- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಫೆಬ್ರವರಿ ೨೮, ೧೯೮೬ ಶುಕ್ರವಾರ. ಶೀತಲಗಟ್ಟುವ ನಡುರಾತ್ರಿ ೧೧.೨೩. ಸ್ಟಾಕ್ ಹೋಂ ನಗರದ ಮಧ್ಯಭಾಗದ ಸ್ವಿಯಾವಾಗೆನ್ ೪೫ ವಿಳಾಸದಲ್ಲಿರುವ ಗ್ರಾಂಡ್ ಚಿತ್ರಮಂದಿರ. ಅದೇ ಹೊತ್ತಿಗೆ ಸಿನೆಮಾ ಮುಗಿಸಿ ಐವತ್ತೊಂಬತ್ತು ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಸಬ್ ವೇ ಕಡೆಗೆ ನಡೆದು ಹೋಗುತ್ತಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಬಂದ ಆಗಂತುಕನೊಬ್ಬ ಹಿಂದಿನಿಂದ ಪಾಯಿಂಟ್ ಬ್ಲಾಕ್ ರೇಂಜಿನಲ್ಲಿ ಆ ವ್ಯಕ್ತಿಯನ್ನು ಶೂಟ್ ಮಾಡಿ ಪರಾರಿಯಾಗುತ್ತಾನೆ. ಎರಡು ಬುಲೆಟ್ ಗಳು ಬೆನ್ನಿನಿಂದ ಎದೆ ಸೀಳಿದೊಡನೆ ರಕ್ತದ ಹನಿಗಳು ಬೀಸುತ್ತಿದ್ದ ಗಾಳಿಯಿಂದಾಗಿ ಸ್ವಲ್ಪ ಓರೆಯಾಗಿ ಚಿಮ್ಮುತ್ತವೆ. ಬಾಯಿ ಹಾಗೂ ಎದೆಯಿಂದ ತೀವ್ರ ರಕ್ತ ಸ್ರಾವವಾಗಿ ಆ ವ್ಯಕ್ತಿ ಮುಗುಚಿ ಬಿದ್ದು ಒದ್ದಾಡುವಾಗ, ಹೆಂಡತಿ ಸಹಾಯಕ್ಕಾಗಿ ಕೂಗಿ ಕರೆಯುತ್ತಾಳೆ.. ಏನಾಯ್ತು ಅಂದುಕೊಳ್ಳುತ್ತಲೇ, ದೂರದ ಪಹರೆಯಲ್ಲಿದ್ದ ಪೋಲಿಸನಿಗೆ ಒಬ್ಬ ಟ್ಯಾಕ್ಸಿ ಡ್ರೈವರ್ ಆತುರಾತುರವಾಗಿ ಹೇಳಿದ್ದು ಹೀಗೆ. “ಗ್ರಾಂಡ್ ಚಿತ್ರಮಂದಿರದ ಮುಂದೆ ಯಾರೋ ಒಬ್ಬ ಮನುಷ್ಯನನ್ನು ಶೂಟ್ ಮಾಡಲಾಗಿದೆ !”
ಯಾರೋ ಒಬ್ಬ ಮನುಷ್ಯನಾ ಅವನು? ಅವತ್ತು ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿ ಸ್ವೀಡನ್ ನ ಪ್ರೈಮ್ ಮಿನಿಸ್ಟರ್ ಊಲೊಫ್ ಪಾಲ್ಮೆ. ದೇಶ ಕಂಡ ಜನಪ್ರಿಯ ಪ್ರಧಾನಿ, ಅಂತಾರಾಷ್ಟ್ರೀಯ ಖ್ಯಾತಿಯ ಮುತ್ಸದ್ದಿ ರಾಜಕಾರಣಿ. ಸೋಶಿಯಾಲಿಸ್ಟ್ ಡೆಮೊಕ್ರಟಿಕ್ ಪಕ್ಷದ ದಿಕ್ಸೂಚಿ ನಾಯಕ ಆಗಿದ್ದವರು.
ರಾಜಕೀಯ ಹಿಂಸೆ, ಹತ್ಯೆ ಅಷ್ಟಾಗಿ ಕಂಡಿರದ ಸ್ವೀಡನ್ ಜನತೆಗೆ ತಮ್ಮ ಪ್ರಧಾನಿಯನ್ನು ಗುಂಡು ಹಾರಿಸಿ ಕೊಂದದ್ದು ತೀವ್ರ ಆಘಾತ, ದಿಗ್ಬ್ರಮೆಗಳಿಗೆ ಕಾರಣವಾಯ್ತು. ಹನ್ನೊಂದು ವರ್ಷಗಳಷ್ಟು ಕಾಲ ಸ್ವೀಡನ್ ನ ಪ್ರಧಾನಿಯಾಗಿದ್ದರೂ ಆಗಾಗ್ಗೆ ಅಂಗರಕ್ಷಕರಿಲ್ಲದೆ ಸಾಮಾನ್ಯರಂತೆ ಓಡಾಡುವ ರೂಢಿ ಇಟ್ಟುಕೊಂಡಿದ್ದವರು ಪಾಲ್ಮೆ.
