- ಕೆಂಪಜ್ಜಿ - ಜನವರಿ 14, 2021
ಇವತ್ತಿಗೂ ಕೂಡಾ ಯಾರಾದ್ರೂ ನನ್ನ ಹತ್ರ ಬಂದು ನೀನು ಶಾರದಮ್ಮನ ಮರಿ ಮೊಮ್ಮಗಳು ಅಲ್ವಾ ಅಂತ ಕೇಳಿದ್ರೆ , ಇವರು ಯಾವ ಶಾರದಮ್ಮನ ಬಗ್ಗೆ ಹೇಳ್ತಿದಾರೆ ಅಂತ ಒಮ್ಮೆ ಯೋಚಿಸುವ ಹಾಗೆ ಆಗತ್ತೆ. ಶಾರದಮ್ಮ ಅಂದ್ರೆ ನನ್ನ ಅಜ್ಜನ ತಾಯಿ. ಅಂದ್ರೆ ನನ್ನ ಮುತ್ತಜ್ಜಿ . ಆದ್ರೆ ಅವರು ನನ್ನ ಪಾಲಿಗೆ ಯಾವತ್ತಿಗೂ ‘ಕೆಂಪಜ್ಜಿ’. ..!! ಹಾಗಾದ್ರೆ ಅವರ ಮುಖ ಕೆಂಪಗೆ ಇತ್ತಾ ಅಂತ ಕೇಳಬೇಡಿ … ನೋಡೋಕೆ ಗೋಧಿ ಬಣ್ಣ , ಉದ್ದ ದೇಹ , ಗೂನು ಬೆನ್ನು , ಸುಕ್ಕು ಚರ್ಮ, ಬೋಳು ತಲೆ, ಬೊಟ್ಟು ಇಲ್ಲದ ಹಣೆ ಮತ್ತು ಅವರು ಯಾವಾಗಲೂ ಉಡುತ್ತಿದ್ದ ಕೆಂಪು ಸೀರೆ… ಕೈಯಲ್ಲೊಂದು ಚಿನ್ನದ ಬಳೆ ಇತ್ತೇನೋ ಬಿಟ್ಟರೆ ನಿರಾಭರಣ ಅವರು … ನಾನು ಅವರನ್ನು ನೋಡಿದ್ದೇ ‘ಕೆಂಪಜ್ಜಿ’ಯಾಗಿ ..
ಅವರು ಇರುವಷ್ಟು ದಿನವೂ ಅವರು ಯಾಕೆ ಯಾವಾಗ್ಲೂ ಕೆಂಪು ಸೀರೆ ಉಡುತ್ತಿದ್ರು ಅನ್ನೋದೇ ನಂಗೆ ಗೊತ್ತಿರಲಿಲ್ಲ. ಒಂದೊಮ್ಮೆ ಕೇಳಿದ್ದೂ ಇದೆ “ಕೆಂಪಜ್ಜಿ … ನೀವ್ಯಾಕೆ ಬೇರೆ ಬಣ್ಣದ ಸೀರೆ ಉಡಲ್ಲ” ಅಂತಾ .. ಅವರು ಏನು ಉತ್ತರ ಕೊಟ್ಟಿದ್ರು ಅನ್ನೋದು ನಂಗೂ ಸರಿಯಾಗಿ ನೆನಪಿಲ್ಲ…ಆದರೆ ಅವರು ಊರಿಗೆಲ್ಲ ‘ಕೆಂಪಜ್ಜಿ’ಯಾಗೇ ಪರಿಚಿತವಾದ್ದರಿಂದ ಅವರು ಸ್ವತಃ ಇರುವುದೇ ಹೀಗೆ ಎಂದು ನನಗೆ ನಾನೇ ನಿರ್ಧಾರ ಮಾಡಿಕೊಂಡಿದ್ದೆ.