- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಒಳಗಣ್ಣಿನಿಂದ ಬೆಳಗು ಕಂಡೆ ನೀನು
ತಿಳಿ ಹೇಳಿದಿ ತೀರುಳ ನಮ್ಮಳವಿಗೆ ಸಿಲುಕದ ಆಳದ
ಮಾತುಗಳ
ಕಾಳು ಬಿತ್ತಿದಿ ಚಿತ್ತದ ಹೊಲದೊಳು
ಹುಲುಸಾದ ಬೆಳೆ ಕೊಟ್ಟು ಬೆಳೆಸಿದಿ
ಕನ್ನಡದ ಸಿರಿ
ನಾವೂ ಹಿರಿದು ಹರಿದೆವು ನೀ ಹರಿದು ಬಿಟ್ಟ
ಅರಿವಿನ ಹೊಳೆಯಲ್ಲಿ!
ನಮ್ಮನಷ್ಟೇ ಮರೆತ ಯುಗಾದಿಯ ನೈರಾಶ್ಯ ಮರೆಸಲು
ತಿರುತಿರುಗಿ ಹೊಸತಾಗಿರಿ ಎಂದು ಋತುಗಾನ ಹಾಡಿದ
ಋಷಿ ನೀನು! ಒಲವಿನ ನೋಟದಿಂದ ನೋಡಿದಿ ಎಲ್ಲ
ಹಗಲು- ರಾತ್ರಿಗಳ ಚುಕ್ಕೆ- ಚಂದಿರನ
ತನ್ನ ದುಃಖವ ನುಂಗಿ ಪರದುಃಖವನು ಹಿಂಗಿಸುವ ಇಳೆಯ
ಹೊಳೆಯ ಮಳೆಯ ಹೃದಯ ವಿದ್ರಾವಣ ಶ್ರಾವಣವ!
ದಿನಾ ದಿನಾ ನವೀನ ಜನನವ ಪಡೆದಿ ಅದರಲಿ!
ದುಃಖ ದುಮ್ಮಾನಗಳ ಜೊತೆ ಸೆಣೆಸಿ ಬಾಳಿನ ಕಣದಲ್ಲಿ
ಪರವಶನಾಗಿ ಕುಣಿದಿ ನೀ
ಹಗಲಿರುಳ ತಾಳಕ್ಕ ಮುಗಿಯದ ಮ್ಯಾಳಕ್ಕ
ಮಾಡಿಸಿದಿ ಪ್ರಕೃತಿ- ಪುರುಷರ ದರ್ಶನ
ಗೈದು ಅಂತರಾಳದ ಉತ್ಖನನ
ನಿನ್ನ ಮಾತು ಎಂಥ ಘನ!
ಅಗೆದಷ್ಟು ತೀರದ ಅಕ್ಷಯ ಹಗೇವು
ಅರ್ಥ ಹುದುಗುಸಿದ ನಿನ್ನ ಮಾತುಗಳ ಕಾಳು!
ಅದುವೇ ಮೆದ್ದು ಹಸನವಾಗುತಿದೆ ನಮ್ಮ ಬಾಳು!
ನೀನಂದದ್ದು ಆಡಿದ್ದು ಎಲ್ಲ ಆಯಿತು ಕಬ್ಬ
ಅದರ ರಸವೇ ಹರಿದು ನಮಗೆ ನಿತ್ಯ ಹಬ್ಬ!
ನೀ ನೊಂದರೆ ಕವಿತೆ ನೀ ಬೆಂದರೆ ಕವಿತೆ
ನೀನಂದರೆ ಕವಿತೆ!
