- ದೀಪಾವಳಿ - ಜೂನ್ 16, 2021
- ತೆರೆಯಲು ಮರೆತ ಪುಟಗಳ ನಡುವೆ.. - ಮೇ 1, 2021
- ಅಮ್ಮನಿಗೊಂದು ಸ್ಮಾರ್ಟ್ ಫೋನ್ - ಫೆಬ್ರುವರಿ 20, 2021
ಅಮ್ಮ ನನಗೊಂದು ಫೋನ್ ಕೊಡಿಸಿದ್ದಳು. ಕೆಂಪು ಬಣ್ಣದ ಡಯಲ್ ಫೋನ್! ಉಡುಪಿಯಲ್ಲಿ ಆಟಿಕೆಯ ಅಂಗಡಿಯೆಂಬ ಭೂಮಿಯ ಮೇಲಿನ ಮಾಯಲೋಕದಲ್ಲಿ ಇಷ್ಟಗಲ ಕಣ್ಣು ಬಾಯಿ ಬಿಟ್ಟುಕೊಂಡು ಕುಳಿತಿದ್ದ ನನ್ನೆದುರು ಎರೆಡು ಆಯ್ಕೆಗಳಿದ್ದವು: ಒಂದು- ವೃತ್ತಾಕಾರದ ಡಯಲ್ ನಲ್ಲಿ ಸೊನ್ನೆಯಿಂದ ಒಂಭತ್ತರ ತನಕ ಅಂಕೆಗಳಿರುವ ರೋಟರಿ ಫೋನ್. ಇನ್ನೊಂದು- ಗುಂಡಿ ಒತ್ತಿದೊಡನೆ “ಚಲೊ ಚಯ್ಯ ಚಯ್ಯ ಚಯ್ಯ…” ಎಂದು ಹಾಡು ಹೇಳುವ ವಾಕಿಟಾಕಿ! ಜೀವನದ ಅತ್ಯಂತ ನಿರ್ಣಾಯಕ ಘಟ್ಟಗಳಲ್ಲಿ ಒಂದಾದ(!) ಆ ಕ್ಷಣದಲ್ಲಿ ನಾನಂತೂ ಬ್ರಹ್ಮಾಂಡ ಗೊಂದಲದಲ್ಲಿ ಸಿಲುಕಿದ್ದೆ. ಅಫ್ ಕೋರ್ಸ್. ಪ್ರಪಂಚದ ಯಾವುದೇ ಬುದ್ಧಿವಂತ ಮಗುವಾದರೂ ಹಳೆಯ ಮಾದರಿ ರೋಟರಿ ಫೋನ್ ನ ಬದಲು ಹಾಡು ಹೇಳುವ ವಾಕಿಟಾಕಿಯನ್ನೇ ಆಯ್ದುಕೊಳ್ಳುತ್ತದೆ. “ಅದ್ನೇ ತಗ ಪುಟ್ಟೂ. ಚಂದ ಹಾಡೆಲ್ಲ ಹೇಳತ್ತೆ” ಎಂದು ಅಮ್ಮನೂ ಅದನ್ನೇ ಸಜೆಸ್ಟ್ ಮಾಡಿದ್ದಳು. ಆದರೆ, ತುಂಬಾ ಯೋಚಿಸುವವನಿಗೆ ಚಂಬೇ ಗತಿ ಎಂಬಂತೆ ನಾನು ಕೊನೆಗೂ ಕೆಂಬಣ್ಣದ ಡಯಲ್ ಫೋನನ್ನು ತೆಗೆದುಕೊಂಡೆ. ಬಾಲ್ಯದ ಇನ್ನಿತರ ಆಟಿಕೆಗಳಂತೆ ಆ ಡಯಲ್ ಫೋನೂ ಸಹಾ ಆರಂಭದ ಒಂದಷ್ಟು ದಿನಗಳಲ್ಲಿ ಆಟ, ಊಟ, ನಿದ್ರೆ ಹೀಗೆ ದಿನದ ಎಲ್ಲ ಹೊತ್ತಿನಲ್ಲೂ ನನ್ನ ಬಳಿಯಲೇ ಇರುತ್ತಿತ್ತು. ಇಡೀ ಊರಿನಲ್ಲೇ ಡಾಕ್ಟರ ಶಾಪೂ ಸೇರಿದಂತೆ ಕೆಲವರ ಮನೆಯಲ್ಲಿ ಮಾತ್ರ ಇದ್ದ ಆ ಫೋನಿನ ಮಾದರಿ ನನ್ನ ಬಳಿ ಇರುವುದು ನನಗೆ ದೊಡ್ಡ ಹೆಮ್ಮೆಯಾಗಿತ್ತು. ಅದರ ಡಯಲನ್ನು ತಿರುಗಿಸಿ ಈ ಲೋಕದ್ದೇ ಅಲ್ಲದ ಅದ್ಯಾವುದೋ ನಂಬರ್ ಗೆ ಕರೆ ಮಾಡಿ ‘ಹಲೋ… ನಾನು ಇನ್ಸ್ಪೆಕ್ಟರ್ ವಿಕ್ರಮ್’, ‘ಹಲೋ… ನಮ್ಮನೆಗೆ ಒಂದು ಕೆಜಿ ಮೈಲುತುತ್ತ ಕಳಿಸ್ರೀ’ ಎಂದು ಇನ್ನೂ ಮುಂತಾಗಿ ಏನೇನೋ ಮಾತನಾಡುವುದು ನನ್ನ ನೆಚ್ಚಿನ ಆಟವಾಯಿತು.
