ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವೆ ನಮ್ಮ ಬದುಕು-೩೨

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಓಡಿದೆ ಓಡಿದೆ ಎಡೆಬಿಡದೆ ಓಡಿದೆ
ಲೆಕ್ಕಿಸದೆ ಪಥದ ಕಲ್ಲು ಮುಳ್ಳುಗಳ
ದಾರಿಯಲಿ ದುಃಖದ ಮಡುಗಳ!

ಕಡಲ ಲಂಘಿಸಿದೆ ಜೀವನದ
ಭುಗಿಲೆದ್ದ ಒಡಲ ಉರಿಯಿಂದ
ಚೈತನ್ಯ ಉದ್ದೀಪಿಸಿದೆ
ಬೂದಿಯಾಗಲು ಬಿಡದೆ!

ಕತ್ತಲು ಕವಿದರೂ ಎವೆ ಮುಚ್ಚಲಿಲ್ಲ
ಕಂಗಳಲಿ ಬೆಳಗಿದಿ ಪಂಜು
ದಾರಿ ನಿಜ ನಿಚ್ಚಳ!

ಹರದಾರಿ ಹರದಾರಿ ಹರದಾರಿ ಸಾಗಿದೆ
ಕಾಡು ಮೇಡುಗಳನ್ನು ಹಾಡುತ್ತ ದಾಟಿದೆ
ಬಾಳು ಸಮತಟ್ಟವೆ?
ಏರಿಗಳನೇರಲು
ಮೈಮನಗಳು ಭಾರವೆ?

ಗಿರಿಶಿಖರಗಳು ಸನ್ನೆ ಮಾಡಿ ಕರೆದಾಗ
ಎಟುಕಿಸಲು ಕೈಗಳಿಗೆ ಸೋಲನೊಪ್ಪದ ಕಾಲುಗಳು
ವಿಮುಖತೆ- ಪಲಾಯನಗಳಿಗೆ ಹೂಂಗೊಡದ ಕಾಲುಗಳು
ಎರಡರಲೂ ಇದೆ ಓಟ ಎಂದು ಕಂಡರೂ ನೋಟಕ್ಕೆ
ಬಾಟೆಯ ಬಿಡಿಸದ ಛಲದ ಆಟವೆ ಬೇರೆ!

ಅದೋ ಕಾಣುತಿದೆ ಗುರಿ ಎಂದು
ಠೇಂಕರಿಸಿ ಬೆನ್ನ ಹುರಿ ಬಿಟ್ಟೆ ಬಾಣ
ಮಿಂಚಿನ ವೇಗದಲಿ
ವಿಧಿಯು ಹೂಡಿದ ಸಂಚಿಗಿಂತಲೂ
ಮಿಗಿಲಾಗಿ ಹಾರಿ
ಅಂಚುಗಳ ಅಳಿಸಿ ಬಾನನ್ನು ಆಳಿತ್ತು!
ಅರುಣೋದಯದ ಕಿರಣಗಳ ಬೊಗಸೆಯಲಿ ತುಂಬಿ
ಎಲ್ಲ ತಾಣಗಳಲಿ ಚಿಮುಕಿಸಿ ಬೆಳಗಿತ್ತು ನಾಳೆಗಳ!
ಎಷ್ಟಳೆದರೂ ಕಳೆಯದ ಉಮೇದು
ಸಿಂಚನ ಮಾಡಿ ಹಂಚಿದೆ!

ಏಳುಬೀಳುಗಳ ಬಾಳಿನಲಿ ಗೋಳಿಗೆ ಎಡೆ ಇಲ್ಲ
ಓಡು ಓಡು ಓಡು ಎಂದೆ
ಬಿದ್ದರೆ ಧರೆಯ ಮಡಿಲಿದೆ ಸಂತೈಸಲು
ಯಾಕೆ ಚಿಂತೆ ಎಂದೆ
ಚಿತೆಯ ಸೇರಿದರೂ ನಿಂತಿಲ್ಲ ಓಟ
ಭುಗಿಲೆದ್ದ ಜ್ವಾಲೆಗಳಲಿ ಕಾಣುತಿಹದು ನೆಗೆತ
ಇನ್ನೆಲ್ಲಿಗೆ ಜಿಗಿತ ?
ರಾತ್ರಿಯಾಗುವ ಮುನ್ನ ತಾರೆಗಳ ಲೋಕವ ಸೇರುವ ತವಕವೆ?

