- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಪಥ ದರ್ಶಕರು ಎನ್ನುವ ಈ ಗ್ರಾಂಥಿಕ ಪದದ ಬದಲಿಗೆ “ ದಾರಿ ತೋರಿಸುವವರು “ ಎನ್ನುವ ಸುಲಲಿತ ಪದವನ್ನು ಸಹ ಬಳಸಬಹುದು. ಯಾವ ಪದವನ್ನು ಬಳಸಿದರೂ ನಾನು ಈಗ ಹೇಳಲು ಹೊರಟಿರುವುದು ನಮಗೆ ವಿಳಾಸ ಹುಡುಕಲು ನೆರವಾಗುವವರ ಬಗ್ಗೆ.
ಹಿಂದಿನ ಕಾಲದಲ್ಲಿ ಜನರ ಪ್ರವಾಸ ಜಾಸ್ತಿ ಇರುತ್ತಿರಲಿಲ್ಲ. ಹತ್ತಿರ ಹಳ್ಳಿಗಳಲ್ಲಿ ಎಲ್ಲರ ಹೆಸರು ಎಲ್ಲರಿಗೂ ಗೊತ್ತಿರುತ್ತಿತ್ತು. ಆದ್ದರಿಂದ ಹುಡುಕುವ ತಾಪತ್ರಯವಿರಲಿಲ್ಲ. ಅದಕ್ಕೆ ನೆರವಾಗುವ ಪಥ ದರ್ಶಕರ ನೆರವು ಅಷ್ಟು ಬೇಕಾಗಿರಲಿಲ್ಲ. ಮತ್ತೆ ಹಳ್ಳಿಗಳಲ್ಲಿ ನೀವು ಹೊಸಬರೆಂದು ಗೊತ್ತಾದ ತಕ್ಷಣ ಅವರೇ ನಿಮ್ಮ ಬಗ್ಗೆ ವಿಚಾರಿಸಿ, ಎಲ್ಲಿ ಯಾರ ಮನೆಗೆ ಹೋಗಬೇಕೆಂದು ಕೇಳಿ ನಿಮಗೆ ಪಥ ದರ್ಶನ ಮಾಡಿಬಿಡುತ್ತಿದ್ದರು. ಬರ್ತಾ ಬರ್ತಾ ಜನರ ಪ್ರಯಾಣಗಳು ಹೆಚ್ಚಾಗಿ ಹೊಸ ಹೊಸ ಪ್ರದೇಶಗಳಿಗೆ, ಅದೂ ಭಾಷೆ ಬರದ ಜಾಗಗಳಿಗೆ ಪ್ರಯಾಣ ಬೆಳೆಸಿದಾಗ ಈ ಪಥ ದರ್ಶಕರ ನೆರವು ಅನಿವಾರ್ಯವಾಯ್ತು. ಈ ನೆರವು ಪಡೆವಲ್ಲಿ ಕಚಗುಳಿ ಇಟ್ಟ ಕೆಲ ಮೋಜಿನ ಪ್ರಸಂಗಗಳು ನಿಮ್ಮ ಮುಂದಿಡುತ್ತೇನೆ.
