- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಭಾರತೀಯರಾದ ನಾವೆಲ್ಲಾ ಕರ್ಮ ಸಿದ್ಧಾಂತವನ್ನು ನಂಬುತ್ತೇವೆ. ’ನಾ ಮಾಡಿದ ಕರ್ಮ ಬಲವಂತವಾದರೇ ನೀಮಾಡುವುದೇನು ದೇವಾ’ ಎಂದು ದಾಸರು ಹಾಡಿದ್ದಾರೆ. ಅಂದರೇ ನಮ್ಮ ಒಳಿತು ಕೆಡಕುಗಳಿಗೆ ನಾವು ಕರ್ಮ ಸಿದ್ಧಾಂತಕ್ಕೆ ಜೋಡಿಸುತ್ತೇವೆ. ಈ ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ನನಗೆ ಸಾಪತ್ಯ ವೆನಿಸುತ್ತದೆ. ಏನೋಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ?
ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ. ನಮ್ಮ ದೇಶದ ವಿಮಾನಯಾನಗಳಲ್ಲಿ ಸ್ಥಳೀಯರ ನೆರವು ಪಡೆದು ಆಗಾಗ ಬರುವ ಅಡೆತಡೆಗಳಿಗೆ ಏನಾದರೂ ಪರಿಹಾರ ಕಂಡುಕೊಳ್ಳಬಹುದು. ಆದರೇ ವಿದೇಶೀಯಾನ ಕೈಗೊಂಡಾಗ ಇದು ಕಷ್ಟ. ಅದಕ್ಕೆ……
ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇ ನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯದ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ.
ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿರಲಿಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೭ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನ ತಲೆ ಎತ್ತಿ ಮೇಲೆ ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಅಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವಾಗಿರಲಿಲ್ಲ. ಮತ್ತೂ ಈ ಥರಾ ವೇದಂತ ಧೋರಣಿಯನ್ನ ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ.
ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು. ತಕ್ಷಣ ನಾವಿಬ್ಬರೂ ಪಾಸಪೋರ್ಟ್ ಮಾಡಿಸಿದ್ದೇ ಅದಕ್ಕೆ ನಿದರ್ಶನ. ಆದರೇ ಆ ಪ್ರವಾಸಕ್ಕೆ ಆರು ವರ್ಷ ಕಾಯಬೇಕಾಯಿತೆನ್ನಿ. ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು. ಸಂದರ್ಶನದ ಸಮಯದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ.
ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಅಳತೆಗಳಿಂದ ಹಿಡಿದು ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಸಹಿತ. ಹುಡುಗರಿಬ್ಬರೂ ನಮಗೆ ಯಾವ್ಯಾವ ಸಾಮಾನು ಅಮೆರಿಕಾಗೆ ತರಬಾರದೋ ಹೇಳುತ್ತಾ ನಮಗೆ ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸಾರಿ ಸರಿನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಕೂತು ಅವರು ಕೊಡುವ ತಿಂಡಿ ಸಲುವಾಗಿ ಹಸಗೊಂಡು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಯ ವಲಸೆ ಬರುವವರನ್ನ ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನ ಸಹಿಸಿ ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದಕಡೆಗೆ ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎಂದು ನಮ್ಮ ಭಾವನೆ. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.
ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನ ತಮ್ಮ ಮಕ್ಕಳ ಸಲುವಾಗಿ ತಂದೇ ತರತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊಂದನ್ನೇ ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನ ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿ ತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟೀಕ್ ಚೀಲವನ್ನ ಹಿಡಿದು ಬೆಕ್ಕಿನ ಮರಿಯನ್ನ ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನ ಸಮ್ಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ.
ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ? ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರಕ್ಕೆ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು.
ನನ್ನ ಹೆಂಡತಿ “ ಅಯ್ಯೋ” ಎಂದಳು. ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನ ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿ ಪ್ರಸಾದ ಕಸದ ಬುಟ್ಟಿಗ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಬಂದಾಗಿನಿಂದ ಮತ್ತೆ ಹೊರಗೆ ಬರುವವರೆಗೆನ ಪ್ರಯಾಣ ನಿಮ್ಮ ಮಾನವ ಜನ್ಮದ ತರಾ. ಮನುಷರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮ ಪುಣ್ಯ. ಅಥವಾ ಪಾಪ ಅಂತಿಟ್ಕೊಳ್ಳಿ. ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳು ಅವರ ನಿಶಿತ ದೃಷ್ಟಿಗೆ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಆ ಬೆಳ್ಳಿ ಸಾಮಾನುಗಳನ್ನೆಲ್ಲಾ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ.
ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನ ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನ ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ” ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.
ಸರಿ. ಇನ್ನೊಂದು ಅನುಭವವನ್ನ ಹೇಳಿ ನಿಮ್ಮ ಸಹನೆಗೆ ಮಂಗಳ ಹಾಡುತ್ತೇನೆ. ಮತ್ತೊಮ್ಮೆ ಅಮೆರಿಕೆಗೆ ಹೋಗುವ ಸಂದರ್ಭ ಬಂದೊದಗಿತು. ನನ್ನ ಮಗಳು ಹಡೆಯುವವಳಿದ್ದಳು. ಅವಳಿಗೆ ನೆರವಾಗಲು ನಾವು ಹೊರಟೆವು.
ಹಿಂದಿನ ಸಲದ ಪ್ರಯಾಣದ ತರಾನೇ ದುಬೈನಲ್ಲಿ ಇಳಿದು ಇನ್ನೊಂದು ಏರ್ ಕ್ರಾಫ್ಟನ್ನು ಹತ್ತಬೇಕಿತ್ತು. ಕಳೆದಸಲ ನಮ್ಮ ಬಾಗಿಲು ಹುಡುಕಬೇಕಾದಾಗ ಸ್ವಲ್ಪ ದೂರವೆನಿಸಿದರೂ ಅಷ್ಟೊಂದು ಆತಂಕವಾಗಲಿಲ್ಲ. ಈಸಲದ ಅನುಭವವೇ ಬೇರೇ. ಟೆರ್ಮಿನಲ್ ೫೨ ನಮ್ಮದು. ಹುಡುಕಿಕೊಂಡು ಹೊರಟೆವು. ನಡೆದದ್ದೇ ಆಯಿತು. ಕಾಣುವುದೇ ಇಲ್ಲ. ಎಲ್ಲಕಡೆ ಫಲಕಗಳಿದ್ದರೂ ನಾವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವಾ ಎಂಬ ಸಂಶಯ ನಮ್ಮನ್ನ ಕಾಡುತ್ತಿತ್ತು. ದುಬೈಯಲ್ಲಿ ಇಳಿದು ಸಾನ್ ಫ್ರಾನ್ಸಿಸ್ಕೋ ಗೆ ಹೋಗುವವರು ಕಮ್ಮಿ. ಅವರು ಸಹ ನಮ್ಮಂತ ಇಳಿ ವಯಸ್ಸಿನವರೇ. ಅವರ ಮುಖದಲ್ಲೂ ಆತಂಕ ಎದ್ದು ಕಾಣುತ್ತಿತ್ತು. ಸುಮಾರು ಅರ್ಧ ಗಂಟೆ ನಡೆದಮೇಲೆ ವಿಮಾನ ನಿಲ್ದಾಣದ ಒಬ್ಬ ಹೆಂಗಸು ನಮ್ಮನ್ನ ಸರತಿಯ ಸಾಲಲ್ಲಿ ನಿಲ್ಲುಸುತ್ತಿದ್ದಳು. ಯಾಕೆ ಅಂತ ಕೇಳಿದರೇ ನೀವೀಗ ರೈಲಿನಲ್ಲಿ ಹೋಗಬೇಕು ಎಂದಳು. ನಮಗೆ ಮತ್ತೆ ಕಳವಳ ಸುರುವಾಯಿತು. ಎಲ್ಲಿದೆ ನಮ್ಮ ಗೇಟು, ರೈಲಿನಲ್ಲಿ ಎಷ್ಟು ದೂರ ಕ್ರಮಿಸಬೇಕು, ಎಷ್ಟು ಹೊತ್ತು ಹಿಡಿಯುತ್ತದೆ ಅಷ್ಟರಲ್ಲಿ ನಮ್ಮ ವಿಮಾನ ತಪ್ಪುತ್ತದಾ ಎಂಬ ಸಂಶಯಗಳ ಸುರಿಮಳೆ ಪ್ರಾರಂಭವಾಯಿತು. ಅವಳನ್ನ ಕೇಳಲಿಕ್ಕಿಲ್ಲ. ಅವಳು ಜನರನ್ನ ಸರತಿಯಲ್ಲಿ ನಿಲ್ಲಿಸುತ್ತಾ ಬ್ಯುಸಿಯಾಗಿದ್ದಳು. ಸುತ್ತಮುತ್ತ ನೋಡಿದರೇ ಎಲ್ಲಾ ನಮ್ಮಂತವರೇ, ದುಗುಡ ತುಂಬಿದ ಮುಖಗಳೇ. ಕಡೆಗೂ ಒಂದು ಹತ್ತು ನಿಮಿಷ ನಿಂತಮೇಲೆ ರೈಲು ಬಂದಿತು. ನಾವು ಹತ್ತಿದೆವು. ಅದು ಮತ್ತೆ ಕೆಲ ಗೇಟುಗಳಿಗೂ ಹೋಗುತ್ತದೆ. ನಾವು ಹತ್ತಿದ ಡಬ್ಬಿಯಲ್ಲಿದ್ದ ಒಬ್ಬ ಸಿಬ್ಬಂದಿ ನಮ್ಮನ್ನ ೫೨ನೇ ಗೇಟಿಗೆ ಇಳಿಸಿದರು. ಮತ್ತೆ ಅಲ್ಲಿಂದ ನಡಿಗೆ. ನನಗಂತೂ ಕ್ಯಾಬಿನ್ ಬ್ಯಾಗೇಜಿನಲ್ಲಿಟ್ಟ ಲ್ಯಾಪ್ ಟಾಪ್ ನಿಂದಾಗಿ ಅದು ತುಂಬಾ ಭಾರವಾಗಿತ್ತು. ಅದನ್ನು ಹೊತ್ತು ನಡೆಯುವುದರಲ್ಲಿ ದೇವರು ಕಾಣಿಸುತ್ತಿದ್ದ. ಅದರ ಮೇಲೆ ಈ ಭಯ ಬೇರೆ. ದುಬೈಯಲ್ಲಿ ನಮಗೆ ಹೈದರಾಬಾದಿನ ಪ್ಲೇನ್ ಇಳಿದು ಅಮೆರಿಕಾ ಪ್ಲೇನ್ ಹತ್ತಲು ಎರಡು ಗಂಟೆ ಸಮಯ ಇರತ್ತೆ. ನಾವು ವಿಮಾನ ಇಳಿಯುವ ಮೊದಲೇ ಮಾನಿಟರ್ ನಲ್ಲಿ ಕಾಣಿಸುತ್ತಿರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಫ್ಲೈಟ್ ಮಿಸ್ ಆಗಬೇಡಿ ಅಂತ. ಒಂದುವೇಳೆ ಹಾಗಾದಲ್ಲಿ ಅವರದೇ ಮತ್ತೊಂದು ಫ್ಲೈಟ್ ನಲ್ಲಿ ಕಳಿಸುತ್ತಾರೆ. ಆದರೇ ಆ ಊರಲ್ಲದ ಊರಲ್ಲಿ ಕಾಯಬೇಕು. ನಮಗೆ ಅದೇ ಭಯವಾಗಿತ್ತು. ಅಂತೂ ಇನ್ನೋ ಒಂದು ಗಂಟೆ ಸಮಯವಿದೆ ಎನ್ನುವಾಗ ಟೆರ್ಮಿನಲ್ ೫೨ ಕಾಣಿಸಿತು. ಎಂಥಾ ನಿಟ್ಟುಸಿರು ಬಿಟ್ಟೆವು ಎಂದರೇ ನೋಡಿದವರು ಬುಸಗುಟ್ಟಿದೆವೇನೋ ಎನ್ನುವಷ್ಟು. ದುಬೈ ವಿಮಾನ ನಿಲ್ದಾಣ ದೊಡ್ಡದು ಅಂತ ಗೊತ್ತಿತ್ತಾದರೂ, ಇಷ್ಟು ದೊಡ್ಡದಿರಬಹುದು ಅಂತ ಮತ್ತು ಅಲ್ಲಿ ಕೆಲ ಗೇಟುಗಳಿಗೆ ರೈಲಿನಲ್ಲಿ ಹೋಗಬೇಕು ಅಂತ ನಮಗ ಗೊತ್ತಿರಲಿಲ್ಲ. ಇದೂ ಒಂದು ಅನುಭವ. ನೋಡಿ. ಕಳೆದಸಲ ಸಲೀಸಾಗಿ ಸಿಕ್ಕಿದ ನಮಗೆ ಈ ಸಲ ಒದ್ದಾಡಿಸಿದ್ದು ! ಮತ್ತೆ ವೇದಾಂತ ಬಂತು ಎಂದರೇ ಬರದೇ ಇರುತ್ಯೇ.
