- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಮಮತೆಯ ಖನಿ ಮಮತಾ ರೈ ಮೂಲತಃ ಉಪನ್ಯಾಸಕಿ. ಪರಿಸರ ಸ್ನೇಹಿ, ಗ್ರಾಮೀಣ ಕುಶಲ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2018ರಿಂದ ಕದಿಕೆ ಟ್ರಸ್ಟ್ ಪ್ರಾರಂಭಿಸಿ ಅಂದುಕೊಂಡ ಧ್ಯೇಯೋದ್ದೇಶಗಳ ಈಡೇರಿಕೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಪರಿಸರಕ್ಕೆ ,ಆರೋಗ್ಯಕ್ಕೆ, ಅಂದಕ್ಕೆ , ಆದಾಯಕ್ಕೆ ಪೂರಕವಾಗಿರುವ ಉಡುಪಿಸೀರೆಗಳ ಪುನಶ್ಚೇತನಕ್ಕೆ ಈಗ ಕಟಿಬದ್ಧರಾಗಿದ್ದಾರೆ. ಈ ಸೀರೆಗಳ ನೇಕಾರಿಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತದೆ. 4500 ವರ್ಷಗಳ ಇತಿಹಾಸ ಹೊಂದಿರುವ ನೇಕಾರಿಕೆಗೆ ಉತ್ಕೃಷ್ಟ ಉದಾಹರಣೆಯೆಂದರೆ ಉಡುಪಿ ಸೀರೆಗಳು.
ಈ ನೇಕಾರರ ಮೂಲ ತಮಿಳುನಾಡು. 1844 ರಲ್ಲಿ ಬಾಸೆಲ್ ಮಿಷನ್ ವತಿಯಿಂದ ಮೊದಲಿದ್ದ ಗುಳಿ ಮಗ್ಗದ ಬದಲಿಗೆ ಫ್ರೇಮ್ ಮಗ್ಗವನ್ನು ಪರಿಚಯಿಸಲಾಯಿತು. ಜರ್ಮನಿಯ ಹೆಲೆನ್ ಎಂಬುವವರು ಮೊಟ್ಟ ಮೊದಲ ಬಾರಿಗೆ 1851 ರಲ್ಲಿ ಪ್ರಯೋಗಾರ್ಥವಾಗಿ ಮಗ್ಗವನ್ನು ಪರಿಚಯಿಸುತ್ತಾರೆ. ಗಾಂಧೀಜಿಯವರ ಸಹಕಾರ ಚಳವಳಿಯಿಂದ ಪ್ರೇರಿತರಾಗಿ ನೇಕಾರ ಸಂಘಗಳು ಸೀರೆಗಳನ್ನು ನೇಯಲಾರಂಭಿಸಿದರು. ಮತ್ತೆ ಕೆಲವರು ಮಗ್ಗಗಳನ್ನು ನೆಲೆಗೊಳಿಸಿ ನೇಕಾರರನ್ನು ಕೂಲಿಗೆ ನೇಮಿಸಿಕೊಂಡು ಉದ್ಯಮವನ್ನು ನಡೆಸುತ್ತಾರೆ. ಕೈಮಗ್ಗ ಸೀರೆ ನೇಯುವ ಎಂಟೂ ಸಂಘಗಳನ್ನು ಮಾರಾಟದಲ್ಲಿ , ಸಾಗಾಟದಲ್ಲಿ, ವಿನ್ಯಾಸದಲ್ಲಿ ಉಡುಪಿ ಸಂಘ ಪ್ರತಿನಿಧಿಸುತ್ತಿದ್ದ ಕಾರಣದಿಂದ ಇದನ್ನು “ಉಡುಪಿಸೀರೆ”ಎಂದು ಕರೆಯುತ್ತಾರೆ.