ಹೋದ ಅಂಕಣದಲ್ಲಿ ಬೇಂದ್ರೆ ಅವರ ವ್ಯಕ್ತಿತ್ವದ ಕೆಲವು ಒಳನೋಟಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡೆಸಿದ್ದೆ. ಈ ವಾರದ ಕಂತಿನಲ್ಲಿ, ಬೇಂದ್ರೆ ಅವರಿಗಿದ್ದ ವಿಶ್ವದ ಎಲ್ಲ ವಿಷಯಗಳ ಮೇಲಿನ ಗಾಢವಾದ ಒಲವು – ಅದರ ಹಾಸು- ಬೀಸುಗಳನ್ನು ಎತ್ತಿ ತೋರುವ ಕೆಲವು ಪ್ರಾತಿನಿಧಿಕ ಕವನಗಳ ಉಲ್ಲೇಖ ಮಾಡಿ, ರಸಋಷಿಗೆ ನುಡಿನಮನವನ್ನು ಸಮರ್ಪಣೆ ಮಾಡುವ ಸಾಹಸ ಮಾಡುವೆ. ವರಕವಿಗಳ ಕಾವ್ಯದ ವಾರಿಧಿಯ ಮುಂದೆ ನಿಂತು, ಅವರ ಕೆಲವೇ ಕವನಗಳ ಮೂಲಕ ಸಮಗ್ರ ಚೇತನದ ದರ್ಶನ ಪಡೆಯುವದು ಕಷ್ಟಸಾಧ್ಯ.
ಬೇಂದ್ರೆ ಅವರು ಕಂಡ ‘ ಬೆಳಗು’ ಬಹಳ ಅನನ್ಯವಾಗಿದೆ. ಈ ಕವನದ ಕುರಿತು ಸಮರ್ಥವಾಗಿ ವಿಶ್ಲೇಷಣೆ ಮಾಡಿದ ಹಿರಿಯ ಸಾಹಿತಿ- ವಿಮರ್ಶಕ ರಂ. ಶ್ರೀ. ಮುಗುಳಿ ಅವರ ಮಾತುಗಳನ್ನೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಮುಗುಳಿ ಅವರು ಬೇಂದ್ರೆಯವರನ್ನು ತಮ್ಮ ಗುರುಸ್ಥಾನದಲ್ಲಿಟ್ಟುಕೊಂಡು ಅವರೇ ತಮ್ಮ ಪ್ರೇರಕಶಕ್ತಯಾಗಿದ್ದ ಮಾತುಗಳನ್ನು ಅದೆಷ್ಟೋ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
‘ಭೂಮಿ ಯಾವಾಗಲೂ ತನ್ನ ಸುತ್ತ ತಿರುಗುತ್ತ ಸೂರ್ಯನತ್ತ ಹೊರಳುವ ಒಂದೊಂದು ಮಗ್ಗುಲಿಗೆ ಬೆಳಗು ಪ್ರತಿಕ್ಷಣ ದೊರೆಯುತ್ತಲಿರುತ್ತದೆ ಎಂಬ ಪ್ರಾಕೃತಿಕ ಸತ್ಯವು ಕವಿಗೆ ಗೊತ್ತು. ಆದರೆ ಅವನ ಪ್ರಾತಿಭ ದೃಷ್ಟಿಗೆ ಪೂರ್ವ ದಿಗಂತದಲ್ಲಿ ಯಾರೋ ಮುತ್ತಿನ ನೀರಿನ ಎರಕವ ಹೊಯ್ದಂತೆ ಕಾಣುತ್ತದೆ. ಕತ್ತಲು ಕವಿದಿದ್ದ ಜಗತಿನ ಬಾಗಿಲು ತೆರೆದು ಬೆಳಕು ಎಲ್ಲೆಡೆ ತೋಯ್ದು ಹೋದಂತೆ ತೋರುತ್ತದೆ. ಬೆಳಗಾದೊಡನೆ ಮನೆ ಬಾಗಿಲು ತೆರೆದು ಹೊಸ್ತಿಲ ಮುಂದೆ ತಿಳಿನೀರಿನ ತಳಿಯನ್ನು ಹಾಕುವ ಹೆಂಗಸಿನ ಹೋಲಿಕೆ ಇದರಲ್ಲಿ ಸಹಜವಾಗಿ ಸೂಚಿತವಾಗಿದೆ. ಸೂರ್ಯೋದಯಕ್ಕೆ ಮುಂಚಿನ ಶುಭ್ರವಾದ , ಸೌಮ್ಯವಾದ ಬೆಳಕನ್ನು ಮುತ್ತಿನ ನೀರಿನ ಎರಕವೆಂಬಂತೆ ಮಾಡಿದ ಊಹೆಯ ಔಚಿತ್ಯವನ್ನು ನೋಡಬೇಕು’ ಎನ್ನುತ್ತಾರೆ ಮುಗಳಿಯವರು.
