗಳನ್ನು ಸ್ವಲ್ಪಾದರೂ ವಿಸ್ತರಿಸಿದವರು ಸಿದ್ಧಲಿಂಗ ಪಟ್ಟಣಶೆಟ್ಟಿ ಎಂಬ ನಂಬುಗೆ ಯಾರಿಗಾದರೂ ಈ ಕೃತಿಯನ್ನು ಓದಿದಾಗ ಉಂಟಾಗುತ್ತದೆ. ಕನ್ನಡ ಸಾಹಿತ್ಯಾಸಕ್ತರು ಮತ್ತು ಸಾಹಿತ್ಯ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ ‘ಅಭಿಮುಖ’ ಎಂದು ಧಾರಾಳವಾಗಿ ಹೇಳಬಹುದು.
I am in fact grateful to the holder of this website who has shared
this fantastic article at at this place.