ಸರಳ ಸುಂದರ ವಿನ್ಯಾಸ, ತಿಳಿ ಬಣ್ಣದ ಈ ಪರಿಸರ ಸ್ನೇಹಿ ಸೀರೆಗಳನ್ನು 40, 60, 80 ನಂಬರಿನ ಒಂದು ಎಳೆಯ ನೂಲಿನಿಂದ ನೇಯುತ್ತಾರೆ. ಸೀರೆಯ ಮೈ ಸಾದಾ, ಚೌಕುಳಿ,ವಿನ್ಯಾಸದಿಂದ ಕೂಡಿದ್ದು ಅಂಚು ಮತ್ತು ಸೆರಗು ಮೈ ಬಣ್ಣಕ್ಕೆ ಹೊಂದುವ ಗಾಢ ಬಣ್ಣದಿಂದ ಇರುತ್ತದೆ. ಇವುಗಳನ್ನು ನೇಯುವ ಮೊದಲೆ ಸೆರಗಿನ ಭಾಗದ ಹಾಸು ನೂಲನ್ನು ಮಾತ್ರ ಕಟ್ಟಿ ಬಣ್ನ ಹಾಕುವುದು, ನೇಯುವಾಗಲೆ ಗಂಜಿ ಹಾಕುವುದು, ದಾರದಿಂದ ಸೆರಗು ಬಾರ್ಡರ್ಗೆ ವಿನ್ಯಾಸ ಮಾಡುತ್ತಾರೆ. ಹೀಗೆ ವಿಶೇಷ ಹೊಂದಿರುವ “ಉಡುಪಿಸೀರೆ”ಯು 2016 ರಲ್ಲಿ ಪ್ರಾದೇಶಿಕ ವಿಶಿಷ್ಟತೆ ವಿಭಾಗದಲ್ಲಿ ಪ್ರಶಸ್ತಿ ಬಂದಿದ್ದು ಜಿ.ಐ ಟ್ಯಾಗನ್ನು ಸಹ ಪಡೆದಿದೆ.
1990 ರವರೆಗೆ “ಉಡುಪಿಸೀರೆ”ಗಳ ಸುವರ್ಣ ಯುಗವಾಗಿತ್ತು ಎನ್ನಬಹುದು.. ಎಲ್ಲಾ ವರ್ಗದ ಹೆಂಗಳೆಯರು ಆಗ ಉಡುಪಿಸೀರೆಗಳನ್ನು ಬಯಸಿ ಬಳಸುತ್ತಿದ್ದರು. ಕಾಟಂಜಿ, ಇಕ್ಕತ್, ಮುತ್ತು ಬಾರರ್ಡರ್, ಆರ್ಟ್ಸಿಲ್ಕ್ ಮುಂತಾದ ಹೆಸರಿನಲ್ಲಿ ಭರ್ಜರಿ ಮಾರಿಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದ್ದವು. ಯಕ್ಷಗಾನದಲ್ಲಿ ತೊಡುವ ಕಸೆ ಸೀರೆಗಳು ಉಡುಪಿ ಸೀರೆಗಳ ಮುಖ್ಯ ವೈವಿಧ್ಯತೆಗಳಲ್ಲೊಂದು. ಆಧುನಿಕತೆ ಹೆಚ್ಚಾದಂತೆ ಕೃತಕ ನೂಲಿನ ಬಟ್ಟೆಗಳು ಜನರನ್ನು ಆಕರ್ಷಿಸಿದಾಗ ನಿಪುಣ, ಕುಶಲ ನೇಕಾರರು ಸಂಕಷ್ಟ ದಿನಗಳನ್ನು ಎದುರಿಸುವಂತಾಯಿತು. ನಗರೀಕರಣ, ತಂತ್ರಜ್ಞಾನ ಮೊದಲಾದ ಹೆಸರಿನಲ್ಲಿ ಕರಾವಳಿಯಲ್ಲಿ ನವೋದ್ಯಮಗಳು ಪ್ರಾರಂಭವಾದಾಗ ನೇಕಾರರು ತಮ್ಮು ಮೂಲ ವೃತ್ತಿಗೆ ತಿಲಾಂಜಲಿ ಇಡಬೇಕಾಯಿತು. ಯುವಕರೂ ಆದಾಯದ ಕೊರತೆಯ ಹಿನ್ನೆಲೆಯಲ್ಲಿ ಪರಂಪರೆಯ ವೃತ್ತಿಗೆ ಮರಳಲು ಮನಸ್ಸು ಮಾಡಲಿಲ್ಲ. ಮಗ್ಗಗಳು ಮನೆಯಲ್ಲಿರುಯವುದು ವ್ಯರ್ಥವೆಂಬ ಭಾವನೆ, ಸರಿಯಾಗಿ ಕಚ್ಚಾ ಪದಾರ್ಥಗಳು ಸಿಗದೆ ಇರುವುದು, ಸಹಾಯಕರ ಕೊರತೆ, ಸರಕಾರದ ನಿರ್ಲಕ್ಷ್ಯ ಪಾರಂಪರಿಕ ಉಡುಪಿಸೀರೆ ಉದ್ಯಮವನ್ನು ಮಸುಕಾಗಿಸಿತು.