ಬೇಂದ್ರೆ ಅವರ ಅದೆಷ್ಟೋ ಕವನಗಳಲ್ಲಿ ಪ್ರೀತಿ ಸ್ಥಾಯಿಭಾವವಾಗಿ ಒಡಮೂಡುತ್ತದೆ. ‘ಬೆಳಗು’ ಮೂಡಿಸಿ ಬಣ್ಣದ ಹಿಂದಿನ ಬಣ್ಣ ನಮ್ಮ ಬರಿಗಣ್ಣುಗಳಿಗೆ ಕಾಣದು ಎಂದು ಹೇಳಲು – ‘ಅರಿಯದು ಅಳವು, ತಿಳಿಯದು ಮನವು, ಕಾಣದೋ ಬಣ್ಣ ಎಂಬ ಧ್ವನಿತಾರ್ಥದಲ್ಲಿ ಬೆಳಗಿನ ಅಗಾಧತೆಯನ್ನು ವ್ಯಕ್ತ ಪಡಿಸಿದ್ದಾರೆ.
‘ಶಾಂತೀರಸವೇ ಪ್ರೀತಿಯಿಂದ ಮೈದೋರಿತಣ್ಣ , ಇದು ಬರಿ ಬೆಳಗಲ್ಲೋ ಅಣ್ಣ’ ಎಂಬ ಸಾಲಿನಲ್ಲಿ ಅವರ ದಾರ್ಶನಿಕ ಕಾಣ್ಕೆಯ ವಿರಾಟ್ ದರ್ಶನವನ್ನು ನಮಗೆ ಮಾಡಿಸಿ, ನಿತ್ಯ ಮೂಡುವ ಸೂರ್ಯೋದಯವನ್ನು ಅಧ್ಯಾತ್ಮದ ಸ್ತರಕ್ಕೆ ಕೊಂಡೊಯ್ಯುತ್ತಾರೆ. ಶಾಂತಿರಸ ಹಾಗೂ ಪ್ರೀತಿಯ ಸಂಮಿಶ್ರದಲ್ಲಿ ಪರಿಶುದ್ಧವಾದ ಆನಂದವಿದೆ. ಅದುವೇ ಕವಿಗೆ ಬೆಳಗಿನ ಬೆಳಕಿನಲ್ಲಿ ದಕ್ಕಿದೆ.
‘ಶ್ರಾವಣ ‘ಎಂದರೆ ವರಕವಿ ಬೇಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಮಮತೆ. ಅದರ ಬಗ್ಗೆ ಎಷ್ಟು ವರ್ಣಿಸಿದರೂ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅವರು ಶ್ರಾವಣದ ಮೇಲೆ ಸುಮಾರು ಹನ್ನೆರಡು ಕವಿತೆಗಳನ್ನು ಬರೆದಿದ್ದಾರೆ. ‘ಸಖಿಗೀತ’ ಎಂಬ ಅವರ ಆತ್ಮಕಥನದ ಕಾವ್ಯದಲ್ಲೂ ಅದರ ವರ್ಣನೆ ಬಂದಿದೆ. ‘ಶ್ರಾವಣದ ವೈಭವ’ ಕವಿತೆಯ ಕಲ್ಪಕತೆಯಿಂದ ಕೂಡಿದ ಕೆಲವು ಸುಂದರ ಸಾಲುಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವೆ.
‘ ಏನು ಹಸಿರು! ಏನು ಹಳದಿ, ಸುತ್ತುಮುತ್ತು ನೋಡು ಕೆಳದಿ
ಮಳೆಯ ಬಿಲ್ಲು ಮುರಿದು ಹತ್ತು ಕಡೆಗೆ ಹಂಚಿದಂತಿದೆ, ಮುಗಿಲು ನೆಲಕೆ ಮುಕ್ಕುಚಿಕ್ಕೆ ಕಾಳುಗಳನು ಬಿತ್ತಿದೆ, ನೆಲವು ಮುಗಿಲಿಗರ್ತಿಯಿಂದ ಆರತಿಯನ್ನೆತ್ತಿದೆ.‘
ಇದಕ್ಕೆ ಶಿಖರಪ್ರಾಯದಂತೆ ಕವಿ ‘ಹೂವ ಹಡಲಿಗೆಯನು ಹೊತ್ತ ಭೂಮಿತಾಯಿ ಜೋಗಿತಿ/ಮೈತುಂಬಿ ಕುಣಿಯುತಿಹಳನಂತಕಾಲವೀ ಗತಿ’ ಎಂಬ ಮಾತಿನಲ್ಲಿ ಅದ್ಭುತವಾದ ರೂಪಕವಿದ್ದು ಅಲೌಕಿಕವಾದ ಅನುಭೂತಿಯನ್ನು ನೀಡುತ್ತದೆ.