ಆದರೆ ಈ ಆಟ, ಹೆಮ್ಮೆ, ಸುಡುಗಾಡು ಸುಂಟೀಕೊಂಬುಗಳೆಲ್ಲ ಬಹಳ ಕಾಲ ಉಳಿಯಲಿಲ್ಲ. ಅದೊಂದು ಮಧ್ಯಾಹ್ನ ಪಕ್ಕದಲ್ಲೇ ಇದ್ದ ದೊಡ್ಡಪ್ಪನ ಮನೆಯಿಂದ ‘ಚಲೋ ಚಂಯ್ಯೋ ಚಂಯ್ಯೋ ಚಯ್ಯೋ..’ ಎಂಬ ವಾಕಿಟಾಕಿಯಯ ಹಾಡು ಕೇಳಿದ ಮರುಕ್ಷಣದಿಂದ ನನ್ನ ಕಣ್ಣು ಹೊಳೆಯತೊಡಗಿತ್ತು. ಅಂಗೈ ಗಾತ್ರ, ಕಡುಗಪ್ಪು ಬಣ್ಣ, ಪ್ರತಿಯೊಂದು ಬಟನ್ ಒತ್ತಿದಾಗಲೂ ಹೊಮ್ಮುವ ‘ನಯೆ ರಂಗ್ ರೂಪ್ ಕಾ ತೋತಾಯೇ(!)’ ಎಂಬ ಹಾಡು, ತಲೆಯ ಮೇಲೆ ಎಲ್ಲೀಡಿ ಬಲ್ಪ್ ಜೋಡಿಸಿರುವ ಚಿಕ್ಕ ಗಾಜಿನ ಕೋಲು.. ಇನ್ನು ಕೆಲವು ಬಟನ್ ಗಳಲ್ಲಂತೂ ಡಿಶ್ಕ್ಯಾಂ ಡಿಶ್ಕ್ಯಾಂ ಎಂಬ ಗುಂಡಿನ ಶಬ್ದ.. (ಅಂದರೆ ಆ ಫೋನಿನಿಂದ ಕೋವಿಯ ಆಟ ಕೂಡಾ ಆಡಬಹುದು!) ಇಷ್ಟೆಲ್ಲ ಅದ್ಭುತಗಳಿರುವ ಆ ವಾಕಿಟಾಕಿಯೆದುರು ಏನನ್ನೂ ಹಾಡದ, ಯಾವ ಗುಂಡನ್ನೂ ಹಾರಿಸದ ನನ್ನ ಫೋನು ಡಕೋಟದಂತೆ ಕಾಣಿಸದೆ ಮತ್ತಿನ್ನೇನು? ಹಾಗೆ ಅನ್ನಿಸಿದ ಮರುಕ್ಷಣವೇ ನಾನು ಅಮ್ಮನ ಎದುರು ನನ್ನ ಹೊಸ ಬೇಡಿಕೆಯ ಸಮೇತ ನಿಂತಿದ್ದೆ:
“ನಂಗೆ ಈ ಫೋನು ಬೇಡ. ಅದಮ್ಯನ ಹತ್ರ ಇದ್ಯಲ ಹಂಗಿದ್ದೇ ಹಾಡು ಹೇಳೋ, ಗುಂಡು ಹೊಡೆಯೋ ಫೋನು ಬೇಕು!”
ಎಂದಿನಂತೆ ನನ್ನ ಹೊಸ ಡಿಮ್ಯಾಂಡ್ ಒಂದಷ್ಟು ಬೈಗುಳಗಳಿಗೆ ಒಳಗಾಯಿತು. ಇದುವರೆಗೆ ನಾನು ಹಾಳುಗೆಡವಿದ ಆಟಿಕೆಗಳ ಹೆಸರೆಲ್ಲ ಪ್ರಸ್ತಾಪವಾದವು. (ಹಠ ಹೆಚ್ಚಾದಾಗ ಒಂದೆರೆಡು ಒದೆ ತಿಂದಿರಲಿಕ್ಕೂ ಸಾಕು) ಕೊನೆಗೆ ನನ್ನ ಪ್ರಯತ್ನಗಳೆಲ್ಲ ಅಮ್ಮ ತಂದ ದಾಸವಾಳ ಗಿಡದ ಬರಲಿನ ಮುಂದೆ ‘ಆ.. ಊ.. ಹೊದೀಬೇದ್ವೇ…’ ಎಂಬ ಅಳುವಾಗಿ ಪರಿವರ್ತನೆಯಾಗಿ ಕೊನೆಗೆ ‘ಮುಂದಿನ್ಸಲ ಉಡುಪಿಗೆ ಹೋದಾಗ ಹಂಗಿದ್ದೇ ಫೋನು ತಗಂತೀನಿ’ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುವಲ್ಲಿಗೆ ಈ ಕೋಲಾಹಲವೆಲ್ಲ ಸಮಾಪ್ತಿಯಾಯ್ತು. ಹೀಗೆ ನನ್ನ ಕಡೆಗಣಿಕೆಗೊಳಗಾಗದ ಕೆಂಬಣ್ಣದ ಡಯಲ್ ಫೋನು ಒಂದಷ್ಟು ತಿಂಗಳುಗಳ ಕಾಲ ನನ್ನ ಆಟಿಕೆಗಳ ಬುಟ್ಟಿಯಲ್ಲಿ ಕುಳಿತಿದ್ದು ಕೊನೆಗೊಂದು ದಿನ ಮನೆಯ ಹಿಂದಿನ ಧರೆಗುಂಡಿಗೆ ಅಪ್ಪನ ಕೈಯಿಂದ ಎಸೆಯಲ್ಪಟ್ಟು ಮಧುರ ನೆನಪಿನ ಪುಟಗಳೊಳಗೆ ಲೀನವಾಗಿ ಹೋಯಿತು.