ಒಂದಿಪ್ಪತ್ತು ವರ್ಷಗಳ ಹಿಂದೆ. ಈಗಿನಂತೆ ಮನೆಯಲ್ಲೊಂದು, ಮಗ್ಗುಲಲ್ಲೊಂದು, ಕಿಸೆಯಲ್ಲೊಂದು ಫೋನ್ ಗಳಿರುತ್ತಿರಲಿಲ್ಲ. ಎಲ್ಲಾದರೂ ಹೊಸ ಪ್ರದೇಶಗಳಿಗೆ ಹೋಗುವ ಮುನ್ನ ನಾವು ಇಂಥ ದಿನ ಬರುತ್ತಿದ್ದೇವೆ, ಬಸ್ ಸ್ಟಾಂಡಿಗೋ, ರೈಲ್ವೇ ಸ್ಟೇಷನ್ ಗೋ ತಪ್ಪದೇ ಬನ್ನಿ ಎಂದು ನೀವು ಹಾಕಿದ ಪತ್ರವೇ ಗತಿ. ಅದು ತಲುಪದೇ ಇದ್ದಲ್ಲಿ ಅಥವಾ ಯಾವ ಕಾರಣಕ್ಕೋ ಬರದೇ ಇದ್ದಲ್ಲಿ, ಅಲೆತ ತಪ್ಪಿದ್ದಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ ಕ್ರಾಸು, ಮೈನು, ಹಂತ, ಘಟ್ಟ ಎಂದು ಅಲೆಯುತ್ತ ತಲೆ ಕೆಡಿಸಿಕೊಳ್ಳಬೇಕಿತ್ತು. ಅಂಥ ಸಮಯಗಳಲ್ಲಿ ಆ ಪ್ರದೇಶದ ಬಗ್ಗೆ ಮಾಹಿತಿ ಇದ್ದ ಪಥ ನಿರ್ದೆಶಕರು ನಮ್ಮನ್ನು ಸುರಕ್ಷಿತವಾಗಿ ಮನೆ ತಲುಪಿಸಿದರೆ ಅವರನ್ನು ಮರೆಯಲಾಗುತ್ತಿರಲಿಲ್ಲ. ಜೊತೆಯಲ್ಲಿದ್ದ ಹೆಂಡತಿ, ಮಕ್ಕಳು, ಹೊರೆಯಾಗಿ ತೋರುವ ಲಗೇಜ, ಆಟೋದವರ ರೇಗಾಟಗಳ ನಡುವೆ ನಮ್ಮ ಗುಡ್ ಸಮಾರಿಟನ್ ನಮಗೆ ದೈವೀ ಸಮಾನವೆನಿಸಿದ್ದೂ ಇದೆ. ಹೊರ ಪ್ರದೇಶಗಳಿಗೆ ಹೋದಾಗ, ಭಾಷೆ ಬಾರದಾಗ, ಫೋನಿನ ನೆರವಿಲ್ಲದಾಗ, ನಮಗೆ ಇಂಥ ದಾರಿ ತೋರಿಸುವ ದೀವಿಗೆಗಳ ಅಗತ್ಯವಿರುತ್ತಿತ್ತು. ಈಗ ಫೋನುಗಳ ಸೌಲಭ್ಯ ಒದಗಿ ಬಂದದ್ದು ಇಂಥ ಸನ್ನಿವೇಶಗಳನ್ನು ಕಮ್ಮಿ ಮಾಡಿದ್ದರೂ ಊರುಗಳು ಬೆಳೆದು ಹುಡುಕಾಟ ತಪ್ಪುತ್ತಿಲ್ಲ. ಇತ್ತೀಚೆಗಂತೂ ಮೊಬೈಲುಗಳಲ್ಲಿ ಜಿಪಿಎಸ್ ಎಂಬ ಯಕ್ಷಿಣಿ ತುಂಬಿದ್ದು “ನೀವು ಲೊಕೇಶನ್ ಷೇರ್ ಮಾಡಿ” ಎಂದು ಆದೇಶ ಹೊರಡಿಸಿದರೆ ಸಾಕು. ನಾವೇ ಹುಡುಕಿಕೊಳ್ಳಬಹುದಾಗಿದೆ. ಆಟೋದವರಿಗೆ ದಾರಿ ತೋರಿಸಬಹುದಾಗಿದೆ. ಊಬರ್, ಓಲಾಗಳ ಚಾಲಕರಂತೂ ನಿಮ್ಮನ್ನು ಕೇಳುವುದೇ ಇಲ್ಲ. ಸೀದಾ ನಿಮ್ಮನ್ನು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪಿಸಿಬಿಡುತ್ತಾರೆ.
