- ಕಣಿವೆ ಹೂವು… - ಜೂನ್ 8, 2021
ಎಷ್ಟು ದಿನವಾಗಿದೆ ಈ ಕಣಿವೆಗೆ ಬಂದು? ಉಹೂಂ.. ವರ್ಷಗಳೇ ಕಳೆದಿವೆ. ಏಕತಾನತೆಯನ್ನರಸಿ ಎಲ್ಲದರಿಂದಲೂ ದೂರ ಸರಿದು, ಇಲ್ಲಿ ತಲುಪಿ, ಈ ಗಿರಿ-ಶಿಖರದೊಳು ಒಂದಾಗುವವರೆಗೂ ಬಿಟ್ಟೂ ಬಿಡದೇ ಕಾಡುತ್ತಿತ್ತಲ್ಲ ತರಾವರಿ ಯೋಚನೆಗಳು? ತಪ್ಪು ಮಾಡಿಬಿಟ್ಟೆ ಎನ್ನುವ ಪಶ್ಚಾತ್ತಾಪ ಇರದಿದ್ದರೂ, ತಪ್ಪಾಯಿತೇ ಎನ್ನುವ ಅನುಮಾನ ಭಾವವಂತೂ ಇತ್ತು! ಮೋಹ-ಪ್ರೀತಿಯೆಂಬುದನ್ನೇ ಉಸಿರಾಗಿಸಿಕೊಂಡವರಿಗೆ ಮಾತ್ರ ಅವರ ಜೀವನದುದ್ದಕ್ಕೂ ಇಂತಹ ಅನುಮಾನ ಕಾಡುತ್ತಲೇ ಇರುತ್ತದೆ. ವ್ಯಕ್ತಿ ಎಂತಹವನಾದರೂ, ನೈಜ ಪ್ರೀತಿ ಯಾವತ್ತಿಗೂ ಸಹ ಪ್ರಿಯಕರನನ್ನು ಒಳ್ಳೆಯವನೆಂದೇ ಅನುಬೋಧಿಸುತ್ತದೆ. ಅದನ್ನೇ ನಂಬುತ್ತದೆ. ಅದಕ್ಕೆ, ಎದುರಿಗೆ ನೈಜ ಸ್ವರೂಪ ಕಾಣುತ್ತಿದ್ದರೂ, ಮನಸ್ಸಿನೊಳಗೆ ಬೇರೆಯದೇ ಸ್ವರೂಪ ಮೂಡಿದ್ದು? ಅದನ್ನೇ ನಿಜವೆಂದು ನಂಬಿ, ಅರಳಿದ ಆತನ ಮೂರ್ತ ರೂಪವನ್ನೇ ಸತ್ಯವೆಂದು ಆರಾಧಿಸಿದ್ದು? ಇಷ್ಟು ವರ್ಷಗಳಾದ ಮೇಲೂ ಅದೇ ಭಾವ ಮತ್ತೆ ಒಸರುತ್ತದೆ. ರಾತ್ರಿಯ ಏಕಾಂತದಲ್ಲಿ, ಇಳಿಸಂಜೆಯ ಒಂಟಿತನದಲ್ಲಿ,. ಹೀಗೆ! ಪ್ರತಿ ಕ್ಷಣದಲ್ಲಿಯೂ!
ಬದುಕು ಪ್ರೀತಿಸಿದವರ ಜೊತೆ ಇರುವಾಗ ಬೇಗ ಕಳೆದು ಹೋಗುತ್ತದೆ, ಒಂಟಿಯಾಗಿ ಸಖನ ನೆನಪಲ್ಲಿರುವಾಗ ಒಂದು ವರ್ಷ ನೂರು ವರ್ಷಗಳಾಗಿ ಪರಿವರ್ತನ ಹೊಂದುತ್ತವೆ. ಕಾಲ ನಿಯಮಗಳೆಲ್ಲವನ್ನೂ ಮೀರಿ, ಕೇವಲ ಒಂಟಿತನವೊಂದೇ ಶಾಶ್ವತವಾಗಿ ನಿಲ್ಲುತ್ತದೆ, ಫ್ರೋಜನ್ ಮೊಮೆಂಟ್ಸ್ ಅನ್ನುತ್ತಾರಲ್ಲ.. ಹಾಗೆ! ಅದು ಕೊಳೆಯುವುದೂ ಅಲ್ಲ, ಸಾಯುವುದೂ ಇಲ್ಲ. ಚಿರಕಾಲವೂ ಒಂದೇ ಕ್ಷಣವೊಂದು ಅಲ್ಲಿರುತ್ತದೆ. ಅದಕ್ಕೆ ಬೇರಾವ ಕ್ಷಣಗಳು ಕೂಡುವುದೂ ಇಲ್ಲ, ಇದ್ದದ್ದು ಕಳೆಯುವುದೂ ಇಲ್ಲ..