******
‘ನಿನ್ನ ಅಮ್ಮಂಗೊಂದು ಸ್ಮಾರ್ಟ್ ಫೋನ್ ಕೊಡ್ಸಾ’
ಚಿಕ್ಕಮ್ಮ ಹಾಗಂತ ಹೇಳಿದಾಗ ನನಗೆ ಮುಜುಗರವಾಯಿತು. ಅಮ್ಮನಿಗೆ ತಾನೂ ಸ್ಮಾರ್ಟ್ ಫೋನ್ ಬಳಸಬೇಕೆಂಬ ಆಸೆಯಿದೆಯೆಂಬ ವಿಷಯ ನನಗೂ ಗೊತ್ತಿತ್ತಾದರೂ ನಾನದನ್ನು ಕಡೆಗಣಿಸಿದ್ದೆ. ಎಷ್ಟೇ ಆದರೂ ‘ಮಗನಿಗೆ ಕಷ್ಟ ಆಗ್ಬೋದು’ ಎಂದೇ ಯೋಚಿಸುವ ಅಪ್ಪ-ಅಮ್ಮ ತಮ್ಮ ಇಷ್ಟದ ವಸ್ತು ಬೇಕೇ ಬೇಕೆಂದು ಹಠ ಹಿಡಿಯುವುದಿಲ್ಲವಲ್ಲ? ಹಾಗಾಗಿ ಅವರ ವಯಕ್ತಿಕ ಬಯಕೆಗಳಿಗಿಗೆ ಅಷ್ಟೊಂದು ಬೆಲೆ ದೊರಕುವುದಿಲ್ಲ. ತನ್ನ ವಾರಿಗೆಯ ಇನ್ನುಳಿದ ಹೆಂಗಸರಿಂದ ಹಿಡಿದು ಮನೆಕೆಲಸಕ್ಕೆ ಬರುವ ಚೀರುವಿನ ತನಕ ಎಲ್ಲರೂ ವಾಟ್ಸಾಪು, ಫೇಸ್ಬುಕ್ಕು ಬಳಸುತ್ತಾ, ದೂರದಲ್ಲಿರುವ ತಮ್ಮ ನೆಂಟರಿಷ್ಟರೊಂದಿಗೆ ವೀಡಿಯೋ ಕಾಲ್ ಮಾಡುತ್ತಾ ಫೋರ್ಜೀ ಜನರೇಶನ್ ಗೆ ಅಪ್ ಗ್ರೇಡ್ ಆಗಿರುವುದು ಅವಳ ಗಮನಕ್ಕೂ ಬಂದಿತ್ತೋ ಏನೋ. ಅಲ್ಲದೆ ಅದೊಂದು ದಿನ ಮನೆಗೆ ಬಂದ ಅವಳ ಗೆಳತಿಯೊಬ್ಬರು ತಮ್ಮ ಸ್ಮಾರ್ಟ್ ಫೋನನ್ನು ಠೀವಿಯಿಂದ ತೆರೆದು ಅದರಲ್ಲಿದ್ದ, ದೂರದ ಜರ್ಮನಿಯಲ್ಲಿ ತಮ್ಮ ಮಗ ಸ್ಕೈ ಡೈವಿಂಗ್ ಮಾಡಿದ ರೋಚಕ ವೀಡಿಯೋವನ್ನು ತೋರಿಸಿ ಅವಳ ಹೊಸ ಫೋನ್ ಆಸೆಗೊಂದಿಷ್ಟು ಉರವಲು ಎರೆದಿದ್ದರು.