ಅವರು ನಡೆಯುತ್ತಿದ್ದಿದ್ದೇ ಗೂನು ಬೆನ್ನು ಮಾಡಿಕೊಂಡು. ಬೆನ್ನು ಬಗ್ಗಿಸಿ , ಕೆಂಪು ಸೀರೆ ಉಟ್ಟು, ಕೈಯಲ್ಲೊಂದು ಊರುಗೋಲು ಹಿಡಿದು ಬಂದರೆ ಅವರು ಕೆಂಪಜ್ಜಿ ಎಂದು ಎಲ್ಲರಿಗೂ ಪರಿಚಯವಿತ್ತು. ಆದರೆ ಅವರು ಬದುಕಿದ್ದಿದ್ದು ಅವರದ್ದೇ ಆದ ಚೌಕಟ್ಟು ಹಾಕಿಕೊಂಡು.ಅವರಿಗೆ ಸ್ವಲ್ಪ ಮಡಿ- ಮೈಲಿಗೆಯ ಚಟವಿತ್ತು. ಹಾಗಂತ ತನ್ನ ಕೆಲಸವನ್ನ ತಾನೇ ಮಾಡಿಕೊಳ್ಳುತ್ತಿದ್ದರೇ ವಿನಃ ಇನ್ನೊಬ್ಬರ ಮೇಲೆ ಅವಲಂಬಿಸುತ್ತಿರಲಿಲ್ಲ.ಉಪವಾಸ , ಒಪ್ಪೊತ್ತು , ಪೂಜೆ ,ವ್ರತ ಹೀಗೆ ಕೊನೆ ಕಾಲದ ವರೆಗೂ ಅಪ್ಪಟ ಬ್ರಾಹ್ಮಣ ಹೆಂಗಸಿನಂತೆಯೇ ಬದುಕಿದವರು.
ಎಲ್ಲ ಹೆಣ್ಣು ಮಕ್ಕಳ ಬಳಿ ಇರುವಂತೆ ಅವರ ಬಳಿ ಯಾವ ಶೃಂಗಾರ ಪೆಟ್ಟಿಗೆಯೂ ಇರಲಿಲ್ಲ. ಮನೆಯ ಎಲ್ಲಾ ಹೆಂಗಸರು ಬೆಳಿಗ್ಗೆ ಸ್ನಾನದ ನಂತರ ಕನ್ನಡಿ ನೋಡುತ್ತಾ , ಮುಖ ಮತ್ತು ಕೂದಲುಗಳನ್ನು ಸಿಂಗರಿಸಿಕೊಳ್ಳುತ್ತಿದ್ದರೆ , ಕೆಂಪಜ್ಜಿಯ ಬಳಿ ಕನ್ನಡಿಯೇ ಇರಲಿಲ್ಲ . ಹಾಗಂತ ಅವರು ಮನೆಯಲ್ಲಿದ್ದ ಬೇರೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡಿದ್ದೂ ಸಹ ನಾನ್ಯಾವತ್ತೂ ನೋಡಿಲ್ಲ. ಅದೇ ಕೆಂಪು ಸೀರೆ , ಕೂದಲು ಇಲ್ಲದ ಬೋಳು ತಲೆ , ಹಣೆ ಬೊಟ್ಟು ಇಲ್ಲದ ಹಣೆ ಇದನ್ನೆಲ್ಲಾ ಯಾವ ಕನ್ನಡಿಯಲ್ಲಿ ನೋಡಿದರೂ ಅದೇ ಪ್ರತಿಬಿಂಬ ಕಾಣುತ್ತದೆಯೇ ಹೊರತು, ಇದ್ಯಾವುದೂ ತನ್ನ ಮುಖವನ್ನು ಸಿಂಗರಿಸಿ ತೋರಿಸುವುದಿಲ್ಲ ಎಂಬ ಕಟು ಸತ್ಯ ಅವರಿಗೆ ಎಂದೋ ಅರಿವಾಗಿದ್ದಿರಬಹುದು.