ಈ ಇರುಳು ಜಾಲಾಡಿ ಆಗಸವ ನೀನಿದ್ದ ತಾಣವ ಹುಡುಕಿ
ಅಂತರಿಕ್ಷದಿ ಬರುವ ನಿನ್ನ ಕಿರಣಗಳ ಅಂಜಲಿಯಲಿ ಹಿಡಿದು
ಬಾಗಿ ನಮಿಸುವೆ ಮಿಲ್ಖಾ

“ಭಾಗ್ ಭಾಗ್ ಭಾಗ್ ಗಮ್ಯದ ಕಡೆ ಓಡು
ವಿಧಿಯೂ ನಿನ್ನ ಒಡನಾಡಿಯಾಗುವದು
ಕೈಚೆಲ್ಲಿ ಕೂರದಿರು ರೆಕ್ಕೆಗಳ ಮಾಡಿ ಅವುಗಳ
ಮೆಟ್ಟಿ ನಿಲ್ಲು ಎಲ್ಲವ ಬಾಹುಗಳ ಊರ್ಧ್ವ ಮಾಡಿ ಮುಟ್ಟು ಆಗಸವ ”
ಎಂದು ಸಾರಿದ ನಿನ್ನ ನುಡಿಗಳು ಗುಂಯ್ಗುಡುತಿವೆ ಕರಣಗಳಲಿ
ಸೇರಿ ಕಣಕಣಗಳಲಿ ಕಾಣುತಿದೆ ಓಡಲು
ಹೊಸತೊಂದು ಜಾಡು!

*

ಉತ್ಸಾಹದ ಚಿಲುಮೆ, ಬುಗ್ಗೆಯಾಗಿದ್ದ ಮಿಲ್ಖಾ  ಸಿಂಗ್ ಅವರು ತಮ್ಮ 91 ನೇ ವಯಸ್ಸಿನಲ್ಲಿ ವಿಧಿಯ ಕೈವಶವಾದ ವಾರ್ತೆಯನ್ನು ಇತ್ತೀಚೆಗೆ ಕೇಳಿದಾಗ ಅವರ ಅದಮ್ಯವಾದ ಚೈತನ್ಯದ ಬಗ್ಗೆ, ಅವರ ಅಪೂರ್ವ ಸಾಧನೆಗಳ ಚಿತ್ರಮಾಲೆ ಕಣ್ಣ ಮುಂದೆ ಬಂದು ಮನಸ್ಸು ಗೌರವ ಭಾವದಿಂದ ಕೂಡಿ ಮೃತರ ಆತ್ಮಕ್ಕೆ ನಮನಗಳನ್ನು ಸಲ್ಲಿಸಿತು. ಅವರು ಟಿವಿ ವಾಹಿನಿಗಳಿಗೆ ಇತ್ತೀಚೆಗೆ ಇತ್ತ ಸಂದರ್ಶನಗಳನ್ನು ವೀಕ್ಷಿಸುತ್ತಿದ್ದಂತೆ, ಅವರು 91 ವಯಸ್ಸಿನ ವಯೋವೃದ್ಧರಾಗಿ ಕಾಣದೆ, ತಾರುಣ್ಯದ ಉತ್ಸಾಹದ ಪ್ರವಾಹ ನನ್ನ ಮುಂದೆ ಹರಿಯುತ್ತರುವಂತೆ ಭಾಸವಾಯಿತು. ಅವರ ಎಂದಿಗೂ ಕುಂದದ ಚೇತನಕ್ಕೆ ಅನೇಕ ನಮನ.