ಅಮ್ಮನಿಗೆ ಸ್ಮಾರ್ಟ್ ಫೋನ್ ಗಳ ಅಆಇಈ ಗೊತ್ತಿರಲಿಲ್ಲವಾದರೂ ಕಲಿಯುವ ಹಂಬಲ ಬಹಳವೇ ಇತ್ತು. ಮನೆಗೆ ಮೊಟ್ಟ ಮೊದಲ ಮೊಬೈಲ್ ಬಂದ ಆರಂಭದಲ್ಲಿ ಹೇಗೋ ನಂಬರ್ ಡಯಲ್ ಮಾಡುವುದನ್ನು, ಸೇವ್ ಆಗಿರುವ ನಂಬರನ್ನು ಹುಡುಕುವುದನ್ನು, ಹೇಳಿಕೊಡದ ಮಕ್ಕಳಿಂದ ಕಷ್ಟ ಪಟ್ಟು ಕಲಿತಿದ್ದಳು. ಇದರಲ್ಲೆಲ್ಲ ಅಷ್ಟಾಗಿ ಆಸಕ್ತಿಯಿಲ್ಲದ ಅಪ್ಪ ‘ಏನೇ… ಕೆರೆಕೋಣೆ ಸತೀಶಂಗೊಂದು ಫೋನು ಹೊಡೆದ್ಕೊಡೇ’ ಎಂದು ತನ್ನ ಫೋನ್ ನಂಬರ್ ಡೈರಿಯನ್ನು ಹಿಡಿದುಕೊಂಡು ಬಂದಾಗ ‘ನಿಮ್ಮ ಡೈರಿ ಏನೂ ಬೇಡ. ಸತೀಶನ ನಂಬರ್ ಫೋನಲ್ಲೇ ಸೇವ್ ಇದೆ’ ಎಂದು ಜಂಭದಿಂದ ಹೇಳಿದ್ದಳು. ‘ಸೇವ್ ಇರೋದಾ? ಹಂಗಂದ್ರೆ?’ ಎಂದು ಪೆದ್ದಾಗಿ ಕೇಳಿದ ಅಪ್ಪನಿಗೆ ‘ಈಗ ಡೈರಿಯಲ್ಲಿ ನಂಬರ್ ನ ಒಂದ್ಸಲ ಬರೆದಿಟ್ಕೊಂಡ್ರೆ ಅದು ಅಲ್ಲೇ ಇರತ್ತಲ್ವಾ, ಇದೂ ಹಾಗೇ’ ಎಂದು ಸರಳವಾಗಿ ವಿವರಿಸಿದ್ದಳು!
******
ಹುಷಾರಿಲ್ಲದ ತನ್ನ ತಮ್ಮನನ್ನು ನೋಡಲು ಅಮ್ಮ ಹಾಗೂ ದೊಡ್ಡಮ್ಮ ಬೆಂಗಳೂರಿನ ಚಿಕ್ಕಮ್ಮನ ಮನೆಗೆ ಬಂದಿದ್ದರು. ಇಬ್ಬರೂ ಒಂದು ತಲೆಮಾರು ಹಳೆಯದಾದ ಕೀಪ್ಯಾಡ್ ಫೀಚರ್ ಫೋನ್ ಗಳನ್ನು ಬಳಸುತ್ತಿರುವವರೇ ಆಗಿದ್ದರು. ಬೆಂಗಳೂರಿನ ಚಿಕ್ಕಮ್ಮ ಈ ಹಿಂದೆಯೇ ಅಮ್ಮನಿಗೆ ಸಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನೊಂದನ್ನು ಕೊಟ್ಟು ಕಳಿಸಿದ್ದರಾದರೂ ಅದು ಇನ್ನಿಲ್ಲದಂತೆ ತೋಪಾಗಿತ್ತು. ಬೆಂಗಳೂರಿನಿಂದ ಹೊರಡುವಾಗ ಸರಿಯಾಗಿಯೇ ಇದ್ದ ಅದು ಅಲ್ಲಿ ಮನೆ ತಲುಪುವಷ್ಟರಲ್ಲಿ ಮೈಮೇಲೆ ಪ್ರೇತಾತ್ಮ ಆವಾಹನೆಯಾದ ಹೆಂಗಸಿನಂತೆ ಆಡತೊಡಗಿತ್ತು. ಚಾರ್ಜ್ ಗೆ ಹಾಕಿದಾಲೂ ಆನ್ ಆಗದ್ದು ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಚಾಲೂ ಆಗುತ್ತಿತ್ತು. ಗರ್ ಗರ್ ಎಂದು ವೈಬ್ರೇಟ್ ಆಗುತ್ತಾ ತನ್ನ ಪರದೆಯ ಮೇಲೊಂದಿಷ್ಟು ಹೊಳೆಯುವ ಚಿತ್ರಗಳನ್ನು ತೋರಿಸಿ ತಕ್ಷಣ ಕರೆಂಟ್ ಹೋದಂತೆ ಆಫ್ ಆಗಿಬಿಡುತ್ತಿತ್ತು. ಹೆಚ್ಚೂ ಕಡಿಮೆ ಭೂತ ಚೇಷ್ಟೆಯನ್ನು ಹೋಲುವ ಅದರ ಈ ಎಲ್ಲ ವರ್ತನೆಗಳನ್ನು ಕಂಡು ಗಾಬರಿಯಾದ ಅಮ್ಮ ಅದನ್ನು ಕಳಿಸಿದ ಚಿಕ್ಕಮ್ಮನಿಗೆ ಪ್ರತೀ ಕಾಲು ಗಂಟೆಗೊಮ್ಮೆ ಕಾಲ್ ಮಾಡಿ “ಮೇಲಿನ ಬಟನ್ ಒತ್ದಿ ಕಣೇ, ಈಗ ಸ್ಕ್ರೀನಲ್ಲಿ ಲೈಟು ಬರ್ತಿದ್ದು. ಹಾ.. ಈಗ ಉದ್ದ ಬಟನ್ ಒತ್ದಿ.. ಎಂತದೋ ಚಿತ್ರ ಎಲ್ಲ ಬರ್ತಿದ್ದು.. ತಾನಾಗೇ ಸರಿ ಆತು ಹೇಳ್ಕಾಣ್ತು… ಅರೆರೆ ಇಲ್ಲೆ.. ಸರಿ ಆಯ್ದಿಲ್ಲೆ.. ಮತ್ತೆ ಆಫಾಗೋತು ಥೋ..” ಎಂದು ಇನ್ನೂ ಮುಂತಾಗಿ ಲೈವ್ ಕಾಮೆಂಟ್ರಿ ಕೊಡುತ್ತಿದ್ದಳು. ಅತ್ತಕಡೆ ಏನಾಗುತ್ತಿದೆ ಎಂದು ಅರ್ಥವಾಗದ ಚಿಕ್ಕಮ್ಮ ಇವಳ ಗೊಂದಲಮಯ ವಿವರಣೆಗಳಿಂದ ಮತ್ತಷ್ಟು ಕನ್ಫ್ಯೂಸ್ ಆಗಿ ಕೊನೆಗೆ “ಅದ್ನ ಮೂಲೆಗೆಸಿ, ಹೊಸಾದು ತಗಂಡ್ರಾತು” ಎಂದು ಈ ಆಪತ್ತಿನಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದರು.