ತನಿಖೆಯ ಸವಾಲು
ಸ್ಟಾಕ್ ಹೋಮ್ ಕೌಂಟಿಯ ಕಮಿಷನರ್ ಹಾನ್ಸ್ ಹೋಮರ್ ವಿಶೇಷ ತನಿಖಾ ದಳದ ನೇತೃತ್ವ ವಹಿಸಿಕೊಳ್ಳುತ್ತಾರೆ. ಅವತ್ತು ಕೊಲೆಗಾರ ಬಿಟ್ಟು ಹೋದದ್ದು ಕೇವಲ ಎರಡು ೦.೩೫೭ ಮ್ಯಾಗ್ನಂ ಬುಲೆಟ್ಸ್ ಮಾತ್ರ. ಘಟನೆಯ ಬಗ್ಗೆ ಸುಮಾರು ಇಪ್ಪತ್ತೈದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಲು ಮುಂದೆ ಬರುತ್ತಾರೆ. ಹತ್ಯೆಗಾರ ಸುಮಾರು ಮೂವತ್ತರಿಂದ ಐವತ್ತು ವರ್ಷದೊಳಗಿನವ ಇರಬಹುದು. ಸಾಮಾನ್ಯ ಎತ್ತರ. ಕಪ್ಪುಬಣ್ಣದ ಗುಂಡಿ ಮುಚ್ಚಿದ ಕೋಟು, ಕಿವಿ ಮುಚ್ಚದ ಹ್ಯಾಟು ಧರಿಸಿದ್ದ. ಕೆಲವರ ಪ್ರಕಾರ ಆತನ ಕೈಯಲ್ಲಿ ಚಿಕ್ಕ ಬ್ಯಾಗ್ ಇತ್ತು. ಚುರುಕಾಗಿ ನಡೆಯುತ್ತಿದ್ದ. ಇಲ್ಲಿಯೂ ಕೂಡ ಪ್ರತ್ಯಕ್ಷ ದರ್ಶಿಗಳು ಕೊಟ್ಟ ವಿವರಗಳು ಒಂದೇ ತೆರನಾಗಿ ಇರಲಿಲ್ಲ. ಆದರೆ ಹತ್ಯೆ ಮಾಡಿ ಯಾವ ದಿಕ್ಕಿನ ಕಡೆಗೆ ಓಡಿಹೋದ ಎಂಬುದರ ಬಗ್ಗೆ ಮಾತ್ರ ಎಲ್ಲರೂ ಒಂದೇ ಉತ್ತರ ಕೊಟ್ಟಿದ್ದುಂಟು.
ಈ ನಡುವೆ ಸ್ಟಿಗ್ ಎಂಗ್ ಸ್ಟ್ರೋಮ್ ಎಂಬ ಒಬ್ಬ ಪ್ರತ್ಯಕ್ಷ ದರ್ಶಿ ಸಮೀಪದ ಸ್ಕಾಂಡಿಯಾ ಎಂಬ ವಿಮಾ ಕಂಪನಿಯಲ್ಲಿ ತನ್ನ ಕಚೇರಿ ಕೆಲಸ ಮುಗಿಸಿ ಹೋಗುವಾಗ ಘಟನೆಯ ಸ್ಥಳದಲ್ಲಿ ಇದ್ದುದ್ದಾಗಿ ಹೇಳಿಕೊಳ್ಳುತ್ತಾನೆ. ಇಪ್ಪತ್ತು ನಿಮಿಷಗಳ ಬಳಿಕ ಆತ ತನ್ನ ಕಚೇರಿಗೆ ವಾಪಸಾಗಿ ಪಾಲ್ಮೆ ಹತ್ಯೆಯಾಗಿದ್ದನ್ನು ಕಂಪೆನಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗೆ ತಿಳಿಸಿ ಮನೆಗೆ ಹೋಗುತ್ತಾನೆ. ಮರುದಿನ ಪೋಲಿಸರಿಗೆ ಫೋನ್ ಮಾಡಿ ತಾನು ಕಂಡ ಎಲ್ಲ ವಿವರಗಳನ್ನು ನೀಡುತ್ತಾನೆ. ಹತ್ಯೆಯಾದ ರಾತ್ರಿ ಪೊಲೀಸರು ತಾನು ಮಾಹಿತಿ ನೀಡಲೆತ್ನಿಸಿದರೂ ಕೂಡ ಅಲಕ್ಷಿಸಿದರು ಎಂದು ದೂರುತ್ತಾನೆ. ಗುಂಡೇಟಿನ ಬಳಿಕ ಪಾಲ್ಮೆ ಯನ್ನು ಅಂಗಾತ ಮಲಗಿಸುವಲ್ಲಿ ಸಹಾಯ ಮಾಡಿದ್ದಾಗಿ ಜೊತೆಗೆ ಪಾಲ್ಮೆ ಪತ್ನಿ ಲಿಸ್ಬೇತ್ ಜೊತೆಗೆ ಕೂಡ ಮಾತಾಡಿದ್ದಾಗಿ ಕೂಡ ಹೇಳಿಕೊಳ್ಳುತ್ತಾನೆ.