ಮನೆಯಲ್ಲಿ ಯಾವುದೇ ಶುಭ ಕಾರ್ಯ ಇರಬಹುದು ಅಥವಾ ಹಬ್ಬ ಹರಿದಿನವಿರಬಹುದು , ಕೆಂಪಜ್ಜಿ ಮೂಲೆಯಲ್ಲಿ ಉಳಿದು ಬಿಡುತ್ತಿದ್ದಳೇ ಹೊರತು ಸಂಭ್ರ್ರಮ ಸಡಗರವನ್ನೆಲ್ಲ ಹಂಚಿಕೊಂಡವಳೇ ಅಲ್ಲ. ಮನೆಗೆ ತೀರಾ ಅಪರೂಪದ ಅತಿಥಿಗಳು ಬಂದರೂ ಅವಳು ಹೊರ ಬರದೇ, ಹಾಗೇ ಬಾಗಿಲ ಮೂಲೆಯ ಕಂಡಿಯಿಂದ ಅವರನ್ನು ನೋಡುತ್ತಾ ಉಳಿದು ಬಿಡುತ್ತಿದ್ದಳು. ಮಕ್ಕಳು – ಮೊಮ್ಮಕ್ಕಳು ಕೊಡುತ್ತಿದ್ದ ಹತ್ತು – ಇಪ್ಪತ್ತು ರೂಪಾಯಿಗಳನ್ನು ಕೂಡಿಟ್ಟು , ತನಗೆ ಬೇಕಾದ ಮಾತ್ರೆ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದಳು. ವಾರಕ್ಕೆ ಮೂರೂ ದಿನ ಬೇರೆ ಬೇರೆ ದೇವರ ಹೆಸರಲ್ಲಿ ಒಪ್ಪೊತ್ತು ಮಾಡುತ್ತ ತನಗೊಬ್ಬಳಿಗಾಗುವಷ್ಟು ಹುಗ್ಗಿಯನ್ನು ತಾನೇ ಮಾಡಿ ಉಣ್ಣುತ್ತಿದ್ದಳು. ಕೆಲವೊಮ್ಮೆ ದೇವರ ನೇವೇದ್ಯಕ್ಕೆಂದು ಏನಾದ್ರೂ ಸಿಹಿ ಮಾಡಿದ್ದರೆ , ಅದನ್ನು ನಮ್ಮನ್ನೆಲ್ಲಾ ಕರೆದು ಹಂಚುತ್ತಿದ್ದರು. ಅರೋಗ್ಯ ಸ್ವಲ್ಪ ಸುಧಾರಿಸಿದ್ದರೆ , ಮನೆಯ ಮಕ್ಕಳಿಗೆಲ್ಲ ರೊಟ್ಟಿ ತಟ್ಟಿ ಕೊಡುತ್ತಿದ್ದರು. ಜೋಗುಳದ ಹಾಡು , ಆರತಿ ಹಾಡು,ರಾಮ ಭಜನೆ ಹೀಗೆ ಹಲವು ತರಹದ ಹಾಡುಗಳನ್ನು ಹಾಡುತ್ತಲೇ ಸಂಜೆಯ ಕಾಲ ಕಳೆಯುತ್ತಿದ್ದರು. ಅವರಿದ್ದಾಗಲೇ ಫೋನು , ಟಿ.ವಿ ಇದೆಲ್ಲವೂ ಬಂದಿತ್ತಾದರೂ, ಅವರು ಇವುಗಳ ಗೊಡವೆಗೂ ಹೋಗದೇ , ಅದೆಲ್ಲವನ್ನೂ ತನ್ನ ಚಿಕ್ಕ ಚೌಕಟ್ಟಿನೊಳಗೆ ಸೇರಿಸಿಕೊಳ್ಳದೇ ಬದುಕಿದವರು. ಅವರ ಬಳಿ ಇದ್ದ ಆಸ್ತಿ ಅಂದ್ರೆ ಮೂರು ಕೆಂಪು ಸೀರೆ , ಎರಡು ಬಳೆ ಮತ್ತು ಒಂದು ಸರ. ಅಷ್ಟರಲ್ಲೇ ಜೀವನ ಪೂರ್ತಿ ಕಳೆಯಬಹುದಾ ಅಂತ ಯಾರಾದ್ರೂ ಹುಬ್ಬೇರಿಸಿ ಕೇಳಿದರೆ, ಖಂಡಿತ ಕೆಂಪಜ್ಜಿಯೇ ಇದಕ್ಕೆ ಉದಾಹರಣೆ.
