- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಕೆ.ಎಸ್.ನರಸಿಂಹಸ್ವಾಮಿ ಕನ್ನಡ ಕಂಡ ಪ್ರೀತಿಯ, ಒಲುಮೆಯ ಕವಿ, ‘ದಾಂಪತ್ಯ ಕವಿ’ ಎಂದೇ ಸಾಹಿತ್ಯಾಸಕ್ತರ ನಡುವೆ ಇದ್ದು, ಎದ್ದು ನಡೆದು ಹೋಗಿರುವ ಅಪರೂಪ ವ್ಯಕ್ತಿತ್ವದ ಸರಳ ಕವಿ ಎಂದರೆ ಕೆ.ಎಸ್.ನ. ೧೯೧೫, ಜನವರಿ ೨೬ ರಂದು ಕಿಕ್ಕೇರಿಯಲ್ಲಿ ಇವರ ಜನನ. ಭಾರತೀಯರಿಗೆ ಜನವರಿ ೨೬ ಗಣರಾಜ್ಯೋತ್ಸವದ ಸಂಭ್ರಮ ಕನ್ನಡರಿಗೆ ಡಬಲ್ ಧಮಾಕ ಎಂಬಂತೆ ಸರಳ ಬದುಕಿನ ಆರಾಧಕನನ್ನು ಪಡೆದುಕೊಂಡ ಧನ್ಯತಾಭಾವ. ಗಂಡ-ಹೆಂಡಿರ ಸಂಬಂಧ ಮೂರು ಅಕ್ಷರಗಳಲ್ಲಿ, ಮೂರು ಗಂಟುಗಳಲ್ಲಿ ಬಂಧಿತವಾಗಿದೆಯೇ? ಇಲ್ಲ! ಇವರೂ ಅದರಾಚೆಗೆ ಸ್ನೇಹಿತರಾಗಿ, ಪ್ರಣಯ ಹಕ್ಕಿಗಳಾಗಿ ಹುಸಿ ಜಗಳಾಡುವ ತುಂಟ ಕಿನ್ನರರೇ ಸರಿ! ಎಂಬುದನ್ನು ತಮ್ಮ ಕವಿತೆಗಳಲ್ಲಿ ಸಾಧಿಸಿದ ಕಬ್ಬಿಗ. ತಾಯಿಯ ನಂತರ ಹೆಂಡತಿಯ, ತಂದೆಯ ನಂತರ ಗಂಡನ ಆಸರೆ ಬೇಕಲ್ಲವೆ ಅಂತಹ ದಾಂಪತ್ಯವೇ ಕವಿಯ ಕಾವ್ಯದ ಹೂರಣವಾಗಿದೆ. ದಂಪತಿಗಳಲ್ಲಿ ಚರ್ಚೆ ಬೇಕು. ವಾಗ್ವಾದ ಬೇಡ ಎಂಬ ಬಯಕೆ ಈ ಕವಿಯದ್ದು. ಮನುಷ್ಯ ಎಂದ ಮೇಲೆ ಮನಸ್ಸಿನಲ್ಲಿ ತಿದ್ದುವ, ಕ್ಷಮಿಸುವ ಗುಣವಿರಲೇಬೇಕೆಂದು ಪ್ರತಿಪಾದಿಸಿದವರು ಕೆ.ಎಸ್ ನ. ೧೯೨೮ರಲ್ಲಿ ಸೀತಾರಾಮಶಾಸ್ತ್ರಿಗಳು ಇವರಿಗೆ ಹೂಕುಯ್ಯುವ ಕೆಲಸ ನೀಡಿ ಅದಕ್ಕೆ ಪ್ರತಿಯಾಗಿ ‘ಅಮರಕೋಶ’ವನ್ನು ನೀಡಿದ್ದರಂತೆ. ಅಂದಿನಿಂದಲೇ ಇವರು ಮೈಸೂರು ಮಲ್ಲಿಗೆಯ ಘಮವನ್ನು ತಮ್ಮ ಕವನಗಳ ಮೂಲಕ ಕನ್ನಡಿಗರಿಗೆ ಪಸರಿಸಲು ಕಟಿಬದ್ಧರಾದಂತೆ ತೋರುತ್ತದೆ.
ಇವರ ಮೊದಲ ಕವ ಸಂಕಲನ “ಮೈಸೂರು ಮಲ್ಲಿಗೆ”ಯ ಕಾರಣಕ್ಕೆ ಜನಪದ ಕವಿಯಂಥ ಜನಪ್ರಿಯತೆ ಪಡೆದುಕೊಂಡವರು. ಇಲ್ಲಿಯ ಗೀತೆಗಳನ್ನು ಬಳಸಿಕೊಂಡು ‘ಮೈಸೂರು ಮಲ್ಲಿಗೆ’ ಚಿತ್ರವನ್ನು ನಿರ್ದೇಶಿಸಿದವರು ಟಿ.ಎಸ್.ನಾಗಭರಣ. ತಮ್ಮ ೮೮ರ ಇಳಿ ವಯಸ್ಸಿನಲ್ಲಿಯೂ ಕಾವ್ಯರಚನೆಯಲ್ಲಿ ತೊಡಗಿದ ಕೆ.ಎಸ್.ನವರ ಮೈಸೂರು ಮಲ್ಲಿಗೆ ಕವನ ಸಂಕಲನ ಮೂವತ್ತಕ್ಕೂ ಹೆಚ್ಚು ಬಾರಿ ಮುದ್ರಣಗೊಂಡು ದಾಖಲೆ ನಿರ್ಮಿಸಿಕೊಂಡಿದೆ. ‘ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’, ‘ಸತಿಪತಿಯೊಳೊಂದಾದ ಭಕ್ತಿ ಹಿತವಪ್ಪದು ಶಿವಂಗೆ’ ಎಂಬ ಮಾತುಗಳು ದಂಪತಿಗಳ ಅನ್ಯೋನ್ಯತೆಗೆ ಹಿಡಿದ ಕೈಗನ್ನಡಿಯೇ ಸರಿ. ಗಂಡ ಊರಿನ ಸರದಾರನಾದರೂ ಅವನ ಮೂಗುದಾರ ಹೆಂಡತಿಯ ಕೈಯ್ಯಲ್ಲಿಯೇ ಅದಕ್ಕೆ ಕೆ.ಎಸ್.ನ. “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ” ಎಂದಿರುವದು.