ಒಮ್ಮೊಮ್ಮೆ ಈ ಹುಡುಕಾಟ ಮುಜುಗರ ತರುತ್ತದೆ. ನಾನೊಮ್ಮೆ ಒಂದು ತಾಲ್ಲೂಕು ಪ್ರದೇಶದಲ್ಲಿರುವ ಗೆಳೆಯನ ಮನೆಗೆ ಪ್ರಯಾಣ ಬೆಳೆಸಿದ್ದೆ. ಬಸ್ಸು ರಾತ್ರಿ ಎಂಟು ಗಂಟೆಗೆ ಅಲ್ಲಿಗೆ ತಲುಪಬೇಕಿತ್ತು. ಹಾಳಾದ ಬಸ್ಸು ಲೇಟಾಗಿ ನಾನು ತಲುಪುವಾಗ ಗಂಟೆ ಹತ್ತಾಗಿತ್ತು. ನನ್ನ ಸ್ನೇಹಿತ ಕಾಣಸಿಗಲಿಲ್ಲ. ಬಹುಶಃ ಕಾದು ಕಾದು ಮನೆಗೆ ಹೋಗಿರಬೇಕು ಎಂದೆಣಿಸಿ ಮನೆ ಹುಡುಕಲು ಶುರು ಮಾಡಿದೆ. ಬಸ್ ಸ್ಟಾಂಡಿನಲ್ಲಿ ಅವರಿರುವ ಏರಿಯಾಗೆ ಹೇಗೆ ಹೋಗಬೇಕೋ ಯಾರೋ ಹೇಳಿದರು. ಅಲ್ಲಿಗೆ ತಲುಪಿದಾಗ ಎಲ್ಲರೂ ಮಲಗಿದ್ದು ಕಂಡಿತು. ಕೇಳೋಣವೆಂದರೆ ಯಾರೂ ಸಿಗುತ್ತಿಲ್ಲ. ಊರಿಗೆ ಹೊಸಬನಾದ ನನ್ನ ಹಿಂದೆ ನಾಲ್ಕು ನಾಯಿ ಬೊಗಳುತ್ತ ತಲೆ ಕೆಡಿಸುತ್ತಿವೆ. ಏನು ಮಾಡಬೇಕೋ ತಿಳಿಯುತ್ತಿಲ್ಲ. ಬೇಸಿಗೆಯಾದ್ದರಿಂದ ಜಗುಲಿಯ ಮೇಲೆ ಮಲಗಿದ್ದ ಜನ ಕಂಡರು. ಪ್ರಾಣ ಎದ್ದು ಬಂತು. ಹತ್ತಿರದಲ್ಲಿ ಸೊಳ್ಳೆ ಪರದೆ ಒಳಗೆ ಇದ್ದವರನ್ನು ಕರೆದೆ. ಬಡಪೆಟ್ಟಿಗೆ ಏಳಲಿಲ್ಲ. ಜೋರಾಗಿ ಕೂಗಿದೆ. ಪಾಪ ಏನು ಡಿಸ್ಟರ್ಬ್ ಆಯಿತೋ ಏನೋ ಮೇಲೇರಿ ಬಂದ ಆಸಾಮಿ. “ ತಿಳಿಯೋದಿಲ್ಲೇನ್ರೀ ! ಮಲಗಿದವರನ್ನ ಎಬ್ಬಿಸಿ ಅಡ್ರೆಸ್ ಕೇಳಬೇಕಾ” ಎನ್ನುತ್ತ ಹೊಡೆಯುವವನ ಹಾಗೆ ಏರಿ ಬಂದ. ನಾಯಿಗಳು ಅವನನ್ನು ಅಮರಿಕೊಂಡವು. ನಾನು ಬಚಾವಾಗಿ ಈಚೆ ಬಂದೆ. ಪುಣ್ಯಕ್ಕೆ ಯಾರೋ ಒಬ್ಬ ಸೈಕಲ್ ಸವಾರಿಯವನು ಕಂಡು ನನಗೆ ಸಹಾಯ ಮಾಡಿ ಮನೆ ಮುಟ್ಟುವ ಹಾಗೆ ಮಾಡಿದನೆನ್ನಿ.