ಕೊನೆಗೂ ಅಮ್ಮ ಹಾಗೂ ದೊಡ್ಡಮ್ಮನಿಗೆ ಹೊಸ ಮೊಬೈಲ್ ಖರೀದಿಸುವುದಾಗಿ ತೀರ್ಮಾನವಾಯಿತು. ‘ನಾನೂ ಬತ್ತಿ.. ನಾನೂ ಬತ್ತಿ’ ಎಂದು ಕುಣಿದ ಇಬ್ಬರು ಮಕ್ಕಳೂ ಸೇರಿದಂತೆ ಏಳು ಜನಗಳ ನಮ್ಮ ತಂಡ ಮೊಬೈಲ್ ಅಂಗಡಿಯತ್ತ ಮುನ್ನಡೆಯಿತು. ‘ಮೂರ್ನಾಲ್ಕು ಸಾವಿರದ್ದಷ್ಟೇ ಸಾಕು ಯಂಗೆ. ಕಾಸ್ಟ್ಲೀದೆಲ್ಲ ತಗಳಡಿ’ ಎಂಬ ಷರತ್ತಿನೊಂದಿಗೇ ಅಮ್ಮ ಹೊರಗಡಿಯಿಟ್ಟಳು. ಒಂದೇ ಸಲಕ್ಕೆ ದಂಡಿಯಾಗಿ ನುಗ್ಗಿದ ನಮ್ಮ ತಂಡವನ್ನು ನೋಡಿದ ಅಂಗಡಿಯ ಮಾಲಿಕ ಅರೆಕ್ಷಣ ಸ್ತಂಭೀಭೂತನಾದರೂ ನಾವು ಎರೆಡೆರೆಡು ಮೊಬೈಲ್ ಖರಿದಿಸುವಸುವುದು ಗೊತ್ತಾಗಿ ಇಷ್ಟಗಲ ಹಲ್ಕಿರಿದು ಬರಮಾಡಿಕೊಂಡ. ತನ್ನ ಈ ದಿನದ ಗ್ರಾಸ್ ಡೊಮೆಸ್ಟಿಕ್ ಸೇಲ್ಸ್ ಗಣನೀಯವಾಗಿ ಏರುವುದರಲ್ಲಿ ಅವನಿಗೆ ಯಾವ ಅನುಮಾನವೂ ಉಳಿದಿರಲಿಲ್ಲ. ಸಾಲಾಗಿ ಪೇರಿಸಿಟ್ಟಿರುವ ಬಣ್ಣಬಣ್ಣದ ನೂರಾರು ಮೊಬೈಲ್ ಗಳನ್ನು ನೋಡಿ ಇನ್ನೇನು ಗೊಂದಕ್ಕೊಳಗಾಗಲಿದ್ದ ಅಮ್ಮ ಹಾಗೂ ದೊಡ್ಡಮ್ಮನನ್ನು ಒಂದು ಕಡೆ ಕೂರಿಸಿ ಉಳಿದವರು ಅಂಗಡಿಯವನ ಜೊತೆ ಮಾತುಕತೆಗೆ ಆರಂಭಿಸಿದರು. ಅವರಲ್ಲಿ ಎಮೈ, ಒಪ್ಪೋ ಎಂದೆಲ್ಲ ಮಾತನಾಡುವಾಗ ಹಿಂದಿನಿಂದ ಅಮ್ಮ “ಏಯ್, ಅದೆಲ್ಲ ಬ್ಯಾಡ. ಸ್ಯಾಮ್ಸಂಗೇ ಒಳ್ಳೇದು. ಕಲ್ಲೋಣಿ ಗಿರಿಜನ್ ಹತ್ರ ಅದೇ ಇಪ್ಪದು” ಎಂದು ಎಕ್ಸ್ ಪರ್ಟ್ ಒಪೀನಿಯನ್ ಕೊಟ್ಟಳು. ಆದರೆ ಅದೆಲ್ಲ ಹಳೆ ಕತೆಯೆಂದೂ, ಈಗ ಎಮೈಯೇ ಮಾರುಕಟ್ಟೆಯಲ್ಲಿ ಮುಂದಿರುವುದೆಂದೂ ಚಿಕ್ಕಮ್ಮ ಅವಳಿಗೆ ಸಮಾಧಾನ ಮಾಡಿದರು.