ಪ್ರಧಾನಿ ಪಾಲ್ಮೆ
ಈ ನಡುವೆ ನಿಮಗೆ ಊಲೊಫ್ ಪಾಲ್ಮೆ ಬಗ್ಗೆ ಇನ್ನಷ್ಟು ಹೇಳಬೇಕು.ಅವರು ಸ್ವೀಡನ್ನಿನ ಆಧುನಿಕ ರಾಜಕಾರಣಕ್ಕೆ ನಾಂದಿ ಹಾಡಿದವರು. ಸಮಾಜದ ಸರ್ವತೋಮುಖ ಅಭಿವೃದ್ದಿ, ಸಮಾನತೆ ಹಾಗೂ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕರಾಗಿದ್ದವರು. ಯಾವುದೇ ವಿಷಯಗಳಲ್ಲಿ ಗಟ್ಟಿ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದ ಪಾಲ್ಮೆ ಅದೇ ಕಾರಣಕ್ಕೆ ದೇಶ-ವಿದೇಶಗಳಲ್ಲಿ ಅನೇಕ ಅಭಿಮಾನಿಗಳನ್ನು,ಅಂತೆಯೇ ಶತ್ರುಗಳನ್ನೂ ಕೂಡ ಹೊಂದಿದ್ದವರು.ಪಾಲ್ಮೆ ಶ್ರೀಮಂತ ಸಾಂಪ್ರದಾಯಿಕ ಕುಟುಂಬದಿಂದ ಬಂದರೂ ಸಮಾಜವಾದಿ, ಪ್ರಜಾಪ್ರಭುತ್ವವಾದಿ ಮೌಲ್ಯಗಳಿಂದ ಆಕರ್ಷಿತರಾದವರು. ಯುವಕರಾಗಿದ್ದಾಗ ನಲವತ್ತರ ದಶಕದಲ್ಲಿ ಅಮೇರಿಕದಲ್ಲಿ ಕಳೆದ ಅವಧಿಯಲ್ಲಿ ಕಂಡ ಅರ್ಥಿಕ ಅಸಮಾನತೆ, ವರ್ಣಭೇಧ ನೀತಿ ಹಾಗೂ ಭಾರತ,ಶ್ರೀಲಂಕಾ, ಜಪಾನ್, ಸೇರಿದಂತೆ ಏಶಿಯಾಕ್ಕೆ ಭೇಟಿ ಕೊಟ್ಟಾಗ ಕಂಡ ವಸಾಹತುಕರಣದ ದುಷ್ಪರಿಣಾಮಗಳು ಇತ್ಯಾದಿ ಪಾಲ್ಮೆ ಮೇಲೆ ಅಪಾರ ಪರಿಣಾಮ ಬೀರಿದ್ದವು.
೦.೩೫೭ ಮ್ಯಾಗ್ನಮ್
ಇತ್ತ ಪಾಲ್ಮೆ ಹತ್ಯೆಯ ಕುರಿತು ತನಿಖಾ ಕಾರ್ಯಾಚರಣೆ ಚುರುಕು ಗೊಳ್ಳುತ್ತದೆ.ಆ ಸಮಯದಲ್ಲಿ ಕಳುವಾದ ಹತ್ತು ೦.೩೫೭ ರಿವಾಲ್ವರ್ ಗಳನ್ನೂ ಪೊಲೀಸರು ಬೆನ್ನಟ್ಟಿ ಹೋಗುತ್ತಾರೆ. ಅದರಲ್ಲಿ ಒಂದು ಒಬ್ಬ ಡ್ರಗ್ ಡೀಲರ್ ಗೆ ಸೇರಿದ್ದು. ಹತ್ಯೆಯ ಕೆಲವೇ ತಿಂಗಳುಗಳ ಹಿಂದೆ ಇದನ್ನು ತಾನು ಕ್ರಿಸ್ಟರ್ ಪೆಟ್ಟರ್ಸನ್ ಎಂಬಾತನಿಗೆ ನೀಡಿದ್ದೆ ಎನ್ನುವ ಮಾಹಿತಿ ನೀಡಿದ್ದ.
ಈ ಕ್ರಿಸ್ಟರ್ ಒಬ್ಬ ಡ್ರಗ್ ವ್ಯಾಪಾರ ಮತ್ತು ಕೊಲೆಗಳಂತ ಕೃತ್ಯಗಳಲ್ಲಿ ಭಾಗಿಯಾಗಿದ್ದ ಒಬ್ಬ ಅಪರಾಧೀ ಹಿನ್ನೆಲೆಯ ವ್ಯಕ್ತಿ. ಹತ್ಯೆ ನಡೆದ ರಾತ್ರಿ ಆತ ಘಟನಾ ಸ್ಥಳದ ಸಮೀಪವೇ ಇದ್ದ ಎಂಬ ಆತನ ಗೆಳೆಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಚುರುಕಾಗುತ್ತಾರೆ. ಆದರೆ ಪೆಟ್ಟರ್ಸನ್ ಮಾತ್ರ ತಾನು ಹತ್ಯೆ ಮಾಡಿಲ್ಲವೆಂದೂ, ಪಾಲ್ಮೆ ತನಗೆ ಕೂಡ ಇಷ್ಟದ ವ್ಯಕ್ತಿ ಎಂದೂ ಅವಲತ್ತುಕೊಳ್ಳುತ್ತಾನೆ.
ಆದರೆ, ಪಾಲ್ಮೆ ಪತ್ನಿ ಲಿಸ್ಬೆತ್ ಹೇಳುವ ಹತ್ಯೆಗಾರನ ಮುಖ ಚರ್ಯೆಯಲ್ಲಿ ತಕ್ಕ ಮಟ್ಟಿನ ಹೋಲಿಕೆ ಕಂಡಿರುವುದರಿಂದ ಪೊಲೀಸರು ಕ್ರಿಸ್ಟರ್ ಪೆಟ್ಟರ್ಸನ್ ಅನ್ನು ಬಂಧಿಸುತ್ತಾರೆ. ೧೯೮೯ ರಲ್ಲಿ ಈತನೇ ಕೊಲೆಗಾರ ಎಂದು ನ್ಯಾಯಾಲಯ ತೀರ್ಪು ನೀಡುತ್ತದೆ. ಆಗಲೂ ಕೂಡ ಕೊಲೆಗೆ ಬಳಸಿದ ರಿವಾಲ್ವರ್ ಪತ್ತೆ ಆಗಿರುವದಿಲ್ಲ. ಕೊಲೆಯ ಉದ್ದೇಶ ಸಾಬೀತಾಗಿರುವುದಿಲ್ಲ. ಕೆಲವು ತಿಂಗಳುಗಳ ಬಳಿಕ ಮೇಲ್ಮನವಿಯಲ್ಲಿ ಕ್ರಿಸ್ಟರ್ ಪೆಟ್ಟರ್ಸನ್ ಆರೋಪ ಮುಕ್ತನಾಗುತ್ತಾನೆ.
