ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕುಟುಂಬ ವಾತ್ಸಲ್ಯ

ಸುರೇಖಾ ಹರಿಪ್ರಸಾದ್ ಶೆಟ್ಟಿ
ಇತ್ತೀಚಿನ ಬರಹಗಳು: ಸುರೇಖಾ ಹರಿಪ್ರಸಾದ್ ಶೆಟ್ಟಿ (ಎಲ್ಲವನ್ನು ಓದಿ)

ನಾನೇ ನೆಟ್ಟು ಬೆಳೆಸಿದ ಕೈತೋಟದಲ್ಲಿ ಕಳೆಕೀಳುವ ಕೆಲಸ ನಡೆಸುತ್ತಿದ್ದರೂ… ಮನದಲ್ಲಿ ದೊಡ್ಡ ಮಗ ವೀವೇಕ್ ಹೇಳಿದ ಮಾತೇ…

” ಅಮ್ಮಾ ನಮಗಿರುವುದು ಒಂದು ವಾರದ ರಜೆ. ಮದುವೆ ತಯಾರಿಯನ್ನೆಲ್ಲಾ ನೀನೇ ಮುಗಿಸಿಬಿಡು. ಮದುವೆಯ ಮುನ್ನಾ ದಿನವಷ್ಟೇ ನಾವು ಬರುವುದು. ಅಪ್ಪ ಹೇಗಿದ್ದಾರೆ…. ಕಾರ್ತಿಕ್ ಹೇಗಿದ್ದಾನೆ…. ಓ. ಕೆ. Bye.. ಅಮ್ಮಾ ಎನ್ನುತ್ತಾ ನನಗೆ ಮಾತನಾಡಲೂ ಅವಕಾಶಕೊಡದೆ ಫೋನ್ ಇಟ್ಟು ಬಿಟ್ಟಿದ್ದ. ಎಷ್ಟು ಅವಸರ ಅವನಿಗೆ..,.. ಚಿಕ್ಕಂದಿನಿಂದಲೂ ಹಾಗೆ. ಎಲ್ಲಾ ಕೆಲಸಗಳನ್ನೂ ಅವಸರವಸರವಾಗಿ ಮಾಡಿಮುಗಿಸುವನು.

ಅಂಗಳದ ಮೂಲೆಯಲ್ಲಿ ಪುಷ್ಟವಾಗಿ ಬೆಳೆದ ಕೆಂಪು ದಾಸವಾಳದ ಗಿಡವನ್ನು ನೋಡುವಾಗ ಅವನದೇ ನೆನಪು… ಹತ್ತು ವರ್ಷಗಳ ಹಿಂದೆ ಹಟ ಮಾಡಿ ಮಣ್ಣು ಅಗೆದು ಅವನೇ ಊರಿ ಬಿಟ್ಟಿದ್ದ ಗಿಡ ಅದು. ಅವನು ಬಿ. ಇ ಮುಗಿಸಿ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ಹಾರಲು ಹೊರಟು ನಿಂತಾಗ, ಉಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ, ನಾನು ಅತ್ತುಕೊಂಡು, ಸೀಟಿಗೊರಗಿ ನಿಂತಾಗ,

” ಅಮ್ಮಾ ರಿಲ್ಯಾಕ್ಸ್.. ನಾನೇನು ಪರ್ಮನೆಂಟಾಗಿ ಅಲ್ಲಿರಲು ಹೋಗ್ತಿದೀನಾ..? ಕೆಲವು ತಿಂಗಳುಗಳ ಪ್ರೊಜೆಕ್ಟ್ ಅಷ್ಟೇ.. ಹೀಗ್ ಹೋಗಿ ಹಾಗ್ ಬಂದುಬಿಡ್ತೀನಿ. ನನ್ನ ನೆನಪಾದಾಗಲೆಲ್ಲಾ ಆ ದಾಸವಾಳದ ಮರದ ಬಳಿಗೆ ಹೋಗಿ ನಿಂತಿರು. ನನ್ನ ಹಾರ್ಟಿಗೆ ಗೊತ್ತಾಗಿ ಬಿಡುತ್ತೆ, ಅಂದಿದ್ದ. ಹಾಗೆ ಹೋದವನು ಅಲ್ಲೇ ಸೆಟ್ಟಲ್ ಆಗುವ ಇಂಗಿತ ವ್ಯಕ್ತ ಪಡಿಸಿದಾಗ ನಾನು ಹರಿಸಿದ ಕಣ್ಣೀರಿಗೆ ಲೆಕ್ಕವುಂಟೇ?