ಹುಟ್ಟಿನಲ್ಲಿಯೇ ಜೇನಿನ ರುಚಿ ನೋಡುವಂತೆ ಜೀವನ ಸುಮಧುರ ಕಾವ್ಯವನ್ನು ಅವರ ಕವಿತೆಗಳಲ್ಲಿ ನಾವು ಅನುಭವಿಸಬಹುದು. “ರಾಯರು ಬಂದರು ಮಾವನ ಮನೆಗೆ”, ‘ಪ್ರಶ್ನೆಗೆ ಉತ್ತರ’, ‘ಶ್ಯಾನುಭೋಗರ ಮಗಳು’ ಮುಂತಾದ ಕವಿತೆಗಳಲ್ಲಿ ರಸವಂತಿಕೆ, ಆತ್ಮೀಯತೆಗಳು ಜಲಧಾರೆಯಾಗಿ ಸ್ಫುರಿಸಿದೆ. ‘ಶ್ಯಾನುಭೋಗರ ಮಗಳು’ ಕವಿತೆಯಲ್ಲಿ ಇನ್ನೂ ೧೨ರ ಹುಡುಗಿ ಸೀತೆ ಬಾಳಸಂಗಾತಿಯ ಆಯ್ಕೆಯ ವಿಚಾರದಲ್ಲಿ ತಳೆಯುವ ನಿಲುವು ತಾವರೆಗೆರೆಯ ಜೋಯಿಸರ ಮಗ ಅರ್ಥಾತ್ ಕಪ್ಪು ಹುಡುಗನನ್ನು ಒಲ್ಲೆ ಎನ್ನಲು ಕೊಡುವ ಕಾರಣ ನವುರಾದ ಹಾಸ್ಯದಲ್ಲಿ ಬಂದು ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ಬಾಳ ಸಂಗಾತಿಯ ಆಯ್ಕೆಯಲ್ಲಿ ಹೆಣ್ಣೊಬ್ಬಳ ಭಾವನೆಗಳು ಹೇಗಿರುತ್ತವೆ ಎಂಬುದನ್ನು ಓದುಗರು ಬಯಸಿದಷ್ಟೂ ಆಧ್ಯಾಹಾರ ಮಾಡಿಕೊಳ್ಳಬಹುದಾಗಿದೆ.
‘ಒಂದಿರುಳು ಕನಸಿನಲ್ಲಿ’ ಎಂಬ ಗೀತೆಯಲ್ಲಿ ನವಿಲೂರ ಸೌಂದರ್ಯವನ್ನು ನವಿಲಿನಂತೆ ಗರಿಗೆದರಿ ವರ್ಣಿಸಿದ ಕವಿ “ನಿಮ್ಮೂರು ಚಂದವೋ?” ಎಂದರೆ ಹೆಂಡತಿಯನ್ನು ಕೇಳಿದರೆ ಆಕೆ ಏನು ಹೇಳಿಯಾಳು ಒಪ್ಪಿದ ನಲ್ಲನ ಸನಿಹ ಬೇಕಾದಾಗ….? ಒಬ್ಬರನ್ನೊಬ್ಬರು ಪಡೆದುಕೊಂಡ ಧನ್ಯತಾಭಾವಕ್ಕೆ ಸಾಧು ಎಂಬಂತೆ ಅವರಿಬ್ಬರ ಜೀವವಾದ ಮಗುವಿನಲ್ಲಿ ನೋಡುವ ಬಯಕೆ ವ್ಯಕ್ತಪಡಿಸುತ್ತಾರೆ. ‘ಸಿರಿಗೆರೆಯ ನೀರಲ್ಲಿ’ ಎಂಬ ಕವನದಲ್ಲಿ ಪ್ರಿಯಕರ ತನ್ನ ಪ್ರಿಯತಮೆಯ ಹೆಸರನ್ನು ಬಿರಿದ ತಾವರೆಯಲ್ಲಿ, ಗುಡಿಯ ಗೋಪುರದಲ್ಲಿ ಹುಡುಕುತ್ತಾರೆ. “ತಾಯಿಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿದ ಹಾಲಲ್ಲಿ ನಿನ್ನ ಹೆಸರು” ಎಂದಿದ್ದಾದ್ದರಲ್ಲ ಎಂತಹ ಕಲ್ಪನೆ ಅಲ್ಲವೆ! ಇಂಥಹದ್ದೊಂದು ಕವಿತೆಗೆ ಕೆ.ಎಸ್.ನ. ಅವರಿಗೆ ರಸಿಕರ ಓದಿದಾಗಲೆಲ್ಲ ಕರತಾಡನ ಮಾಡಲೇಬೇಕು. ಕನ್ನಡಿಗರೂ ಅದರಲ್ಲೂ ಓದುಗರು ಅದಕ್ಕೂ ಮಿಗಿಲಾಗಿ ರಸಿಕರು ‘ಮೈಸೂರು ಮಲ್ಲಿಗೆಯನ್ನು’ ಓದಲೇ ಬೇಕು, ಓದಿರಲೇಬೇಕು ಇಲ್ಲವಾದರೆ ಅವರು ರಸಿಕರೇ ಅಲ್ಲ ಎನ್ನುವ ಮಾತುಗಳಿವೆ. ಕೆ.ಎಸ್.ನ. ಅವರ ಕವಿತೆಗಳು ಎದೆಯನ್ನು ಹೊಕ್ಕುತ್ತಾ ಹಾಯ್ದು ಹೋಗುವಂಥವು.
ಕೆ.ಎಸ್.ನ. ಅವರದ್ದು ಮಾತೃಹೃದಯ, ‘ಮೊದಲ ದಿನ ಮೌನ’ ಎಂಬ ಕವಿತೆಯಲ್ಲಿ ಕವಿ ನಲ್ಲನಾಗಿ ಹೆಂಡತಿಯಾಗುವವಳನ್ನು, ಹೆಂಡತಿಯಾದವಳನ್ನು ನೋಡಿಲ್ಲ ಮಾತೃಹೃದಯಿಯಾಗಿ ಆಕೆಯ ತಲ್ಲಣಗಳನ್ನು ಎಳೆ-ಎಳೆಯಾಗಿ ಹೇಳಿದ್ದಾರೆ. ಅವಳ ಭಾವನೆಗಳನ್ನು ವಿವರಿಸಲು ಕವಿತೆಯನ್ನು ಮೂರುಭಾಗ ಮಾಡಿದಂತಿದೆ. ಮೊದಲ ಭಾಗದಲ್ಲಿ ಚಿಂತಾಕ್ರಾಂತೆ ಮದುವಣಿಗಿತ್ತಿ ‘ಅಳುವೆ ತುಟಿಗೆ ಬಂದಂತೆ’ ಎಂದು ಬರೆದಿದ್ದಾರೆ. ಎರಡನೆಯ ಭಾಗದಲ್ಲಿ ಚೇತೋಹಾರಿಯಾದ ಮದುವಣಗಿತ್ತಿ ಅವಳ ಮೂಗುತಿಯನ್ನು ಮಂಜಿಗೆ ಹೋಲಿಸಿದ್ದಾರೆ. ಮೂರನೆ ಭಾಗದಲ್ಲಿ ಸಹೃದಯಿಯಾಗಿ ಮದುವಣಗಿತ್ತಿಯಿಂದ ಮಡದಿಯಾಗಿ ಪರಿಪರ್ಣ ನೀರೆಯಾಗಿ ಗಂಡನಿಗೆ ಹೊಂದಿಕೊಂಡು ಹೋಗುವವಳಾಗಿ ಚಿತ್ರಿತವಾಗಿದ್ದಾಳೆ. ಅವಳು ಮುಡಿದ ದಂಡೆಯ ಹೂ ಅರಳಿ ಚೆಲವು ಸೂಸುತ್ತಿದೆ. ಹುಣ್ಣಿಮೆಯ ಬೆಳಕು ಹಾಲು ಹರಿದಂತಿದೆ ಎಂದು ಹೇಳುವ ಮೂಲಕ ದಂಪತಿಗಳ ಸಾಮರಸ್ಯವನ್ನು ಓದುಗರಿಗೆ ಪ್ರವಹಿಸಿದ್ದಾರೆ. ಇಲ್ಲಿ ಪ್ರವಾಹಕವೆಂದರೆ ಅವರ ಸವಿನುಡಿಗಳೇ. ಆಡಂಬರವಿಲ್ಲದ, ಕ್ಲಿಷ್ಟವಲ್ಲದ ಆಡು ಮಾತುಗಳ ಸರಿಯಾದ ಅಳವಡಿಕೆ ಇಲ್ಲಿದೆ. ಹೊಸ ಜೀವನ ಪಯಣ ಪ್ರಾರಂಭಿಸಿದ ನವದಂಪತಿಗಳ ಅನ್ಯೋನ್ಯತೆಯನ್ನು ಹೇಳಲು ‘ಮದುವೆಯಾಗಿ ತಿಂಗಳಿಲ್ಲ, ನೋಡಿರಣ್ಣ ಹೇಗಿದೆ- ನಾನು ಕೂಗಿದಾಗಲೆಲ್ಲ ಬರುವಳನ್ನು ಶಾರದೆ-ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ… ಎಂಬ ಪದಪಂಕ್ತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
‘ಪಯಣಿಸುವ ವೇಳೆಯಲಿ’ ಎಂಬ ಕವಿತೆಯಲ್ಲಿ ಕವಿ ಹೊಸದಾಗಿ ಮದುವೆಯಾದ ನಲ್ಲನಲ್ಲೆಯರನ್ನು ವಸ್ತುವಾಗಿಸಿಕೊಂಡು ಮತ್ತೊಂದು ಪ್ರೇಮ ಕವಿತೆಯನ್ನು ನೀಡಿದ್ದಾರೆ. ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ… ಇನ್ನೆಂದು ಬರುವಿರೆಂದು ಕೇಳಿದ ನಲ್ಲೆಗೆ ನಲ್ಲ “ಇನ್ನೊಂದು ತಿಂಗಳಿಗೆ” ಎಂದು ಹೇಳುವನು. ಪ್ರಣಯಕಾಂತೆಯನ್ನು ಇಲ್ಲಿ ಆಕೆಯ ಕೆನ್ನೆಯನ್ನು ಸಂಜೆ ಮುಗಿಲಿಗೆ ಹೋಲಿಸಿದರೆ ಕಣ್ಣುಗಳ ನೋಟವನ್ನು ಕಿರುತಾರೆಗಳಿಗೆ ಹೋಲಿಸಿದ್ದಾರೆ ಅವಳು ಮುಡಿದ ಹೂವಂತೂ ವಸಂತ ಪುಷ್ಪ ಎಂದು ವಸಂತ್ಯೋತ್ಸವನ್ನು ನೆನಪಿಸುತ್ತಾರೆ. ಗಂಡನಾದರೊ ಹೋಗಲು ಮನಸ್ಸಿಲ್ಲದವನು, ಹೋಗಲೊಲ್ಲ, ಮನಸುಬಾರದು “ಅಡಿಯನಿಡೆ ಮುಂದೆ” ಎಂದು ಅವನಿಂದ ಹೇಳಿಸಿದ್ದಾರೆ. “ಅಲ್ಲಿಂದ ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ ಹಣ್ಣು ಮಾರುವವನು ಹೊರಟು ಹೋದುದು ಬಂಡಿ” ಎಂದಮೇಲಂತೂ ನಲ್ಲನಿಗೆ ಸ್ವರ್ಗಕ್ಕೆ ಮೂರೇಗೇಣು ಎಲ್ಲಿಲ್ಲದ ಸಂತೋಷ ಒಂದೇ ಕ್ಷಣದಲ್ಲಿ ಹೆಂಡತಿ ಮನೆಗೆ ತೆರಳುತ್ತಾನೆ. ಆ ನಲ್ಲೆಯಾದರೊ ತುಂಟಿ ‘ತಿಂಗಳಾಯಿತೆ’? ಎಂದುಬಿಡುತ್ತಾಳೆ. ನವುರಾದ ಹಾಸ್ಯದಿಂದ ಪ್ರಣಯಗಳ ಮಧುರ ಭಾವನೆಗಳನ್ನು ಕವಿ ಹೇಳಿ ಓದುಗರಲ್ಲೂ ಅಂತಹ ಭಾವನೆಗಳನ್ನು ಜಾಗೃತಿಗೊಳಿಸುತ್ತಾರೆ.