ಹೀಗೆ ಕೊಂಡ ಮೊಬೈಲ್ ಗಳೇನೋ ಮನೆಗೆ ಬಂದವು. ಆದರೆ ಅವನ್ನು ಬಳಸುವುದನ್ನು ಕಲಿಸಬೇಕಲ್ಲ? ಕಲಿಯಲಿಕ್ಕೆ ಅಮ್ಮ ಹಾಗೂ ದೊಡ್ಡಮ್ಮ. ಕಲಿಸಲಿಕ್ಕೆ ಚಿಕ್ಕಮ್ಮ, ಅವರ ಮಗಳು, ನಾನು ಹಾಗೂ ಮನೆಯಲ್ಲಿರುವ ಮತ್ತುಳಿದವರು.. ಹೀಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಅಗಣಿತ ಶಿಕ್ಷಕರ ತಂಡವೊಂದು ತಯಾರಾಯಿತು. ಅವರ ಹಳೆಯ ಫೋನ್ ಗಳಲ್ಲಿದ್ದ ಕಾಂಟ್ಯಾಕ್ಟ್ ಗಳನ್ನು ಹೊಸ ಫೋನಿಗೆ ಹೊಸತಾಗಿ ಸೇರಿಸುವ ಭಾರ ಇದ್ದವರಲ್ಲೇ ಚಿಕ್ಕವರಾದ ನನ್ನ ಹಾಗೂ ತಂಗಿಯ ಮೇಲೆ ಬಿತ್ತು. ಅಲ್ಲದೇ ಅವರು ಹೇಳುವ ದೇವಾನುದೇವತೆಗಳ ಫೋಟೋಗಳನ್ನು ಹುಡುಕಿ ಸ್ಕ್ರೀನ್ ಸೇವರ್, ವಾಲ್ ಪೇಪರ್ ಗಳಿಗೆ ಹಾಕುವ ಹಾಗೂ ಅವರ ಇಷ್ಟದ ಹಾಡುಗಳನ್ನು ಡೌನ್ಲೋಡ್ ಮಾಡಿಕೊಡುವ ಭಾದ್ಯತೆಯೂ ನಮ್ಮದೇ ಆಗಿತ್ತು. ಹೆಸರುಗಳನ್ನು ಹುಡುಕಿ ಕರೆ ಮಾಡುವುದರಿಂದ ಹಿಡಿದು ವಾಟ್ಸಾಪ್ ನಲ್ಲಿ ವೀಡಿಯೋ ಕಾಲ್ ಮಾಡುವ ತನಕ ಪ್ರತಿಯೊಂದು ಜ್ಞಾನವೂ ಕಿರಿಯರಿಂದ ಹಿರಿಯರಿಗೆ ವರ್ಗಾವಣೆಯಾಯಿತು. ಹೀಗೆ ಹೇಳಿಕೊಡುವಾಗ ಯಾವ ಅಪ್ಲಿಕೇಶನ್ ಸ್ವಲ್ಪ ತಡವರಿಸಿದರೂ ಆತಂಕದ ವಾತಾವರಣ ಸೃಷ್ಟಿಯಾಗಿಬಿಡುತ್ತಿತ್ತು. “ನಾ ಮೊದ್ಲೇ ಹೇಳಿದ್ದಿ ಇದ್ಯಾಕೋ ಸರಿ ಇದ್ದಂಗಿಲ್ಲೆ ಅಂತ. ಆ ಅಂಗ್ಡಿಯಂವ ಬೇರೆ ಕಳ್ಳಿದ್ದಂಗಿದ್ದ. ಬೇಗ ಹೋಗಿ ಇದ್ನ ಕೊಟ್ಟು ದುಡ್ಡು ವಾಪಾಸ್ ಕೇಳು” ಎಂಬ ಕಟ್ಟಾಜ್ಞೆ ಮೊಳಗುತ್ತಿತ್ತು.