ಕ್ರಾಂತಿಕಾರಿ ಸುಧಾರಕ ಪಾಲ್ಮೆ
ಪಾಲ್ಮೆ ತೆರಿಗೆ ಹೆಚ್ಚಿಸಿ ಅಸಹಾಯಕರಿಗೆ,ಆರ್ಥಿಕವಾಗಿ ಹಿಂದುಳಿದವರಿಗೆ, ನಿರಾಶ್ರಿತ ವಲಸಿಗರು, ವೃದ್ಧಾಪಿ ನಾಗರಿಕರಿಗಾಗಿ ಸೌಲಭ್ಯ, ಭತ್ಯೆ ವೇತನಗಳಿಗೆ ಖರ್ಚು ಮಾಡುತ್ತಾರೆ. ನಮ್ಮ ದೇಶ ವಲಸಿಗರ ರಾಷ್ಟ್ರವಾಗಬೇಕು. ಆದರೆ ನಮ್ಮ ವ್ಯವಸ್ಥೆಯನ್ನು ವಲಸಿಗರು ಅನುಸರಿಸುವುದು ಕೂಡ ಮುಖ್ಯ ಹಾಗೂ ಅದಕ್ಕೆ ನಾವು ಸಂಪೂರ್ಣ ಸಹಾಯ ಮಾಡಬೇಕು ಎಂದು ಪಾಲ್ಮೆ ಹೇಳುತ್ತಿದ್ದರು.
ಸರಕಾರದ ನೀತಿಗಳಿಂದ ಕಾರ್ಮಿಕರ ಒಕ್ಕೂಟಗಳಿಗೆ ಇನ್ನಷ್ಟು ಬಲ ತಂದುಕೊಟ್ಟರು. ಶ್ರಮಿಕರ ಉದ್ಯೋಗ ಭದ್ರತೆ, ಪಿಂಚಣಿಗಳನ್ನು ಗಣನೀಯವಾಗಿ ಹೆಚ್ಚಿಸಿದರು. ಶಿಶು ಪಾಲನಾ ವೆಚ್ಚಗಳು,ಶಿಕ್ಷಣ ಸಂಪೂರ್ಣವಾಗಿ ಉಚಿತವಾದವು. ಲಿಂಗ ಸಮಾನತೆಗೆ, ಶುದ್ಧ ಇಂಧನಗಳ ಬಳಕೆಗಳ ಪ್ರಬಲ ಪ್ರತಿಪಾದಕರಾಗಿದ್ದವರು ಪಾಲ್ಮೆ.
ಸ್ಕಾಂಡಿಯಾ ಮ್ಯಾನ್
ಈ ನಡುವೆ ಪ್ರತ್ಯಕ್ಷ ದರ್ಶಿ ಸ್ಟಿಗ್ ಎಂಗ್ ಸ್ಟ್ರೋಮ್ ಮತ್ತೆ ಮತ್ತೆ ಮಾಧ್ಯಮಗಳಲ್ಲಿ ಕಾಣಿಸಕೊಳ್ಳತೊಡಗಿದ.
ಕ್ರೈಂ ಸೀನ್ ಪುನಾವರ್ತಿಸುವಾಗ ಪೊಲೀಸರು ಪ್ರತ್ಯಕ್ಷ ದರ್ಶಿಯಾದ ತನ್ನನ್ನು ಕಡೆಗಣಿಸಿದ್ದಕ್ಕಾಗಿ ಸಿಟ್ಟಿಗೆದ್ದು ಒಂದು ಟಿವಿ ಮಾಧ್ಯದವರನ್ನು ಕರೆದುಕೊಂಡು ಹತ್ಯೆ ಘಟನೆಯನ್ನು ಪುನಾವರ್ತಿಸಿ ತಾನೇ ವಿವರ ನೀಡತೊಡಗಿದ. ಪೊಲೀಸರು ಈತನನ್ನು ಸ್ಕಾಂಡಿಯಾ ಮ್ಯಾನ್ ಎಂದು ಕರೆದು ಮಾಹಿತಿಗಾಗಿ ಅನೇಕ ಬಾರಿ ಮಾತಾಡಿಸಿದ್ದರೂ, ಸದಾ ಸುದ್ದಿಯಲ್ಲಿರುವ ಹಪಾಹಪಿತನ ಕಂಡು ಬೇಸತ್ತಿದ್ದೂ ಉಂಟು. ಹತ್ಯೆಯ ವೇಳೆಯಲ್ಲಿ, ಕೋಟು, ಹ್ಯಾಟ್ , ದುಂಡನೆಯ ಕನ್ನಡಕ ಹಾಗೂ ಶಾಲು ಧರಿಸಿದ್ದ ಸ್ಟಿಗ್ ಎಂಗ್ ಸ್ಟ್ರೋಮ್ ನನ್ನು ಕಂಡ ಬಗ್ಗೆ ಕೂಡ ಸ್ಪಷ್ಟ ವಿವರಗಳಿರಲಿಲ್ಲ.
