- ಕೈ ಬೀಸಿ ಕರೆಯುವ ಕೇದಾರಕಂಠ - ಮಾರ್ಚ್ 12, 2023
ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಮೂರನೇ ಸಂಚಿಕೆ ನಿಮ್ಮ ಮುಂದೆ…
ಭಾರತದ ಪುಣ್ಯ ಕ್ಷೇತ್ರಗಳಲ್ಲೊಂದಾದ ಕೇದಾರನಾಥವು ಎಲ್ಲರಿಗೂ ಚಿರಪರಿಚಿತ. ಆದರೆ ನಾನಿಂದು ಹೇಳಹೊರಟಿರುವ ತಾಣ ಅದೇ ಹಿಮಾಲಯದ ಅಸಂಖ್ಯಾತ ಪರ್ವತಶ್ರೇಣಿಗಳಲ್ಲಿ ಒಂದಾದ ಕೇದಾರಕಂಠ. ಸ್ಥಳೀಯರ ಪ್ರಕಾರ ಈ ಪರ್ವತದ ಶಿಖರದಲ್ಲಿ ಒಮ್ಮೆ ಶಿವ ತಪಸ್ಸಿಗೆ ಕುಳಿತಾಗ ಒಂದು ಗೂಳಿಯಿಂದ ತಪೋಭಂಗಕ್ಕೆ ಒಳಗಾಗುತ್ತಾನೆ. ಆಗ ಆತ ಅಲ್ಲಿಂದ ತೆರಳಿ ಕೇದಾರನಾಥದಲ್ಲಿ ತಪಸ್ಸನ್ನು ಮುಂದುವರಿಸುತ್ತಾನೆ.
ಕೇದಾರಕಂಠವು ಉತ್ತರಾಖಂಡ ರಾಜ್ಯದಲ್ಲಿದೆ . ಇದು ಸರಿಸುಮಾರು ೧೨೫೦೦ ಅಡಿ ಎತ್ತರದಲ್ಲಿದೆ . ಅಂದರೆ ನಮ್ಮ ಮುಳ್ಳಯ್ಯನಗಿರಿಯ ಎರಡರಷ್ಟು. ಈ ಚಾರಣವನ್ನು ೪-೫ ದಿನದ ಕಾಲಾವಧಿಯಲ್ಲಿ ಮಾಡಬಹುದು.
ಡೆಹ್ರಾಡೂನಿನಿಂದ ಸುಮಾರು ೨೦೦ ಕಿ.ಮೀ ದೂರದ ಸಾಂಕ್ರಿ ಎಂಬ ಹಳ್ಳಿಯಿಂದ ಈ ಪರ್ವತದ ಚಾರಣ ಮಾಡಲಾಗುತ್ತದೆ. ಉತ್ತರಾಖಂಡದ ಬಹುತೇಕ ಎಲ್ಲ ಚಾರಣಗಳು ಇಲ್ಲಿಂದಲೇ ಶುರುವಾಗುತ್ತದೆ. ಈ ಹಳ್ಳಿಯಲ್ಲಿ ಚಾರಣಕ್ಕೆ ಬೇಕಾಗುವ ಶೂ, ಪ್ಯಾಂಟ್, ಜಾಕೆಟ್ ಮುಂತಾದ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆ. ಬೆಟ್ಟದ ಇಳಿಜಾರಿನಲ್ಲಿ ನಿರ್ಮಿತವಾದ ಸಾಂಕ್ರಿ ಬಲು ಚಂದ. ಇಲ್ಲಿನ ಜನರು ಸ್ನೇಹಜೀವಿಗಳು ಮತ್ತು ಕಷ್ಟಸಹಿಷ್ಣುಗಳು. ನವೆಂಬರ್ ನಂತರ ಇಡೀ ಹಳ್ಳಿ ಹಿಮದಿಂದ ಮುಚ್ಚಿರುತ್ತದೆ!
ಸಾಂಕ್ರಿಯಿಂದ ಹೊರಟ ಚಾರಣವು ಮೊದಲು ತಲುಪುವುದು ೩ ಕಿ.ಮೀ ದೂರದ ಹರಗಾವ್ ಎಂಬ ಕ್ಯಾಂಪ್ ಸೈಟ್. ಇದು ಆಯಾ ತಂಡಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ತಂಡಗಳು ಜೂಡಾ ಕಾ ತಾಲಾಬ್ ಎಂಬ ಕೆರೆಯ ಬಳಿ ಕೂಡ ಶಿಬಿರ ಹೂಡುತ್ತವೆ. ಚಳಿಗಾಲದಲ್ಲಿ ಈ ಕೆರೆಯು ಸಂಪೂರ್ಣವಾಗಿ ಹೆಪ್ಪುಗಟ್ಟಿರುತ್ತದೆ. ಸಾಂಕ್ರಿಯಿಂದ ಹೊರಡುವ ದಾರಿ ಓಕ್, ಪೈನ್ ಮರಗಳ ಸಾಲು. ಸೂರ್ಯನ ಬೆಳಕು ಕಾಣಸಿಗದಷ್ಟು ದಟ್ಟವಾಗಿ ಬೆಳೆದ ಕಾಡಿನ ನಡುವೆ ಪಯಣ ಸಾಗುತ್ತದೆ.