ಅವರ ಜೀವನ ಚರಿತ್ರೆಯ ಆಧಾರದ ಮೇಲೆ ನಿರ್ಮಾಣವಾದ
“ ಭಾಗ್ ಮಿಲ್ಖಾ ಭಾಗ್’
ಚಿತ್ರಕ್ಕೆ ಹಾಡುಗಳನ್ನು ಹಾಗೂ ಸಂಭಾಷಣೆಯನ್ನು ಬರೆಯುವಾಗ ಲೇಖಕ ಪ್ರಸೂನ್ ಜೋಶಿ ಅವರು ಅನೇಕ ಬಾರಿ ಮಿಲ್ಖಾ ಸಿಂಗ್ ಅವರನ್ನು ಭೇಟಿಯಾಗಬೇಕಾದ ಪ್ರಸಂಗಗಳ ಕುರಿತಾಗಿ ಮೆಲುಕು ಹಾಕುತ್ತಾ,

“ ಪ್ರತಿ ಸಲ ಅವರನ್ನು ಕಂಡಾಗ ನಾನು ನವೀಕರಣಗೊಳ್ಳ್ಳುತ್ತಿದ್ದೆ”

ಎಂಬ ಮಾತನ್ನು ಉಲ್ಲೇಖಿಸಿದ್ದಾರೆ, ಅವರಿಂದ ಸ್ಫೂರ್ತಿಗೊಂಡ ವಿಚಾರವನ್ನು ಹಂಚಿಕೊಂಡಿದ್ದಾರೆ.

ಮಿಲ್ಖಾ ಸಿಂಗ್ ಅವರು ಬರೀ ಓಟಗಾರರಷ್ಟೇ ಅಲ್ಲ,  ನವ ಪೀಳಿಗೆಯ ಯುವಕರನ್ನು ಹುರಿದುಂಬಿಸಿದ ಪ್ರೇರಕ ಶಕ್ತಿ. ಜೀವನದಲ್ಲಿ ಅದೆಷ್ಟು ಅಡಚಣೆಗಳು- ಅಡೆತಡೆಗಳು ಬಂದರೂ ಎದೆಗುಂದದೆ ಅವುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಹಸದ ಮಾರ್ಗವನ್ನು ತೋರಿದ ದಿಕ್ಸೂಚಿ.

“ ಈಗಲೂ ನಿಮಗೆ ಓಟದಲ್ಲಿ ಭಾಗವಹಿಸುವ ಆಸಕ್ತಿ ಇದೆಯಾ”

ಎಂದು ಪ್ರಸೂನ್ ಜೋಶಿ ಅವರು ಮಿಲ್ಖಾ ಸಿಂಗ್ ಅವರನ್ನು ವಿಚಾರಿಸಿದಾಗ,

“ ಯಾಕೆ ಇರಬಾರದು, 110 ವಯಸ್ಸಿನ ಫೌಜಿ ಸಿಂಗ್ ಅವರು ಇಂದಿಗೂ ಓಟವನ್ನು ಬಿಟ್ಟುಕೊಟ್ಟಿಲ್ಲ; ಅವರೇ ನನ್ನ ಪ್ರೇರಣೆ”
ಎಂದು ಹೇಳಿದರಂತೆ.

“ ಮೈಂಡ್ ಓವರ್ ಮ್ಯಾಟರ್” ಎಂಬ ಮಾತು ಇಲ್ಲಿ ಅನ್ವಯವಾಗುತ್ತದೆ. ಮನದಲ್ಲಿ ಛಲವಿದ್ದರೆ ಅದು ಎಲ್ಲ ದೈಹಿಕ ಎಲ್ಲೆಗಳನ್ನು ದಾಟುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?
“ ಮನಸ್ಸಿದ್ದಲ್ಲಿ ಮಾರ್ಗ” ಎಂದು ನಮಗೆ ಹಿರಿಯರಿಂದ ಬಳುವಳಿಯಾಗಿ ಬಂದ ನಾಣ್ಣುಡಿ ಇಲ್ಲವೆ?