ಆವಾಗೆಲ್ಲಾ ಇವರು ” ನಾವು ಅವನ ಇಷ್ಟ, ಅವನ ಕೆರಿಯರ್ಗೆ ಅಡ್ಡಿ ಮಾಡುವುದು ಎಷ್ಟು ಸರಿ ಹೇಳು.? ಅವನ ಬೆಳವಣಿಗೆಯ ಹಾದಿಯಲ್ಲಿ ನಮ್ಮ ಅತಿ ಪ್ರೀತಿ, ಕಾಳಜಿ, ಅಡ್ಡಗೋಡೆಯಾಗಬಾ ರದಲ್ಲವೇ..? ಅವನು ಅಲ್ಲಿ ಸೆಟ್ಟಲ್ ಆದರೂ ಕಾರ್ತಿಕ್ ನಮ್ಮ ಬಳಿಯೇ ಇದ್ದಾನಲ್ಲ, ಅವನು ಕೂಡಾ ‘ ನಾನು ನಿಮ್ಮಿ
ಬ್ಬರನ್ನು ಬಿಟ್ಟು ಎಲ್ಲೂ ಹೋಗಲ್ಲ ‘ ಅಂತ ಪದೇಪದೇ ಹೇಳ್ತಾನೆ ಇರುತ್ತಾನಲ್ಲ. ” ಅಂತ ನಕ್ಕು ಹೇಳಿದಾಗ ನಾನು ಸುಮ್ಮನಾಗಿದ್ದೆ.

ದಿನಗಳು ಎಷ್ಟು ಬೇಗ ಉರುಳಿ ಹೋಗಿದ್ದವು. ಹಿರಿಮಗ ವಿವೇಕನ ಮದುವೆ ಮುಗಿಸಿದ್ದೂ ಆಯಿತು. ಮದುವೆಯಾಗಿ ತಿಂಗಳೊಳಗೆ ಪತಿ-ಪತ್ನಿ ಇಬ್ಬರೂ ಮರಳಿ ಅಮೆರಿಕಕ್ಕೆ ಹೊರಟು ನಿಂತಾಗ, ನನ್ನೆಲ್ಲ ಭಾವನೆಗಳನ್ನು ಬದಿಗೊತ್ತಿ ಅವನ ಆಸೆಗೆ ಸ್ಪಂದಿಸಿದ್ದೂ ಆಯಿತು. ದುಃಖದ ಕಟ್ಟೆಯೊಡೆದರೂ ಅದಕ್ಕೆ ಭಾವನೆಗಳ ಅಣೆಕಟ್ಟು ಬಿಗಿದು, ಹೃದಯವನ್ನು ಗಟ್ಟಿ ಮಾಡಿದ್ದೆ.

ಆಗೆಲ್ಲಾ ಇವರು ” ನಂಗೊತ್ತು. ನೀನು ಈ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು, ಸಂಸಾರದ ಜವಾಬ್ದಾರಿ ನಿಭಾಯಿಸಲು ಎಷ್ಟು ಕಷ್ಟ ಪಟ್ಟಿದ್ದಿ ಅಂತ. ಈಗ ಅವರು ನಿನ್ನ ಜೊತೆಗಿರಬೇಕೆಂದು ಹಂಬಲಿಸುವುದು ಸಹಜವೇ. ರೆಕ್ಕೆಪುಕ್ಕ ಬಲಿತ ಹಕ್ಕಿಗಳನ್ನು ಬಂಧಿಸಿಡಲು ಸಾಧ್ಯವೇ? ಹಾರಲಿ ಬಿಡು……. ಅವರವರ ಪಾಡಿಗೆ… ” ಅನ್ನುತ್ತಿದ್ದರು.