‘ಹೂವು ಅರಳುವ ಮುನ್ನ’ ಕವಿತೆಯಲ್ಲಿ ನಗುವ ನಲ್ಲೆಯ ಚೆಲುವನ್ನು ಹಸಿರು ಹುಲ್ಲಿನ ಸಮೃದ್ಧಿಗೆ ಹೋಲಿಸಿದ್ದಾರೆ. ಈ ಕವಿತೆಯಲ್ಲಿ ಎಲ್ಲವನ್ನೂ ಹೂವಿನಲ್ಲಿ, ಹಕ್ಕಿಯಲ್ಲಿ, ಮೀನಿನ ತುಳುಕಿನಲ್ಲಿ, ಗಿರಿಶಿಖರಗಳ ಉತ್ತುಂಗದಲ್ಲಿ ಕಾಣುತ್ತಾರೆ. ತುಂಬು ಪ್ರೀತಿಯ ಕಲ್ಪನೆ ತುಂಬು ಪ್ರಕೃತಿಯ ನಡುವೆ ಉತ್ತಮ ಸಂಯೋಜನೆ ಕವಿ ಎಲ್ಲವನ್ನೂ ಪ್ರಕೃತಿಯಿಂದಲೇ ಆವಾಹನೆ ಮಾಡಿಕೊಳ್ಳುವುದು ಆದರಣೀಯವಾಗಿದೆ.
‘ನವಿಲ ದನಿ’ ಕವನ ಸಂಕಲನದ ‘ಗಿರಿಗಳೆತ್ತರದಲ್ಲಿ’ “ಬೆಳದಿಂಗಳಿರುಳಿನ ನಸುಗೆಂಪು ಸುಳಿದಾಗ ಹೂಬನದಲಿ ಕೆರೆಯ ಏರಿ ಮೇಲೆ” ಎಂದು ಗ್ರಾಮ್ಯ ಪರಿಸರವನ್ನು ನೆನೆಯುತ್ತಾರೆ. ಕವಿ ಪ್ರೇಮಿಯಾಗಿ ಪ್ರಿಯತಮೆಯ ಉತ್ತರವನ್ನು ಆಕೆಯ ಕಣ್ಣಿನಲ್ಲಿಯೇ ವೀಕ್ಷಿಸುವ ಪರಿ ಆಕೆಯ ಮೇಲಿನ ಪೊಸೆಸ್ಸಿವ್ನೆಸ್ಸನ್ನು ಸಾಬೀತು ಮಾಡುತ್ತದೆ.
‘ಕರೆದಾಗ ಬರುವುದೆ’ ಎಂಬ ಕವಿತೆಯಲ್ಲಂತೂ ಪ್ರಿಯತಮೆಯಲ್ಲಿ ಅಧಿಕಾರವನ್ನು ಸಲುಗೆಯನ್ನು ಒಂದೆ ಬಾರಿಗೆ ಎರಡು ಪದಗಳಲ್ಲೇ ಹೇಳಿಬಿಡುತ್ತಾರೆ. ಕವಿಗೆ ನಲ್ಲೆ “ಕರೆಸಿಕೊಳ್ಳದೆ ಪ್ರಿಯಕರನಡಿಗೆ” ತೆರಳಬೇಕಂತೆ, ಆಕೆ ಇದ್ದರೆ ಬಿರುಬೇಸುಗೆಯನ್ನೂ ಬೀಸಣಿಗೆಯ ವಿನಃ ಕಳೆಯುತ್ತೇನೆ ಎನ್ನುತ್ತಾರೆ. ಎಂತಹ ಅರ್ಪಣಾಭಾವ ಎಂದರೆ ‘ಮುಡಿದ ಹೂವನ್ನು ನನ್ನ ಮೇಲೆ ಎಸೆದುಬಿಡು’ ಎಂದು ಭಿನ್ನವಿಸಿಕೊಳ್ಳುತ್ತಾರೆ.
ಕೆ.ಎಸ್.ನ. ಅವರ ಪ್ರಕಾರ ಹಾಡು ಮುಗಿಯಬಾರದು ಮುಗಿದರದು ಹಾಡಲ್ಲ. ಹೀಗೆ ಮಾರ್ಮಿಕವಾಗಿ ಪ್ರೀತಿ ಎಂಬುದು ಯಾವಾಗಲೂ ಚಿರಸ್ಥಾಯಿ ಎಂದು ಸಾಬೀತುಮಾಡಿದ್ದಾರೆ. “ರಾಯರು ಬಂದರು ಮಾವನ ಮನೆ” ಎಂಬ ಗೀತೆಯಲ್ಲಿ ರಾತ್ರಿಮಾಡಿಕೊಂಡು ಬರುವ ನಾಯಕ ನಾಯಕಿಯ ಹುಡುಕಾಟದಲ್ಲಿ ಇದ್ದರೆ ಮಾವ ನಾದಿನಿಯರ ಆರೈಕೆ ಜೋರಾಗಿರುತ್ತದೆ. ಕಡೆಗೆ ಆಕೆ ಒಳಗಿಲ್ಲ ಎಂಬ ಸತ್ಯಗೊತ್ತಾದಾಗ ಪದುಮಳು ಹಾಕಿದ ಹೂವಿನ ಕಸೂತಿಯಲ್ಲೇ ಅವಳ ಪ್ರೀತಿಯನ್ನು ನೀರೀಕ್ಷಿಸುವ ರೀತಿ ರಮ್ಯವಾಗಿದೆ. ವಿರಹದ ತುಡಿತ ಇಬ್ಬರಲ್ಲು ಹೇಗಿರಬಹುದು ಎಂಬುದನ್ನು ಕವಿ ಅನುಭವಿಸಿ ಬರೆದಿದ್ದಾರೆ. ಪದ್ಯದ ಕಡೆಗೆ ರಾಯರ ಮುನಿಸು ಪದುಮಳ ಭೇಟಿಯಲ್ಲಿ ಪರ್ಯಾವಸಾನವಾಗುತ್ತದೆ.
“ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ” ಎಂಬ ಮಾತಿನಲ್ಲಿ ಪ್ರಿಯತಮೆಯ ಸಾನ್ನಿಧ್ಯ ಇರಲೇಬೇಕು ನಿನ್ನೊಳಿದೆ ನನ್ನ ಮನಸ್ಸು ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು ಎಂದು ನಿಷ್ಕಲ್ಮಷ ಪ್ರೀತಿ ನಿವೇದನೆಯನ್ನು ಆರೋಗಿಸಿಕೊಳ್ಳುತ್ತಾರೆ.
‘ಹಕ್ಕಿಯ ಹಾಡಿಗೆ’ “ತಲೆದೂಗುವ ಆಸೆ ನಾನಾಗುವ ಆಸೆ” ಎಂಬಲ್ಲಿ ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದರಲ್ಲೂ ತನ್ನತನವನ್ನು ಬಯಸುವ ಆಪ್ಯಾಯಮಾನತೆಯನ್ನು ಎಂತಹವರೂ ಮೆಚ್ಚಲೇಬೇಕಾದದ್ದು. ‘ಮಾವನ ಮಗಳು’ ಎಂಬ ಕತೆಯಲ್ಲಿ ಕವಿ ನೀಲ ಎಂಬ ಪಾತ್ರವನ್ನು ಚಿತ್ರಿಸಿದ್ದಾರೆ. ಮಾಜಿ ಪ್ರೇಮಿಯ ಬಗ್ಗೆ ಮಾಜಿ ನಾಯಕ ನೀಲಳಿಗೆ ನನ್ನ ಕನಸುಸಹಿತ ಬೀಳುವುದು ಬೇಡ, ಹಾಲುಂಡು ಹೂ ಮುಡಿದು ಚೆನ್ನಾಗಿ ಬಾಳಲಿ ಎಂದು ಹರಸುತ್ತಾರೆ. ಎಂತಹ ಒಳ್ಳೆಯ ಮನಸ್ಸು ಅಲ್ಲವೆ ಭಗ್ನ ಪ್ರೇಮಿಯಲ್ಲ ಕವಿ ಇಲ್ಲಿ ಬದಲಾಗಿ ಕಳಕೊಂಡ ಪ್ರೇಮಿಗೂ ಒಳ್ಳೆಯದಾಗಲಿ ಎಂದು ಬಯಸುವ ಕವಿಯ ಅಂತರಂಗದ ಶ್ರೇಷ್ಠ ಭಾವನೆ ದರ್ಶನವಾಗುತ್ತದೆ. ಈಗ ಜಗತ್ತಿನಲ್ಲಿ ಇಂಥ ಪ್ರೇಮಿಗಳು ಇದ್ದಾರೆಯೇ? ಸಿಗುತ್ತಾರೆಯೇ? ಒಂದು ಯಕ್ಷ ಪ್ರಶ್ನೆ.
ತಂದೆ ತೀರಿಕೊಂಡ ಬಳಿಕ ಬಿ.ಎ. ವ್ಯಾಸಂಗವನ್ನು ಅರ್ಧಕ್ಕೇ ಮೊಟಕುಗೊಳಿಸಿ ಶೆಟ್ಟರ ಅಂಗಡಿಯಲ್ಲಿ ಲೆಕ್ಕ ಬರೆಯಲು ಸೇರಿಕೊಳ್ಳುತ್ತಾರೆ. ಕರ್ನಾಟಕ ಹೌಸಿಂಗ್ ಬರ್ಡ್ನಲ್ಲಿ ಅಧೀಕ್ಷಕನಾಗಿ ಸೇವೆ ಸಲ್ಲಿಸುತ್ತಾರೆ. ಆದರೆ ಇರಲೊಂದು ಸ್ವಂತ ಮನೆ ಇವರಿಗೆ ಮರೀಚಿಕೆಯಾಗಿರುತ್ತದೆ. ಬಾಡಿಗೆಯ ಮನೆಯಲ್ಲಿಯೇ ಅವರ ವಾಸ ಮನೆ ಮಾಡಿ, ನಂತರ ಮಾರಿ, ಮತ್ತೊಂದು ಬಾರಿ ಮನೆಯನ್ನು ಪ್ರಯಾಸದಿಂದಲೇ ಮಾಡಿಕೊಳ್ಳುತ್ತಾರೆ. ಮನೆಯಿಂದ ಮನೆಗೆ ಕವಿತೆಯಲ್ಲಿ ತಳವಿರದ ಗೂಡೆಗಳು, ಜರಡಿ, ತೊಟ್ಟಿಲು, ಒನಕೆ, ತಿರುಪಿರದ ಲಾಂದ್ರ, ಗಂಟು ಮೂಟೆ ಇವೆಲ್ಲವನ್ನು ತೆಗೆದುಕೊಂಡು ವರ್ಗವಾದ ಊರಿಗೆ ಹೋಗುವ ಗಂಡ-ಹೆಂಡತಿಯನ್ನು ಚಿತ್ರಿಸಿದ್ದಾರೆ. ಬಡವನೆ ಆದರೂ ಏನು ಶಿವ ಎಂಬಂತೆ ಹೆಂಡತಿಯ ಅನುಸರಣೆ ಅಸಮಾಧಾನದ ನಡುವೆಯೂ ನಕ್ಷತ್ರದ ಬೆಳಕಿನಂತೆ ಚಿರಸ್ಥಾತಿಯಿಯಂತೆ ದೇದೀಪ್ಯಮಾನವಾಗಿದೆ. home-house ಇವೆರಡರ ಭಿನ್ನತೆಯನ್ನು ಸರಿಯಾಗಿ ತೋರಿಸಿಕೊಟ್ಟವರೆಂದರೆ ಕೆ.ಎಸ್.ನ. ಮನೆ ಇರದಿದ್ದರೇನಂತೆ ವಿಶಾಲವಾದ ಮನಸ್ಸಿನ ಹೊಂದಿಕೊಂಡು ಅರ್ಥಪೂರ್ಣ ಬಾಳುವೆಯನ್ನು ಸವೆಯಲು ಎಂದು ಸ್ಫುಟವಾಗಿ ಪ್ರೇಮಿಗಳಿಗೆ ಸಂದೇಶ ಕೊಟ್ಟ ಪ್ರೇಮ ಕವಿ ಎಂದರೆ ಇವರೇ. ನೋವು ಹಾಗು ಕಂಬನಿ ಬದುಕಾದರೆ ಕರವಸ್ತ್ರ ಕವಿತೆಯಾಗುತ್ತದೆ. ಕವಿತೆ ಬದುಕಿಗೆ ಸಾಂತ್ವನ ಹೇಳುತ್ತದೆ ಆದ್ದರಿಂದ ಪ್ರೇಮಿಗಳಲ್ಲಿ ಕವಿ, ಕವಿಗಳಲ್ಲಿ ಪ್ರೇಮ ಇದ್ದೇ ಇರುತ್ತದೆ ಎಂಬುದನ್ನು ತಮ್ಮ ದಾಂಪತ್ಯ ಗೀತೆಗಳಲ್ಲಿ ಸಾಬಿತು ಮಾಡಿದ್ದಾರೆ.