ನಾವು ಹೊರಡುವಾಗ ನನ್ನ ಮಗಳು ನಮಗೆ ಸುಳಿವು ಹೇಳಿತ್ತಾ “ ಕೌಂಟರನಲ್ಲಿ ಕೇಳಿದರೇ ನಾನು ಬಸಿರಿ ಅಂತ ಹೇಳಬೇಡಿ. ನಮ್ಮ ಅಮೆರಿಕನ್ನರ ನ್ಯಾನೀ ಕೆಲಸ ನೀವು ವಹಿಸಿಕೊಂಡು ನಮ್ಮವರಿಗೆ ಅನ್ಯಾಯ ಮಾಡುತ್ತಿದ್ದೀರಿ “ ಎಂದು ತಕರಾರು ತೆಗೀಬಹುದು. ಕಳೆದ ಸಲ ಬಂದಾಗ ಕೆಲ ಪ್ರದೇಶಗಳು ನೋಡಿರಲಿಲ್ಲ. ಮತ್ತೆ ನೋಡಲು ಬಂದಿದ್ದೇವೆ ಎನ್ನಿ.” ಅಂದಿದ್ದಳು. ಪುಣ್ಯಕ್ಕೆ ಕೌಂಟರಿನಲ್ಲಿಯ ಜನ ಅದರ ಬಗ್ಗೆ ಪ್ರಶ್ನೆ ಕೇಳಲಿಲ್ಲ. ಈ ಸಲ ಬಂದಾಗ ಎಲ್ಲಾ ಸರಿಯಾಗೇ ತಂದಿದೀವಿ ಎಂದು ಧೈರ್ಯದಿಂದ ಸಾಗಿದ್ದೆವು. ಮತ್ತೂಮ್ಮೆ ನಮ್ಮ ಸಾಮಾನು ಕ್ಷಕಿರಣದ ಮೂಲಕ ಹಾದು ಹೋಗಬೇಕಾಯಿತು. ಮೊದಲನೆ ಸಲ ಮಾತ್ರ ಇಂಥ ತಪಾಸು ನಡೆಯುತ್ತೆ ಅಂತ ಅಂದುಕೊಂಡ ನಮಗೆ ಕಿರಿಕಿರಿ ಎನಿಸಿತು. ಮತ್ತೆ ಸಾಮಾನೆಲ್ಲಾ ಬಿಚ್ಚಿ ಅವರೆದುರು ಪ್ರದರ್ಶಿಸ ಬೇಕಾಯಿತು. ಕಳೆದಸಲದ ತರ ಅಲ್ಲದೇ ಈ ಸರ್ತಿ ತುಂಬಾ ಜಾಗರೂಕರಾಗಿದ್ದು ನಿಷಿದ್ಧ ಪದಾರ್ಥಗಳನ್ನ ಹತ್ತಿರ ಸಹ ಬರಲಿಕ್ಕೆ ಬಿಟ್ಟಿರಲಿಲ್ಲ. ಆದರೇ ನಾವು ಕೊಂಡೊಯ್ದ ಹೈದರಾಬಾದಿನ (ಅಥವಾ ಆಂಧ್ರದ) ಸಿಹಿ ತಿಂಡಿ ’ಚಲಿಮಿಡಿ’ ಅವರ ಗಮನ ಸೆಳೆಯಿತು. ಅಕ್ಕಿಹಿಟ್ಟು, ಬೆಲ್ಲ ಮತ್ತು ತುಪ್ಪಗಳಿಂದ ಮಾಡಿದ ಸಿಹಿತಿಂಡಿ ಅದು, ಮುದ್ದೆ ತರ ಇರುತ್ತದೆ. ಈ ಸಲ ನಮ್ಮ ಸಾಮಾನನ್ನ ಪರಿಶೀಲಿಸಿದ್ದು ಒಬ್ಬ ಚೈನಾ ಮೂಲದವರು. ಅವರಿಗೆ ಚಲಿಮಿಡಿಯ ಬಗ್ಗೆ ತುಂಬಾ ಪ್ರಶ್ನೆಗಳಿದ್ದವು. ಅವುಗಳನ್ನೆಲ್ಲಾ ನಾವು ತಿಳಿಗೊಳಿಸುತ್ತಾ ಹೋದೆವು. ಆ ಆಫೀಸರ್ ಅದನ್ನ ಮುಟ್ಟಿ ನೋಡಿದ. ಮೂಸಿ ನೋಡಿದ.