ಈಗ ಕಾರ್ತಿಕನ ಮದುವೆ ನಿಶ್ಚಿತಾರ್ಥವಾಗಿದೆ. ಮದುವೆಗಿನ್ನೇನು ಎರಡೇ ತಿಂಗಳು ಬಾಕಿ ಇದೆ. ಹುಡುಗಿಯೂ ಕೆಲಸದಲ್ಲಿದ್ದಾಳೆ. ಹೆತ್ತವರಿಗೆ ಒಬ್ಬಳೇ ಮಗಳು. ಮಗ-ಸೊಸೆ ಬೆಂಗಳೂರಿನಲ್ಲಿಯೇ ಉದ್ಯೋಗದಲ್ಲಿ ಇದ್ದುದರಿಂದ ನಮ್ಮ ಜೊತೆಗೆಯೇ ಇರುತ್ತಾರೆ ಅನ್ನೋ ಖುಷಿಯೇ ನನ್ನನ್ನು ಮತ್ತಷ್ಟು ಲವಲವಿಕೆಯಿಂದ ಇರುವಂತೆ ಮಾಡಿತ್ತು. ಗೇಟಿನ ಸದ್ದು ಕೇಳಿ ನನ್ನ ಮನಸ್ಸು ಹಳೆಯ ನೆನಪಿನ ಲಹರಿಯಿಂದ ಹೊರಬಂತು. ಗೇಟಿನಾಚೆ ಇವರು ನಿಂತಿದ್ದರು.ಬದುಕಿನ ಯೋಚನೆಯ ಬದಲಾವಣೆಗೆ ನನಗಿಂತ ಇವರು ಹೆಚ್ಚು ಹೊಂದಿಕೊಂಡು ಹೋದರೂ, ಬದುಕುವ ರೀತಿಯ ಬದಲಾವಣೆ ಅವರಲ್ಲಿ ಹೆಚ್ಚೇನೂ ಆಗಿರಲಿಲ್ಲ. ವಿವೇಕ್ ಎಷ್ಟು ಸಲ ಹೇಳುವುದಿಲ್ಲ, ” ಅಪ್ಪ ನಿಮಗೋಸ್ಕರ ಅಂತ ಕಾರು ಕೊಂಡುಕೊಂಡಿದ್ದೇನೆ. ಹೊರಗಿನ ಏನೇ ಕೆಲಸ ಇದ್ದರೂ ಕಾರಲ್ಲೇ ಹೋಗಿ ಬನ್ನಿ. ” ಅಂತ. ಇವರು ಅದಕ್ಕೆ ಒಪ್ಪುತ್ತಿರಲಿಲ್ಲ. ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ರೋಡಲ್ಲಿ ನಡೆದು ಹೋದರೆ, ಅದೆಷ್ಟು ಜನ ಪರಿಚಯಸ್ತರು ಸಿಗುತ್ತಾರೆ. ಅವರ ಜೊತೆ ನಾಲ್ಕು ಮಾತಾಡಿ ಮುಂದುವರಿದರೆ, ಮನಸ್ಸು ಹಗುರಾಗುತ್ತೆ. ಬಿಡುವಿಲ್ಲದ ಓಡಾಟ ಗಳಂತೆ ಬಿಡಲಾರದ ಒಡನಾಟವೂ ದಿನಗಳನ್ನು ಜೀವನ್ಮುಖಿಯಾಗಿ ಹಿಡಿದಿಡುವುದಿಲ್ಲವೇ..?.. ಅಂತ ನಗುತ್ತಿದ್ದರು.

ಅದೂ ನಿಜ,ಪರಸ್ಪರ ಅವಲಂಬನೆ ಅನ್ನುವುದೊಂದು ಅನಿಸಿಕೆ ಆಗಬೇಕೇ ಹೊರತು ಅವಶ್ಯಕತೆಯಾಗಬಾರದು. ನಾನು ಕೈಕಾಲು ತೊಳೆದು ಇವರಿಗೆ ಬಿಸಿಯಾಗಿ ಕಾಫಿ ಮಾಡಿಕೊಟ್ಟೆ. ಮದುವೆಯ ಆಮಂತ್ರಣ ಪತ್ರಿಕೆಯ ಲಿಸ್ಟ್ ಅದಾಗಲೇ ರೆಡಿಯಾಗಿತ್ತು.