ಮಿಲ್ಖಾ ಸಿಂಗ್ ಅವರ ಪಥ ಸುಗಮವಾಗಿ ಇರಲಿಲ್ಲ; ಹೂವಿನ ಸುಪ್ಪತ್ತಿಗೆ ಆಗಿರಲಿಲ್ಲ ಅವರ ಜೀವನ. ಅವರು ಎಳೆಯ ಹುಡುಗನಾಗಿರುವಾಗಲೇ ಪಟ್ಟ ಪಾಡುಗಳ ಪಟ್ಟಿಯನ್ನು ನೋಡಿದರೆ ಎದೆ ಝಲ್ಲೆನ್ನುವದು. ಇಂತಹ ಪರಿಸ್ಥಿತಿಯಲ್ಲೂ ವಿಚಲಿತರಾಗದೆ ಮುಂದೆ ಕಾಣುವ ಗಮ್ಯದ ಮೇಲೆ ತಮ್ಮ ದೃಷ್ಟಿಯನ್ನು ನೆಟ್ಟು ಅಮೋಘವಾದ ಸಾಧನೆಗಳ ದಾಖಲೆಗಳ ಮೈಲುಗಳನ್ನು ನೆಡುತ್ತಾ ಹೋದ ಅಗಾಧವಾದ ಚೈತನ್ಯ ಮೂರುತಿ
“ ಮಿಲ್ಖಾ ಸಿಂಗ್”.

 ಗುರಿಯನ್ನು ಸೂಚಿಸುವ ಗೆರೆಯನ್ನು ಅಳಿಸಿಹಾಕಿ ಸ್ವಲ್ಪ ದಮ್ ( ಉಸಿರು ತೆಗೆದುಕೊಳ್ಳಲು ತಂಗಿದಾಗ) ತೆಗೆದುಕೊಂಡು ಚೇತರಿಸಿಕೊಳ್ಳಬೇಕು ಎಂಬ ಹವಣಿಕೆಯಲ್ಲಿ  ಮಿಲ್ಖಾ ಸಿಂಗ್ ಅವರು ಇದ್ದಾಗ ಕೊರೋನಾ ವಂಚನೆ ಮಾಡಿ ಪಂದ್ಯದಲ್ಲಿ ಸೋಲಿಸಿತ್ತು  ಅವರನ್ನು. ಕೆಲವು ತಿಂಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಮಿಲ್ಖಾ ಸಿಂಗ್ ಅವರು ವಿದೇಶದಲ್ಲಿದ್ದ ತಮ್ಮ ಮಕ್ಕಳು ಮೇಲಿಂದ ಮೇಲೆ ಫೋನ್ ಮೂಲಕ ತಂದೆ ತಾಯಂದಿರ ಯೋಗ ಕ್ಷೇಮವನ್ನು ವಿಚಾರಿಸಿ ಕೋವಿಡ್ ಆಗದಂತೆ ಎಚ್ಚರಿಕೆ ವಹಿಸಲು ಕಳಕಳಿಯಿಂದ, ಅಂತಃಕರಣದಿಂದ ಕೇಳಿಕೊಳ್ಳುತ್ತಿದ್ದ ಸಂಗತಿಯನ್ನು ಎಲ್ಲರ ಜೊತೆ ಹಂಚಿಕೊಂಡಿದ್ದರು. ಮಿಲ್ಖಾ ಅವರ ಸಹಧರ್ಮಿಣಿ ನಿರ್ಮಲ್ ಕೌರ್ ( ಭಾರತೀಯ ಮಹಿಳಾ ವಾಲಿಬಾಲ್ ತಂಡದ ನಾಯಕತ್ವವನ್ನು ಕ್ಯಾಪ್ಟನ್ ಆಗಿ ದೇಶವನ್ನು ಪ್ರತಿನಿಧಿಸಿದ್ದರು) ಅವರು ಕ್ರೂರ ಕೋವಿಡ್ ಗೆ ತುತ್ತಾದ 5  ದಿನಗಳ ನಂತರ ಮಿಲ್ಖಾ ಸಿಂಗ್ ಅವರೂ ಸಹ 15 ಜೂನ್ 2021 ರಂದು ಈ ರೋಗಕ್ಕೆ ಬಲಿಯಾದದ್ದು ಬಹಳ ದುರದೃಷ್ಟಕರ.