ಸ್ವಲ್ಪ ಹಿಸುಕಿದ. ಮತ್ತೆ ಅದರ ಸ್ವರೂಪವನ್ನ ನೋಡಿದ. ಅವನ ಮೆದುಳಿನಲ್ಲಿ ಏನು ಹೊಳೆಯುತ್ತಿತ್ತೋ ನಮಗಂತೂ ಅರ್ಥವಾಗಲಿಲ್ಲ. ನಮ್ಮ ಸಿಹಿತಿಂಡಿ ಅಮೆರಿಕದ ಮಗಳು ಅಳಿಯಂದಿರಿಗೆ ಸಿಗುತ್ತದೋ ಅಥವಾ ಕ.ಬು. ಪಾಲಾಗುತ್ತದೋ ಎನ್ನುವ ಪ್ರಶ್ನೆ ನಮ್ಮನ್ನ ಕಾಡುತ್ತಿತ್ತು. ಒಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ತರಾ ಸಾಗುತ್ತಿತ್ತು ವಿಚಾರಣೆ. ಕಡೆಗೋ ನಮ್ಮ ನಸೀಬು ಖುಲಾಯಿಸಿ ಸರಿ ಹೋಗಿ ಎನ್ನುವಾಗ ವರ್ಲ್ಡ್ ಕಪ್ ಗೆದ್ದಷ್ಟು ಸಂತೋಷ ನಮ್ಮಿಬ್ಬರಿಗೂ. ನನ್ನ ಹೆಂಡತಿ ಮಾತ್ರ ಅವರನ್ನ ಬಡಪೆಟ್ಟಿಗೆ ಕ್ಷಮಿಸಲಿಲ್ಲ. ಮತ್ತೊಮ್ಮೆ ಹೊರಗೆ ಬಂದಾಕ್ಷಣ ಮಗಳಿಗೆ ಹೇಳಿಬಿಟ್ಟಳು ನಿಮ್ಮ ಅಮೆರಿಕಾ ಕಚಡಾ ಅಂತ.
ಈ ಅನುಭವಗಳೆಲ್ಲಾ ಪಟ್ಟು/ಕೇಳಿ ನನಗನಿಸಿದ್ದು ವೇದಾಂತ ವಲ್ಲದೇ ಮತ್ತೇನು ಹೇಳಿ ? ನಾವು ಎಷ್ಟೇ ಒಳ್ಳೆಯವರಾಗಿರಲಿ, ನಿಯತ್ತಿನವರಾಗಿರಲಿ, ಆಫೀಸಿನಲ್ಲಿ ಎಂಥಾ ಹುದ್ದೆ ಹೊಂದಿದವರಾಗಿರಲಿ ಅಲ್ಲಿ ಅವೆಲ್ಲಾ ಗೌಣ. ನಾವು ಅಲ್ಲಿಯ ಸಿಬ್ಬಂದಿಯೊಂದಿಗೆ ವ್ಯವಹರಿಸಲು ಏನೇ ತರಬೇತಿ ತೆಗೆದುಕೊಂಡಿರಲಿ ಅದೆಲ್ಲಾ ವ್ಯರ್ಥ. ಅವರ ಎದುರಲ್ಲಿ ನಿಂತು ಕಳೆಯುವ ಸಮಯ ಇದೆಯಲ್ಲಾ ಅದೇ ಎಲ್ಲಾ ನಿರ್ಧರಿಸುತ್ತದೆ ಪಾಸೋ ಫೇಲೋ ಅಂತ. ಅಲ್ಲಿ ನಿಮ್ಮ ನೆರವಿಗೆ ಯಾರೂ ಬರುವುದಿಲ್ಲ. ಜೀವನಾನೂ ಅಷ್ಟೇ ತಾನೇ. ನಮಗೆ ಬಂದದ್ದು ನಾವು ಅನುಭವಿಸಬೇಕು. ಇಲ್ಲೂ ಅದನ್ನ ಬೇರೇ ಯಾರೂ ಹಂಚಿಕೊಳ್ಳಲಾಗುವುದಿಲ್ಲ. ನಿಮ್ಮ ಪುಣ್ಯಪಾಪಗಳಿಗೆ ನೀವೇ ಹೊಣೆ. ಈಗ ಹೇಳಿ. ವಿದೇಶೀ ವಿಮಾನಯಾನ ನಿಮ್ಮನ್ನ ಆಧ್ಯಾತ್ಮಿಕ ಚಿಂತನೆಗೊಳಮಾಡುತ್ತದೆ ಅಂತ ಅನಿಸಿತೋ ಇಲ್ಲವೋ .
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್