ನೋಡನೋಡುತ್ತಿದ್ದಂತೆಯೇ ಮದುವೆಯ ದಿನವೂ ಬಂತು. ನೆಂಟರಿಷ್ಟರು ಬಂಧು, ಬಳಗ, ಗೌಜಿಗದ್ದಲಗಳ ನಡುವೆ ಮದುವೆಯೂ ಸಾಂಗವಾಗಿ ನೆರವೇರಿತ್ತು. ಮುದ್ದಿನ ಸೊಸೆ ವರ್ಷಗಳನ್ನು ಹರ್ಷದಿಂದ ಮನೆ ತುಂಬಿಸಿಕೊಂಡಿದ್ದೂ ಆಯಿತು. ವಾರದಲ್ಲೇ ಹನಿಮೂನ್ ಮುಗಿಸಿಬಂದ ಅವರಿಬ್ಬರೂ, ಮತ್ತೆರಡು ವಾರ ಕಳೆಯುತ್ತಲೇ ಕೆಲಸಕ್ಕೆ ಹಾಜರಾದರು. ಅವರಿಬ್ಬರೂ ಬೆಳಿಗ್ಗೆ ಎಂಟಕ್ಕೆ ಮನೆ ಬಿಟ್ಟರೆಂದರೆ, ಮತ್ತೆ ಹಿಂತಿರುಗುವುದು ರಾತ್ರಿ ಎಂಟರ ನಂತರವೇ. ಟ್ರಾಫಿಕ್ಕು ಓವರ್ ಟೈಂ, ಅಂತೆಲ್ಲಾ ಎಕ್ಸ್ಟ್ರಾ, ಮೂರು ಗಂಟೆಗಳು ಅವರು ಮನೆಗೆ ಬರುವ ಸಮಯವನ್ನು ತಿಂದು ಬಿಡುತ್ತಿದ್ದವು. ಮನೆಗೆ ಬರುತ್ತಲೇ ಇಬ್ಬರೂ ದಣಿದು ಹೋಗುತ್ತಿದ್ದರು. ಬಂದವರು ಫ್ರೆಶ್ ಆಗಿ ಊಟ ಮಾಡುವಾಗ ಗಂಟೆ ರಾತ್ರಿಯ ಹತ್ತು ಕಳೆದುಹೋಗುತ್ತಿತ್ತು. ಹೀಗೆಯೇ ಏಳೆಂಟು ತಿಂಗಳು ಕಳೆದುಹೋದವು.

ಮದುವೆಯಾದಾಗಿನಿಂದ ಒಂದೇ ಸಮಯಕ್ಕೆ ಮನೆಯಿಂದ ಹೊರಡುತ್ತಿದ್ದ ಅವರಿಬ್ಬರೂ ಬರಬರುತ್ತ ಬೇರೆ ಬೇರೆ ಸಮಯಕ್ಕೆ ಮನೆಯಿಂದ ಹೊರಡತೊಡಗಿದ್ದರು . ನನ್ನ ಮನಸ್ಸಿನಲ್ಲೇಕೋ ಕಸಿವಿಸಿ. ಮನೆಗೆ ಬಂದ ಮೇಲೂ, ಇಬ್ಬರ ನಡುವೆ ಹೆಚ್ಚಿನ ಮಾತುಕತೆಯೂ ಇರುತ್ತಿರಲಿಲ್ಲ. ಈ ಬಗ್ಗೆ ಮಗನಲ್ಲಿ ಕೇಳೋಣವೆಂದರೆ ಏನೋ ಹಿಂಜರಿಕೆ.