ನಾನೊಬ್ಬ ನಿವೃತ್ತ ಬ್ಯಾಂಕಿನ ಅಧಿಕಾರಿ. ಸರ್ವೀಸಿನಲ್ಲಿದ್ದಾಗ ಸಾಲ ವಸೂಲಾತಿಗಾಗಿ ಹೊರಗಡೆ ತಿರುಗಿ, ಮನೆಗಳನ್ನು ಪತ್ತೆ ಹಚ್ಚಿ, ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯದ ಒಂದು ಭಾಗವಾಗಿತ್ತು. ಯಾಕೆ ಅಂದರೆ ಸಾಲ ತೊಗೊಳ್ಳುವವರೆಗೆ ಬ್ಯಾಂಕಿನ ಸುತ್ತೂ ಸುತ್ತಿದ ಸಾಲಗಾರ, ಮರು ಪಾವತಿ ಮಾಡದಾದಾಗ ಬ್ಯಾಂಕಿನ ಹತ್ತಿರ ಸಹ ಸುಳಿಯುವುದಿಲ್ಲ. ಅವನ ಮನೆಯನ್ನು ನಾವೇ ಹುಡುಕಿ ಹೋಗಬೇಕು. ಹಾಗೆ ಹುಡುಕಲು ಹೋದಾಗ ಸದ್ರಿ ಪಥ ದರ್ಶಕರು ನೆರವಾಗುತ್ತಾರೆ. ಗೊತ್ತಿರುವ ಕೆಲವರು ಸರಿಯಾಗಿ ನಿರ್ದೇಶಿಸುತ್ತಾರೆ. ಮತ್ತೆ ಕೆಲವರು ಮರ್ಯಾದೆಯಾಗಿ ಗೊತ್ತಿಲ್ಲವೆಂದು ಹೇಳುತ್ತಾರೆ. ಈ ಎರಡೂ ಕೆಟಗರಿಗಳ ಬಗ್ಗೆ ನನ್ನದೇನೂ ದೂರಿರುತ್ತಿದ್ದಿಲ್ಲ. ಮತ್ತೆ ಕೆಲವರು ಮಾತ್ರ “ ಏನ್ರೀ ಸಾಲ ಕೊಟ್ಟಿದ್ದೀರಾ ? ಎಷ್ಟು ಕೊಟ್ರಿ? ಕಟ್ತಾ ಇಲ್ವಾ ? ಸರಿ. ಸರಿ. ಅವರು ಕಟ್ಟಿದ ಹಾಗೇ ಬಿಡಿ. ಅಲ್ರೀ ! ನಾವು ಬಂದು ಸಾಲ ಕೇಳಿದ್ರೆ ನೂರೆಂಟು ಪ್ರಶ್ನೆ ಕೇಳ್ತೀರಾ ! ಇಂಥ ಹಾರಿಸುವವರಿಗೆ ಅದ್ಹೇಗ್ರೀ ಕೊಟ್ರಿ? ಏನು ಬ್ಯಾಂಕಿನವರೋ ಏನೋ ?” ಎಂದು ಮೂದಲಿಸುತ್ತ “ ಆಚೆ ರೋಡ್ಡಿನಲ್ಲಿದೆ. ಅಲ್ಲಿ ಯಾರ್ನಾದ್ರೂ ಕೇಳಿ. ಹೇಳ್ತಾರೆ. ಅಲ್ಲಿ ಕೇಳಿ” ಎನ್ನುವ ಉಪಕಾರ ಅವರದ್ದು.
