- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಸಾಹಿತಿಕಾರರಿಗೆಲ್ಲ ’ಮುನ್ನುಡಿ’ ’ಬೆನ್ನುಡಿ’ ಪದಗಳು ತುಂಬಾ ಪರಿಚಯ. ಆದರೆ ಈ ಬೆನ್ನ ಬರಹ ಏನು ಎನ್ನಬಹುದು? ಬೆನ್ನುಡಿ ಎಂದರೆ ಬೆನ್ನ ಬರಹ ಎಂದರೇ ಸಾಹಿತ್ಯ ಪರವಾಗಿ ಅರ್ಥ ಒಂದೇ ಆದರೂ ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಬೆನ್ನಬರಹ ಸ್ವಲ್ಪ ಬೇರೇ. ತಮ್ಮ ಸೃಜನಾತ್ಮಕ ಭಾವನೆಗಳನ್ನು ಹೊರಹಾಕಲು ಬರಹಗಾರರು ಮಾಧ್ಯಮಗಳನ್ನು ಹುಡುಕುತ್ತಿರುತ್ತಾರೆ. ಬರಹಗಳಿಗೆ ಅನೇಕ ಮಾಧ್ಯಮಗಳು ಕಾಣಸಿಗುತ್ತವೆ. ಕಾಗದ, ಕಂಪ್ಯೂಟರ್, ಟಾಬ್ಲೆಟ್, ಮೊಬೈಲ್ ಇವೆಲ್ಲ ನಮಗೆ ಗೊತ್ತಿರುವ ಮಾಧ್ಯಮಗಳು, ಆದರೆ ಈಗ ನಾನು ತಿಳಿಸುವ ಮಾಧ್ಯಮದ ಮೇಲಿನ ಬರಹಗಾರರು ಇತರೆ ಬರಹಗಾರರರ ತರ ಸಾಹಿತಿಗಳಾಗಿರಬೇಕಿಲ್ಲ. ಆದರೆ ಅವರಿಗಿಂತ ಕಮ್ಮಿಯಲ್ಲ ಅಂತ ಈ ಲೇಖನ ಮುಗಿಯುವಾಗ ನೀವೇ ಹೇಳುತ್ತೀರಿ. ಹೌದು. ಇದು ನಾವು ನಡೆಸುವ ಗಾಡಿಗಳ ಹಿಂದೆ, ಮುಂದೆ, ಪಕ್ಕೆಗಳಲ್ಲಿ ಸಿಗುವ ಉಪರಿತಲಗಳು.
ಈಗ ವಾಹನಗಳು ಪ್ರತಿ ಮನೆಯಲ್ಲೂ ಇರುವುದು ಸಾಧಾರಣವಾಗಿದೆಯೇ ಹೊರತು ಒಂದೆರಡು ದಶಕಗಳ ಕೆಳಗೆ, ಮಧ್ಯ ತರಗತಿಯ ಜನಾಂಗಕ್ಕೆ ಒಂದು ಸ್ವಯಂಚಾಲಿತ ವಾಹನವನ್ನು ಸ್ವಂತವಾಗಿಸಿಕೊಳ್ಳುವುದು ಜೀವಮಾನದ ಗುರಿಯಾಗಿರುತ್ತಿತ್ತು. ಈ ತರದ ಕನಸನ್ನು ನನಸಾಗಿಸಿಕೊಂಡ ಕೆಲ ಸೃಜನಾತ್ಮಕ ಜೀವಗಳು ತಮ್ಮದೇ ಆದ ಅನಿಸಿಕೆಗಳನ್ನು ತಮ್ಮ ವಾಹನಗಳ ಬೆನ್ನಿನ ಮೇಲೆ ಬರೆಸಿಕೊಳ್ಳುವುದರ ಮೂಲದ ಅವುಗಳ ಮೇಲೆ ತಮಗಿರುವ ಭಾವನಾತ್ಮಕ ನಿಲುವುಗಳನ್ನು ಸಾರುವುದನ್ನು ಕಾಣಬಹುದು. ಇವುಗಳನ್ನು ಪರಿಶೀಲಿಸುತ್ತ ಹೋಗುವಾಗ ಕೆಲ ಕುತೂಹಲ ಕೆರಳಿಸುವ ಬರಹಗಳನ್ನು ನಾನು ಕಂಡಿದ್ದು ಅವುಗಳನ್ನು ನಿಮ್ಮ ಮುಂದಿಡುತ್ತೇನೆ.