ಅದೊಂದು ದಿನ ಬೆಳಿಗ್ಗೆ ವರ್ಷ ಎಂಟು ಗಂಟೆಗೆಯೇ ಆಫೀಸಿಗೆ ಹೊರಟು ಹೋಗಿದ್ದಳು. 8:30 ವರೆಗೂ ಮಲಗಿದ್ದ ಕಾರ್ತಿಕ್, ಎದ್ದುಬಂದು ಕಾಫಿ ಕುಡಿಯುತ್ತಲೇ ಮಾತಿನ ಬಾಂಬ್ ಸಿಡಿಸಿ ಬಿಟ್ಟ. ” ಅಮ್ಮ ವರ್ಷ ಇನ್ಮೇಲೆ ಅವಳಮ್ಮನ ಮನೆಯಿಂದಲೇ ಆಫೀಸಿಗೆ ಬರ್ತಾಳಂತೆ. ಸಂಡೆ ಮಾತ್ರ ಇಲ್ಲಿ ಇರುತ್ತಾಳಂತೆ. ಇಲ್ಲಿಂದ ಅವಳ ಆಫೀಸಿಗೆ ಲಾಂಗ್ ರೂಟ್ ಅಲ್ವಾ ಅಮ್ಮಾ, ಟ್ರಾಫಿಕ್’ನಲ್ಲಿ ಸುಸ್ತಾಗಿ ಬಿಡುತ್ತಾಳೆ. ಅವಳಮ್ಮನ ಮನೆಯಿಂದ ಆದ್ರೆ ಬರೀ ಹತ್ತು ನಿಮಿಷ ಅಷ್ಟೇ… ಹೋಗ್ಲಿ ಬಿಡು. “

ಕುಡಿಯುತ್ತಿದ್ದ ಕಾಫಿ ಗಂಟಲಲ್ಲಿ ಇಳಿಯದಾಯಿತು ನನಗೆ. ನನ್ನ ಮುಖದಲ್ಲಿನ ಆತಂಕವನ್ನು ಗಮನಿಸಿದ ಕಾರ್ತಿಕ್ ಹೆಚ್ಚು ಹೊತ್ತು ಅಲ್ಲಿರಲಾರದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ.

ಮದುವೆಯಾಗಿ ಎಂಟು ತಿಂಗಳಾದರೂ, ಸೊಸೆ ಕೈಯಿಂದ ಒಂದು ಸ್ಪೂನ್ ಎತ್ತಿಡುವ ಕೆಲಸವನ್ನೂ ನಾನು ಹೇಳಿರಲಿಲ್ಲ. ಅವಳೇ ನನ್ನಲ್ಲಿ ” ನಾನೇನು ಮಾಡ್ಲಿ ಅಮ್ಮಾ, ತರಕಾರಿ ಹೆಚ್ಚಲಾ,…. ಪಾತ್ರೆ ತೊಳೀಲಾ… ಟೀ ಮಾಡ್ಲಾ…. ಅಂತ ನಾನಿಷ್ಟು ಬೇಡವೆಂದರೂ ಕೇಳಿ ಕೇಳಿ ಕೆಲಸ ಮಾಡುತ್ತಿದ್ದಳು. ದಿನಬೆಳಗಾದರೆ ಅಡುಗೆಮನೆಗೆ ಎಂಟ್ರಿ ಕೊಡುತ್ತಲೇ..’ ಗುಡ್ ಮಾರ್ನಿಂಗ್ ಅಮ್ಮಾ… ಆಫೀಸಿಗೆ ಹೊರಡುವಾಗ ಬಾಯ್ ಅಮ್ಮಾ… ರಾತ್ರಿ ಮಲಗುವಾಗ ಗುಡ್ ನೈಟ್ ಅಮ್ಮಾ…. ಹೀಗೆ ದಿನಕ್ಕೊಂದು ಹತ್ತಾರುಬಾರಿ ಅಮ್ಮಾ ಅಮ್ಮಾ ಅನ್ನುತ್ತಲೇ ಸ್ವತ: ಮಗಳಂತೆ ವರ್ತಿಸಿ, ಇಷ್ಟು ವರ್ಷಗಳವರೆಗೆ ತಾನು ಹಂಬಲಿಸುತ್ತಿದ್ದ ಹೆಣ್ಣುಮಗಳ ಕೊರತೆಯನ್ನು ನೀಗಿಸಿ ಬಿಟ್ಟಿದ್ದಳು.