ಹೀಗೆ ಸ್ಮಾರ್ಟ್ ಫೋನ್ ಬಳಕೆಯ ಥಿಯರಿ ತರಗತಿಗಳ ನಡುನಡುವೆಯೇ ಅದರ ಪ್ರಾಕ್ಟಿಕಲ್ ಪ್ರಯೋಗಗಳೂ ನಡೆಯಲಾರಂಭಿಸಿದವು. ಬಿಲ್ವಿದ್ಯೆ ಕಲಿಯುತ್ತಿರುವ ರಾಜಕುಮಾರರು ಕಾಗೆ, ಪಾರಿವಾಳಗಳಿಗೆ ಬಾಣ ಬಿಟ್ಟು ತಾವು ಕಲಿತ ವಿದ್ಯೆಯನ್ನು ಪರೀಕ್ಷಿಸಿಕೊಳ್ಳುವಂತೆ, ಅಮ್ಮ ಹಾಗೂ ದೊಡ್ಡಮ್ಮರಿಬ್ಬರೂ ಫೋನಿನಲ್ಲಿರುವ ಕಾಂಟ್ಯಾಕ್ಟ್ ಗಳನ್ನು ಹುಡುಹುಡುಕಿ ಕರೆ ಮಾಡಲಾರಂಭಿಸಿದ್ದರು. ಸುಳ್ಳು ಕಾರಣ ಕೊಟ್ಟು ಆಫೀಸಿಗೆ ರಜೆ ಹಾಕಿಬಂದಿದ್ದ ನಾನು ಫೋನು ರಿಂಗಾದಾಗೆಲ್ಲ ಬಾಸೇ ಕಾಲ್ ಮಾಡಿರಬಹುದೆಂದು ಗಾಬೃರಿಯಲ್ಲಿ ಎದ್ದು ಬಿದ್ದು ಓಡಿ ಬಂದರೆ ಅಲ್ಲೇ ಪಕ್ಕದಲ್ಲಿ ಕಿವಿಗೆ ಫೋನಾನಿಸಿಸಿಕೊಂಡು ಗಂಭೀರವಾಗಿ ಕುಳಿತಿದ್ದ ಅಮ್ಮ “ನಾನೇ ಮಾಡಿದ್ದು ಎತ್ಬೇಡ” ಎಂದು ಕೈಸನ್ನೆ ಮಾಡುತ್ತಿದ್ದಳು. ಸಂಪರ್ಕ ಪಟ್ಟಿಯಲ್ಲಿನ ಯಾರಿಗೋ ಕರೆ ಮಾಡಿ “ಯಾರಿದು? ಓ ನೀನಾ.. ಎಂತಿಲ್ಲೆ. ಹೊಸ ಫೋನ್ ತಗೈಂದ್ನೇ.. ನೋಡಣ ಹೇಳಿ ನಂಬರ್ ಹೊಡ್ದಿ. ನಿನ್ಗೆ ಹೋತು. ಮತ್ತೆ ಅರಾಮಿದ್ಯ?” ಎಂದು ಮಾತಿಗೆ ತೊಡಗುತ್ತಿದ್ದಳು. ಹೀಗೆ ತಪ್ಪಿ ಹೋದ ಕರೆ ಕೂಡಾ ನಿಮಿಷಗಳವರೆಗೆ ಮುಂದುವರಿಯುತ್ತಿರುವುದನ್ನು ಕಂಡ ಚಿಕ್ಕಮ್ಮ “ನಿನ್ನಮ್ಮಂಗೆ ಫೋನ್ ಕೊಡ್ಸಿದ್ದೇ ತಪ್ಪಾಯ್ತು. ನೋಡೀಗ ನಮ್ಗೇ ಮಾತಿಗೆ ಸಿಗ್ತಿಲ್ಲ” ಎಂದು ನಗತೊಡಗಿದರು.
ಹೀಗಿದ್ದಾಗ ಒಮ್ಮೆ ದೊಡ್ಡಮ್ಮ ಯಾರಿಗೋ ಫೋನು ಮಾಡಲೆಂದು ನಂಬರ್ ಡಯಲ್ ಮಾಡಿದರು. ಅಷ್ಟರಲ್ಲಿ ಅಲ್ಲೇ ಮೇಜಿನ ಮೇಲಿದ್ದ ಅವರ ಹಳೆಯ ಫೋನು ರಿಂಗಾಗತೊಡಗಿತು. ಯಾರೋ ಕಾಲ್ ಮಾಡಿರಬೇಕೆಂದು ಕೈಲಿದ್ದ ಫೋನಿನಲ್ಲಿ ಕಾಲ್ ಕಟ್ ಮಾಡಿ ಅದರತ್ತ ನಡೆದರೆ ಆ ಫೋನಿನಲ್ಲೂ ಕಾಲ್ ಕಟ್ ಆಯಿತು. ಸರಿಯೆಂದು ಮತ್ತೊಮ್ಮೆ ಡಯಲ್ ಮಾಡಿದರೆ ಮತ್ತೆ ಅವರದೇ ಫೋನು ರಿಂಗಾಗತೊಡಗಿತ್ತು. “ರೂಪಂಗೆ ಕಾಲ್ ಮಾಡಿದ್ರೆ ಯಂಗೇ ಕಾಲ್ ಹೋಗ್ತಿದ್ದು ನೋಡಾ” ಎಂದು ಗಾಬರಿಯಿಂದ ಫೋನು ಹಿಡಿದುಕೊಂಡು ಓಡಿಬಂದವರ ಕೈಯಿಂದ ಮೊಬೈಲ್ ತೆಗೆದುಕೊಂಡು ನೋಡಿದರೆ ಬೇರೊಂದು ಹೆಸರಿನಲ್ಲಿ ಅವರದೇ ಇನ್ನೊಂದು ನಂಬರ್ ಸೇವ್ ಆಗಿರುವುದು ಕಂಡುಬಂತು! ಹೀಗೆ ಹೊಸದು, ಹಳೆಯದು ಎಂದು ಮನೆಯ ತುಂಬಾ ಬಿದ್ದುಕೊಂಡಿದ್ದ ಹತ್ತಾರು ಮೊಬೈಲ್ ಗಳು ನಿಮಿಷಕ್ಕೊಂದರಂತೆ ರಿಂಗಣಿಸುತ್ತಾ ಯಾರು, ಯಾರಿಗೆ ಯಾತಕ್ಕೆ ಕರೆ ಮಾಡುತ್ತಿದ್ದರೆಂಬುದೇ ಗೊತ್ತಾಗದೆ ಕೆಲ ನಿಮಿಷ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿತ್ತು.