“ಹುಟ್ಟಿದ ಪ್ರತಿ ಮನುಷ್ಯನೂ ಸಾಯಲೇ ಬೇಕು” ಎನ್ನುವ ತಾತ್ವಿಕ ಚಿಂತನೆಯನ್ನು ಪ್ರತಿಬಿಂಬಿಸಲು ಹೊರಟ ಈ ಬೈಕು ಒಡೆಯ ತನ್ನ ವಾಹನದ ಹಿಂದೆ “ Born to dead” ಅಂತ ಬರೆಸಿದ್ದು ಕಂಡೆ. ನಿಜಕ್ಕೆ ಇದು “ Born to be dead” ಆಗಬೇಕಿತ್ತು. ತಾನು ಬರೆಸಿದ್ದು “ಸತ್ತವರಿಗೆ ಹುಟ್ಟಿದ್ದೇನೆ” ಎಂದರ್ಥ ಕೊಡುತ್ತದೆ ಅಂತ ಅವನಿಗೆ ತಿಳಿದಿರಲಿಕ್ಕಿಲ್ಲ. ಇದು ಅಪಭ್ರಂಶದ ಉದಾಹರಣೆ. ಹೀಗೇ ಇನ್ನೊಂದು ಬೈಕಿನ ಹಿಂದೆ Mom’s Gift, Dad’s money, I enjoy” ಅಂತಿತ್ತು. ಪಾಪ ನಿಜ ಒಪ್ಪಿಕೊಂಡಿದ್ದಾನೆ ಎನಿಸಿತು. ಒಂದರ ಹಿಂದೆ “What are you reading ? Idiot” ಅಂತಿತ್ತು. ಬೆಚ್ಚಿಬಿದ್ದು ಅತ್ತಿತ್ತ ನೋಡಿದೆ, ನಾನು ಓದಿದ್ದು ಯಾರೂ ನೋಡಿಲ್ವಲ್ಲ ಅಂತ ನೋಡಲಿಕ್ಕೆ. “You are following a vagabond” ಅಂತ ಓದಿಕೊಂಡು ಅವನ ಹಿಂದಿ ಹೋಗೋದು ಬಿಟ್ಟು ಮುಂದಕ್ಕೆ ಹೋದೆ. ಇನ್ನು ಚಿಂದಿ ಬರಹ. ನೋಡಿ. “ If you are bad, I am your Dad “ ಇನ್ನು ಅವನನ್ನು ಯಾರೂ ಕೆಣಕಬಾರದು ! ಮತ್ತೊಬ್ಬರ ಬೈಕಿನ “ Give me a loan, Leave me alone” ಅಂತ ಬರೆಸಿದ್ದು ಯಾಕೆ ಅಂತ ಗೊತ್ತಾಗದಿದ್ದರೂ ಬ್ಯಾಂಕಿನಿಂದ ನಿವೃತ್ತನಾದ ನನಗೆ ಕೆಟ್ಟಿನಿಸಿತು. ಸಾಲ ವಸೂಲಿಯಾಗ ಬೇಕಲ್ಲ !