ಸಿನೆಮಾ ಪ್ಲಾನ್
ಹತ್ಯೆಯ ದಿನ ಪಾಲ್ಮೆ, ಕುಟುಂಬ ಸಮೇತವಾಗಿ ಚಿತ್ರ ಮಂದಿರಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದೇ ರಾತ್ರಿ ಎಂಟಕ್ಕೆ. ಹೆಂಡತಿ ಲಿಸ್ಬೆತ್ ಜೊತೆಗೆ ತಾವೂ ಸಿನೆಮಾಗೆ ಬರಲು ಒಪ್ಪಿಗೆ ಸೂಚಿಸಿ ಮಗನಿಗೆ ಕರೆ ಮಾಡುತ್ತಾರೆ. ಒಂಬತ್ತರ ಹೊತ್ತಿಗೆ ಪಾಲ್ಮೆ ಹೆಂಡತಿಯೊಂದಿಗೆ ಸಬ್ ವೇ ಮೆಟ್ರೋ ಮೂಲಕ ಗ್ರಾಂಡ್ ಸಿನೆಮಾದ ಮುಂದೆ ಬಂದು ತಲುಪುತ್ತಾರೆ. ಆ ದಿನ ಕುಟುಂಬ ನೋಡಬಯಸಿದ್ದು ದಿ ಮೊಜಾರ್ಟ್ ಬ್ರದರ್ಸ್ ಎನ್ನುವ ಸ್ವೀಡಿಶ್ ಕಾಮೆಡಿ. ಅದಾಗಲೇ ಹೌಸ್ ಫುಲ್ ಆಗಿದ್ದರೂ, ಅಲ್ಲಿ ಟಿಕೆಟ್ ನೀಡುವವ ಪ್ರಧಾನಿಯನ್ನು ಗುರುತಿಸಿ ಅವರಿಗೆ ಥೇಟರ್ ನಿರ್ದೇಶಕರುಗಳಿಗೆ ಮೀಸಲಾಗಿದ್ದ ಆಸನವನ್ನು ನೀಡಿದ್ದ. ಹೀಗೆ ಕೊನೆಯ ಕ್ಷಣದಲ್ಲಿ ಯೋಜಿಸಿದ ಸಿನೆಮಾ ನೋಡುವ ಕಾರ್ಯಕ್ರಮ ಹಂತಕರಿಗೆ ಹೇಗೆ ತಿಳಿದು ಇಂಥ ಕ್ಷಿಪ್ರ ಹತ್ಯಾ ಯೋಜನೆ ರಚಿಸಿರಲು ಶಕ್ಯವಾದೀತು ಎಂದು ಪೊಲೀಸರು ತಮ್ಮ ತಲೆ ಕೆರೆದುಕೊಳ್ಳುತ್ತಾರೆ. ದೂರವಾಣಿ ಹಾಗೂ ಮಾತುಗಳನ್ನು ಕದ್ದು ಕೇಳುವ ಸಾಧನಗಳನ್ನು ಪಾಲ್ಮೆ ಅವರ ನಿವಾಸದಲ್ಲಿ ಶೋಧಿಸಿದಾಗಲೂ ಏನೂ ಕಂಡು ಬಂದಿರುವುದಿಲ್ಲ.
ಜಾಗತಿಕ ಸಂಚು?
ತನಿಖೆಯಲ್ಲಿ ಕೇವಲ ದೇಶದ ಒಳಗಣ ಅಲ್ಲದೇ, ವಿದೇಶೀ ಕೈವಾಡದ ಆಯಾಮಗಳನ್ನೂ ಅವಲೋಕಿಸಲಾಗಿತ್ತು. ಶೀತಲ ಯುದ್ಧದ ಆ ಕಾಲದಲ್ಲಿ ಅಮೇರಿಕ ಹಾಗೂ ಸೋವಿಯತ್ ರಷ್ಯಾದ ನೀತಿಗಳ ಬಗ್ಗೆ ಕಟು ಟೀಕಾಕಾರರಾಗಿದ್ದರು. ಒಂದು ದೇಶ ಬೇರೆ ದೇಶಗಳಲ್ಲಿ ಮೂಗು ತೋರಿಸುವುದನ್ನು ವಿರೋಧಿಸುತ್ತಿದ್ದರು. ನಿರಂಕುಶ, ಸರ್ವಾಧಿಕಾರಿಯಾಗಿದ್ದ ಕಮ್ಮ್ಯುನಿಸ್ಟ್ ಹಾಗೂ ಫ್ಯಾಸಿಸ್ಟ್ ಆಡಳಿತಗಳನ್ನು ನೇರವಾಗಿ ಟೀಕಿಸುತ್ತಿದ್ದರು. ನುಡಿದಂತೆ ನಡೆದು ಪ್ರಜಾಪ್ರಭುತ್ವವಾದಿ ಸರಕಾರ, ಜನಪರ ಸಂಸ್ಥೆಗಳಿಗೆ ಧನಸಹಾಯವನ್ನೂ ಮಾಡುತ್ತಿದ್ದರು. ವಿಯೆಟ್ನಾಂ ಯುದ್ಧ ಹಾಗೂ ವರ್ಣ ಬೇಧ ಆಧಾರಿತ ದಕ್ಷಿಣ ಆಫ್ರಿಕಾದ ಅಪಾರ್ಥೆಡ್ ನೀತಿಯನ್ನು ಖಂಡಿಸುತ್ತಿದ್ದರು. ಮಾನವ ಹಕ್ಕು, ಸಮಾನತೆಗಳ ಬಗ್ಗೆ ಜಗತ್ತಿನಲ್ಲಿ ಧ್ವನಿಯೆತ್ತುವ ರಾಷ್ಟ್ರವಾಗಿ ಸ್ವೀಡನ್ ಅನ್ನು ಜಾಗತಿಕ ನಕಾಶೆಯಲ್ಲಿ ಸ್ಪುಟಗೊಳಿಸಿದವರು ಪಾಲ್ಮೆ.