‘ಹೂವು ಪಕಳೆ ಪ್ರಾಣ ಪ್ರಾಣ ತುಂಬಿ ಚಿಟ್ಟೆಯಾಗಿ ಕಾಂಬವೋ’ಎಂಬ ನುಡಿಯಲ್ಲಿ ಜಡದಲ್ಲಿ ಚೈತನ್ಯ ತುಂಬುವ ಶ್ರಾವಣದ ಸಾಮರ್ಥ್ಯ ಎದ್ದು ತೋರುತ್ತದೆ.
ಬೇಂದ್ರೆ ಅವರ ಕಾವ್ಯದಲ್ಲಿ ‘ ತಾಯಿ’ ಗೆ ವಿಶಿಷ್ಟ ಸ್ಥಾನವಿದೆ. ವರಕವಿಗೆ ತಮ್ಮ ಹೆತ್ತ ತಾಯಿಯ ಬಗ್ಗೆ ಇರುವ ಗಾಢವಾದ ಮಮತೆ ವಿಸ್ತಾರಗೊಂಡು ಅದರ ಪರಿಧಿ ವಿಶ್ವವ್ಯಾಪಕವಾಗುತ್ತದೆ. ‘ಗರಿ’ಸಂಕಲನದಲ್ಲಿ ಬಂದಿರುವ ‘ ಗಂಡಸು ಹೆಂಗಸಿಗೆ’ ಕವನದ ನುಡಿಗಳನ್ನು ಅವಲೋಕಿಸೋಣ.
‘ ತಾಯೆ ಕನಿಮನೆಯೇ ನೀ, ಅಕ್ಕ ಅಕ್ಕರತೆಯೆ, ಬಾ ಎನ್ನ ತಂಗಿ ಬಾ ಮುದ್ದು ಬಂಗಾರವೇ, ನೀ ಎನ್ನ ಹೆಂಡತಿಯೊ ಮೈಗೊಂಡ ನನ್ನಿಯೊ ಮಗಳೊ ನನ್ನೆದೆಯ ಮುಗುಳೊ? ‘
ಹೆಂಗಸು ಹಲವು ಅವತಾರಗಳನ್ನು ತಾಳಿ ಪ್ರೀತಿಯ ಧಾರೆಯನ್ನು ಹೇಗೆ ಎರೆಯುತ್ತಾಳೆ ಎಂಬುದನ್ನು ಈ ಸಾಲುಗಳು ಧ್ವನಿಸುತ್ತವೆ. ‘ಸಖಿ ಗೀತ’ದ ಬಾಲ್ಯ ಕಾಂಡದಲ್ಲಿ ವರಕವಿ ಬೇಂದ್ರೆ ಅವರು ತಮ್ಮನ್ನು ಹೆತ್ತ ತಾಯಿಯ ಬಗ್ಗೆ ಅಪಾರವಾದ ಗೌರವವನ್ನು ವ್ಯಕ್ತಪಡಿಸಿದ್ದಾರೆ. ‘ಅಂಬಿಕೆ ಎಂಬವಳ ಹೃದಯಾಂಬರದಲ್ಲಿ ತತ್ತಿಯನಿಟ್ಟಿತ್ತು ನವಮೇಘವು. ಆ ತಾಯಿ ಮಾತಾಯಿ ಈ ಬಾಯಿ ತುತ್ತಲ್ಲ ಅವಳನ್ನು ಸ್ತುತಿಸಲು ಎದೆ ಸಾಲದು , ಮೌನದಲ್ಲಿರುವದು ಧರ್ಮಕೆ ಹೊರತಂದು ಎದೆಮಾತು ಸಾಲಾಗಿ ಉಸಿರುವೆನು. ‘ ಎಂಬ ಮಾತಿನಲ್ಲಿ ವರಕವಿಗೆ ತಾಯಿಯ ಮೇಲಿನ ಮಮತೆಯ ಪರಾಕಾಷ್ಠೆಯನ್ನು ಬಿಂಬಿಸುತ್ತದೆ.