ಕೈಮಗ್ಗದಿಂದ ಸ್ಥಳಿಯವಾಗಿ ನೇಯಲ್ಪಟ್ಟ ಎರಡು ತಲೆಮಾರುಗಳವರೆಗೆ ಬರುತ್ತವೆ ಎಂದರೆ ಹುಬ್ಬೇರಿಸುವಂತಾಗುತ್ತದೆ. ಉಟ್ಟು ಬಳಸಿ ಸೀರೆ ಹಳೆಯದು ಅನ್ನಿಸಿದರೆ ಕೌದಿಗಳನ್ನು ತಯಾರಿಸಬಹುದು, ಹಪ್ಪಳ, ಸಂಡಿಗೆ ಮಾಡಿ ಒಣಗಿಸಲು ಹೇಳಿ ಮಾಡಿಸಿದವು ಇವುಗಳು. ನವಜಾತ ಶಿಶುಗಳನ್ನು ಸುತ್ತಲು, ಹಾಗೆ ಮಕ್ಕಳಿಗೆ ಬೇಕಾದ ಆರೋಗ್ಯ ಸ್ನೇಹಿ ಡಯಾಪರ್ಗಳನ್ನಾಗಿ ಪರಿವರ್ತಿಸುವಲ್ಲಿ ಈ ಸೀರೆಗಳು ಇರುತ್ತವೆ. ಅದೂ ಅಲ್ಲದೆ ಇದ್ದರೆ ಒರಸು ಬಟ್ಟೆಗಳಾಗಿ ಕಸ ಸೇರಿದರೂ ಯಾವ ಹಾನಿ ಇಲ್ಲದೆಯೇ ಮಣ್ಣಲ್ಲಿ ಮಣ್ಣಾಗಿ ಕಣ್ಮರೆಯಾಗುತ್ತವೆ.