ಹೀಗೆ ಒಂದೊಂದನ್ನೂ ಓದುವಾಗ ನನ್ನ ಕುತೂಹಲ ಏರುತ್ತಾ ಹೋಗಿ ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಬರೆದ ಕೆಲ ಬರಹಗಳನ್ನು ಓದಲು ಅವುಗಳನ್ನು ಹಿಂಬಾಲಿಸುತ್ತ ನನ್ನ ಬ್ಯಾಲನ್ಸ್ ಕಳೆದುಕೊಂಡು ಇತರೆ ವಾಹನ ಚಾಲಕರ ಕೆಂಗಣ್ಣಿಗೆ ಗುರಿಯಾದದ್ದೂ ಇದೆ. ಆದರೆ ಇದರಿಂದ ನನ್ನ ಆಸಕ್ತಿ ಇನ್ನೂ ಹೆಚ್ಚುತ್ತಾ ಹೋಗಿ ನನ್ನ ಈ ಅನ್ವೇಷಣೆಯನ್ನು ಜಾಸ್ತಿ ಮಾಡಿದೆ. ಕೆಲ ಸೃಜನಶೀಲ ಬರಹಗಳು ಕಣ್ಣಿಗೆ ಬಿದ್ದು ಈ ಲೇಖನಕ್ಕೆ ಸೇರಿಕೊಂಡವು.
ಆದರೆ ಇದರ ಬಗ್ಗೆಗಿನ ಜಿಜ್ಞಾಸೆ ಕೆರಳಿಸಿದ್ದು ಮಾತ್ರ ನಾನು ಕೆಲ ವರ್ಷಗಳ ಕೆಳಗೆ ಇನ್ನೂ ಸೇವೆಯಲ್ಲಿದ್ದಾಗ ಅಟೆಂಡ್ ಆದ ಒಂದು ತರಬೇತಿ ಕಾರ್ಯಕ್ರಮ. ಆಗ ಅಲ್ಲಿಯ ಅಧ್ಯಾಪಕರೊಬ್ಬರು ಈ ತರದ ಬರಹಗಳ ಬಗ್ಗೆ ಪ್ರಸ್ತಾವಿಸಿದ್ದರು. ಆಗ ಅವರು ಹೇಳಿದ ಬರಹಗಳು ಈಗ ಸಹ ನೆನಪಲ್ಲಿ ಉಳಿದಿವೆ. ಸಾಧಾರಣವಾಗಿ ಆಟೋಗಳ ಹಿಂಭಾಗದಲ್ಲಿ ಹೊಸದಾಗಿ ಬಿಡುಗಡೆಯಾದ ಚಿತ್ರದ ಹೆಸರು ಬರೆಯುವ ರೂಢಿಯನ್ನು ಕಾಣುತ್ತೇವೆ. ಆಗ ಹೀಗೆ ಬರೆದ ಹೆಸರು “ಬಿಳಿ ಹೆಂಡ್ತಿ”. ಅದರ ಕೆಳಗಡೆಯೇ ಎಲ್ಲ ಆಟೋಗಳು ಕಡ್ಡಾಯವಾಗಿ ಬರೆಸಲೇ ಬೇಕಾದ “ಬಾಡಿಗೆಗೆ” ಬರೆದಿದ್ದಂತೆ. ಇವೆರಡನ್ನು ಜೋಡಿಸಿ ಓದಿಕೊಂಡು ತಮಗಾದ ಮಜಾ ಹೇಗಿತ್ತು ಅಂತ ನಗುತ್ತ ತಿಳಿಸಿದರು.. ಮತ್ತೊಂದು ಉದಾಹರಣೆ ಅಂದಿನ ತುರ್ತು ಪರಿಸ್ಥಿತಿಯ ಸಂದೇಶ “ ದೇಶವು ಪ್ರಗತಿ ಪಥದಲ್ಲಿದೆ” ದ ಕೆಳಗೆ ವೇಗದ ಮಿತಿ ೪೦ ಕಿ.ಮೀ ಕಾಣುತ್ತಿತ್ತಂತೆ. ಇದನ್ನು ಸಹ ಸೇರಿಸಿ ಓದಿ ನಮಗೆ ನಗೆ ತರೆಸಿದ್ದರು.