ಅಂಥದ್ದರಲ್ಲಿ ವರ್ಷ ಈ ಮನೆಯಿಂದ ದೂರವಿರಲು ನಿರ್ಧಾರ ತೆಗೆದುಕೊಂಡಿದ್ದಾಳೆಂದರೆ ….. ನನ್ನ ಮನಸ್ಸು ಗೊಂದಲದ ಗೂಡಾಗಿತ್ತು.
ನನ್ನ ಅನುಭವದ ಹಣತೆಯಲ್ಲಿ ಮಗನ ಬದುಕಿನ ದಾರಿಯಲ್ಲಿನ ಹೊಂಡವನ್ನು ಗುರುತಿಸದಿದ್ದರೆ ಅಪಾಯವಿದೆ ಅಂತ ಒಳಮನಸ್ಸು ಚೀರಿತು. ಅಷ್ಟರಲ್ಲಿ ನನ್ನ ಮೊಬೈಲ್ ಮೊಳಗಿತು.
” ಅಮ್ಮ ನಾನು ಇವತ್ತು ರಾತ್ರಿ ಮನೆಗೆ ಬರುವುದಿಲ್ಲ. ಅಮ್ಮನ ಮನೆಗೆ ಹೋಗುತ್ತಿದ್ದೇನೆ. ಆದಿತ್ಯವಾರ ಬರುತ್ತೇನೆ.” ಎಂದಷ್ಟೇ ಹೇಳಿ ಫೋನ್ ಇಟ್ಟು ಬಿಟ್ಟಳು.

ಆವತ್ತು ಭಾನುವಾರ. ಸಂಕಷ್ಟಹರ ಚತುರ್ಥಿ. ನಾನು ಮತ್ತು ಇವರು ಬೆಳಿಗ್ಗೆ ಬೇಗನೆ ಎದ್ದು ದೇವಸ್ಥಾನಕ್ಕೆ ಹೊರಟುನಿಂತೆವು. ದೇವಸ್ಥಾನದಲ್ಲಿ ಪೂಜೆ, ಅರ್ಚನೆ, ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಇವರ ಗೆಳೆಯ ಶ್ರೀಪತಿರಾಯರು ಸಿಕ್ಕಿ ಅದೂ ಇದೂ ಮಾತಾಡಿ ಮುಂದುವರೆದು ಮನೆಗೆ ಬರುವಾಗ ಗಂಟೆ ಹತ್ತು ಕಳೆದಿತ್ತು.

ಮನೆಯ ಒಳಗೆ ಕಾಲಿಡುತ್ತಲೇ ರೂಮಿನೊಳಗಿಂದ ವರ್ಷಳ ಧ್ವನಿ ತುಸು ಜೋರಾಗಿಯೇ ಕೇಳಿಸುತ್ತಿತ್ತು. ” ನನ್ನ ಹೆತ್ತವರಿಗೆ ನಾನೊಬ್ಬಳೇ ಮಗಳು. ಹಿಂದೆ ಮುಂದೆ ನಾನು ಅನ್ನೋರು ಯಾರೂ ಇಲ್ಲ. ನನ್ನನ್ನು ಅವರು ಕಷ್ಟಪಟ್ಟು ಸಾಕಿ ಸಲಹಿ ವಿದ್ಯೆ-ಬುದ್ಧಿ ಕೊಟ್ಟಿದ್ದಾರೆ. ಈಗ ನಾನವರ ಕಷ್ಟ-ಸುಖಕ್ಕೆ ಸ್ಪಂದಿಸದಿದ್ದರೆ ಮತ್ಯಾರಿದ್ದಾರೆ ಅವರಿಗೆ. ನನ್ನ ತಂದೆ ಹಾರ್ಟ್ ಪೇಷಂಟ್ ಬೇರೆ. ಅವರ ಆರೋಗ್ಯ ಸ್ವಲ್ಪ ಸರಿ ಹೋಗುವವರೆಗೂ ನಾನು ಅಲ್ಲಿರುವುದು ಅನಿವಾರ್ಯ. ನಾನಲ್ಲಿದ್ದರೆ ಅಮ್ಮನಿಗೂ ಸ್ವಲ್ಪ ಧೈರ್ಯ ವಾಗುತ್ತದೆ. ನೀವ್ಯಾಕೆ ಅದನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
ನನ್ನ ಮದುವೆಯಾಗಿ ಇಷ್ಟು ಸಮಯವಾದರೂ ಅಮ್ಮ ನನ್ನ ಬಗ್ಗೆ ಒಂದೇ ಒಂದು ಅಪಸ್ವರ ಎತ್ತಿಲ್ಲ. ನನಗೆ ಗೊತ್ತು, ಅದು ಅವರ ಪ್ರೀತಿ, ಸಹನೆ, ಒಳ್ಳೆತನ, ಅಂತ. ಆದರೆ ನೀವು ಹೀಗೆ ನನ್ನ ಮೇಲೆ ರೇಗಾಡಿದರೆ ಏನರ್ಥ ಹೇಳಿ..? “