ಈ ಹಿನ್ನೆಲೆಯಲ್ಲಿ ಕೆಜಿಬಿ,ಸಿಐಎ,ಪಿ.ಕೆ.ಕೆ, ದಕ್ಷಿಣ ಆಫ್ರಿಕ ಅಪಾರ್ಥೆಡ್,ಚಿಲಿಯ ಫಾಸಿಸ್ಟ್ ರಾಬರ್ಟೊ ಅಷ್ಟೇ ಏಕೆ ಸ್ವತಃ ಸ್ವೀಡಿಶ್ ಪೋಲಿಸ್ ಇಲಾಖೆಯ ತೀವ್ರಗಾಮಿಗಳು ಪಾಲ್ಮೆಯ ಹತ್ಯೆಯ ಹಿಂದೆ ಇರಬಹುದು ಎಂಬ ಬಗ್ಗೆ ನೂರಾರು ಕಥೆ ಉಪಕಥೆಗಳು ಸೃಷ್ಟಿಯಾಗಿದವು.
ಇಂತಹ ಹಲವು ಪಿತೂರಿಗಾಥೆಗಳಲ್ಲಿ ಭಾರತದ ಬೊಫೋರ್ಸ್ ವ್ಯವಹಾರವೂ ಒಂದು.ಪಾಲ್ಮೆ ಇಂದಿರಾ ಗಾಂಧಿಯ ಮುಖೇನ ಮಿತ್ರರಾಗಿದ್ದ ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿಯ ಜೊತೆಗೆ ಮಾತಾಡಿ ಭಾರತದ ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ತಮ್ಮದೇ ದೇಶದ ಕಂಪನಿ ಬೊಫೋರ್ಸ್ ಗೆ ಅವಕಾಶ ಕಲ್ಪಿಸಿದ್ದರು.ಒಂದು ಗುಮಾನಿಯ ಪ್ರಕಾರ ಹತ್ಯೆಯ ದಿನ ಬೆಳಿಗ್ಗೆ ತಮ್ಮನ್ನು ಭೇಟಿಯಾಗಿದ್ದ ಇರಾಕ್ ನ ಒಬ್ಬ ರಾಯಭಾರಿಯಿಂದ ಬೊಫೋರ್ಸ್ ಕಂಪನಿಯ ದಲ್ಲಾಳಿಗಳು ಭಾರತೀಯ ಅಧಿಕಾರಿ ಹಾಗೂ ರಾಜಕಾರಣಿಗಳಿಗೆ ಅಪಾರ ಲಂಚ ನೀಡುತ್ತಿದ್ದದ್ದು ಕೇಳುತ್ತಲೇ ಶುದ್ಧ ಹಸ್ತರಾಗಿದ್ದ ಪಾಲ್ಮೆ ಕೆಂಡಾಮಂಡಲರಾಗಿ ಈ ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಮಾತಾಡಿದ್ದರು ಎನ್ನಲಾಗಿದೆ. ಬಲಿಷ್ಠ ಶಶ್ತ್ರಾಸ್ತ್ರ ದಲ್ಲಾಳಿಗಳ ಲಾಬಿ ಕೂಡ ಹತ್ಯೆಯ ಸಂಚಿನ ಹಿಂದೆ ಇದ್ದಿರಬಹುದೇ ಎಂಬ ಶಂಕೆಯನ್ನು ಇತಿಹಾಸಕಾರ ಯಾನ್ ಬಂಡೆಸನ್ ವ್ಯಕ್ತಪಡಿಸಿದ್ದ.
ದಿ ಅನ್ ಲೈಕ್ಲಿ ಮರ್ಡರರ್
ತನಿಖೆ ಮುಂದುವರೆದು ದಶಕಗಳು ಕಳೆಯುತ್ತವೆ. ಅಲ್ಲಿಯವರೆಗೂ ಕೊಲೆಗಾರ, ಕೊಲೆ ಮಾಡಿದ ರಿವಾಲ್ವರ್ ಯಾವುದೂ ಪತ್ತೆಯಾಗುವುದಿಲ್ಲ. ಇಸವಿ ೨೦೧೬ರಲ್ಲಿ ಲೇಖಕ ಲಾರ್ಸ್ ಲಾರ್ಸನ್ ಎನಿಮಿ ಆಫ್ ದಿ ನೇಶನ್ ಎನ್ನುವ ಪುಸ್ತಕವನ್ನು ಹಾಗೂ ಥಾಮಸ್ ಪೆಟ್ಟರ್ಸನ್ ಎಂಬ ಪತ್ರಕರ್ತ ದಿ ಅನ್ ಲೈಕ್ಲಿ ಮರ್ಡರರ್ ಎಂಬ ಎರಡು ಪ್ರತ್ಯೇಕ ಪುಸ್ತಕವನ್ನು ಹೊರತರುತ್ತಾರೆ.
ಈ ಪುಸ್ತಕಗಳ ಪ್ರಕಾರ, ಪಾಲ್ಮೆಯನ್ನು ಕೊಂದದ್ದು ಈ ಮುಂಚೆ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿದ್ದ ಆ ಸ್ಟಿಗ್ ಎಂಗ್ ಸ್ಟ್ರೋಮನೇ ಎಂಬ ವಾದವನ್ನು ಮುಂದಿಡುತ್ತಾರೆ. ಈ ಹಿಂದೆ ಕೆಲ ಪ್ರತ್ಯಕ್ಷ ದರ್ಶಿಗಳು ಹೇಳಿದ ಉಡುಗೆ ಮತ್ತು ಸಣ್ಣ ಬ್ಯಾಗ್ ಹಿಡಿದು ಓಡಿದ ಕೊಲೆಗಾರನ ಕುರುಹುಗಳು ಸ್ಟಿಗ್ ನ ಕುರಿತ ಹಾಗೆಯೇ ಕಾಣುತ್ತದೆ ಎಂಬುದು ಲಾರ್ಸ್ ಮತ್ತು ಥಾಮಸ್ ರ ಅಂಬೋಣ. ವೃತ್ತಿ ಹಾಗೂ ಕೌಟುಂಬಿಕ ವೈಫಲ್ಯಗಳು, ಸುಪ್ತ ಜನಪ್ರಿಯತೆಯ ಗೀಳು ಹಾಗೂ ವಿಕ್ಷಿಪ್ತ ಮನಸ್ಥಿತಿಗಳು ಹತ್ಯೆಗೆ ಕಾರಣ ಎನ್ನುತ್ತಾರೆ.
