ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಟ್ಟು

ಕವಿತೆ...
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಅದೆಂಥದೋ ರಾಕರ್ ದುಬಾರಿ
ಪ್ರಾಮು
ಎದೆಗೋ ಬೆನ್ನಿಗೋ ಕಟ್ಟಿ ಹಿಡಿಯಲು
ದುಬಾರಿ ಬೆಲ್ಟು

ಯಾವುದನ್ನೂ ಬೇಡದ ಸುರಳೀತ
ಸರಳ ವ್ಯವಸ್ಥೆಯಿದು

ಕೋಲಿಗೆ ಜೋಲಿ ಕಟ್ಟಿ ತೂಗಿ
ಮಲಗಿಸಿ
ಎದ್ದು ಅತ್ತರೆ ಅದೇ ಸೀರೆಯಿಂದ
ಬೆನ್ನಿಗೆ ಬಿಗಿದು ಕಟ್ಟಿ
ಕಂದ ಹಸಿದರೆ ಅಲ್ಲೇ
ಬದಿಗೆ ಸರಿದು
ಸೆರಗು ಹೊದಿಸಿ ಎದೆಯುಣಿಸಿ
ಪೊರೆಯುವ
ತಾಯ ಕರುಳು

ರಟ್ಟೆ ಮುರಿದು ಬುಟ್ಟಿ ತುಂಬಿ
ಇಟ್ಟಿಗೆ ಹೊತ್ತು ಅಮ್ಮ
ಕಟ್ಟಡ ಕಟ್ಟುತ್ತಾಳೆ.

ನಿರಾಳ ಮಲಗಿದ
ಕಂದನ ಕನಸಿನಲ್ಲಿ
ನವ ನಗರ ನಾಡುಗಳು
ಮೊಳೆಯುತ್ತಿವೆ