******
ಹೊಸ ಸ್ಮಾರ್ಟ್ ಫೋನ್ ನೊಂದಿಗೆ ಮನೆ ತಲುಪಿಕೊಂಡ ಅಮ್ಮನಿಂದ ದಿನಕ್ಕೊಂದಾದರೂ ವೀಡಿಯೋ ಕಾಲ್ ಬಂದೇಬರುತ್ತದೆ. “ಇವತ್ತು ಶ್ಯಾಮನಮ್ಮಂಗೆ ವೀಡಿಯೋ ಕಾಲ್ ಮಾಡಿದ್ದೆ. ಇವತ್ತು ಗೂಗಲ್ ಆನ್ ಮಾಡಿದ್ದೆ. ನೀನು ನಂಗೆ ಫೇಸ್ಬುಕ್ಕೇ ಹಾಕ್ಕೊಟ್ಟಿಲ್ವಲ್ಲ ಯಾಕೆ?” ಎಂಬ ಇನ್ನೂ ಮುಂತಾದ ಪ್ರೆಶ್ನೆಗಳು ತೂರಿಬರುವುದೂ, ನಾನದಕ್ಕೆ ಏನೋ ಒಂದು ಸಮಾಧಾನ ಹೇಳುವುದು ನಡೆದೇ ಇದೆ. ಸಾಲದ್ದಕ್ಕೆ ನಾನು ವಾಟ್ಸಾಪಿನಲ್ಲಿ ಯಾವುದೋ ಬೇಸರದ ಸಾಲಿನ ಸ್ಟೇಟಸ್ ಹಾಕಿದ ದಿನ ಹೊತ್ತಲ್ಲದ ಹೊತ್ತಿನಲ್ಲಿ ಕರೆಮಾಡಿ ಯಾಕೆ ಹಾಗೆ ಹಾಕಿದ್ದಿ? ಏನಾಯ್ತು? ಯಾಕೆ ಬೇಜಾರಾಗಿದ್ದಿ? ಯಾರು ಏನಂದ್ರು? ಎಂಬೆಲ್ಲ ಪ್ರೆಶ್ನೆಗಳ ಕ್ವಶ್ಶನ್ ಪೇಪರ್ ನನ್ನ ಮೇಲೆರಗುತ್ತದೆ. ಸಹೋದ್ಯೋಗಿಗಳ ಜೊತೆಗಿನ ಫೋಟೋ ಹಾಕಿದರೆ ‘ನಿನ್ನ ಪಕ್ಕ ನಿಂತಿದಾಳಲ, ಯಾರದು?’ ಎಂಬ ನೂರು ಲೆಕ್ಕಾಚಾರಗಳಿರುವ ಪ್ರೆಶ್ನೆಯೇ ಕಾದಿರುತ್ತದೆ!
ಮೊನ್ನೆ ಕರೆ ಮಾಡಿದ ತಮ್ಮನ ಬಳಿ ಹೇಗಿದ್ಯೋ ಅಮ್ಮನ ಹೊಸ ಫೋನ್ ಎಂದು ಕೇಳಿದ್ದಕ್ಕೆ ‘ಏನ್ ಕೇಳ್ತೀಯ ಅದರ ಭರಾಟೆನಾ!? ತಾನು ದಿನಕ್ಕೊಂದು ಪ್ರಯೋಗ ಮಾಡೋದಲ್ದೇ ಅಪ್ಪನ್ನೂ ಕೂರ್ಸ್ಕೊಂಡು ನೋಡಿ ಹಿಂಗೆ ಮಾಡಿದ್ರೆ ಹಿಂಗಾಗುತ್ತೆ ಅಂತ ಟ್ಯುಟೋರಿಯಲ್ ಸ್ಟಾರ್ಟ್ ಮಾಡಿದಾಳೆ. ಯೂಟ್ಯೂಬಲ್ಲಿ ಅವರ ಇಷ್ಟದ ಹಾಡುಗಳನ್ನ ಹುಡ್ಕಿ ಹುಡ್ಕಿ ಪ್ಲೇ ಮಾಡ್ತಾಳೆ!” ಎಂದುತ್ತರಿಸಿದ. ನಕ್ಕು ಫೋನಿಟ್ಟ ನನ್ನ ಮನಸ್ಸಿನಲ್ಲಿ ಅಪ್ಪ ಅಮ್ಮ ಇಬ್ಬರೂ ‘ಅಮರ ಮಧುರ ಪ್ರೇಮ.. ನೀ ಬಾ ಬೇಗ ಚಂದಮಾಮ..’ ಹಾಡು ಕೇಳುತ್ತಾ ಕುಳಿತಿರುವ ಚಿತ್ರವೊಂದು ಮುಗುಳ್ನಗುವಿನ ಸಮೇತ ಹಾದುಹೋಯಿತು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