ಇಂಥ ಉಪದ್ರ ರಹಿತ ಉಡುಪಿಸೀರೆಗೆ ಕಾಯಕಲ್ಪ ಕೊಡುವ ಕೆಲಸ ಈಗ ಭರದಿಂದ ಸಾಗಿದೆ. 2015 ರಲ್ಲಿ ಸ್ಥಳಿಯರನ್ನು ಬಳಸಿಕೊಂಡು ಅವರ ಸಲಹೆಯ ಮೇರೆಗೆ ಪಾರಂಪರಿಕ, ಸಾಂಸ್ಕೃತಿಕ ಸೊಗಡನ್ನು ಬಿತ್ತರಿಸುವ ಕಾರಣದಿಂದ ಮಂಗಳೂರಿನಿಂದ ಕಾರ್ಕಳಕ್ಕೆ ಬಂದು ಮಮತಾ ರೈ ಕದಿಕೆ ಟ್ರಸ್ಟ್ ಮಾಡಿದ್ದಾರೆ . ಇವರ ಮೊದಲ ಆದ್ಯತೆ ಉಡುಪಿಸೀರೆಗಳ ಪುನಶ್ಚೇತನವಾಗಿದೆ. “ಅಜ್ಜಿಯರು ಉಡುವ ಸೀರೆ” ಎಂದೆ ಬ್ರ್ಯಾಂಡ್ ಆಗಿದ್ದ ಸೀರೆಗಳ ಈಗ ನೀರೆಯರು ಉಡುವ ಸೀರೆಗಳಾಗಿವೆ. ಲಲನೆಯ ಕೈಯ್ಯ ನೆರಿಗೆಗಳಲ್ಲಿ ಬಂಧಿಯಾಗಿ ಫ್ಯಾಷನ್ ಶೋಗಳ ರ್ಯಾಂಪ್ ಮೆಟ್ಟಿಲೇರಿವೆ. ಪರಂಪರಾಗತ ಸೀರೆಗಳನ್ನು ಆಧುನಿಕತೆಯತ್ತ ಸೆಳೆದು ತಂದಿರುವ ಕದಿಕೆ ಟ್ರಸ್ಟಿನ ಈ ಕಾರ್ಯ ಅತ್ಯಂತ ಶ್ಲಾಘನೀಯ. ಉಡುಪಿ, ಶಿವಳ್ಳಿ, ಬ್ರಹ್ಮಾವರ,ಪಡುಪಣಂಬೂರ್, ತಾಳಿಪಾಡಿ ಮುಂತಾದವು ವಿವಿಧ ನೇಕಾರ ಸಂಘಗಳಲ್ಲಿಯೂ ಉಡುಪಿ ಸೀರೆಗಳು ತಯಾರಾಗುತ್ತವೆ. ಮುಖ್ಯವಾಗಿ ತಾಳಿಪಾಡಿ ಸಹಕಾರ ಸಂಘವು ಪುನಶ್ಚೇತನದ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಿವೆ. ಒಂದು ಕಾಲದಲ್ಲಿ 5,000 ದಷ್ಟಿದ್ದ ನೇಕಾರರು 42 ರ ಸಂಖ್ಯೆಗೆ ಇಳಿದು ಪಾರಂಪರ್ಯ ನೇಕಾರಿಕೆ ನೆಲಕಚ್ಚುವ ಮಟ್ಟಕ್ಕೆ ಬಂದಾಗ ಕದಿಕೆ ಟ್ರಸ್ಟ್ ನೆರವಿನಿಂದ ನೇಕಾರಿಕೆ ಹಾಗು ತತ್ಸಂಬಂಧಿ ವಹಿವಾಟು ಏರುಗತಿಯತ್ತ ಸಾಗುತ್ತಿರುವುದು ಆಶಾದಾಕವಾದ ಸಂಗತಿ. ಅಲ್ಲದೆ ಉದ್ಯೋಗ ಅರಸಿ ಪಟ್ಟಣ ಸೇರುವ ಗೀಳಿರುವ ಇಂದಿನ ಯುವ ಜನಾಂಗವೂ ಈ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದೂ ಆತ್ಮನಿರ್ಭರತೆಯ ಸಂಕೇತ ಎನ್ನಬಹುದು.