ಮತ್ತೊಂದು ಅನುಭವ ನಾನು ಗೋವಾದಲ್ಲಿದ್ದಾಗಿನದು. ಗೋವಾದ ಆದಾಯ ಕರೆಯ ವಿಭಾಗೀಯ ಕಚೇರಿ ನಮ್ಮ ಬ್ಯಾಂಕಿನ ಶಾಖೆಯ ಹತ್ತಿರವಿತ್ತು. ಕರ್ನಾಟಕದ ಕೆಲವು ಪ್ರದೇಶಗಳು ಅದಕ್ಕೆ ಲಗತ್ತಿಸಿಕೊಂಡಿಸಿದ್ದವು. ಹಾಗಾಗಿ ಅಲ್ಲಿಗೆ ವರ್ಗಾವಣೆ ಆಗಿ ಬರುವ ಅನೇಕ ಜನ ಕನ್ನಡೋದ್ಯೋಗಿಗಳು ನಮ್ಮ ಬ್ಯಾಂಕಿಗೆ ( ನನ್ನ ಬ್ಯಾಂಕ್ ಕರ್ನಾಟಕ ಬ್ಯಾಂಕ್) ಅದರ ಅಡ್ರೆಸ್ ಕೇಳಲು ಬರುತ್ತಿದ್ದರು. ನಾವು ಸಹ ಅವರನ್ನು ಕನ್ನಡದಲ್ಲಿ ಮಾತನಾಡಿಸಿ ಅವರಿಗೆ ದಾರಿ ತೋರುತ್ತಿದ್ದೆವು. ಒಮ್ಮೆ ಹೀಗೇ ಯಾರೋ ಕೇಳಿದಾಗ ಅಲ್ಲೇ ನಿಂತ ನಮ್ಮ ಆಫೀಸರರು ತಟ್ಟನೆ “ ಹೀಗೇ ಮುಂದೆ ಹೋಗಿ. ಒಂದು ಐಲ್ಯಾಂಡ್ ಸಿಗುತ್ತೆ. ಅದನ್ನು ದಾಟಿದರೆ ನಿಮ್ಮ ಆಫೀಸ್ ಸಿಗುತ್ತೆ “ ಎಂದರು. ಬಂದವರು ತೀರ ಹೊಸಬರು ಪಾಪ. ಅದೂ ಪಣಜಿಯಲ್ಲಿ ಇಳಿದ ತಕ್ಷಣ ಹಿಂಬಾಲಿಸಿಕೊಂಡು ಬರುವ ಮಾಂಡವೀ ನದಿಯ ಜಲರಾಶಿ ಅವರ ತಲೆಯಲ್ಲಿ ಇದ್ದಿರಬೇಕು. ಅವರು ಸಂಶಯದಿಂದಲೇ “ ಸಾರ್ ! ಐಲ್ಯಾಂಡ್ ದಾಟಲು ಬೋಟಿನ ವ್ಯವಸ್ಥೆ ಇದೆಯಾ?” ಎಂದು ಕೇಳಿದರು. ಇವರು “ ಸ್ವಾಮೀ ! ಅದು ಟ್ರಾಫಿಕ್ ಐಲ್ಯಾಂಡ್ ರೀ ! ನಡೆದು ದಾಟಿ ಹೋಗಿ” ಎಂದಾಗ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು.
ಪಥ ದರ್ಶನದ ಮತ್ತೊಂದು ಅನುಭವ. ನಾನು ಯಾವುದೋ ಕಾಲನಿಯಲ್ಲಿ ಮನೆ ನಂಬ್ರ B/80 ಮನೆ ಹುಡುಕುತ್ತಿದ್ದೆ. B/70 ಸಿಕ್ಕಿತು. ಅದರ ಪಕ್ಕಕ್ಕೆ ರಸ್ತೆ. ಅದರ ಪಕ್ಕಕ್ಕೆB/81. ಹಾಗಾದರೆ B/80 ಎಲ್ಲಿ? ಅತ್ತ ಇತ್ತ ಸುತ್ತಾಡಿದೆ. ಎಲ್ಲೂ ಕಾಣಲಿಲ್ಲ. ಈಗಂತೂ ಪಥ ದರ್ಶಕರ ನೆರವು ತಪ್ಪಿದ್ದಲ್ಲ. ಅಲ್ಲಿಯೇ ಒಬ್ಬರು ಕೂದಲು ನೆರೆತವರು ಸಿಕ್ಕಿದರು. ಅವರನ್ನು ಕೇಳಿದಾಗ ಭಾರೀ ತಾಳ್ಮೆಯಿಂದ ಇವೆರಡರ ನಡುವಿನಲ್ಲೇ B/80 ಇದ್ದದ್ದು, ಯಾರದೋ ಪ್ರಭಾವದಿಂದ ರಸ್ತೆಯ ಸಲುವಾಗಿ ಅದನ್ನು ಒಡದದ್ದು, ಅದು ಈಗ B/120 ರ ಪಕ್ಕಕ್ಕೆ ಇರುವುದು ಎಲ್ಲ ಹೇಳಿದರು. ಆ ನಂಬರನ್ನು ಬಿಟ್ಟುಬಿಟ್ಟಿದ್ದರೆ ಅನಾಹುತ ಏನಾಗುತ್ತಿತ್ತು ಎಂದು ನನಗನಿಸಿದರೂ ಅವರನ್ನು ಕೇಳಲಿಕ್ಕೆ ಹೋಗಲಿಲ್ಲ. ಯಾಕೆಂದರೆ ಅದರ ಸ್ಥಳ ಪುರಾಣವನ್ನು ಹೇಳುವಷ್ಟು ಮಾಹಿತಿ ಅವರಲ್ಲಿತ್ತೆಂದು ಅನಿಸಿತ್ತು. ಅವರಿಗೆ ಮಾತನಾಡಲು ಯಾರಾದರೂ ಬೇಕಿತ್ತು.