ಮತ್ತೆ ವರ್ತಮಾನಕ್ಕೆ ಬರೋಣ. ನಮ್ಮ ಪ್ರಗತಿಗೆ ನಾವು ನಮ್ಮ ತಂದೆ ತಾಯಿಯರನ್ನು ನೆನೆಸುವುದು ವಾಡಿಕೆ. ಸಮಯ ಬಂದಾಗಲೆಲ್ಲ ಅದನ್ನು ಹೊರ ಹಾಕಿ ನಮ್ಮ ಕೃತಜ್ಞತೆಗಳನ್ನು ತಿಳಿಸುತ್ತೇವೆ. ಈ ಭಾವನೆಯನ್ನು ಪ್ರತಿಬಿಂಬಿಸುವ ಬರಹಗಳಾದ “ ತಾಯಿಯ ಆಶೀರ್ವಾದ “ ತಂದೆಯ ಕೃಪೆ” ಅಥವಾ “ ತಾಯಿ ತಂದೆಯರ ಆಶಿರ್ವಾದ“ ಗಳು ಆಟೋಗಳ ಹಿಂದೆ ಕಾಣಸಿಗುತ್ತವೆ. ನಾನು ಮುಂಬೈಯಲ್ಲಿದ್ದಾಗ ಇದರ ಮರಾಠೀ ಅವತರಣವಾದ “ ಆಯೀ ವಡೀಲಾಚ ಆಶೀರ್ವಾದ್” ಓದಿದ್ದೆ. ಇದರ ಉರ್ದು ಅವತರಣ ಇಲ್ಲಿಯ ಮುಸಲ್ಮಾನರ ಗಾಡಿಗಳ ಹಿಂದೆ ಕಾಣುತ್ತದೆ. ಆದರೆ ಅದರಲ್ಲಿಯ ಒಂದು ಅಪಭ್ರಂಶ ನನಗೆ ನಗೆ ತರಿಸಿತ್ತು. “ಮಾ ಬಾಪ್ ಕಿ ದುವಾ” ಎನ್ನುವುದರ ಬದಲು “ಮಾ ಬಾಪ್ ಕಿ ಧುವಾ” ಅಂತ ಬರೆದಿತ್ತು. ಧುವಾ ಅಂದರೆ ಹೊಗೆ ಅಂತ ಬರೆದವನಿಗೆ ಮತ್ತು ವಾಹನದ ಒಡೆಯನಿಗೆ ಗೊತ್ತಿರಲಿಲ್ಲ ಅಂದರೆ ನಂಬಲಿಕ್ಕಾಗಲ್ಲ.
ಇನ್ನೊಬ್ಬ ತನ್ನ ಆಟೋಗೆ ಪ್ರೀತಿಯ ರಂಗನ್ನು ಹಚ್ಚಿದ್ದ. ಹೇಗೆ ಅಂತ ನೋಡಿ. ಹಿಂದೆ ಬರೆದಿದ್ದು “Fear milenge meri jaan” ಅದನ್ನು ಅರ್ಥಮಾಡಿಕೊಳ್ಳಲು ನಾನು ತುಂಬಾ ಹೊತ್ತು ಅವನ ಬೆನ್ನು ಹತ್ತಬೇಕಾಯಿತು. ಕೆಲ ಆಟೋದವರು ಶಾಯರಿ ಅಥವಾ ಗಜಲ್ ಪ್ರಿಯರಿರುತ್ತಾರೆ ಅಂತ ಕಾಣುತ್ತೆ. ತಮ್ಮ ಆಟೋಗಳ ಹಿಂಭಾಗದಲ್ಲಿ ತುಂಬಾ ಉದ್ದವಾದ ಶಾಯರಿಗಳ ಸಾಲುಗಳನ್ನು ಬರೆಸಿರುತ್ತಾರೆ. ಚಲಿಸುವ ವೇಗದ ವಾಹನಗಳ ಗುಂಪಿನಲ್ಲಿ ನುಸುಳಿಕೊಳ್ಳುತ್ತ ಅವುಗಳನ್ನು ಓದಿ ಅರ್ಥ ಮಾಡಿಕೊಂಡು ( ಮೊದಲೇ ನನಗಿರುವ ಉರ್ದು ಜ್ಞಾನ ಅಷ್ಟಕ್ಕಷ್ಟೇ ) ನಿಮಗೆ ಅದರ ರಸದೌತಣ ಬಡಿಸಬೇಕಾದರೆ ನಾನು ಆಸ್ಪತ್ರೆಗೆ ದಾಖಲಾಗಬೇಕಾದೀತು ! ಹಾಗಾಗಿ ಅವರ ರಸಿಕತೆಗೆ ಒಂದು ಸಲಾಮ್ ಹಾಕಿ ಆ ಪ್ರಯತ್ನ ಬಿಟ್ಟಿದ್ದೇನೆ. ಆ ಬರಹಗಳಲ್ಲಿ ಅದೆಷ್ಟು ಈ ತರದ ಉಚ್ಚಾರಣಾ ದೋಷ ಅಥವಾ ಅಪಭ್ರಂಶ ಪದ ಬಳಕೆಗಳಿವೆಯೋ ನನಗಂತೂ ಗೊತ್ತಿಲ್ಲ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಮಾತ್ರ ಹೇಳಬಲ್ಲೆ.
ಮತ್ತೆ ಜಾಸ್ತಿ ಸಿಗುವ ಬರಹಗಳೆಂದರೇ ದೇವರ ಬಗ್ಗೆ ಬರೆಸಿಕೊಂಡ ಕೃಪಾ ಪೂರ್ವಕ ಬರವಣಿಗೆಗಳು. ತಮ್ಮ ಮನೆದೇವರುಗಳ ಅಥವಾ ಮೆಚ್ಚಿದ ದೇವರುಗಳ ಅಥವಾ ಸ್ಥಳೀಯ ದೇವರುಗಳ ಹೆಸರನ್ನು ತಮ್ಮ ಆಟೋಗಳ ಹಿಂದೆ ಬರೆಸಿಕೊಂಡು ತಮ್ಮ ಭಕ್ತಿಯನ್ನು ಸಾರುವುದನ್ನು ಕಾಣಬಹುದು. ತೆಲುಗುನಾಡು(ಈಗ ಎರಡುರಾಜ್ಯಗಳಲ್ಲವೇ ! ಅದಕ್ಕೆ) ಗಳಲ್ಲಿ ವೆಂಕಟರಮಣ, ನರಸಿಂಹ ತುಂಬಾ ಜನರ ಮನೆ ದೇವರುಗಳು. ಅದಕ್ಕೆ ಈ ಹೆಸರುಗಳು ಜಾಸ್ತಿ ಕಾಣುತ್ತವೆ. ಹೈದರಾಬಾದಿನ ಹತ್ತಿರವಿರುವ ಯಾದಗಿರಿ ಲಕ್ಷ್ಮೀ ನರಸಿಂಹನ ನೆನಪಿಗಾಗಿ ಬರೀ “ಯಾದಗಿರಿ” ಹೆಸರು ತುಂಬಾ ಕಾಣುತ್ತದೆ. ಪರಿಶಿಷ್ಟ ಜನಾಂಗವಾದ ಲಂಬಾಡಿ ಜನರಿಗೆ ಸರಕಾರ ತಮ್ಮ ಸ್ಕೀಮುಗಳಲ್ಲಿ ತುಂಬಾ ಆಟೋಗಳನ್ನು ಕೊಡಿಸಿದೆ. ಅವರುಗಳು ತಮ್ಮ ದೇವರಾದ “ ಸೇವ್ಯಾನಾಥನ ರಥ “ ಅಥವಾ “ ರೂಪ್ಯಾನಾಥನ ರಥ “ ಅಂತಲೋ ಅಥವಾ “ ಸೇವ್ಯಾಲಾಲ್ ದೇವರ ದೀಪ” ಅಂತಲೋ ಬರೆಸಿ ತಮ್ಮ ಭಕ್ತಿಯನ್ನು ತೋರುತ್ತಾರೆ. ಮುಸಲ್ಮಾನರ ಗಾಡಿಗಳ ಹಿಂದೆ “ ಯಾ ರಬ್ ತೇರೀ ದುವಾ “ ಅಂತಲೋ ಅಥವಾ “ ಅಲ್ಲಾ ಮಿಯಾ ಕೀ ದುವಾ” ಅಂತಲೋ ಕಾಣುತ್ತವೆ. ಕ್ರೈಸ್ತರು “ ಕ್ರೈಸ್ಟ್ ದಿ ಲಾರ್ಡ್” ತುಂಬಾ ಬರೆಸುತ್ತಾರೆ. ಈ ಸರಣಿಯಲ್ಲಿ ನಾನು ಕಂಡ ಅತಿ ಉದ್ದದ ಬರಹವನ್ನು ನಿಮ್ಮ ಮುಂದಿಡದೆ ಹೋದರೆ ಈ ಲೇಖನದ ಉದ್ದೇಶವೇ ನಿರರ್ಥಕ. ಅದು ಹೀಗಿದೆ. “ಪರಮಹಂಸ ಸಚ್ಚಿದಾನಂದ ಪುರುಷೋತ್ತಮ ಅಮ್ಮ ಭಗವಾನ್ ಸಮೇತ ಕಲ್ಕಿ ಭಗವಾನ್ ನಮಃ”. ಈ ಒಡೆಯ ತನ್ನ ಒಂದು ವಾರದ ಬಾಡಿಗೆಯನ್ನಾದರೂ ಕೊಟ್ಟಿರಬೇಕು ಇದು ಬರೆಸುವುದಕ್ಕೆ ಎನಿಸಿತು. ಆದರೆ ಅದು ಅವನ ಭಕ್ತಿ ಎನ್ನಿ.
ಆಗಾಗ ಬೆಂಗಳೂರಿಗೆ ಮಗಳ ಮನೆಗೆ ಹೋದಾಗ ಅಲ್ಲಿಯ ಬರವಣಿಗೆಗಳಲ್ಲಿ ನನಗೆ ಕಂಡ ಕೆಲ ಬೆನ್ನ ಬರಹಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. “ಅಂಕಲ್ ಆಫೀಸಿಗೆ, ಆಂಟಿ ಟಾಕೀಸಿಗೆ” “ ಓ ಮಲ್ಲಿಗೆ ನೀನೆಲ್ಲಿಗೆ” ಗಳ ಜೊತೆಗೆ ಉಚ್ಚಾರಣಾ ದೋಷದ “ ಚೀ ತುಂಟಿ” ಸಹ ಕಂಡಿತ್ತು. ಹಾಗೇ “ ಯಾರೇ ನೀನು ಮಾಡ್ರನ್ ಮಿಟುಕಲಾಡಿ” ಎನ್ನುವುದನ್ನು ನೋಡಿ ಯಾರೋ ಮಾಡ್ರನ್ ಹುಡುಗಿ ಇವನಿಗೆ ಕೈ ಕೊಟ್ಟಿರಬೇಕು ಅಂದೆಣಿಸಿದೆ. “ಭೂಮಿ ತಾಯಾಣೆ, ನೀನಿಷ್ಟ ಕಣೇ” ಎನ್ನುವ ಪ್ರಿತಿ ಅರಹುವ ಒಕ್ಕಣೆ ಮನಸ್ಸನ್ನು ಸೆಳೆದಿತ್ತು. “ ನಿನ್ನ ಪ್ರೀತಿನ್ನ ನಂಬಿ ವಿಷ ಕುಡಿದ್ನಲ್ಲೇ “ ಎನ್ನುವ ವಾಕ್ಯ ಓದಿ ಈ ಆಟೋ ನಡೆಸುವವನು ಭೂತವಾಗಿಲ್ಲವಷ್ಟೇ ಎಂದು ಹೆದರಿಕೆ ಮೂಡಿತ್ತು. “ಪ್ರೀತಿ ಮಾಡುವ ಮನಸ್ಸಿಲ್ಲದ ಮೇಲೆ ಮನ ಕೆಡಿಸುವ ಈ ರೂಪ ಯಾಕೆ?” ಎನ್ನುವ ಬರಹ ಅವನ ಮನಃಸ್ಥಿತಿಯನ್ನು ನನ್ನ ಮನಕ್ಕೆ ಮುಟ್ಟುಸಿತ್ತು. “ ಐಯಾಮ್ ಸುನಾಮೀ ಡೋಂಟ್ ಫಾಲೋ ಮಿ” ಎನ್ನುವ ಭರ್ಜರಿ ವಾಕ್ಯ ಬೆಚ್ಚಿ ಬೀಳಿಸಿತ್ತು. “ ಜಿಂಕೆ ಮರಿ ಓಡ್ತೈತೆ ನೋಡ್ಲಾ ಮಗಾ” ಎನ್ನುವ ಬರವಣಿಗೆ ಅವನಿಗೆ ತನ್ನ ವಾಹನದ ಬಗ್ಗೆ ಇರುವ ಅಭಿಮಾನ ತೋರಿತ್ತು. ಇವಕ್ಕೆಲ್ಲ ಮಕುಟಾಯಮಾನ “ ಕನ್ನಡವೇ ನನ್ನುಸಿರು” “ ಸಿರಿಗನ್ನಡಂ ಗಲ್ಲಿ ಗಲ್ಲಿಗೆ “ ಎನ್ನುವ ಕನ್ನಡ ತಾಯಿಯ ಬಗ್ಗೆ ಅಭಿಮಾನದ ಮಾತುಗಳು ಹೆಮ್ಮೆ ತರಿಸಿತ್ತು. ಇನ್ನು ಆಧ್ಯಾತ್ಮ ಚಿಂತನೆ ಇಣುಕಿ ನೋಡುವ “ ದೀನ ನಾನು, ದಾನಿ ನೀನು” “ಮಾವನು ಕೊಟ್ಟದ್ದು ಮನೆತನಕ, ದೇವರು ಕೊಟ್ಟದ್ದು ಕೊನೆ ತನಕ” ಎನ್ನುವ ಬರಹಗಳನ್ನೂ ಕಂಡಿದ್ದೆ. ಇವಷ್ಟೇ ಅಲ್ಲದೇ ಅಣ್ಣನವರ, ಯುವರಾಜರ, ಸಾಹಸ ಸಿಂಹರ, ಅಂಬರೀಷರ ಬಗ್ಗೆ ಬರಹಗಳು, ನವ ಪೀಳಿಗೆಯ ನಾಯಕರಾದ ಸುದೀಪ್, ದರ್ಶನ್ ರವರ ಬಗ್ಗೆ ಬರಹಗಳ ಜೊತೆ ಕೆಲ ನಾಯಕರ ಬಗ್ಗೆ ಬರೆದುಕೊಂಡ ಅಭಿಮಾನದ ಮಾತುಗಳೂ ಕಂಡವು. ಒಟ್ಟಾರೆ ನೋಡ್ತಾ ಹೋದ ಹಾಗೆಲ್ಲ ಕಾಮನ ಬಿಲ್ಲಿನ ಬಣ್ಣಗಳಂತೆ ವಿವಿಧ ಬರವಣಿಗೆಗಳು ಅವರ ಅಭಿರುಚಿಯನ್ನು ಸಾರುತ್ತಿದ್ದವು.