ಅರೇ! ನನ್ನದೂ ಅದೇ ಅಲ್ಲವೇ ಜೀವನ? ಎಷ್ಟು ಕಾಲದಿಂದ ಇದೊಂದೇ ಹಾದಿಯಲ್ಲಿ ನಡೆಯುತ್ತಿದ್ದೇನೆ? ಎಂತಹ ಸುಂದರವಾದ ಹಾದಿ ಇದು? ತೀರಾ ಎಂಬಷ್ಟು ನಿರ್ಜನ, ಹಾದಿಯ ಬದಿಗಳಲ್ಲಿ ಒತ್ತೊತ್ತಾಗಿರುವ ಪೈನ್ ಮರಗಳು, ಇಬ್ಬನಿ ಅಥವಾ ಹಿಮ ಸೋಕಿದರಂತೂ ಇದು ಸ್ವರ್ಗ. ಊಳಿಡುವ ತೋಳಗಳು, ಮನೆಯ ಮಾಳಿಗೆ ಹತ್ತಿ ಮಲಗಿದರೆ ತಲೆಯ ಮೇಲೆ ಚಿತ್ತಾರ ಬಿಡಿಸಿದ ನಾರ್ದರ್ನ್ ಲೈಟ್ಸ್ಗಳು.. ಒಮ್ಮೊಮ್ಮೆ ನಾನು ಸಮಾಧಿ ಸ್ಥಿತಿಯಲ್ಲಿದ್ದೇನಾ ಎಂಬ ಭಾವ.. ಮತ್ತೊಮ್ಮೆ ಸಮುದ್ರದಾಳದಲ್ಲಿ ಹುದುಗಿರುವ ಹಾಗೆ ಭಾಸ.
ಎಷ್ಟು ಕಾಲವಾಯಿತೋ ಏನೋ? ಒಂದು ಐವತ್ತು? ನೂರು? ವರ್ಷಗಳೂ ಲೆಕ್ಕಕ್ಕೆ ಸಿಗದಿರುವ ಹಾಗೆ ಬುದ್ಧಿ ಮುದಿಯಾಗಿದೆ.. ನಾನು ಸಾಯುವುದೇ ಇಲ್ಲವಾ? ತಥ್! ಇನ್ನೆಷ್ಟು ದೂರ ನಡೆಯಬೇಕು? ಈ ದಾರಿ ಮುಗಿಯುವುದೇ ಇಲ್ಲ.
…
‘ಯಾಕೆ ಮುಗಿದುಹೋಯಿತು?’ ಎಂಬ ಪ್ರಶ್ನೆ ಮತ್ತೆ ಆವರಿಸಿತು. ಯಾಕೆ ಎಂಬುವುದಾಗಿ ಬಂದಾಗಲೆಲ್ಲ ಮನಸ್ಸು ಖಿನ್ನವಾಗುತ್ತದೆ. ಕಣ್ಣುಗಳು ಬೆವರಲು ಪ್ರಾರಂಭವಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ.. ಹಾಗಿದ್ದಾಗ, ನನಗೆ ಅತ್ಯಂತ ಪ್ರಿಯವಾಗಿದ್ದುದ್ದಕ್ಕೆ ಕೊನೆ ಯಾಕಾಯಿತು?! ‘ಪ್ರೀತಿ’ ಇದೊಂದನ್ನೇ ಉಸಿರಾಡಬಲ್ಲೆ ಎಂದುಕೊಂಡು ತಾನೆ ಅಷ್ಟು ಕಾಲದಿಂದ ಜೊತೆಯಿದ್ದದ್ದು? ಅವನ ಅದೊಂದು ಕೂಗು, ಅದೊಂದು ಸಾಂಗತ್ಯ, ಅದೊಂದು ‘ನಾನಿದ್ದೇನೆ’ ಎಂಬ ಧೈರ್ಯ! ನಾನಿರುತ್ತೇನೆ ಎಂಬ ವಚನ.. ಎಂದೂ ಮುಗಿದು ಹೋಗದ ಅದೊಂದಿಷ್ಟು ಒಲವು! ಇಷ್ಟೇ ತಾನೆ ಇದ್ದ ಬೇಡಿಕೆಗಳು! ಮತ್ತೇನಿತ್ತು?! ನಾನೆಷ್ಟೇ ಬಜಾರಿಯಾದರೂ ಆತನ ರಕ್ಷಣೆಯೇ ಹಿತವೆನಿಸುತ್ತಿತ್ತು. ಅದೆಷ್ಟೇ ಸ್ವತಂತ್ರಿಯಾದರೂ ಆತನೇ ಬೇಕಿತ್ತು. ಹು..