ಒಮ್ಮೆ ಹೀಗಾಯಿತು. ನಾವು ಹುಡುಕುತ್ತಿದ್ದ ಪಕ್ಕದ ಮನೆಗೆ ಹೋಗಿ ವಿಳಾಸ ಕೇಳಿದೆವು. ಆ ಮನೆಯಾಕೆ ಹೊರಗೆ ಬಂದು “ ನೀವೇನಾಗಬೇಕು ಅವರಿಗೆ ? ಎಲ್ಲಿಂದ ಬಂದ್ರಿ ? ಪಕ್ಕದ್ದೇ ನೋಡಿ. ಬಲು ಬಜಾರಿ ಆ ಹೆಂಗಸು. ಬಾಯಿ ಬೊಂಬಾಯಿ. ದಿನಾ ಜಗಳವೇ ! ಸಾಕಾಗಿ ಹೋಗಿದೆ “ ಎನ್ನುವಾಗ ನಮಗೆ ಈ ಪ್ರಕಾರದ ಪಥದರ್ಶನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ.
ದೊಡ್ಡ ಊರುಗಳಲ್ಲಿ ಲ್ಯಾಂಡ್ ಮಾರ್ಕ್ ಬೇಕೇ ಬೇಕು.ಇಲ್ಲದಿದ್ದಲ್ಲಿ ನೀವು ಹಂತ ಹಂತವಾಗಿ ಘಟ್ಟಗಳನ್ನು ಏರಿಳಿದು ನಿಮ್ಮ ತಲೆ ಎಲ್ಲಾ ಕ್ರಾಸು ಕ್ರಾಸಾಗಿ ಅದರ ಮೇನ್ ಆಫ್ ಆಗಿ ಬಿಡುತ್ತೆ. ಆಗ ಪಥ ದರ್ಶಕರು ಸಹ ಏನೂ ಮಾಡಲಾರರು. ಒಂದು ಪುಕ್ಕಟೆ ಸಲಹೆ ಕೊಡುತ್ತಾರೆ ಮಾತ್ರ. “ ಹೀಗೆ ಎಷ್ಟು ಹುಡುಕಿದರೂ ಸಿಗಲ್ಲ ಸ್ವಾಮೀ. ನಿಮ್ಮವರಿಗೊಂದು ಫೋನ್ ಮಾಡಿ ಲ್ಯಾಂಡ್ ಮಾರ್ಕ್ ಕೇಳಿ” ಅಂತಾರೆ. ಹಾಗೇ ದೊಡ್ಡ ಅಪಾರ್ಟ್ ಮೆಂಟುಗಳಲ್ಲಿ ಯಾವ ಬ್ಲಾಕೋ ತಿಳಿದಿರಬೇಕು. ಆಟೋದವನೋ, ಕ್ಯಾಬಿನವನೋ ನಿಮ್ಮನ್ನು ಆ ಅಪಾರ್ಟ್ ಮೆಂಟಿನ ಮುಂದೆ ತಂದು ನಿಲ್ಲಿಸುತ್ತಾನೆ. ಅಲ್ಲಿಂದ ಒಳಗೆ ಹೋಗಲು ಸೆಕ್ಯುರಿಟಿ ಅವನ ಹತ್ತಿರ ನೀವು ಯಾವ ಬ್ಲಾಕ್, ಯಾವ ಫ್ಲಾಟು ಹೇಳ ಬೇಕಾಗುತ್ತದೆ. ಈಗೀಗಂತೂ ಅವರು ನಿವಾಸಿಗಳಿಗೆ ಮೆಸೇಜ್ ಕಳಿಸಿ, ಅಲ್ಲಿಂದ ಓಕೇ ಬಂದರೇನೇ ನಿಮ್ಮನ್ನು ಒಳಗೆ ಬಿಡೋದು. ಇಲ್ಲಿ ಸಹ ಪಥ ದರ್ಶಕರು ಗೌಣವಾಗುತ್ತಾರೆ.