ದಾಂಪತ್ಯ ಮತ್ತು ಅದರ ಸಾರ್ಥಕತೆಯನ್ನು ‘ಮೈಸೂರು ಮಲ್ಲಿಗೆ’ ಕೃತಿ ಚಿತ್ರಿಸುತ್ತದೆ. ‘ಕಾರಣ ಯಾರಿಗೆ ಗೊತ್ತು’ ಎನ್ನುವ ಕವಿತೆಯಲ್ಲಿ ನಾಳೆಯ ದಿನವೆ ಮದುವೆಯಾಗಲು ತಯಾರಿರಬೇಕಾದ ನಲ್ಲೆ ಬೇಸರಗೊಂಡಂತೆ ಮಂಕಾಗಿರುವ ಸನ್ನಿವೇಶವೊಂದನ್ನು ಅವಳ ಸೌಂದರ್ಯದ ಬಗೆಗೆ ವಿವರಿಸುತ್ತಲೇ ಹೇಳುತ್ತಾರೆ. ನಲ್ಲ ಮಾತ್ರವಲ್ಲ ನಲ್ಲನ ಕಡೆಯವರ ಮನಸ್ಥಿತಿಯ ಬಗ್ಗೆ ಭಾರತೀಯ ಹೆಣ್ಣೊಬ್ಬಳು ಊಹಿಸಿ ಕನಲಿದಂತಿದೆ ಮದುವಣಗಿತ್ತಿ ದಾಂಪತ್ಯದ ಗಂಡು ಹೆಣ್ಣಿನ ಒಡನಾಟದ, ಅಗಲುವಿಕೆಯ ಹತ್ತು ಹಲವು ಪ್ರೇಮಭಾವದ ನಿರೂಪಣೆಯಲ್ಲಿ ಇವರ ಕವನಗಳಿವೆ. ಸರಸ-ದಾಂಪತ್ಯದಲ್ಲಿ ಗಂಡ-ಹೆಂಡತಿಯರು “ಯಾವ ಊರು ಚೆನ್ನವೆನ್ನುವ” ಕುಶಲತೆಯೊಂದಿಗೆ ಸಾರ್ಥಕ ದಾಂಪತ್ಯಕ್ಕೆ ಪ್ರತಿಫಲವಾಗಿ ಮಗುವಿನ ಹುಟ್ಟಿಗೆ ಸಂಭ್ರಮಿಸುವ ಅತ್ಯಂತ ಸುಖದಾಯಕ ಕವಿತೆಯ ಸಾಲುಗಳು ಓದುಗರನ್ನು ಅನುರಾಗಿಗಳನ್ನಾಗಿಸುತ್ತದೆ. ತಂಗಿಯ ಮದುವೆಗೆಂದು ಹೆಂಡತಿ ಊರಿಗೆ ಹೋದ ನಂತರ ಗಂಡ ಬರೆದ ಬಿರುನುಡಿ ಪತ್ರಕ್ಕೆ ಮರುಪತ್ರ ಬರೆದಂತೆ ರಚನೆಯಾಗಿರುವ ಕವಿತೆ ‘ಹೆಂಡತಿಯ ಕಾಗದ’ “ತವರಸಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು” ಎಂದು ಇಲ್ಲಿ ಈ ಕವಿತೆಯಲ್ಲಿ ತಾನೇ ಮಡದಿಯಾಗಿ ಏಕಾಂಗಿತನ ಅನುಭವಿಸಿದಂತೆ ಗಂಡನಿಗೆ ಸಮಾಧಾನಿಸುವಂತೆ ಬರೆದ ಸೊಗಸಾದ ಸಾಲುಗಳು ಕವಿಯ ಕೌಶಲ್ಯವನ್ನು ಅಭಿವ್ಯಕ್ತಿಸುತ್ತವೆ. ಎಂಥಹ ಕವಿ? ಇವರನ್ನು ಕೇಳದಿರೆ ನಾವು ಕನ್ನಡಿಗರೇ?