ಈ ವಿಶಿಷ್ಟ ಪರಿಸರ ಸ್ನೇಹಿ ಸೀರೆಗಳು ನೀರೆಯರನ್ನು ಸೂಜಿಗಲ್ಲಿನಂತೆ ಆಕರ್ಷಿಸಿರುವುದು, ಆಕರ್ಷಿಸುತ್ತಿರುವುದು ಸುಳ್ಳಲ್ಲ. ಪಾರಂಪರಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಮಮತಾ ರೈ ಮುಂದಾಳತ್ವದ ಕದಿಕೆ ಟ್ರಸ್ಟ್ ಗುಜರಾತ್ ಮೊದಲಾದ ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕಮ್ಮಟಗಳನ್ನು, ತರಬೇತು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ನೇಕಾರರ ಫೊಟೊ ಮತ್ತವರ ವಿವರಣೆ ಹೊಂದಿರುವ ಲೊಗೊದೊಂದಿಗೆ ಉಡುಪಿಸೀರೆಗಳು ವಿಶ್ವಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಸರ್ವಋತುಗಳಿಗೂ ಹೊಂದಿಕೆಯಾಗುವ ಈ ಸೀರೆಗಳು ಪರಿಸರ ಕಾಳಜಿಯನ್ನು ತನ್ಮೂಲಕ ಅನೂಚಾನವಾಗಿ ನಿರ್ವಹಿಸಿವೆ ಎಂದರೆ ತಪ್ಪಿಲ್ಲ. ಬೇಸಗೆಯಲ್ಲಿ ತಣ್ಣನೆಯ, ಚಳಿಯಲ್ಲಿ ಬೆಚ್ಚನೆಯ ಅನುಭವ ಕೊಡುವ ಈ ಸೀರೆಗಳು ಧರಿಸಿದ ಕೂಡಲೆ ನಮಗೆ ಆರಾಮದ ಭಾವನೆ, ದೇಶಿಯತೆಯ ಸುಖಾನುಭೂತಿಯನ್ನೊದಗಿಸುತ್ತವೆ. ಬಣ್ಣ, ವಿನ್ಯಾಸ, ಬಣ್ಣಗಳ ನಿಖರ ಹೊಂದಾಣಿಕೆಗಳಿಂದ ಅನನ್ಯವಾಗಿರುವ ಉಡುಪಿಸೀರೆಗಳ ಮೈಸಿರಿ ಹೆಂಗಳೆಯರನ್ನು ಮೆಚ್ಚಿಸಿದರೆ ಇದರ ಐಸಿರಿ ನೇಕಾರ ಬೆನ್ನು ತಟ್ಟುತ್ತಿದೆ ಹೊಸ ಭರವಸೆಯನ್ನು ಆದಾಯದ ರೂಪದಲ್ಲಿ ನೀಡುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಲ್ಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಪರಂಪರೆಯ ವೃತ್ತಿ ನಿರ್ವಹಿಸುತ್ತಿರುವವರಿಗೆ ಕದಿಕೆ ಟ್ರಸ್ಟ್ ಸೂಕ್ತ ಮಾರುಕಟ್ಟೆ, ಸೂಕ್ತ ಸಂಭಾವನೆ ಒದಗಿಸಿಕೊಟ್ಟು ವೃತ್ತಿಗೌರವವನ್ನು ನೇಕಾರರಲ್ಲಿ ಹೆಚ್ಚಿಸಿ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಅಪರೂಪದ ವಿನ್ಯಾಸಗಳ ಸೀರೆಗಳನ್ನು ತಿಂಗಳುಗಳ ಮೊದಲೆ ಕಾಯ್ದಿರಿಸುವ ಗ್ರಾಹಕರು ಉಡುಪಿಸೀರೆಗಳಿಗಿದ್ದಾರೆ. ಅಂದ ಹಾಗೆ ಈ ಸೀರೆಗಳೇನೂ ಗಗನಕುಸುಮಗಳಲ್ಲ ಎಲ್ಲರ ಎಟುಕಿಗೂ ನಿಲುಕುವ ದೇಸೀ ಉತ್ಪನ್ನಗಳು. ಇವಕ್ಕೆ ಕೊಡುವ ಬೆಲೆಯನ್ನು ಬದಿಗಿರಿಸಿ “ಉಡುಪಿಸೀರೆಯನ್ನು” ತೊಡುವ ನೀರೆಯರನ್ನು ಪರಂಪರೆಯ ರಾಯಭಾರಿಗಳನ್ನಾಗಿಸುವ ಉಡುಪಿಸೀರೆಗಳಿಗೆ ಶುಭಹಾರೈಸೋಣ ಅಲ್ಲವೆ!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್