- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ಬೆಳ್ಳಂಬೆಳಗು ಕಣ್ಣು ತೆರೆದಾಗ ಇಲ್ಲಿ
ಎಲ್ಲವೂ ಅದಲು ಬದಲು
ಇದ್ದಕ್ಕಿದ್ದಂತೆಯೇ ಎಲ್ಲವೂ ತಟಸ್ಥ
ಬೀಸಿದ ಹೊಸ ಗಾಳಿಗೆ ಕಾಲನೇ ಸ್ತಬ್ಧ
ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ
ಈಗಷ್ಟೇ ನಡೆಯಲು ಶುರು ಮಾಡಿದ್ದ
ಪಾರ್ಕಿನ ಉಯ್ಯಾಲೆಯಲ್ಲಿ
ನಗುನಗುತ್ತಾ ಆಡುತ್ತಿದ್ದ
ಎಳೆಯ ಕಂದಮ್ಮಗಳು
ಇದೀಗ ಉಸಿರೂ ಹೊರಹೋಗದ
ಗೂಡುಗಳೊಳಗೆ ಬಂಧಿ
ನಿನ್ನೆ ಮೊನ್ನೆಯವರೆಗೆ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ
ಹಾರಾಡುತ್ತಿದ್ದ ಹಕ್ಕಿ ಮರಿಗಳು
ಅಪ್ಪಂದಿರ ಲ್ಯಾಪುಟಾಪಿನೊಳಗೋ
ಅಮ್ಮಂದಿರ ಮೊಬೈಲುಗಳಲ್ಲೋ
ಕಣ್ಣು ಕೀಲಿಸದೆ ಕೂರುವ ಅನಿವಾರ್ಯತೆ
ಇದುವರೆಗೂ ಕಾಣದ
ನಾಳೆಗಳ ಬಗ್ಗೆ
ರಂಗುರಂಗಿನ ಕನಸು
ಕಾಣುತ್ತಿದ್ದ ಹುಡುಗಿಗೆ
ಅದು ಬರೆಯ ಕನಸಾಗಿಯೇ
ಉಳಿವ ಭೀತಿ
ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ
ಅರೆ ಕ್ಷಣ ಕಣ್ಣು ಮುಚ್ಚಿದ್ದರೂ
ಬರುತ್ತಿದ್ದ ತನ್ನವಳ ಚಿತ್ರ ಮಸುಕಾಗಿ
ಅರೆ ನಿದ್ರೆಯಲ್ಲೂ
ನಾಳೆಯೋ ನಾಳಿದ್ದೋ ಬರಬಹುದಾದ
ಪಿಂಕು ಸ್ಲಿಪ್ಪಿನದ್ದೇ ಕನವರಿಕೆ
ನಿದ್ದೆಗೆಟ್ಟು ದುಡಿದು
ಇಷ್ಟಿಷ್ಟೇ ಕಳೆದು ಕೂಡಿ
ಅದರ ಹತ್ತರಷ್ಟು ಸಾಲ ಮಾಡಿ
ಮನೆ, ಕಾರು ಕೊಂಡು
ಇನ್ನೇನು ಬದುಕು ಹಸನಾಯಿತೆಂದು
ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ
ಜೋಡಿ ಹಕ್ಕಿಗಳು ಅತಂತ್ರ
ಇದುವರೆಗೂ ಬೇಗ ಕರೆಸಿಕೊಳ್ಳೋ
ಭಗವಂತನೇ ಎಂದು ಇನ್ನಿಲ್ಲದಂತೆ
ಬೇಡುತ್ತಿದ್ದ ವೃದ್ಧ ಜೀವಗಳದು
ಯಮನಲ್ಲಿ ಒಂದೇ ಕೋರಿಕೆ
ಬರುವುದಿದ್ದರೆ ಈ ಕೊರೊನವೆಂಬ ಭಾನಗಡಿ
ಮುಗಿದ ಮೇಲೆ ಬಾ
ಎಲ್ಲರೂ ಕಾಯುತ್ತಿದ್ದಾರೆ
ಆ ಒಂದು ಗಳಿಗೆಗೆ
ಬದುಕು ಮತ್ತೆಂದು
ಬರುವುದೋ ಹಳಿಗೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