- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಪಶುಪಕ್ಷಿಗಳೆಲ್ಲ ಕಾಡಿನಲ್ಲಿ ಸಭೆ ಸೇರಿದವು. ಅಂದು ಅವೆಲ್ಲ ಒಂದು ಮಹತ್ತರ ಸಭೆಯನ್ನು ನಿರ್ವಹಿಸುತ್ತಿದ್ದವು. ಅಭಿನಂದನೆ ಸಭೆ. ಅದಕ್ಕೆ ಮುಖ್ಯ ಅತಿಥಿ ಕರೋನಾ ವೈರಸ್ ಎಂಬ ರೋಗಾಣು. ಜಗತ್ತೆಲ್ಲ ಆ ರೋಗಾಣುವನ್ನು ಕೋವಿಡ್ ೧೯ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿತ್ತು. ಇತರ ಅತಿಥಿಗಳಾಗಿ ಎಬೋಲಾ, ಸಾರ್ಸ್, ಆಂತ್ರಾಕ್ಸ್ ಎನ್ನುವ ವೈರಸ್ ಜಾತಿಯ ರೋಗಾಣುಗಳನ್ನು ಕರೆಯಲಾಗಿತ್ತು. ಮನುಷ್ಯ ಜಾತಿಗೆ ಅವರ ಎಲ್ಲೆಗಳನ್ನು ತೋರಿಸಿಕೊಡುವ ತಮ್ಮ ಯುದ್ಧದಲ್ಲಿ ಹಿರಿಯ ಭೂಮಿಕೆಯನ್ನು ಪೋಷಿಸಿದ ಕೋವಿಡ್ ೧೯ ಗೆ ಅಂದು ಸನ್ಮಾನ ಕಾರ್ಯಕ್ರಮವಾಗಿತ್ತು. ಕಾಡಿನ ದೊಡ್ಡ ಆಲದ ಮರದ ಕೆಳಗಿನ ಸಭೆಗೆ ಎಲ್ಲರೂ ಬಂದು ಉಪಸ್ಥಿತರಾದಮೇಲೆ ಸಭೆ ಪ್ರಾರಂಭವಾಯಿತು.
ಮುಂಚಿತವಾಗಿ ಪ್ರಾರ್ಥನೆ. ಕೋಗಿಲೆ ತನ್ನ ಸುಮಧುರ ಕೊರಳಿನಲ್ಲಿ ಪ್ರಾರ್ಥನೆ ಹಾಡಿತು. ಅದಕ್ಕೆ ಬೃಂದವಾಗಿ ಇನ್ನಿತರ ಹಕ್ಕಿಗಳು ದನಿಗೂಡಿಸಿದವು. ಸ್ವಾಗತ ಭಾಷಣ ಮೃಗರಾಜನಾದ ಸಿಂಹನಿಂದ. “ ನೆರೆದ ಬಾಂಧವರೇ ! ಇಂದು ನಾವೆಲ್ಲ ಇಲ್ಲಿ ಕೋವಿಡ್ ೧೯ ರವರನ್ನು ಸನ್ಮಾನಿಸುವ ಮತ್ತು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇವೆ. ಮುಂಚಿತವಾಗಿ ಮುಖ್ಯ ಅತಿಥಿಗಳಿಗೆ ಸಾದರ ಸ್ವಾಗತ ಬಯಸುತ್ತೇನೆ. ಅವರ ಜೊತೆ ಈ ಮಾನವನಿಗೆ ಸಹಜೀವನ ಕಲಿಸಿಕೊಡುವ ಮಹತ್ತರ ಯೋಜನೆಯಲ್ಲಿ ಇಷ್ಟಕ್ಕೂ ಮುಂಚೆ ತಮ್ಮ ದೇಣಿಗೆಯನ್ನಿತ್ತ ಇತರೆ ರೋಗಾಣುಗಳು ಸಹ ಬಂದಿದ್ದಾರೆ. ಅವರಿಗೂ ಸ್ವಾಗತ ಬಯಸುತ್ತೇನೆ. ತಮಗೆಲ್ಲ ಸಹ ಸ್ವಾಗತ ಬಯಸುತ್ತೇನೆ. ಮುಂದಿನ ಕಾರ್ಯಕ್ರಮವನ್ನು ಕಾಡಿನ ಅತ್ಯಂತ ಶ್ರೇಷ್ಠ ನಿರೂಪಕರಾದ ಜಂಬೂಕರಾಯರು ನಡೆಸಿಕೊಡುತ್ತಾರೆ. “ ಎನ್ನುತ್ತ ಶ್ರೀಮದ್ಗಾಂಭೀರ್ಯದೊಂದಿಗೆ ಕೂತಿತು.
