ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಜುವಾಣಿ ಎಸ್. ಡಿ.
ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)

ಸುಶಾಂತನಂತೆ ಎಷ್ಟೋ ನಟ-ನಟಿಯರು ಪ್ರಖ್ಯಾತಿಯ ಉತ್ತುಂಗ ಶಿಖರವನ್ನೇರಿ ಅಲ್ಲಿಯ ಶೂನ್ಯತೆಯನ್ನು ಅನುಭವಿಸಿ ಭ್ರಮನಿರಸನವಾಗುವ ಘಟನೆಗಳು ನೆಡೆದಾಗಲೆಲ್ಲ ಅಟಲ್ ಬಿಹಾರಿ ವಾಜಪೇಯಿಯವರ ಈ ಕವಿತೆ ನನ್ನನ್ನು ತುಂಬ ಕಾಡುತ್ತೆ. ಅವರ ಈ ಅದ್ಭುತ ಕವಿತೆಯನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೀನಿ.

ಮಂಜುವಾಣಿ ಎಸ್.ಡಿ.

ಮೇರು ಪರ್ವತದ ಶಿಖರದ ಮೇಲೆ
ವೃಕ್ಷಗಳು ಬೆಳೆಯುವುದಿಲ್ಲ
ಸಸ್ಯಗಳು ನಳನಳಿಸುವುದಿಲ್ಲ
ಗರಿಕೆಹುಲ್ಲು ಕೂಡ ಚಿಗುರುವುದಿಲ್ಲ.

ಅಲ್ಲಿ ಕೇವಲ ಹೆಪ್ಪುಗಟ್ಟುವ ಹಿಮವು
ಮಾತ್ರ ಜಮೆಯಾಗುವುದು,
ಹೆಣದ ಮೇಲಿನ ಶ್ವೇತವರ್ಣದ ಹೊದಿಕೆ,
ತಣ್ಣಗೆ ಕೊರೆಯುವ ಮೃತ್ಯುವಿನಂತೆ.
ಜುಳು-ಜುಳು ಬಳುಕುತ್ತ ಹರಿಯುವ ಹೊಳೆ
ಘನರೂಪವೆತ್ತ ಹಿಮದ ವಸ್ತ್ರ ಧರಿಸಿ
ತನ್ನ ಹಣೆಬರಹವನು ನೆನೆನೆನೆದು
ಬಿಂದು ಬಿಂದುವಾಗಿ ಬಿಕ್ಕಳಿಸುವುದು.

ಅದು ಎಂಥಹ ಉತ್ತುಂಗ?
ತನ್ನ ಸ್ಪರ್ಶದಿಂದ ಜಲವನ್ನೂ
ಶಿಲೆಯಾಗಿಸುವಂತಹ ಉತ್ತುಂಗ
ತನ್ನ ಸೌಂದರ್ಯದ ಬಗ್ಗೆ ತನ್ನಲ್ಲೇ
ಹೀನತೆಯನ್ನು ಮೂಡಿಸುವಂಥ ಉತ್ತುಂಗ.

ಅಭಿನಂದನೆಗೆ ಅರ್ಹವಾದದ್ದು,
ಆರೋಹಿಗಳಿಗೆ ಆಹ್ವಾನವಿದು,
ಅದರ ಮೇಲೆ ಧ್ವಜ ನೆಡೆಬಹುದುದಷ್ಟೇ
ಆದರೆ
ಅಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಲಾಗುವುದಿಲ್ಲ.
ಅದರ ನೆರಳಲ್ಲಿ ಯಾವ ದಾರಿಹೋಕನು
ಒಂದರೆಘಳಿಗೆ ವಿರಮಿಸಲಾಗುವುದಿಲ್ಲ.

“ಬದುಕಿಗೆ ಕೇವಲ ಉತ್ತುಂಗವಷ್ಟೇ ಸಾಲದು”
ಎನ್ನುವುದೇ ಪರಮಸತ್ಯ.
ವಾತಾವರಣದಿಂದ ಬೇರೆಯಾಗಿ,
ತನ್ನವರೆಲ್ಲರಿಂದ ದೂರವಾಗಿ,
ಶೂನ್ಯದಲಿ ಏಕಾಂಗಿಯಾಗಿ ನಿಲ್ಲುವುದು
ಉತ್ತುಂಗ ಶಿಖರದ ಹಿರಿಮೆಯಲ್ಲ
ಅದು ಅದರ ಅಸಹಾಯಕತೆ.
ಎತ್ತರ ಮತ್ತು ಆಳದಲ್ಲಿ
ಭೂಮಿಯಾಕಾಶದಷ್ಟು ಅಂತರವಿದೆ.

ಯಾರು ಎಷ್ಟು ಎತ್ತರದಲ್ಲಿರುವರೋ
ಅವರು ಅಷ್ಟೇ ಏಕಾಂಗಿ.
ಎಲ್ಲ ಭಾರವನ್ನು ತಾವೇ ಹೊರುತ್ತಾ
ಮೊಗದ ಮೇಲೊಂದು ನಗೆಯ ಅಂಟಿಸಿಕೊಂಡು
ಮನಸಿನ ಒಳಕೋಣೆಯೊಳಗೆ ಕೂತು ಅಳುತ್ತಾರೆ.

ಇಲ್ಲಿ ಅವಶ್ಯಕತೆಯಿರುವುದು
ಎತ್ತರದ ಜೊತೆಜೊತೆಗೆ ‍”ವಿಸ್ತಾರ”.
ಅಂಥ ವಿಸ್ತಾರದಿಂದ ಮನುಷ್ಯ
ಒಣಗಿದ ಮರದಂತೆ ಒಬ್ಬನೇ ನಿಲ್ಲದೆ
ಇತರರನ್ನು ಅರಿತು, ಅವರೊಡನೆ ಬೆರೆತು
ಯಾರದ್ದಾದರು ಸಾಂಗತ್ಯ ಮಾಡಿ
ಅವರ ಜೊತೆಗೆ ಮುಂದೆ ಸಾಗುವನು.

ಜನಜಂಗುಳಿಯಲ್ಲಿ ಕಳೆದು ಹೋಗುವುದು
ನೆನಪುಗಳಲ್ಲಿ ಮುಳುಗಿ ಹೋಗುವುದು
ತನ್ನನ್ನು ತಾನು ಮರೆಯುವುದು
ಅಸ್ಥಿತ್ವಕ್ಕೆ ಅರ್ಥ ಮತ್ತು ಬದುಕಿಗೆ
ಸುಗಂಧವನ್ನು ನೀಡುತ್ತದೆ.

ಈ ಧರೆಗಿರುವುದು ಕುಬ್ಜರ ಅವಶ್ಯಕತೆಯಲ್ಲ.
ಎತ್ತರದ ನಿಲುವಿನ ವ್ಯಕ್ತಿಗಳ ಅನಿವಾರ್ಯತೆ.
ಎಷ್ಟು ಎತ್ತರವೆಂದರೆ
ಮುಗಿಲನ್ನು ಮುಟ್ಟುವಷ್ಟು
ನವತಾರೆಗಳಲ್ಲಿ ಪ್ರತಿಭೆಯ ಬೀಜವನ್ನು ಬಿತ್ತುವಷ್ಟು.

ಆದರೆ
ಪಾದದಡಿಯಲ್ಲಿ ದರ್ಬೆಯೂ ಚಿಗುರದ
ಒಂದು ಮುಳ್ಳೂ ಚುಚ್ಚದ
ಹೂವು ಅರಳದ,
ವಸಂತ ಚಿಗುರದ,
ಹಣ್ಣೆಲೆ ಉದುರದ,
ಮಸಕುಮಸಕಾದ ಉತ್ತುಂಗ,
ಮತ್ತು ಕೇವಲ ಒಂಟಿತನದ ನಿಶಬ್ದ
ಮಾತ್ರ ಬೇಡವೇ ಬೇಡ.

ಓ ನನ್ನ ದೈವವೇ…
ನನಗೆ ಇತರರನ್ನು ಆಲಿಂಗಿಸಲಾಗದ
ಉತ್ತುಂಗವನು ಮತ್ತದರ ಶುಷ್ಕತೆಯನ್ನು
ಎಂದಿಗೂ ಕೊಡದಿರು.

ಮೂಲ ಹಿಂದಿ : ಅಟಲ್ ಬಿಹಾರಿ ವಾಜಪೇಯಿ