ಇತ್ತೀಚಿನ ಬರಹಗಳು: ಅಂಜನಾ ಹೆಗಡೆ (ಎಲ್ಲವನ್ನು ಓದಿ)
- ★ ಗ್ರೀಟಿಂಗ್ ಕಾರ್ಡುಗಳ ನೆನಪಿನಲ್ಲಿ ★ - ಜನವರಿ 14, 2021
- ಬಾಲ್ಕನಿಯ ಬೆಳಗು? - ಸೆಪ್ಟೆಂಬರ್ 22, 2020
- ಹಳೆ ಮಾರ್ಗಗಳ ಮಧ್ಯದಲ್ಲಿ - ಸೆಪ್ಟೆಂಬರ್ 10, 2020
◆◆◆◆◆ ಒಲವ ಮಳೆ ◆◆◆◆◆
ರೋಮರಂಧ್ರದಲೊಂದು ಒಲವ ಸೆಲೆ
ಉಸಿರಾಗಿ ಹೊರಳಿ
ನೆಲದ ನೀರು ಆವಿಯಾಗಿ
ನಿಶ್ಶಬ್ದವೇ ಸೆರಗಾಗಿ
ಕತ್ತಲ ಪೊರೆವ ಹೊತ್ತು
ಆಗಸದಲ್ಲೊಂದು ಕೃಷ್ಣ-ರಾಧೆಯರ ಕನಸು
ಕಣ್ತೆರೆದು ನಗುತ್ತದೆ
ಗಾಳಿಯೊಂದಿಗೆ ಕೊಳಲ ನಾದ
ರಾಧೆಯ ಸೆರಗ ಮೇಲೊಂದು ನವಿಲುಗರಿ
ಕೊರಳಲೊಂದು ಹೂಮಾಲೆ ತೊಟ್ಟು
ಹನಿಹನಿಯಾಗಿ
ನೆಲವ ಸೇರುವ ಒಲವು
ಹತ್ತಿರ ಹೋಗದೇ
ಸಿಕ್ಕಲಾರದು ಸಖ್ಯಕ್ಕೆ
ಬೊಗಸೆಯಗಲಿಸಿ ಕಣ್ಣನರಳಿಸಿ
ಬಿದ್ದ ಹನಿಗೂ ಸಂಭ್ರಮಿಸಿ
ಅಂತರಾತ್ಮವ ನೆನೆಸಬೇಕು
ಸಂಭ್ರಮವ ಕಾಪಿಡಬೇಕು ಸಖ್ಯದಲಿ
ಕಲ್ಪನೆಯಲೊಬ್ಬಳು ರಾಧೆ
ನೆನಪಿನಲ್ಲೊಬ್ಬ ಕೃಷ್ಣ
ಕೊಳಲನೂದುವ ಕನಸು
ಹೃದಯದಲ್ಲೊಂದು ಗೋಕುಲ
ಬೊಗಸೆಯಲ್ಲೂ ಬ್ರಹ್ಮಾಂಡ
ಅಂಗೈಯಗಲದ ಬದುಕ ತೋಯಿಸುವ
ಒಲವ ಮಳೆಗೆ
ಮುಂಗುರುಳೊಂದು ಮೆಲ್ಲಗೆ ಜಾರಿ
ಒದ್ದೆಯಾದ ಪಾದಗಳ ಹಾದು
ತೇಲುತ್ತಿದೆ
ಬೊಗಸೆ ತುಂಬಿ ಹರಿದ ನೀರಿನೊಂದಿಗೆ
ಇಳಿಜಾರಿನಂಚಿನಲಿ ಇರಬಹುದೊಂದು ತೊರೆ
ತೊರೆಯ ತುಂಬ ತೇಲುತ್ತಿರಬಹುದು
ನೆಲವ ಕಾಯುವ ಒಲವು
ಹೆಚ್ಚಿನ ಬರಹಗಳಿಗಾಗಿ
ಅವಳು ಬಂದಿದ್ದಳು
ಬಿ.ಆರ್.ಲಕ್ಷ್ಮಣರಾವ್
ನವೋನ್ಮೇಷ ಪುಸ್ತಕ ಲೋಕಾರ್ಪಣೆ