ಮುಂದಿನ ಕ್ಯಾಂಪ್ ಸೈಟ್ ಕೇದಾರಕಂಠದ ಬುಡದಲ್ಲೇ. ಇದಕ್ಕೆ ಬೇಸ್ ಕ್ಯಾಂಪ್ ಎಂದೂ ಕರೆಯುತ್ತಾರೆ. ಎಲ್ಲ ತಂಡಗಳು ರಾತ್ರಿ ಇಲ್ಲಿ ತಂಗುತ್ತವೆ. ಪೂರ್ತಿ ಹಿಮಾವೃತಗೊಂಡ ಈ ಕ್ಯಾಂಪ್ ಸೈಟ್ ನಲ್ಲಿ ಅನೇಕ ಟೆಂಟುಗಳು ಕಾಣುತ್ತವೆ. ರಾತ್ರಿ ಕೊರೆಯುವ ಚಳಿ. ೩ ಪದರದ ಬಟ್ಟೆ ಧರಿಸಿ ಕ್ಯಾಂಪ್ ಹೊಕ್ಕು ಬಿಸಿ ಚಾಯ್ ಮತ್ತು ಮ್ಯಾಗ್ಗಿ ತಿನ್ನುವ ಮಜವೇ ಬೇರೆ !
ಮರುದಿನದ ಸೂರ್ಯೋದಯಕ್ಕೆ ಶಿಖರದಲ್ಲಿರಬೇಕೆಂದು ರಾತ್ರಿ ೩ ಗಂಟೆಗೆ ಆರೋಹಣ ಶುರುವಾಗುತ್ತದೆ. ಹರ ಹರ ಮಹಾದೇವ್ ಎಂಬ ಘೋಷಣೆಯೊಂದಿಗೆ ಚಾರಣ ಶುರುವಾಗುತ್ತದೆ. ಪೂರ್ತಿ ಹಿಮದ ಮೇಲೆ ಸಾಗುವ ಈ ಕೊನೆಯ ಭಾಗ ಸ್ವಲ್ಪ ಕಷ್ಟದ್ದು. ತಲೆಗೆ ಕಟ್ಟಿಕೊಳ್ಳುವ ಟಾರ್ಚ್ ಸಹಾಯದಿಂದ ಮುಂದೆ ಸಾಗಬೇಕು. ಒಂದು ಬದಿಯಲ್ಲಿ ತಳ ಕಾಣಿಸದಷ್ಟು ಆಳವಾದ ಕಮರಿ. ಭಯದಿಂದ ಯಾವುದೇ ಬದಿ ನೋಡದೇ ಏರುಗತಿಯಲ್ಲಿ ಚಾರಣ ಸಾಗುತ್ತದೆ. ೨ ರಿಂದ ೩ ಗಂಟೆ ನಂತರ ಶಿಖರದ ತುತ್ತ ತುದಿ ತಲುಪಿದಾಗ ಸಾಧಿಸಿದ ಮನದಲ್ಲಿ ಸಾರ್ಥಕ ಭಾವ. ಶಿಖರದ ಮೇಲೆ ಒಂದು ಪುಟ್ಟ ಗುಡಿಯಿದೆ. ಚಾರಣಿಗರು ಮಾಡಿಟ್ಟ ಸಣ್ಣ ಸಣ್ಣ ಕಲ್ಲಿನ ಗೋಪುರಗಳಿವೆ. ಮುಂದೆ ಉದಯಿಸುವ ಸೂರ್ಯ. ಸುತ್ತಲೂ ಅನೇಕಾನೇಕ ಹಿಮಾಚ್ಚಾದಿತ ಪರ್ವತಗಳು. ಈ ಅನುಭವವನ್ನು ವರ್ಣಿಸಲಸಾಧ್ಯ.
ಇಳಿಯುವ ದಾರಿ ಮಜವಾದದ್ದು. ಏರಲು ಎಷ್ಟು ಕಷ್ಟ ಪಡುವೆವೋ ಅದಕ್ಕಿಂತ ಸುಲಭ. ಗೈಡ್ ಗಳ ಮಾರ್ಗದರ್ಶನದಲ್ಲಿ ಜಾರಿಕೊಂಡು ಸಲೀಸಾಗಿ ಇಳಿಯಬಹುದು. ಬೇಸ್ ಕ್ಯಾಂಪ್ ನಿಂದ ಸಾಂಕ್ರಿ ತಲುಪಿ ನಮ್ಮ ನಮ್ಮ ಮನೆಗಳಿಗೆ ಬಂದರೂ ಮನದಲ್ಲಿ ಕೇದಾರಕಂಠದ ಚಾರಣ ಉಳಿಯುತ್ತದೆ.
ಕೇದಾರಕಂಠದ ಚಾರಣ ಅತಿ ಕಷ್ಟದ್ದೇನಲ್ಲ. ಹಾಗೆಯೇ ಸುಲಭ ಕೂಡ ಅಲ್ಲ. ದೈಹಿಕ ಬಲದ ಜೊತೆ ಮನೋಬಲವನ್ನು ಪರೀಕ್ಷಿಸುವ ಒಂದು ಚಾರಣ. ಹಿಮಾಲಯದ ಸೊಬಗನ್ನು ಸವಿಯಲಿಚ್ಛಿಸುವವರು ಖಂಡಿತವಾಗಿ ಹೋಗಬೇಕಾದ ಜಾಗ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್