ಅಂದಿನ ಸಾಮಾಜಿಕತೆಯನ್ನು ಪ್ರತಿನಿಧಿಸುವ ಮಾನವ ಸಂಬಂಧಗಳ ನಿರಂತರತೆಯನ್ನು ಹಾರೈಸುವ ಹಿರಿಯನಾಗಿ ಭಾಂದವ್ಯಗಳ ಮೌಲ್ಯದ ಕೊಂಡಿಯಾಗಿ ಚಿತ್ರಿತವಾದ ಬಳೆಗಾರನ ಹಾಡೂ ಸಹ ಉಲ್ಲೇಖಾರ್ಹ. ಗಂಡನನ್ನು ಅಗಲಿ ತವರಲ್ಲಿ ಅವನಿಗಾಗಿ ಹಂಬಲಿಸುವ ಹೆಣ್ಣುಮಗಳು. ಅವಳಲ್ಲದೆ ಅವನು, ಅವಳ ಮನೆಯ ಪಾಡುಗಳು ಹಳಿತಪ್ಪುವ ಅಪಾಯವನ್ನು ಗಮನಿಸಿದ ಹೆಣ್ಣು ಮಗಳ ಪಾತ್ರದ ಕಲ್ಪನೆ ಅತ್ಯದ್ಭುತ “ಕೂಡಿದರೆ ಕೆನೆಹಾಲು ಅಗಲಿದರೆ ಕೆನೆಮೊಸರು” ಎಂಬ ಮಾತು ನೂರಕ್ಕೆ ನೂರರಷ್ಟು ಸಾಧಿಸುತ್ತದೆ. ಕವಿತೆ ಇಲ್ಲಿ ಅವರ ಅಂತರಂಗದ ಸ್ಪಂದಕ ಶೀಲತ್ವದ ಗುಣವನ್ನು ಕಾಣಬಹುದು.
ಬಳೆಗಾರ ಚೆನ್ನಯ್ಯ ನವಿಲೂರ ಮನೆಯಿಂದ ನುಡಿಯೊಂದನ್ನು ತಂದಿದ್ದಾನೆ. ವಿರಹಿ ಗಂಡನಿಗೆ ಮಡದಿ “ಮುಡಿದ ಮಲ್ಲಿಗೆ ಅರಳು ಬಾಡಿಲ್ಲ, ಕುಡಿದ ನೀರಲಗಿಲ್ಲ, ಅಮ್ಮನಿಗೆ ಬಳೆಯ ತೊಡಿಸಿದರು ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ ಸೆರಗಿನಲಿ ಕಣ್ಣೀರನೊರಸಿ ಸುಖದೊಳಗೆ ನಿಮ್ಮ ನೆನೆದರು ತಾಯಿ ದೀಪದೊಳಗೆ ಬಿಡುಗಣ್ಣನಿಲಿಸಿ” ಎಂಬ ಸಾಲುಗಳು, ಕವಿಯಲ್ಲ ಕವಿರೂಪಿ ಆ ಬ್ರಹ್ಮನೆ ತನ್ನ ಸೃಷ್ಠಿಯ ಜೀವಿಗಳ ನರಳಾಟ ನೋಡದೆ ರಚಿಸಿದಂತಿದೆ. ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಳೆದು ಕುದಿಯಬಾರದು ಒಡಲ ಚಿಲುಮೆಗಾಗಿ ಹೋಗಿ ಬನ್ನಿರಿ ಒಮ್ಮೆ ಅಮ್ಮನಿಗೆ ನಿಮ್ಮದೇ ಕನಸು ಎಂದು ತುಂಬು ಗರ್ಭಿಣಿಯ ಮನದಿಂಗಿತವನ್ನು ಸುಂದರವಾಗಿ ಚಿತ್ರಿಸಿದ್ದಾರೆ. “ಮುನಿಸು ಮಾವನ ಮೇಲೆ ಮಗಳೇನು ಮಾಡಿದಳು” ಎಂದು ನಿಷ್ಠುರವಾಗಿಯೇ ಗಂಡನನ್ನು ಎಚ್ಚರಿಸುತ್ತಾರೆ. ಈ ಸಾಲುಗಳಲ್ಲಿ ಮತ್ತೊಮ್ಮೆ ಕವಿಯ ಅಂತರ್ಗತ ಮಾತೃಪ್ರೇಮ ನೀರಿನ ಚಿಲುಮೆಯಾಗಿ ನಮಗೆ ಗೋಚರಿಸುತ್ತದೆ. ಕವಿ ಬರೇ ಸೌಮ್ಯ ಸ್ವಭಾವದವರಲ್ಲ ‘ಸೀತೆಯ ಭಾಗ್ಯ’ ಎಂಬ ಕವಿತೆಯಲ್ಲಿ ಪುರಾಣದ ಸೀತೆಗೆ ಉಂಟಾದ ಅನ್ಯಾಯವನ್ನು ಖಂಡಿಸುತ್ತಾ ಭಾವುಕರಾಗಿ, ಕೋಪಿಷ್ಠರಾಗಿ ಹತಾಶರಾಗಿ ಇದಕ್ಕೆ “ರಾಮಾಯಣ” ಎಂದು ಹೆಸರಿಟ್ಟಿದ್ದೇ ಪ್ರಮಾದ “ಸೀತಾಯಣ” ಎನ್ನಬೇಕಿತ್ತು ಎಂದು ಅನ್ಯಾಯವನ್ನು ಧಿಕ್ಕರಿಸುವ ಮನೋಭಾವವನ್ನು ತೋರಿಸುತ್ತಾರೆ. ದಾಂಪತ್ಯವೆಂದರೆ ತಾಳುವಿಕೆ, ತಳ್ಳುವಿಕೆಯಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ.