ಜಂಬೂಕರಾಯರು ವೇದಿಕೆಗೆ ಬಂದು ನಿರೂಪಣೆ ಕೈಗೆತ್ತಿಕೊಂಡರು. “ ಬಂಧುಗಳೇ ! ನಾವೆಲ್ಲ ಪಶುಪಕ್ಷಿಗಳು ಮನುಷ್ಯ ಜಾತಿಯ ಅತ್ಯಾಶೆಯ ದಾಳಿಗೆ ತುತ್ತಾದವರೇ. ಮಾನವ ತನ್ನ ಹಸಿವೆಗಾಗಿ ನಮ್ಮನ್ನು ಕೊಲ್ಲುವುದೇ ಅಲ್ಲದೆ ತನ್ನ ಶೋಕಿಗಾಗಿ ನಮ್ಮ ಮೇಲೆ ಹಲ್ಲೆ ಮಾಡುತ್ತಾನೆ. ನಮ್ಮಲ್ಲಿಯ ಕೆಲವರ ಚರ್ಮಗಳಿಂದ, ದಂತಗಳಿಂದ ಏನೇನೋ ವಸ್ತುಗಳನ್ನು ಮಾಡಿ ಮಾರಿ ಹಣ ಗಳಿಸುತ್ತಾನೆ. ದಿನೇ ದಿನೇ ನಮ್ಮ ಸಂತತಿ ಅಂತರಿಸುತ್ತಿದೆ. ಎಷ್ಟೋ ಜಾತಿ ಪಶುಗಳು, ಪಕ್ಷಿಗಳು ಅಂತರಿಸಿ ಹೋಗುತ್ತಿವೆ. ಇಂಥ ಸಮಯದಲ್ಲಿ ಮನುಷ್ಯ ಜಾತಿಗೆ ಸಹ ಜೀವನದ ಪಾಠ ಕಲಿಸವುದೇ ನಮಗೆ ಕಾಣುವ ಆಶಾ ಕಿರಣ. ಈ ನಿಟ್ಟಿನಲ್ಲಿ ಕೋವಿಡ್ ೧೯ ರವರು ನಮಗೆ ಸಲ್ಲಿಸಿದ ಸೇವೆ ಅಪಾರ. ಅವರು ರಂಗಕ್ಕಿಳಿದಾಗಿನಿಂದ ಮನುಷ್ಯ ಸಹ ಜೀವನದ ಮತ್ತು ಪ್ರಕೃತಿಯ ಮಹತ್ತನ್ನು ಅರಿತಿದ್ದಾನೆ. ನಿರ್ಬಂಧನದ ಈ ದಿನಗಳು ನಮಗೆ ಸುವರ್ಣ ಯುಗದ ದಿನಗಳು. ನಾವೆಲ್ಲ ಒಮ್ಮೆ ಕಳೆದುಕೊಂಡ ನಮ್ಮ ರಾಜ್ಯವನ್ನು ಮತ್ತೆ ಪಡೆದ ಹಾಗಾಗಿದೆ. ನಿರ್ಭಯವಾಗಿ ತಿರುಗುತ್ತಿದ್ದೇವೆ. ಪಕ್ಷಿಗಳು ಸಹ ನಿರಾಳವಾಗಿ ಬೇಟಿಗಾರರ ಮತ್ತು ಪರಿಸರ ಕಾಲುಷ್ಯದ ಭಯವಿಲ್ಲದೇ ಹಾರುತ್ತಿವೆ. ಕೋಗಿಲೆಯಂತೂ ಮನ ಬಿಚ್ಚಿ ಹಾಡುತ್ತಿದೆ. ನೀವೇ ನೋಡುತ್ತಿದ್ದೀರಿ. ಈ ತರದ ಸುಭಿಕ್ಷ ಕಾಲ ಬರಲು ಕಾರಣರಾದ ಕೋವಿಡ್ ೧೯ ರವರನ್ನು ನಾವು ಸನ್ಮಾನಿಸಬೇಕೆಂದು ತೀರ್ಮಾನ ಮಾಡಲಾಗಿದೆ.”