ಅವತ್ತು ಸ್ಟಿಗ್ ೯ ಗಂಟೆಯ ಸುಮಾರಿಗೆ ಊಟಕ್ಕೆ ಹೊರಹೋಗಿದ್ದಾಗ ಪಾಲ್ಮೆ ಸಿನೆಮಾ ನೋಡಲು ಆಗಮಿಸಿದ್ದನ್ನು ಗಮನಿಸಿದ್ದ.ಮತ್ತೆ ೧೧.೨೧ಕ್ಕೆ ಆಫೀಸು ಬಿಟ್ಟೆ ಅಂತ ಪೊಲೀಸರಿಗೆ ಸುಳ್ಳು ಹೇಳಿದ್ದರೂ ೧೧.೧೯ ಕ್ಕೆಲ್ಲ ಆತ ಚಿತ್ರಮಂದಿರದ ಬಳಿಯಿದ್ದ. ಕೆಲ ಅವಧಿಗೆ ಕಚೇರಿಯ ಹಿಂಬಾಗಿಲ ಅಲಾರ್ಮ್ ಆರಿಸಿದ್ದು ಕಂಡುಬಂದಿದೆ. ಈ ಬಾರಿ ಸ್ಟಿಗ್ ಉಪಯೋಗಿಸಿದ ಹಿಂಬಾಗಿಲು ನೇರವಾಗಿ ಚಿತ್ರಮಂದಿರದೆಡೆಗೆ ತೆರೆದುಕೊಳ್ಳುತ್ತಿತ್ತು. ಚಿತ್ರ ಮುಗಿದ ನಂತರ ೧೧ ಗಂಟೆಗೆ ಸ್ಟಿಗ್ ಪಾಲ್ಮೆಯನ್ನು ಶೂಟ್ ಮಾಡುವವನಿದ್ದರೂ, ಯಾರೋ ಪರಿಚಿತರು ಕಂಡಂತಾಗಿ ಸ್ವಲ್ಪ ನಿಧಾನಿಸಿದ. ಕೊನೆಗೆ ೧೧.೧೯ಕ್ಕೆ ಪಾಲ್ಮೆ, ಪತ್ನಿ ಲಿಸ್ಬೆತ್ ಜೊತೆಗೆ ವಾಕ್ ಮಾಡುತ್ತಿರುವುದನ್ನು ನೋಡಿ ಹಿಂಬಾಲಿಸುತ್ತಾನೆ. ಅಂತೆಯೇ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ಒಂದು ತಣ್ಣಗಿನ ಹತ್ಯೆ ನಡೆದು ಹೋಗುತ್ತದೆ. ಸ್ಟಿಗ್ ಶೂಟಿಂಗ್ ಕ್ಲಬ್ ಸದಸ್ಯನಾಗಿರುವುದು ಹಾಗೂ ಆತನ ಗೆಳೆಯನಿಂದ ೦.೩೫೯ ಮಾಗ್ನಂ ಗನ್ ಬಳಕೆಯ ಬಗ್ಗೆಯೂ ತಿಳುವಳಿಕೆ ಇತ್ತು ಹಾಗೂ ಯಾವುದೋ ಕಾರಣಕ್ಕೆ ಗನ್ ಬ್ಯಾಗಲ್ಲಿಟ್ಟುಕೊಂಡಿಯೇ ಇರುತ್ತಿದ್ದ ಎಂಬುದನ್ನು ಪತ್ರಕರ್ತ ಲೇಖಕರು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ..
೨೦೨೦ ಜೂನ್ ಹತ್ತರ ಪ್ರೆಸ್ ಮೀಟ್
೨೦೨೦ ಜೂನ್ ಹತ್ತರಂದು ತನಿಖೆಯ ವಿಶೇಷಾಧಿಕಾರಿ ಒಂದು ಬಹುನಿರೀಕ್ಷಿತ ಪತ್ರಿಕಾ ಗೋಷ್ಠಿಯನ್ನು ಕರೆಯುತ್ತಾರೆ. ಲಾರ್ಸ್ ಮತ್ತು ಥಾಮಸ್ ರ ಪುಸ್ತಕಗಳ ಪ್ರಭಾವವನ್ನು ನಿರಾಕರಿಸಿ, ತಮ್ಮ ತನಿಖೆಯ ಪ್ರಕಾರ ಸ್ಟಿಗ್ ಎಂಗ್ ಸ್ಟ್ರೋಮ್ ನೇ ಪಾಲ್ಮೆಯ ಶಂಕಿತ ಕೊಲೆಗಾರ ಎಂದು ಅಧಿಕೃತವಾಗಿ ಘೋಷಿಸುತ್ತಾರೆ.ಆದರೆ ನಿರ್ದಿಷ್ಟ ಸಾಕ್ಷಿಗಳನ್ನು ಮುಂದಿಡುವುದಿಲ್ಲ.