ಎಷ್ಟು ಚೆಂದವಿದ್ದವು ಆ ದಿನಗಳು? ನನಗೆ ಬೆಳಗು ಹರಿಯುತ್ತಿದ್ದದ್ದೇ ಆತನ ಪ್ರೀತಿ ಬೆರೆಸಿದ್ದ ಒಂದು ಕಪ್ಪು ಬಿಸಿ ಕಾಫಿಯಿಂದ.. ಹಾಗೇ ಕುಡಿದು ಮುಗಿಸಿ, ನಾನು ತಿಂಡಿ ಮಾಡಿ ಮುಗಿಸುತ್ತಿದ್ದ ಹಾಗೆ, ಆತ ಮನೆಯನ್ನು ಸ್ವಚ್ಛ ಮಾಡಿಡುತ್ತಿದ್ದ. ಸ್ನಾನ ಮುಗಿಸಿ, ತಿಂಡಿ ತಿಂದು ಆಫೀಸಿಗೆ ಉತ್ತರ-ದಕ್ಷಿಣಕ್ಕೆ ಹೊರಡುವ ಮುನ್ನ ಒಂದು ಹೂಮುತ್ತನಿಟ್ಟು ನಮ್ಮ ದಾರಿ ನಾವು ಹಿಡಿಯುತ್ತಿದ್ದೆವು! ಇಡೀ ದಿನ ಕಳೆಯುವುದೇ ‘ಅವನಿರುತ್ತಾನೆ ಮನೆಯಲ್ಲಿ’ ಎಂಬ ಆರ್ದ್ರಭಾವವೊಂದಿಗೆ. ಕೆಲಸ ಮುಗಿಸಿ ಸಂಜೆ ಇಬ್ಬರೂ ಒಂದೇ ಸಮಯಕ್ಕೆ ಇದಿರಾಗಿ.. ಒಟ್ಟಿಗೆ ಆಟವಾಡುತ್ತ ಅಡಿಗೆ ಮಾಡುವ ಆ ಒಲವಿನಲ್ಲಿ ಅದೆಷ್ಟು ಮೋಜು? ಸುಖ? ಮತ್ತದೇ ರಾತ್ರಿಯಲ್ಲಿ ಒಬ್ಬರಿಗೊಬ್ಬರ ತೋಳಿನಲ್ಲಿ ಬಂಧಿಯಾದರೆ, ಬೆಳಗು ಹರಿಯುವುದು ಬೇಕಿರಲಿಲ್ಲ ಅಲ್ಲವೇ? ಆ ಉತ್ಕಟತೆಯಲ್ಲಿದ್ದ ‘ನನ್ನದು’ ಎಂಬ ಭಾವ, ಪ್ರೀತಿ.. ಎಲ್ಲವೂ ಅದೆಷ್ಟು ಸುಖವನ್ನೀಯುತ್ತಿದ್ದವು? ಮಾತು, ಮೋಜು, ನಗು, ಸಾಹಸದಿಂದ ಹಿಡಿದು ತಿಂಗಳ ಮುಟ್ಟಿನ ನೋವು, ದುಃಖ, ಕಣ್ಣೀರು.. ಎಲ್ಲದಕ್ಕೂ ಜೊತೆಯಾಗುತ್ತಿದ್ದನಲ್ಲವಾ? ನಮ್ಮಿಬ್ಬರಿಗೆ ನಾವಷ್ಟೇ ಎಂದು ಬದುಕಿದ ಆ ಕ್ಷಣಗಳು ಮತ್ತೆ ಹಿಂತಿರುಗಲಾರದೇನೋ?