ಜಂಬೂಕರಾಯರು ಹಾಗೇ ಮುಂದುವರೆಸುತ್ತ “ ಅದಕ್ಕೆ ಇಂದು ನಾವು ನಿಮ್ಮೆಲ್ಲರ ಪರವಾಗಿ ಅವರನ್ನು ಸನ್ಮಾನಿಸುತ್ತಿದ್ದೇವೆ. ಇದಕ್ಕೂ ಮುಂಚೆ ಈ ಯಜ್ಞದಲ್ಲಿ ತಮ್ಮ ಕೈಲಾದ ಸೇವೆಯನ್ನು ಮಾಡಿದ್ದ ಎಬೋಲಾ, ಸಾರ್ಸ್, ಆಂಥ್ರಾಕ್ಸ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಈ ಸಭೆಯ ಮೂಲಕ ತಿಳಿಸುತ್ತಿದ್ದೇನೆ. ಈಗ ಕೋವಿಡ್ ರಿಗೆ ಸನ್ಮಾನ. “ ಎನ್ನುತ್ತ ಜಂಬೂಕರಾಯರು ಮೃಗರಾಜನ ಕಡೆಗೆ ನೋಡಿದರು. ವೇದಿಕೆ ಮೇಲಿರುವವರೆಲ್ಲ ಎದ್ದು ನಿಂತು ಕೋವಿಡ್ ೧೯ ಅವರನ್ನು ಒಂದು ಪ್ರತ್ಯೇಕ ಕುರ್ಚಿಯಲ್ಲಿ ಕೂರಿಸಿ ಅವರಿಗೊಂದು ಎಲೆಗಳಿಂದ ಹೆಣೆದ ಶಾಲನ್ನು ಹೊದಿಸಿ, ಕಾಡು ಹೂ ಗುಚ್ಛವನ್ನು ಕೈಯಲ್ಲಿರಿಸಿದರು. ವೇದಿಕೆಯಾಚೆ ನೆರೆದಿದ್ದ ಪಶು ಪಕ್ಷಿಗಳು ಮತ್ತು ಇತರ ರೋಗಾಣುಗಳು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಸೂಚಿಸಿದವು.
ಮತ್ತೆ ಜಂಬೂಕರಾಯರು ಗಂಟಲು ಸರಪಡೆಸಿಕೊಳ್ಳುತ್ತ “ ಈಗ ಸನ್ಮಾನಿತರಾದ ಕೋವಿಡ್ ೧೯ ಅವರು ಮಾತನಾಡಬೇಕೆಂದು ವಿನಂತಿ “ ಎಂದರು.
ಕೋವಿಡ್ ೧೯ ಎದ್ದು ನಿಂತು “ ಸಭೆಗೆ ನಮಸ್ಕಾರ. ನಾನು ಈ ರೀತಿ ಮನುಷ್ಯರ ಮೇಲೆ ಆಕ್ರಮಣ ಮಾಡುವ ಅವಕಾಶ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನಷ್ಟಕ್ಕೆ ನಾನು ಚಿಪ್ಪುಹಂದಿ, ಬಾವಲಿಗಳ ಶ್ವಾಸಕೋಶಗಳಲ್ಲಿ ವಾಸ ಮಾಡಿಕೊಂಡು ಅವುಗಳಲ್ಲಿ ವೃದ್ಧಿ ಹೊಂದುತ್ತ ಆರಾಮವಾಗಿ ಕಾಲಕಳೆಯುತ್ತಿದ್ದೆ. ಆದರೆ ತನ್ನ ನಾಲಿಗೆ ಚಪಲವನ್ನು ತೀರಿಸಿಕೊಳ್ಳಲು ಮನುಷ್ಯ ಇವುಗಳನ್ನು ಸಹ ತಿನ್ನಲು ಅದೂ ಅವುಗಳ ಅರಬೆಂದ ಮಾಂಸವನ್ನು ತಿನ್ನಲು ಮೊದಲಿಟ್ಟಾಗ ನನಗೆ ಮತ್ತೊಂದು ಆಶ್ರಯ ದೊರೆತಂತಾಯಿತು. ಆ ಪ್ರಾಣಿಗಳಿಗಿಂತ ಮನುಷ್ಯನ ಮೂಗು, ಗಂಟಲು ಮತ್ತು ಶ್ವಾಸಕೋಶಗಳಲ್ಲಿ ನನಗೆ ಹಿತವೆನಿಸಿತು. ಹಾಗೆ ಹರಡುತ್ತ ಹೋದೆ. ಅದೂ ಇತ್ತೀಚೆಗೆ ಒಂದು ವರ್ಷದ ಕೆಳಗಿಂದ ಮಾತ್ರ. ನನ್ನ ಚಲನವಲನಗಳನ್ನು ಮತ್ತು ಹರಡುವ ಶಕ್ತಿಯನ್ನು ಅರಿಯಲಾರದ ಮನುಷ್ಯನ ಅಶಕ್ತತೆಯ ಲಾಭ ಪಡೆದುಕೊಂಡು ನಾನು ಇನ್ನಷ್ಟು ವೃದ್ಧಿಯಾಗುತ್ತ ಹೋದೆ. ನನಗೇನೂ ಅವರನ್ನು ಬಲಿ ತೊಗೊಳ್ಳುವ ಉದ್ದೇಶವಿರಲಿಲ್ಲ. ನಾನು