ಅವರು ಮೃತರಾಗುವ ಕೆಲವು ದಿನಗಳ ಮುಂಚೆ,
ಮಿಲ್ಖಾ  ಸಿಂಗ್ ಅವರ ಜೊತೆ ಮಾತನಾಡಿದ ಪ್ರಧಾನಿ ಮೋದಿಯವರು, 1964 ರ ಟೋಕ್ಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಅವರನ್ನು ಮುಂಬರುವ ಟೋಕ್ಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ನಮ್ಮ ದೇಶದ ಆಟಗಾರರಿಗೆ ಸಂದೇಶ ನೀಡುವದಾಗಿ ಅವರಲ್ಲಿ ಕೇಳಿಕೊಂಡಿದ್ದ ಸಂಗತಿಯನ್ನು ಸ್ಮರಿಸಿಕೊಂಡಿದ್ದು ಇಲ್ಲಿ ಉಲ್ಲೇಖನೀಯ.

ಮಿಲ್ಖಾ ಅವರ ವರ್ಣರಂಜಿತ ವ್ಯಕ್ತಿತ್ವ ಹಾಗೂ ಸಾಹಸ ಗಾಥೆಯ ಹಿಂದೆ ಎಷ್ಟೊಂದು ಉಗ್ರವಾದ ತಪಸ್ಸಿದೆ, ಹೋರಾಟವಿದೆ, ನೋವನುಂಡೂ ಚೆಂಡಿನಂತೆ ಚಿಮ್ಮುವ, ಪುಟಿಯುವ ಚೈತನ್ಯವಿದೆ ಎಂದು ಅವರ ಬಾಳಿನ ಬಾಲ್ಯದ ಪುಟಗಳನ್ನು ತಿರುವಿ ಹಾಕಿದಾಗ ಮಾತ್ರ ತಿಳಿಯುತ್ತದೆ.

ಅಕ್ಟೋಬರ್ 17, 1935 ರಂದು ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ಜನಿಸಿದ ಮಿಲ್ಖಾ ಅವರು ತಮ್ಮ 11 ವರ್ಷಗಳ ಎಳೆವಯಸ್ಸಿನಲ್ಲೇ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿ 1947 ರಲ್ಲಿ ಭಾರತಕ್ಕೆ ದೇಶದ ವಿಭಜನೆಯ ಸಮಯದಲ್ಲಿ ಶರಣಾರ್ಥಿಯಾಗಿ ಬಂದು ಅನುಭವಿಸಿದ ಕಷ್ಟ ಕೋಟಲೆಗಳ ಕುರಿತು, ಅವರು ಹಸಿದಾಗ ಬರಿ ಹೊಟ್ಟೆಯಲ್ಲಿದ್ದಾಗ ಆಹಾರಕ್ಕೆ ಎರಡು ತುತ್ತುಗಳೂ ದೊರಕದೆ  ನೋವನ್ನೇ ನುಂಗಿ ನೀರು ಕುಡಿದು ಮಲಗುತ್ತಿದ್ದ ದಿನಗಳಿಗೆ ಲೆಕ್ಕವಿಲ್ಲ.