ಈ ಸಾಲಿನಲ್ಲಿ ಕಾರುಗಳ ಹಿಂದಿನ ಬರಹಗಳು ಸಹ ಮೋಜೆನಿಸುತ್ತವೆ. ಆದರೆ ಮೇಲ್ಕಾಣಿಸಿದ ಹಾಗೆ ಅಪಭ್ರಂಶಗಳು ಕಮ್ಮಿ. ಬಹುಶ ನುರಿತ ಬರಹಗಾರರಿಂದ ಬರೆಸುತ್ತಾರೆನಿಸುತ್ತದೆ. ಮತ್ತು ಬರವಣಿಗೆಗಳು ಸಹ ಗಂಭೀರವಾಗಿರುತ್ತವೆ. ದೊಡ್ಡ ದೊಡ್ಡ ಶಾಯರಿಗಳು, ಗಜಲ್ ಗಳು ಕಾಣುವುದಿಲ್ಲ. ಎಷ್ಟಾದರೂ ಅವರ ಲೆವೆಲ್ ಸ್ವಲ್ಪ ಮೇಲಲ್ಲವೇ ! ಅಲ್ಲಿ ಸಹ ಭಕ್ತಿ, ಒಲವು, ಸಂವೇದನೆಯ ಬಗ್ಗೆ ಬರಹಗಳು ಕಂಡರೂ ಜಾಸ್ತಿಯಾಗಿ ಕಾಣುವುದು ಅವರ ಮಕ್ಕಳ ಹೆಸರುಗಳೇ. ಕೆಲ ಪ್ರಾಸ ಬದ್ಧ ಹೆಸರುಗಳು ಓದಲು ಮೋಜನಿಸುತ್ತವೆ. ಆದರೆ ಕೆಲ ವಿಶೇಷ ಹೆಸರುಗಳು ನಾನು ಶೇಕರಿಸುತ್ತಿದ್ದ ಪಟ್ಟಿಯಲ್ಲಿ ಸೇರಿಕೊಳ್ಳುತ್ತವೆ. ಉದಾಹರಣೆಗೆ “ ಹಿರೋಷಿತ’ ಎನ್ನುವ ಹೆಸರು ಕಂಡಿತ್ತು. ಆ ಮಗುವಿನ ತಂದೆ ಹಿರೋಷಿಮಾ ನಗರದ ಮೇಲೆ ಬಾಂಬು ಬಿದ್ದಾಗ ಅದರ ನೆನಪಿಗಾಗಿ ಹೆಸರು ಇಟ್ಟಿರಬೇಕು ಎನಿಸಿತು. ಇನ್ನೂ ಕೆಲ ವಿಶೇಷ ಹೆಸರುಗಳು ಮೋಕ್ಷಜ್ಞ, ಹೃದ್ಯಲಸಿಕ, ಸಾಧಕಲತ. ನನ್ನ ಹುಡುಕಾಟದ ವ್ಯಾಪ್ತಿ ಈಗ ಲಾರಿಗಳ ಹಿಂದಿನ ಹಿಂದಿ ಬರಹಗಳ ಮೇಲೆ, ಮತ್ತು ರೈಲ್ವೇ ಡಬ್ಬಿಗಳ ಮೇಲೆ ಬರೆಸುವ ಜಾಹಿರಾತುಗಳಲ್ಲಿ ಕಾಣುವ ವಿಶೇಷ ಸಾಲುಗಳ ಮೇಲೆ ಸಾಗಿದೆ. ಸದ್ಯದಲ್ಲೇ ಅವುಗಳ ಬಗ್ಗೆ ಮತ್ತೊಂದು ಲೇಖನದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಅಲ್ಲಿಯವರೆಗೆ ಎಲ್ಲರಿಗೆ ವಿದಾಯ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