ನನಗೆ ಗೊತ್ತಿದ್ದ ಹಾಗೆ ಅವರು ಯಾವುದಕ್ಕೂ ಅತಿ ಅಸೆ ಪಟ್ಟವರಲ್ಲ. ಅಷ್ಟಕ್ಕೂ ಅಸೆ ಪಡುವ ಅವಕಾಶವನ್ನೇ ಜೀವನ ಅವರಿಗೆ ಕೊಡಲಿಲ್ಲ. ೧೦ ವರ್ಷಕ್ಕೆ ಮದುವೆಯಾಗಿ, ೧೫ ವರ್ಷಕ್ಕೆ ಮಕ್ಕಳನ್ನು ಪಡೆದು , ಹರೆಯದ ವಯಸ್ಸಿಗೆ ಬಂದು ಇನ್ನೇನು ಬಣ್ಣ ಬಣ್ಣದ ಉಡುಪುಗಳನ್ನೆಲ್ಲಾ ತೊಟ್ಟು ಸಿಂಗರಿಸಿಕೊಂಡು ಖುಷಿ ಪಡಬೇಕಾದ ಸಮಯದಲ್ಲಿ ಗಂಡನನ್ನು ಕಳೆದುಕೊಂಡರು. ಅಂದಿನಿಂದ ಅವರು ಬದುಕಿರುವಷ್ಟು ದಿನವೂ ಇಷ್ಟು ದೊಡ್ಡ ಜಗತ್ತಲ್ಲಿ , ತಮ್ಮದೇ ಆದ ಒಂದು ಚಿಕ್ಕ ಚೌಕಟ್ಟನ್ನು ಹಾಕಿಕೊಂಡು ಬದುಕು ಮುಗಿಸಿಬಿಟ್ಟರು. ಹೆಣ್ಣಿಗಿರುವ ಚಿಕ್ಕ ಪುಟ್ಟ ಆಸೆಗಳು ಒಂದು ಹೊಸ ಸೀರೆ ,ಹೊಸ ಒಡವೆ , ಅಥವಾ ಕೂದಲಿಗೊಂದಿಷ್ಟು ಹೂವು ಇದ್ಯಾವುದೂ ಅವರಿಗೆ ಒಲಿಯಲಿಲ್ಲ . ನನಗೆ ಗೊತ್ತಿದ್ದ ಹಾಗೆ ಅವರು ಅಸೆ ಪಟ್ಟಿದ್ದು ಒಂದು ಲೋಟ ಹಾಲಿಗೆ ಮತ್ತು ದೋಸೆಯ ಜೊತೆಗೊಂದಿಷ್ಟು ತುಪ್ಪಕ್ಕೆ ಅಷ್ಟೇ ….!! ಇಂದಿಗೂ ನನಗೆ ಅವರ ಫೋಟೋ ನೋಡುವಾಗೆಲ್ಲ, ಅವರ ಮುಖಕ್ಕೆ ಒಂದಿಷ್ಟು ಅಂದ ಚಂದ ಮಾಡಿ, ಕನ್ನಡಿ ಮುಂದೆ ಹಿಡಿದು ತೋರಿಸಬೇಕು.. ನಿಜಕ್ಕೂ ನೀವು ಸುಂದರಿ ಅಂತ ಹೇಳಬೇಕು ಎಂದು ಯಾವಾಗಲೂ ಅನ್ನಿಸುತ್ತದೆ. ಇಂದಿಗೂ ಕೂಡಾ ನಾನು ಬಣ್ಣದ ಸೀರೆ ಉಟ್ಟು ನಡೆಯುವಾಗ, ಕೆಂಪಜ್ಜಿ ಫೋಟೊ ಮೂಲಕ ನನ್ನನ್ನೇ ದೃಷ್ಟಿ ನೆಟ್ಟು ನೋಡುತ್ತಿದ್ದಾರೆ ಅನ್ನಿಸುತ್ತದೆ. “ಕೆಂಪಜ್ಜಿ… ನೀವೂ ಕೂಡಾ ಬಣ್ಣದ ಸೀರೆ ಉಟ್ಟು ಸಂತಸ ಪಡಿ” ಎಂದು ಹೇಳುತ್ತೇನೆ… ಅದು ಕೇಳಿಯೂ ಕೇಳದಂತೆ ಅವರು ಫೋಟೋ ಹಿಂದೆ ನಗುತ್ತಾರೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್