‘ ಗರಿ’ ಯಲ್ಲಿಯ ಕವನಗಳು ತಾಯಿಯ ಪರಿಕಲ್ಪನೆಯನ್ನು ವಿಸ್ತಾರಗೊಳಿಸಿ ಹೊಸ ಆಯಾಮಗಳನ್ನು ರೂಪಿಸುತ್ತದೆ. ‘ ‘ಅಭಯಯಾಚನೆ’ ಯಲ್ಲಿ ದೇವರು ತಾಯಿಯಾಗಿದ್ದರೆ, ‘ ಓ ಹಾಡೇ’ ಕವನದಲ್ಲಿ ಸರಸ್ವತಿ ಮಾತೆಯಾಗಿದ್ದಾಳೆ. ಈ ಕವನದಲ್ಲಿ ಕನ್ನಡ ಶಾರದೆಯಲ್ಲಿ ಕವಿ ಈ ರೀತಿ ಬಿನ್ನಹ ಮಾಡಿಕೊಳ್ಳುತ್ತಾರೆ. ‘ ಮುನ್ನ ಬಗೆಯಲಿ ಹಾಡ ನೀ- ನೀನೆ ಹೆತ್ತಿ, ನನ್ನ ನಾಲಗೆ ನಿನ್ನ ಬರೀ ಸೂಲಗಿತ್ತಿ; ಇಲ್ಲದಿರೆ ಹಾಡುವದು ನನ್ನ ಪಾಡೇ? ‘
‘ ಕನಸಿನಲ್ಲೊಂದು ಕಣಸು’ ಕವನದಲ್ಲಿ ಕನ್ನಡ ಮಾತೆಯ ಜೊತೆ ನಾಟಕೀಯ ಸಂವಾದವಿದ್ದರೆ, ‘ ಮೂವತ್ತು ಮೂರು ಕೋಟಿ’ ಕವನದಲ್ಲಿ ಭಾರತಮಾತೆ ತನ್ನ ಸಂತಾನದ ಜೊತೆ ತನ್ನ ಆಂತರ್ಯವನ್ನು ಹಂಚಿಕೊಳ್ಳುತ್ತಾಳೆ. ‘ ನರಬಲಿ’ ಯಲ್ಲಿ ನಾಡಿನ ಬಿಡುಗಡೆಗಾಗಿ ತ್ಯಾಗ ಬಲಿದಾನಗಳನ್ನು ಕೋರುವ ಮಹಾಕಾಳಿಯಾಗಿದ್ದಾಳೆ. ಈ ರೀತಿ ಬಗೆಬಗೆಯಾದ ‘ ತಾಯಿ’ ಯ ಅವತರಣಿಕೆಗಳಿಗೆ ಸಶಕ್ತವಾಗಿ ಅಭಿವ್ಯಕ್ತಿಗೆ ಅಭಿದಾನ ನೀಡುತ್ತಾರೆ ವರಕವಿ ಬೇಂದ್ರೆ.
‘ಸಖಿಗೀತ’ ದಲ್ಲಿ ಬರುವ ‘ಚಿಗಿರಿಗಂಗಳ ಚೆಲುವಿ’ ಕವನದಲ್ಲಿ ಭೂಮಿತಾಯಿ ಪಡುತ್ತಿರುವ ಬವಣೆಯನ್ನು ಬಹಳ ಮನಮುಟ್ಟುವಂತೆ, ಹೃದಯಕ್ಕೆ ತಟ್ಟುವಂತೆ ಚಿತ್ರಿಸಿದ್ದಾರೆ.’