ಅವನೊಬ್ಬನಿದ್ದರೆ ಸಾಕು ಎನ್ನುತ್ತಲೇ ತಾನೆ ನಾನು ಅಷ್ಟೂ ವರ್ಷಗಳು ಉಸಿರಾಡಿದ್ದು? ಆದರೇನು?! ಏನಾಗಿ ಹೋಯಿತು ಕೊನೆಕೊನೆಗೆ? ಎಂದೂ ಸೋಲರಿಯದಿದ್ದ ಒಲವೊಂದು ಅವನಿಗೆ ಉಸಿರು ಕಟ್ಟಿಸಲು ಪ್ರಾರಂಭವಾಗಿಸಿತ್ತೋ ಅಥವಾ ನನ್ನ ಇರುವಿಕೆ ಸಾಕಾಗಿತ್ತೋ?
ಯಾವ ಪ್ರೀತಿಯೂ ಕಲ್ಲಾದ ಮನಸ್ಸಿನ ಮುಂದೆ ಉಳಿಯುವುದಿಲ್ಲ. ಕಲ್ಲು ಮನಸ್ಸನ್ನೂ ಕರಗಿಸುವ ಶಕ್ತಿ ಪ್ರೀತಿಗಿದೆ ಎಂಬುದು ಮಿಥ್ಯೆ. ಬೋರ್ಗಲ್ಲ ಮೇಲೆ ಮಳೆ ಸುರಿದ ಹಾಗೆ ಅಷ್ಟೇ! ಮಳೆ ಸುರಿದೀತು ತುಂತುರಾಗಿ, ಧಾರಾಕಾರಾವಾಗಿ, ಸೋನೆಯಾಗಿ.. ಆದರೆ, ಬೋರ್ಗಲ್ಲು ಅಲುಗುವುದಿಲ್ಲ. ನೆಂದು ತೊಪ್ಪೆಯಾಗಬಹುದೇ ವಿನಃ ಮಳೆಯನ್ನು ಅದು ಪೋಷಿಸುವುದಿಲ್ಲ, ಆಪೋಷನ ತೆಗೆದುಕೊಳ್ಳುವುದೂ ಇಲ್ಲ. ಮಳೆ ನಿಂತ ಮೇಲೆ ಆವಿಯಾಗುತ್ತದೆಯೇ ವಿನಃ ಮತ್ತೇನಾದೀತು? ತಥ್! ಈ ಸುಡುಗಾಡು ತತ್ವಗಳು ಬದುಕಿಗೆ ಯಾವ ಸಂತಸವನ್ನೀಯುತ್ತದೆ? ಮನಸ್ಸನ್ನು ತಹಬಂದಿಗೆ ತರುತ್ತಿದ್ದಾದರೆ ಅವನ ಮುಂದ್ಯಾಕೆ ಮಕಾಡೆ ಮಲಗಿದವು ಈ ತತ್ವಗಳೆಲ್ಲ? ಅವನಿದ್ದಾಗ ಬೇರಾವುದೂ ಬೇಕಿರಲಿಲ್ಲ. ಬೇಕಿದ್ದರೂ ಅವು ಅವನಿಗಿಂತ ಪ್ರಮುಖವೆನಿಸುತ್ತಿರಲಿಲ್ಲ. ಅಷ್ಟಾಗಿಯೂ ಎಲ್ಲೋ ಏನೋ ಕಳೆದು ಹೋಯಿತು. ನನ್ನದೊಂದೊಂದು ಮಾತಿಗೂ ಸಿಡಿಮಿಡಿ ಪ್ರಾರಂಭವಾಗಿ, ದೂರವಿದ್ದಷ್ಟೂ ಹತ್ತಿರ ಎಂಬ ಬೋಧನೆಗೆ ಅಡ್ಡಬಿದ್ದು, ಅಷ್ಟಾದರೂ ಉಹೂಂ.. ಯಾವ ಬದಲಾವಣೆಯೂ ಕಾಣಲಿಲ್ಲ. ದಿನಗಳು ಕಳೆದಂತೆ ನನ್ನ ಇರುವಿಕೆಯೇ ನನಗೆ ಅಸಹ್ಯವಾಗಿ, ಇನ್ನೊಂದಿಷ್ಟು ಮನಃಸ್ತಾಪಗಳು ಅದಕ್ಕೆ ಇಂಬು ನೀಡಿ.. ಸಾಕು! ಇನ್ನು ಸಾಕು! ಇದಷ್ಟೇ ಅನ್ನಿಸಿದ್ದಲ್ಲವೇ? ನನ್ನ ಇರುವಿಕೆಯೇ ಹಿಂಸೆಯೇ? ನನ್ನೊಬ್ಬಳಿಂದಲೇ ಎಲ್ಲ ತಪ್ಪುಗಳೂ ನಡೆಯುತ್ತಿದೆಯೇ? ಬೇಡ.. ಇನ್ಯಾವ ತಪ್ಪುಗಳು, ಹಿಂಸೆಗಳು ನನ್ನಿಂದ ಬೇಡ. ಮನಸ್ಸು ಒಮ್ಮೆ ಗುಟುರು ಹಾಕಿತು!