ಬೆಳೆಯುವುದನ್ನು ನೋಡಿಕೊಂಡೆ. ನಾನು ಬೆಳೆದ ಪರಿಗೆ ಅನೇಕ ದೇಶಗಳ ಜನರು ಬಲಿಯಾಗಿರುವುದು ಕಂಡೆ. ಅದಕ್ಕೆ ಪರಿಹಾರವಾಗಿ ಗೃಹ ನಿರ್ಬಂಧ ಹೇರಲಾಗಿ ಮನುಷ್ಯರು ರಸ್ತೆಗಳ ಮೇಲೆ ಬರುವುದು ನಿಂತು ಹೋಯಿತು. ಪರಸರಗಳೆಲ್ಲ ಕಾಲುಷ್ಯವಿಲ್ಲದೆ ಕುಣಿದಾಡಿದವು. ನಿಮ್ಮ ನಿರೂಪಕರು ಹೇಳಿದಂತೆ ಮತ್ತೆ ನೀವು ನಿಮ್ಮ ಪರಿಸರವನ್ನು ಪುನಃ ಪಡೆದು ಸ್ವೇಚ್ಛೆಯಾಗಿ ತಿರುಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ ಮನುಷ್ಯನು ಸುಮ್ಮನೆ ಕೂರಲ್ಲ. ನನ್ನನ್ನ ತನ್ನಲ್ಲಿ ನಿರ್ನಾಮ ಮಾಡಲು ಮದ್ದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾನೆ. ಕಂಡು ಹಿಡಿಯುತ್ತಾನೆ ಕೂಡ. ನನ್ನ ಎದುರಲ್ಲಿ ಕೂತ ಇತರೆ ರೋಗಾಣುಗಳು ಸಹ ತಮ್ಮ ಸರದಿಯ ಕೆಲಸ ಮಾಡಿದ್ದವು. ಆದರೆ ಅವುಗಳಿಗಾಗಿ ಸತ್ವರ ಮದ್ದನ್ನು ಕಂಡುಹಿಡಿದ ಮನುಷ್ಯ ಅವುಗಳು ತನ್ನಲ್ಲಿ ಜಾಸ್ತಿ ಹರಡದಂತೆ ಮಾಡಿ ತನ್ನನ್ನು ತಾನು ಬಚಾಯಿಸಿಕೊಂಡ. ನನ್ನ ವಿಷಯದಲ್ಲೂ ಸಹ ನಾನು ಮಾಡಿರುವ ಅವಾಂತರದ ಹಾವಳಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತುಂಬಾ ಪ್ರಯತ್ನಮಾಡುತ್ತಿದ್ದಾನೆ. ಅವನ ಪ್ರಯತ್ನಗಳು ಸಫಲವಾಗುವವರೆಗೆ ನಾನು ಬೆಳೆಯುತ್ತಲೇ ಇರುತ್ತೇನೆ. ಅಲ್ಲಿಯ ವರೆಗೆ ನೀವೂ ಮಜಾ ಮಾಡ್ತಿರಿ. ನನ್ನನ್ನು ಆಹ್ವಾನಿಸಿ ಸನ್ಮಾನ ಮಾಡಿದ ನಿಮಗೆಲ್ಲಾ ನನ್ನ ಧನ್ಯವಾದಗಳು.” ಎಂದು ಮುಗಿಸಿದರು.
ಈಗ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಎಂದು ಪ್ರಕಟಿಸಲಾಯಿತು.
*****
ಗಾಬರಿಯಾಗಿ ಎದ್ದು ಕೂತ ವಿನೋದ ತನಗೆ ಬಿದ್ದ ಕನಸನ್ನು ನೆನೆಸಿಕೊಂಡ. “ಹೌದು.ಈ ವೈಪರೀತ್ಯದಿಂದ ಮನುಷ್ಯರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರುವುದು ಕಲಿಯಬೇಕಾಗಿದೆ. ಇತರೆ ಪಶುಪಕ್ಷಿಗಳ ಜೊತೆ ಸಹ ಜೀವನ ನಡೆಸುವುದು ಅತ್ಯವಶ್ಯಕ ಎಂದು ಪರಿಗಣಿಸುವ ದಿನ ಬಂದಿದೆ. ಮನುಷ್ಯನಾಗಲಿ ಜಂತುಗಳಾಗಲಿ ಅವರವರ ಪರಿಧಿಯಲ್ಲಿ ಇರುತ್ತ ಭಗವಂತನ ಸೃಷ್ಟಿಗೆ ಮನ್ನಣೆ ಕೊಡಬೇಕು” ಎಂದುಕೊಂಡ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್