‘ ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕೆ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವ ಕೊಳೆತಾವೊ
ಹುಳತಾವೊ
ಅಳತಾವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧಾಂಗ!!‘
ಎಂಬ ನುಡಿಯ ಕೊನೆಗೆ ತಾಯಿಯ ಗರ್ಭ ರುದ್ರಭೂಮಿಯಾಗುವದನ್ನು ಧ್ವನಿಸುತ್ತದೆ ; ಇದನ್ನು ಕೇಳಿ ಕರುಳು ಕಿತ್ತುಬಂದಂತಾಗುತ್ತದೆ. ಕವನದ ಕೊನೆಯಲ್ಲಿ ಭೂಮಾತೆ ತನ್ನ ಮಕ್ಕಳಿಗೆ ಅಂದರೆ ಮಾನವರಿಗೆ ತನ್ನ ಗೋಳನ್ನು ತೋಡಿಕೊಂಡು ಹೀಗೆ ಅಂಗಲಾಚಿ ಬೇಡಿಕೊಳ್ಳುತ್ತಾಳೆ:
‘ನಿಂತ ನೆಲವೆಂದು ಕಡಿಲಾಕೊ
ಬಡಿಲಾಕೊ
ಒಡಿಲಾಕೊ
ಒಡವ್ಯಲ್ಲೋ ಮಗನೇ ಉಸಿರಿದ್ದಡಲಂತಾಳೋ.’
ಎಂತಹ ಅರ್ಥಗರ್ಭಿತ ಮಾತು. ‘ ನಾನು ಒಡವೆ ಅಲ್ಲ ಉಸಿರಿದ್ದ ಒಡಲು’ .
ಅಂತರಿಕ್ಷದಿಂದ ನಮ್ಮ ಗ್ರಹವನ್ನು ವೀಕ್ಷಿಸಿದರೆ ಅದು ಡವಗುಟ್ಟುತಿದೆ( ಪಲ್ಸೇಟಿಂಗ್) ಎಂಬುದು ಗೋಚರಿಸುತ್ತದೆ.
ಹೀಗೆ ಬೆಂದ್ರೆ ಅವರು ತಾಯಿಯನ್ನು ಬಹುಮುಖವಾಗಿ ಕಂಡಿದ್ದಾರೆ. ಅವರ ಕಾಳಜಿ ಮತ್ತು ಕಳಕಳಿ ವಿಸ್ತಾರಗೊಂಡು ಹೆತ್ತ ತಾಯಿಯಿಂದ ಮೊದಲ್ಗೊಂಡು ಎಲ್ಲೆಗಳನ್ನು ದಾಟುತ್ತಾ ಹೊತ್ತ ತಾಯಿಯನ್ನೂ ಒಳಗೊಳ್ಳುತ್ತದೆ. ಇದೇ ಅವರು ತಮ್ಮ ಕಾವ್ಯದ ಮೂಲಕ ನೀಡಿದ ವಿರಾಟ್ ದರ್ಶನ. ಒಲವಿನ ಕುರಿತು ಬರೆದ ಅವಿಸ್ಮರಣೀಯ ನುಡಿಗಳನ್ನು ಉಲ್ಲೇಖಿಸುವದು ಅಂಕಣದ ಸಂದರ್ಭದಲ್ಲಿ ಬಹಳ ಸೂಕ್ತವೆಂದು ಭಾವಿಸುತ್ತೇನೆ.
‘ಉಯ್ಯಾಲೆ’ ಸಂಗ್ರಹದ ‘ ಒಲವೆಂಬ ಹೊತ್ತಿಗೆ’ ಕವನದಲ್ಲಿ ಗಹನವಾದ ಪ್ರೀತಿಯನ್ನು , ಅದರ ಹರವನ್ನು ಒಗ್ಗೂಡಿಸಿ ಅದಕ್ಕೆ ಪುಸ್ತಕದ ರೂಪಕವಿತ್ತದ್ದು ಬಹಳ ಸಮರ್ಥವಾಗಿ ಮೂಡಿಬಂದಿದೆ.
‘ ಒಲವೆಂಬ ಹೊತ್ತಿಗೆಯ ನೋಡಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ!
ಹಗಲಿರುಳು ದುಡಿದರೂ ಹಲುಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆವೆಚ್ಚ.’