ಮುಂಚೆ ಅಂಚೆ ಪೇದೆ, ಸರ್ಕಲ್ಲಲ್ಲಿ ನಿಂತ ಪೋಲೀಸು, ಕಿರಾಣಿ ಅಂಗಡಿ ವ ಔಷಧಿ ಅಂಗಡಿ, ಲ್ಯಾಂಡ್ರಿಯವನು ಇವರೆಲ್ಲರೂ ಯಾವುದೇ ಸಂದರ್ಭದಲ್ಲೂ ಸಮರ್ಥ ಪಥ ದರ್ಶಕರು ಎಂದು ಅನುಭವದಿಂದ ತಿಳಿದಿದ್ದೇನೆ. ಈಗಂತೂ ಅಂಗೈಯಲ್ಲಿಯೇ ದಾರಿ ತೋರಿಸುವ ಜಿಪಿಎಸ್ ಬಂದ ಮೇಲೆ ಅದೇ ಪಥ ದರ್ಶಿನಿ ಯಾಗಿದ್ದರೂ, ಅದರಲ್ಲೂ ಕೆಲ ಕಷ್ಟ ಕಂಡಿದ್ದೇನೆ. ನಿಮಗೆ ಗೊತ್ತಿರುವ ಲ್ಯಾಂಡ್ ಮಾರ್ಕ್ ಅದರಲ್ಲಿ ಕಾಣುವುದಿಲ್ಲ. ಅದು ಯಾವುದು ತೋರಿಸುತ್ತದೋ ಅದರ ಪ್ರಕಾರ ನಿಮಗೆ ಗೊತ್ತಿರುವ ಭೂ ನಕ್ಷೆಯನ್ನು ಅನ್ವಯಿಸಿಕೊಂಡು ಕಂಡು ಹಿಡಿಯಬೇಕು. ಮತ್ತೆ ನೀವೇನಾದರೂ ತಪ್ಪು ರಸ್ತೆಗೆ ತಿರುಗಿದರೆ ಅದು ಇದು ತಪ್ಪು ಎನ್ನುವುದಿಲ್ಲ. ಬದಲಾಗಿ ಅಲ್ಲಿಂದ ಹೇಗೆ ನಿಮ್ಮ ಗಮ್ಯವನ್ನು ತಲುಪಬೇಕೋ ತೋರುತ್ತದೆ. ಇದರಿಂದ ಇನ್ನೂ ಗೋಜಲಾಗಿದ್ದ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಮತ್ತೆ ಕೊನೆಗೆ ಮೇಲ್ಕಾಣಿಸಿದ ಕೆಲವರ ’ಪಥ ದರ್ಶ” ಪಡೆದೇ ಗಮ್ಯವನ್ನು ತಲುಪಿದ್ದೇನೆ. ಯಾವುದಕ್ಕೋ ಮಾನವೀಯ ಸಹಾಯ ಬೇಕೇ ಬೇಕು. ಒಬ್ಬರಿಗೊಬ್ಬರಾಗಿ ಬದುಕುವುದೇ ವಿಶ್ವ ಮಾನವ ಸಂದೇಶವಲ್ಲವೇ ? ನಮಸ್ಕಾರ. ಯಾರದ್ದೋ ಜರೂರು ಮನೆ ಹುಡುಕ ಬೇಕಾಗಿದೆ. ಬರ್ತೇನೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