‘ಅವನ ಬದುಕು ಚೆನ್ನಾಗಿರಲಿ’ ಎಂದು ಪ್ರಾರ್ಥಿಸಿ ದೇವರ ಮುಂದೊಂದು ತುಪ್ಪದ ದೀಪ ಹಚ್ಚಿ ಹೊರ ಬಂದವಳಿಗೆ ‘ಹೋಗಬೇಡ’ ಎಂಬ ಯಾವ ಆರ್ತನಾದವೂ ಇರದೇ ಹೋಗಿದ್ದದು ದುರಂತವೋ ಅಥವಾ ಸ್ವಾತಂತ್ರ್ಯವೋ? ಮತ್ತೆ ಬದುಕು ಯಾರ ಸಾಂಗತ್ಯವನ್ನೂ ಬಯಸಲಿಲ್ಲ. ಬಹುದಿನಗಳಿಂದ ಬೀಳುತ್ತಿದ್ದ ಕನಸಿನಂತೆ, ಒಬ್ಬಳೇ ಈ ದರಿದ್ರವಾದ ದಟ್ಟ ಗಿರಿ-ಶಿಖರದೊಳ ಬಂದು ಒಂದು ಗೂಡು ಮಾಡಿಕೊಂಡು, ಪ್ರಕೃತಿ ನೀಡಿದ್ದನ್ನಷ್ಟೇ ತಿಂದು, ಕಾಳರಾತ್ರಿಗೆ ಭಯಗೊಂಡರೂ ಕಣ್ಣೀರು ಮಾತ್ರ ಬಿಟ್ಟೂಬಿಡದೇ ಸಾಥಿಯಾಗಿ.. ವರ್ಷಗಳೇ ಕಳೆದಿದೆ. ಒಮ್ಮೊಮ್ಮೆ ಸಿಕ್ಕಿದರೆ ಆಹಾರ.. ಇಲ್ಲವೆಂದರೆ..
ಆಹಾರ ಸಿಕ್ಕಿ ಎಷ್ಟು ಕಾಲವಾಯಿತು? ಚುರುಗುಟ್ಟುತ್ತಿದ್ದ ಹೊಟ್ಟೆಗೆ ತಲೆ ಸುತ್ತು! ಬೇಗನೇ ಗೂಡು ಸೇರಬೇಕು.. ಸೂರ್ಯ ಮುಳುಗುತ್ತಿದ್ದಾನೆಯೋ.. ಕತ್ತಲಾದರೆ ದಾರಿ ಕಾಣೋಲ್ಲ ಎನ್ನುತ್ತಲೇ ನನ್ನ ಗೂಡಿಗೆ ಸಾಗಿದರೆ ಏನಾಗಿದೆ?! ಮನೆಯೊಳಗೆಲ್ಲ ಧೂಳು.. ಛೆ.. ಈ ಹಾಳು ಮಳೆ ಗಾಳಿ.. ಎಲ್ಲ ಧೂಳೆಬ್ಬಿಸುತ್ತವೆ.. ಸ್ವಲ್ಪ ಆರಾಮು ತೆಗದುಕೊಳ್ಳೋಣವೆಂದರೆ ಇಕೋ! ಆರಾಮು ಕುರ್ಚಿಯಲ್ಲಿದ್ದ ಅಸ್ಥಿಪಂಜರ ನೋಡಿ ಕಿಟಾರನೆ ಕಿರುಚಿದೆ! ಅರೇ.. ನನ್ನ ದೇಹ? ನನಗೆ ದೇಹವೆಲ್ಲಿದೆ? ನಾನಾಗಲೇ ಸತ್ತು ಹೋಗಿದ್ದೇನೆ! ಹಾಗಾದರೆ.. ನಾನು? ಇಷ್ಟು ವರ್ಷವೂ… ?
‘ಫ್ರೋಜನ್ ಮೊಮೆಂಟ್ಸ್’!
ಸುತ್ತಲೂ ನೋಡಿದೆ, ನಿಂತ ನೆಲ ಕುಸಿಯಿತು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್