ಇನ್ನೂ ಮುಂದಿನ ಸಾಲುಗಳಲ್ಲಿ:
‘ಬೆವರ ಹನಿಯಲಿ ಹಲವು,ಕಣ್ಣೀರಿನಲ್ಲಿ ಕೆಲವು
ನೆತ್ತರಲಿ ಬರೆದುದಕೆ ಲೆಕ್ಕವಿಲ್ಲ
ಚಿತ್ರಚಿತ್ರಾಕ್ಷರದ ಲಕ್ಷ ಪತ್ರಗಳುಂಟು;
ನಕ್ಷತ್ರ ಓದುತಿವೆ ಮರೆತು ಸೊಲ್ಲ.’
ಈ ಮೇಲಿನ ನುಡಿಗಳು ಒಲವು ಕಂಡ ನೋವು- ನಲಿವುಗಳ ದ್ಯೋತಕವಾಗಿದೆ. ಒಲವಿನ ಎಷ್ಟೋ ರೂಪಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಒಲವಿಗೆ ಇದಕ್ಕಿಂತ ಮಿಗಿಲಾದ ವ್ಯಾಖ್ಯೆ ಮಾಡಲು ಸಾಧ್ಯವೇ?
ಪ್ರೀತಿಯ ಬಗ್ಗೆ ಬರೆದ ಉತ್ಕೃಷ್ಟ ಕವನಗಳ ಸಾಲಿನಲ್ಲಿ ‘ನಾದಲೀಲೆ’ ಕವನ ಸಂಗ್ರಹದ ‘ ನಾನು ಬಡವಿ’ ಹಾಗೂ ‘ ಅಷ್ಟು ಪ್ರೀತಿ ಇಷ್ಟು ಪ್ರೀತಿ’ ಕವನಗಳು ಸೇರಿಕೊಳ್ಳುತ್ತವೆ.
‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’
ಎಂಬ ನುಡಿಯಲ್ಲಿ ಒಲವಿಗಿಂತ ಮಿಗಿಲಾದ ಆಸ್ತಿಯಿಲ್ಲ, ಒಲವೇ ಸರ್ವಸ್ವ ಎಂಬ ಧ್ವನಿ ಸ್ಪಷ್ಟವಾಗಿ ಮೂಡಿಬಂದಿದೆ.
ಅದೇ ಕವನದ ಮುಂದಿನ ಸಾಲುಗಳನ್ನು ಗಮನಿಸಿ:
‘ಆತ ಕೊಟ್ಟ ವಸ್ತವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು’
ಈ ಸಾಲುಗಳಲ್ಲಿ ಒಡವೆ ವಸ್ತುಗಳಿಂದ ತೀರಿಸಲು ಸಾಧ್ಯವಾಗದ ಪ್ರೀತಿಯ ಕೊರತೆಯನ್ನು ಗಂಡ-ಹೆಂಡಿರ ಸಾಮೀಪ್ಯ ಹಾಗೂ ಪ್ರೀತಿಗಳು ತೀರಿಸಬಲ್ಲವು ಎಂಬ ಒಲವಿನ ಸತ್ವದ ಪರಿಚಯವಿದೆ.
‘ ಅಷ್ಟು ಪ್ರೀತಿ ಇಷ್ಟು ಪ್ರೀತಿ –
ಎಣಿಸಿ ಕಷ್ಟಬಡದಿರು
ಒಲಿದು ಒಲಿಸಿ ಸುಖವಿರು
ಎಷ್ಟೆ ಇರಲಿ ಅಷ್ಟೆ ಮಿಗಿಲು- ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.’
ಪ್ರೀತಿ ಎಣಿಕೆಗೆ ನಿಲುಕುವಂಥದ್ದಲ್ಲಾ, ಸುಮ್ಮನೆ ಎಣಿಸಿ ಕಷ್ಟಬಡದಿರು ಎಂಬ ಮಾತಿನಲ್ಲಿ ಒಲವಿನ ಬೃಹತ್ ದರ್ಶನವಿದೆ. ಎಷ್ಟೆ ಇರಲಿ ಅಷ್ಟೆ ಮಿಗಿಲು ಎಂಬ ಮಾತಿನಲ್ಲಿ ಪ್ರೀತಿಯಿಂದ ಸಂತೃಪ್ತವಾದ ಭಾವ ತುಳುಕುತ್ತದೆ.