ಈಗ ನಿಮಗೆ ಒಂದು ವಿಷಯ ತಿಳಿಸಲೇಬೇಕು. ಆ ಸಮಯದಲ್ಲಿ ಸ್ಟಿಗ್ ಎಂಗ್ ಸ್ಟ್ರೋಮ್ ಆತ್ಮಹತ್ಯೆ ಮಾಡಿಕೊಂಡು ಅಂದಿಗೆ ಬರೋಬ್ಬರಿ ಇಪ್ಪತ್ತು ವರ್ಷಗಳು ಸಂದಿರುತ್ತದೆ ಎಂಬುದು. ಆತ ಮೃತನಾಗಿರುವುದರಿಂದ ಯಾವುದೇ ಮೊಕದ್ದಮೆ ಸಾಧ್ಯವಿಲ್ಲವೆಂದು ಹೇಳಿ ಕೇಸ್ ಅಂತ್ಯಗೊಳಿಸಲಾಗುತ್ತದೆ. ಒಂದು ನೊಣವನ್ನು ಕೂಡ ಸಾಯಿಸಲಾಗದ ಹೇಡಿಯಾಗಿದ್ದ ಆತ, ಕೊಲೆ ಮಾಡಿರಲು ಹೇಗೆ ಸಾಧ್ಯ ಎನ್ನುತ್ತಾರೆ ಆತನ ಕುಟುಂಬದವರು.
ಅಲ್ಲಿಗೆ ಬರೋಬ್ಬರಿ ಮೂವತ್ತನಾಲ್ಕು ವರ್ಷಗಳವರೆಗೆ ನಡೆದ, ಜಾನ್ ಎಫ್ ಕೆನೆಡಿ ಹತ್ಯೆಯ ಪ್ರಕರಣಕ್ಕೆ ಹೋಲಿಸಲಾದ ಜಗತ್ತಿನ ಬೃಹತ್ ತನಿಖಾ ಪ್ರಕರಣ ಕೊನೆಯಾಗಿದ್ದು ಹಾಗೆ. ಅನೇಕ ಸುಳಿವು,ವಿವಿಧ ಅಯಾಮಗಳಲ್ಲಿ ತನಿಖೆ ನಡೆಸಲಾಯಿತು. ಏಳು ತನಿಖಾ ತಂಡದ ಮುಖ್ಯಸ್ಥರು, ಎಂಟು ಪ್ರಾಸೆಕ್ಯುಟರ್ ಗಳು ತನಿಖೆಯಲ್ಲಿ ಭಾಗಿಯಾಗಿದ್ದರು. ಸುಮಾರು ಹತ್ತು ಸಾವಿರ ಜನರನ್ನು ಪ್ರಶ್ನಿಸಲಾಗಿತ್ತು.೭೮೮ ವಿವಿಧ ಗನ್ ಸಿಡಿಸಿ ಪರೀಕ್ಷಿಸಲಾಯ್ತು. ೭೦೦,೦೦೦ ಪುಟಗಳ ಮಾಹಿತಿ ಕಲೆ ಹಾಕಲಾಯ್ತು. ಇಲ್ಲಿಯವರೆಗೆ ಸುಮಾರು ತೊಂಬತ್ತು ಸಾವಿರ ಜನ ತನಿಖೆಯ ಭಾಗವಾಗಿದ್ದರು.ಒಟ್ಟು ಎಪ್ಪತ್ತು ಮಿಲಿಯನ್ ಡಾಲರುಗಳಷ್ಟು ಖರ್ಚಾಗಿದೆ.
ಇದೊಂದು ಸ್ವೀಡನ್ ಪಾಲಿಗೆ ಎಂದಿಗೂ ಆರದ ಗಾಯ ಎಂಬುದನ್ನು ಪ್ರಧಾನಿ ಸ್ಟೀಫನ್ ಲೋವೆನ್ ಹೇಳುತ್ತಾ ಖೇದವನ್ನು ವ್ಯಕ್ತ ಪಡಿಸಿದ್ದರು. ಏನೇ ಆದರೂ ಈ ಜಗತ್ತು ಪಾಲ್ಮೆ ಅವರನ್ನು ಕಳೆದುಕೊಂಡಿತು. ಸಾಂಪ್ರದಾಯಿಕತೆ, ಎಡ, ಬಲ ಹಾಗೂ ಬಂಡವಾಳಶಾಹಿ ವೈಪರೀತ್ಯಗಳನ್ನು ಮೀರಿ ನಿಂತು ಸುಭಿಕ್ಷ ರಾಷ್ಟ್ರ, ಸಮಾಜ ಹಾಗೂ ಅಂತ್ಯೋದಯ ಪ್ರಾಯೋಗಿಕವಾಗಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ಮಹಾನ್ ನಾಯಕ ಪಾಲ್ಮೆಯ ಸೇವೆ ಜಗತ್ತಿಗೆ ಇನ್ನೂ ಸಿಗಬೇಕಿತ್ತು ಎನ್ನುವ ವಿಷಾದದೊಂದಿಗೆ ಪರಿಹಾರವಾಗದೆ ಉಳಿದ ಹತ್ಯೆಯ ಪ್ರಕರಣದ ವರದಿಯನ್ನು ಇಲ್ಲಿಗೆ ಮುಕ್ತಾಯವಾಗುತ್ತದೆ.
ಸೌಜನ್ಯ ಮೂಲತಃ ಶೌರ್ಯ ಸಂದೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು …ಪ್ರಕಟಿಸಿದ ಸಂಪಾದಕ ನೀರ್ಕಲ್ ಶಿವಕುಮಾರ್ ಅವರಿಗೆ ಧನ್ಯವಾದಗಳು
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