ಅವರು ಭಾರತಕ್ಕೆ ಬಂದ ಹೊಸತರಲ್ಲಿ ಬೀದಿ ಬದಿಯ ಹೋಟೆಲುಗಳಲ್ಲಿ ಜೀವನೋಪಾಯಕ್ಕಾಗಿ ದುಡಿಯುತ್ತದ್ದ ಸಂಗತಿಗಳು ಗೊತ್ತಾದಾಗ ನೋವಿನ ಸರಣಿಯಲ್ಲಿಯೇ ಕಳೆದ ಅವರ ಬಾಲ್ಯದ ಕುರಿತಾಗಿ ಅನುಕಂಪದ ತರಂಗಗಳು ಮನದಲ್ಲಿ ಏಳುವದು ಸಹಜ. ಆದರೆ, ಇದ್ಯಾವುದಕ್ಕೂ ಜಗ್ಗದ, ಬಗ್ಗದ ಮಿಲ್ಖಾ ಅವರು ಸಾಧನೆಗಳ ಉತ್ತುಂಗವನ್ನು ತಲುಪಿ ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸಿ ನಮ್ಮ ದೇಶದ ಆಟದ ಕ್ಷೇತ್ರದ ಮಹಾನ್ ಸಾಧಕರಾಗಿ ಎಷ್ಟೋ ಯುವ ಪೀಳಿಗೆಗಳಿಗೆ ದಾರಿ ದೀಪವಾಗಿ ಮುನ್ನಡೆದರು. ಅವರು ಬರೀ ಒಬ್ಬ ವ್ಯಕ್ತಿ ಅಲ್ಲ, ಪ್ರೇರಕ ಶಕ್ತಿ. ಒಂದು ಸಂಸ್ಥೆ ಆದ ಅವರ ಜೀವನ ಚರಿತ್ರೆ ಇಂದಿಗೂ ಎಲ್ಲರಲ್ಲಿ ಪ್ರೋತ್ಸಾಹವನ್ನು ತುಂಬಿ ಧನಾತ್ಮಕ ಶಕ್ತಿಯನ್ನು ಪ್ರದಾನ ಮಾಡಿ ಹುರಿದುಂಬಿಸುವ ರೀತಿ ಅನನ್ಯವಾದದ್ದು.

ಓಟದ ಪಂದ್ಯವಷ್ಟೇ ಅಲ್ಲ ಜೀವನದ ಪಂದ್ಯದಲ್ಲೂ ವಿಮುಖರಾಗದೆ, ಸಮಸ್ಯೆಗಳಿಂದ ಪಲಾಯನ ಮಾಡದೆ ಬಂದ ಬವಣೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸುವ ಪಾಠವನ್ನು ಕಲಿಸಿಕೊಡುತ್ತದೆ ಅವರ ಜೀವನ.

ಆಮೇಲೆ ಅವರು ಸೈನ್ಯವನ್ನು ಸೇರಿದ ಮೇಲೆ( ನಿಜ ಜೀವನದಲ್ಲೂ ಅವರು ಹುಟ್ಟಾ ಯೋಧರು) ತಮ್ಮಲ್ಲಿ ಅಂತಸ್ಥವಾಗಿರುವ ಸ್ಪ್ರಿಂಟರ್ ಅನ್ನು ಕಂಡುಕೊಂಡರು. ತಮ್ಮಲ್ಲಿರುವ ಪ್ರತಿಭೆಯನ್ನು ಹರಿತ ಮಾಡಲು ಅಹರ್ನಿಶಿ ಶ್ರಮಿಸಿದರು. ಕಾಲುಗಳಲ್ಲಿ ಧರಿಸಲು ಸರಿಯಾದ ಬೂಟುಗಳಿಲ್ಲದೆ ಓಡಿದರು; ಪಥದಲ್ಲಿ ಕಲ್ಲು- ಮುಳ್ಳುಗಳು ನೆಟ್ಟು ನೆತ್ತರು ಸುರಿದರೂ ಲೆಕ್ಕಿಸದೆ ಮುಂದೆ ಸಾಗಿದರು.

ಅವಿರತವಾದ ಶ್ರಮದ ಫಲವಾಗಿ 1958 ರಲ್ಲಿ ನಡೆದ ಏಶಿಯನ್ ಪಂದ್ಯಗಳ ಸ್ಪರ್ಧೆಯಲ್ಲಿ 200 ಮೀಟರುಗಳ ಹಾಗೂ 400 ಮೀಟರುಗಳ ಓಟದಲ್ಲಿ ವಿಜಯವನ್ನು ಸಾಧಿಸಿದರು. ಅದೇ ವರ್ಷ ನಡೆದ ಕಾಮನ್ ವೆಲ್ಥ್ ಪಂದ್ಯಗಳಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಗೌರವವನ್ನು ತಂದು ಕೊಟ್ಟರು( ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದ ಮೊದಲಿಗರು ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ).