” ಅಮ್ಮ, ಮಕ್ಕಳು ಸೊಸೆಯಂದಿರು ತನ್ನ ಜೊತೆಗೆ ಕೂಡುಕುಟುಂಬ ದಂತೆ ಇರಬೇಕೆಂದು ಹಂಬಲಿಸಿದವರು. ಅಣ್ಣ-ಅತ್ತಿಗೆಯೂ ಅವರ ಜೊತೆಯಲ್ಲಿಲ್ಲ. ಅಂತಾದ್ದರಲ್ಲಿ ನೀನೂ ಹೀಗೆ ತವರಲ್ಲಿ ಇರ ಬಯಸಿದರೆ ಅಮ್ಮನ ಮನಸ್ಸಿಗೆ ಎಷ್ಟು ನೋವಾಗುವುದಿಲ್ಲ. ಅದಕ್ಕೆ ನಾನು…… ಕಾರ್ತಿಕ ತೊದಲಿದ.

” ನೀವು ಹೇಳುತ್ತಿರುವುದು ಸರಿ. ಅಮ್ಮನ ಕುಟುಂಬ ವಾತ್ಸಲ್ಯ ಎಂತಹುದೆಂದು ನನಗೆ ಗೊತ್ತು.ಆದ್ದರಿಂದಲೇ ನನಗೆ ಈ ಬಗ್ಗೆ ಅಮ್ಮನಲ್ಲಿ ಕೇಳಲು ಸಂಕೋಚ. ಅವರ ಮಮತೆಯ ಮಡಿಲಿನಿಂದ ನಾನು ಯಾವತ್ತೂ ದೂರವಿರಲು ಬಯಸುವುದಿಲ್ಲ. ಆದರೆ ಈಗ ಅನಿವಾರ್ಯ ಕಾರಣದಿಂದ ನನಗೆ ಹೆತ್ತವರ ಜೊತೆ ಇರಬೇಕಾಗಿ ಬಂದಿದೆ. ಪ್ಲೀಸ್ ಅರ್ಥಮಾಡಿಕೊಳ್ಳಿ.” ವರ್ಷ ಹೆಚ್ಚುಕಡಿಮೆ ಅಳುತ್ತಲೇ ಹೇಳುತ್ತಿದ್ದಳು.

ನನ್ನ ಮನಸ್ಸಿನ ಗೊಂದಲಕ್ಕೆ ಉತ್ತರ ಸಿಕ್ಕಿತ್ತು. ನನ್ನ ಕಣ್ಣಿನಲ್ಲಿ ತುಂಬಿಕೊಂಡಿದ್ದ ಆನಂದಬಾಷ್ಪಗಳೆರಡು ಕೆನ್ನೆ ದಾಟಿ, ನೆಲ ಸೇರುವ ಮೊದಲು ಇವರು ನನ್ನ ಬೆನ್ನು ಸವರಿ ಎದೆಗೊತ್ತಿಕೊಂಡರು.