ಇದೇ ಕವನದ ಇನ್ನೊಂದು ನುಡಿ:
‘ಸಪ್ತನಾಕ ಸಪ್ತನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವೇರಿ ಕುಳಿತೆ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?’
ಸಾಮ್ರಾಜ್ಞಿಯಾಗಿ ಸಿಂಹಾಸನವನ್ನೇರಿ ಕುಳಿತರೂ ಅದರಲ್ಲೇನಿದೆ? ಒಲಿದ ತೋಳಿಗಿಂತ ಅದು ಹೆಚ್ಚೇನು? ಎಂಬ ಸಾಲಿನಲ್ಲಿ ಒಲವಿನ ಸತ್ವದ ಸಮಗ್ರ ದರ್ಶನವಿದೆ.
ಮಾನವರನ್ನು ಹತ್ತಿರ ತರುವದೇ ‘ಒಲವು’. ಒಲವೇ ಸಮಸ್ತ ಜೀವರಾಶಿಯ ಉಸಿರು. ಪ್ರಕೃತಿ- ಪುರುಷರ ಒಲವೇ ಸಕಲ ಸೃಷ್ಟಿಗೆ ಶ್ರೀಕಾರ. ಇದರ ಅಗಾಧ ಶಕ್ತಿ- ಚೇತನಗಳೇ ನನ್ನ ಅಂಕಣಕ್ಕೆ ಪ್ರೇರಕವಾಗಿ, ಬರೆಯುತ್ತಾ ಹೋದಂತೆ ಒಲವು ಪದರು ಪದರಾಗಿ ಅನಾವರಣಗಳ್ಳುವದನ್ನು ನೋಡಿ ನಾನು ಬೆರಗಾಗಿದ್ದೇನೆ. ಕ್ಷಿತಿಜಕ್ಕೂ ಆಚೆ ವ್ಯಾಪಿಸಿದ ಒಲವನ್ನು ನನ್ನ ಕಣ್ಣುಗಳ ಅಳವಿಗೆ ಸಿಕ್ಕಷ್ಟು ನಿಮ್ಮ ಮುಂದೆ ಇಡಲು ಪ್ರಯತ್ನ ಮಾಡಿದ್ದೇನೆ.
ಅಂಕಣದ ಪರಿಮಾಣದಲ್ಲಿ ವರಕವಿ ಬೇಂದ್ರೆ ಅವರ ವಿರಾಟ್ ದರ್ಶನ ಎಷ್ಟು ಸಾಧ್ಯವಾಯಿತೋ ನನಗೆ ಗೊತ್ತಿಲ್ಲ.
ಆದರೆ, ಅವರ ಕುರಿತು ಬರೆಯುವಾಗ ಮನಸು ತುಂಬಿ ಬಂದಿದೆ.
‘ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಮ್ ತುಮ್ ತುಂಬಿ ಬಂದಿತ್ತ ಓ ತಂಗೀ
ತುಂಬಿ ಬಂದಿತ್ತು!!‘
ಬೇಂದ್ರೆ ಅವರ ಕವನಗಳ ಸಾಲುಗಳು ತುಂಬಿವೆ ನನ್ನ ಆಂತರ್ಯದಲ್ಲಿ, ದುಂಬಿಯಂತೆ ಝೇಂಕಾರ ಮಾಡಿ ಅಲೆಗಳನ್ನು ಎಬ್ಬಿಸುತ್ತಿದೆ ನನ್ನ ಮನದ ಆಳದಲ್ಲಿ ; ತುಂಬಿ ಬಂದಿದೆ ಮನ. ಗದ್ಗದಿತವಾಗಿ ಮೂಕವಾಗಿದೆ ಮಾತು-ಸಾಕಿನ್ನು;ಧೇನಿಸಲು ಬೇಕು ಮೌನ!
ವಂದನೆಗಳು..
( ಆಕರ ಗ್ರಂಥ-ಕೃಪೆ ಬೇಂದ್ರೆ ಕಾವ್ಯ – ಲೇಖಕರು ರಂ.ಶ್ರೀ.ಮುಗಳಿ)
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..