ರೋಮಿನಲ್ಲಿ ನಡೆದ ಒಲಿಂಪಿಕ್ಸ್ ಪಂದ್ಯದಲ್ಲಿ ಅವರು ಮಾರುತ ವೇಗದಲ್ಲಿ ಓಡಿದ್ದು ಅವಿಸ್ಮರಣೀಯ. ಅವರು ಆ ಪಂದ್ಯದಲ್ಲಿ ನಾಲ್ಕನೆಯ ಸ್ಥಾನವನ್ನು ಗಿಟ್ಟಿಸಿ ಕಂಚಿನ ಪದಕ ಕೂದಲೆಳೆಯಲ್ಲಿ ತಪಿತ್ತು. ಇಂತಹ ಮಹಾನ್ ಚೇತನಕ್ಕೆ ನಮ್ಮ ದೇಶ ಪದ್ಮಶ್ರೀ ಬಿರುದನ್ನು ಪ್ರದಾನಿಸಿ ಅವರಿಗೆ ಯೋಗ್ಯವಾದ ಗೌರವವನ್ನು ಸಲ್ಲಿಸಿತು.

ತಲ್ಲಣಗೊಳಿಸುವ ಬಾಳಿನ ಘಟನಾವಳಿಗಳಿಗೆ ದಿಗಿಲಾಗಿ, ಕಂಗೆಟ್ಟು ಕೈಚೆಲ್ಲಿ ಕೂಡಲಿಲ್ಲ ಧೀರೋದಾತ್ತ ಮಿಲ್ಖಾ ಸಿಂಗ್ – ಹಾರುವ ಸಿಖ್. ತಮ್ಮ ಜಿಗಿತ- ನೆಗೆತಗಳಿಂದ ಬವಣೆಗಳ ಕಡಲನ್ನು ದಾಟಿ ನಮಗೆಲ್ಲರಿಗೂ ಮಾದರಿಯಾಗಿ ಸದಾ ಸ್ಫೂರ್ತಿಯನ್ನು ನೀಡುವ ಬತ್ತದ ಸೆಲೆಯಾಗಿದ್ದಾರೆ.

ಅವರ ಮಾತಿನಲ್ಲಿಯೇ ಹೇಳುವದಾದರೆ, ಅವರು ಓಡಿದ್ದು ಸಮಸ್ಯೆಗಳಿಂದಲ್ಲ ; ಅದು ಪಲಾಯನವಲ್ಲ, ದೈತ್ಯಾಕಾರದ ಕಷ್ಟಗಳನ್ನು ಬೆಂಬತ್ತಿ ಅವುಗಳನ್ನು ಉಚ್ಚಾಟಿಸಲು ಅವರು ಓಡಿದ್ದು.

ಹಾರುವ ಸಿಖ್ ನ ಪ್ರಾಣ ಪಕ್ಷಿ ಹಾರಿಹೋಗಿದೆ. ಕ್ಷಿತಿಜಗಳಾಚೆ, ದಿಕ್ ದಿಗಂತಗಳ ಎಲ್ಲೆಗಳನ್ನು ದಾಟಿದೆ; ಓಟಕ್ಕೆ ಪೃಥ್ವಿಯ ಮೈದಾನಗಳು ಸಾಕಾಗಲಿಲ್ಲವೇನೋ! ಇಡೀ ಅಂತರಿಕ್ಷವನ್ನೇ ತಮ್ಮ ರನ್ನಿಂಗ್ ಟ್ರ್ಯಾಕ್ ಮಾಡಿ ಓಡುತ್ತಿರಬಹುದು.

ಅಗೋ! ಅಗೋ!
ಮಿಂಚಿನ ವೇಗದಿ
ಸ್ವಚ್ಛಂದವಾಗಿ ಓಡುತ್ತಿರುವದು
ಅವರೇ, ಅವರೇ ಖಾತ್ರಿ..
ಫ್ಲೈಯಿಂಗ್ ಸಿಖ್,
ಕಾಣುತ್ತಿಲ್ಲವೆ ದೇವತೆಗಳು
ಸುರಿಸಿದ ಚಿನ್ನದ ಪದಕಗಳ ವೃಷ್ಟಿ;
ಬಾಳಿನ ಬಗೆಗೆ ಅವರ ಅತೀವ ಒಲವಿನ ದೃಷ್ಟಿ!

ವಂದನೆಗಳು..