ಒಪ್ಪಿಕೊಂಡ ಮಡದಿಯಿಂದ ಬಾಳಿಂದ ನನ್ನ ಪರಿಪೂರ್ಣತೆಯನ್ನು ಪಡೆದುಕೊಂಡಿದೆ ನಾನು ಯಾವಾಗಲೂ ನಿನಗೆ ಮಣಿ ಎಂದು ಹೇಳುವ, ಧನ್ಯವಾದಗಳನ್ನು ಸ್ಫುರಿಸುವ ಸಾಲುಗಳು “ನಿನ್ನೊಲುಮೆಯಿಂದಲೇ ಬಾಳು, ಬೆಳಕಾಗಿದೆ ಎನ್ನುತ್ತಾರೆ. ತಪ್ಪೆನೇ ಒಪ್ಪೆನೇ” ಎಂಬ ಪದಗಳು ಹದವರಿತು ಇಲ್ಲಿ ವಿವಹರಿಸಿವೆ. ಬಾಳು ಬೆಳಕಾಗಿದೆ, ಸೌಜನ್ಯದ ನೆರಳು, ಕನಸು ಕೈಗೂಡುವ ಯಾತ್ರೆ ಮುಂತಾದ ಪದಗಳು ಅನ್ಯೋನ್ಯ ದಾಂಪತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಆಧುನಿಕ ಕಾವ್ಯ ಪರಂಪರೆಯ ಸಂದರ್ಭದಲ್ಲಿ ಭಿನ್ನಕಾಲ, ಭಿನ್ನ ಬದಲಾವಣೆಗಳ ನಡುವೆಯೂ ತನ್ನತನವನ್ನು ಕಾಯ್ಧುಕೊಂಡು, ಮೌಲ್ಯಯುತ ಮಾನವೀಯ ಸಂಬಂಧಗಳ ಶ್ರೇಷ್ಠತೆಯನ್ನು ಕಾಯ್ದಕೊಂಡು ಶ್ರೇಷ್ಠ ಚಿಂತಕನಾಗಿ ನಮ್ಮ ನಡುವೆ ಕಾಣಸಿಗುತ್ತಾರೆ. ಕೆ.ಎಸ್.ನ. ಅವರು ಬಿ.ಎಂ.ಶ್ರೀ ಹಾಗು ಬರ್ನ್ಸ್ ಅವರ ಪ್ರಭಾವಕ್ಕೆ ಒಳಗಾಗಿದ್ದ ಕಾರಣಕ್ಕೆ ಆ ಕವಿಗಳ ಸರಳತೆಯನ್ನು ಜಾನಪದೀಯ ಧಾಟಿಯನ್ನು ಉಳಿಸಿಕೊಂಡು ಗ್ರಾಮಿಣ ಸಂಚಾರ ಮಾಡಿ ಜನಪದ ಗೀತೆಗಳ ಸೊಗಡನ್ನು ತುಂಬುವ ಪ್ರಯತ್ನ ಮಾಡುತಾರೆ. ಪ್ರೇಮ ನಿರಂತರವಾದ ಅಷ್ಟೇ ಭಾವುಕವಾದ ಮನುಷ್ಯನ ಅಂತಃಕರಣಕ್ಕೆ ಸಂಬಂಧಿಸಿದ್ದು ಅದನ್ನು ಒಪ್ಪವಾಗಿ ಓದುಗರಿಗೆ ನೀಡಿರುವುದು ಕವಿಯ ಹಿರಿಮೆ. ಗಂಡ-ಹೆಂಡಿರ ಅನ್ಯೋನ್ಯ ಸಂಬಂಧ, ತೌರಿನ ಹಂಬಲ, ಗಂಡನ ಮುನಿಸು, ಹೆಣ್ಣಿನನೋವು, ನೆರೆಯವರ ಸಹಾನುಭೂತಿ, ಪ್ರಣಯದ ದಾಂಪತ್ಯ ಗೀತೆಗಳ ಪ್ರಮುಖ ವಸ್ತು ಪ್ರಕೃತಿಯ ಹೊಚ್ಚ ಹೊಸತನವನ್ನೂ ಅವರ ಕಾವ್ಯದ ಮೂಲಕ ಅನುಭವಿಸಬಹುದಾಗಿದೆ.
‘ಮುನಿಸು ಮಾವನ ಮೇಲೆ ಮಗಳೇನು ಮಾಡುವಳು”, “ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯ”, “ಕೂಡಿದರೆ ಕೆನೆಹಾಲು ಅಗಲಿದರೆ ಕೆನೆಮೊಸರು” ಮುಂತಾದ ಸಾಲುಗಳು ಕವಿಯ ಕುಶಲತೆಗೆ ಸಾಕ್ಷಿಯಾಗಿದೆ. “ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣಹನಿಗಳೇ ಕಾಣಿಕೆ” ಎನ್ನುವ ಮೂಲಕ ತನ್ನ ಪ್ರೀತಿಯ ಕನವರಿಕೆಯನ್ನು ಕನ್ನಡಿಗರಿಗೆ ಅರುಹಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಅವರ ಪತ್ನಿಯದ್ದು ಯಾವಾಗಲೂ ಒಂದು ದೂರು ನರಸಿಂಹಸ್ವಾಮಿಯವರ ಮೇಲಿತ್ತಂತೆ ಅದೇನೆಂದರೆ ನಶ್ಯ ಏರಿಸಿಕೊಳ್ಳುತ್ತಾರೆ ಎಂಬುದಾಗಿ ಹೌದು! ಅವರು ನಶ್ಯ ಏರಿಸಿಕೊಂಡು ಕನ್ನಡಿಗರ, ರಸಿಕರ ಮನಸ್ಸಿನಲ್ಲಿ ಕಾವ್ಯನಶೆಯ ನಶೆ ಏರಿಸಿದ್ದಾರೆ ಎಂಬುದು ಸುಳ್ಳಲ್ಲ. ನವೋದಯದ ಸಂದರ್ಭದಲ್ಲಿ ಯಾವ ಪಾಶ್ಚಾತ್ಯ ರೋಮ್ಯಾಂಟಿಕ್ ಕವಿಗೂ ಕಡಿಮೆಯಿಲ್ಲದಂತೆ ದೇಶ ಪ್ರೇಮದ ಸೊಗಸನ್ನು ದೇಶೀ ಪದಗಳಲ್ಲೇ ದೇಶೀ ರೀತಿಯಲ್ಲೆ ಹೇಳಿ ನಮ್ಮ ‘ದಾಂಪತ್ಯಕವಿ’, ‘ಒಲುಮೆ ಕವಿ’, ‘ಪ್ರೇಮಕವಿ’ಯಾಗಿದ್ದಾರೆ.
ಆಧಾರ ಕೃತಿ:
ಇಹದ ಪರಿಮಳದ ಹಾದಿ:ನರಹಳ್ಳಿ ಬಾಲಸುಬ್ರಹ್ಮಣ್ಯ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್