- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
ಟಿಪ್ಪಣಿ: ಗಜಲ್ ಹುಟ್ಟಿದ ಸಮಯ
[ಚಿತ್ರದುರ್ಗದ ಮೂಲದ, ಕೋಲಾರದಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ ಅವರ ಸಾಹಿತ್ಯ ಪ್ರೀತಿ ಅಗಾಧವಾದದ್ದು.ವಾಟ್ಸಾಪ್ ನ ಅವರ ಪ್ರೊಫೈಲ್ ನಲ್ಲಿ ಒಂದು ಮಾತಿದೆ-“So many books, so little time”ಇಷ್ಟು ಸಾಕು ಅವರ ಪರಿಚಯವನ್ನು ಹೇಳಲು.ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಮಾತನಾಡಿ ನನ್ನ ಬರಹವನ್ನು ವಿನಿಮಯಿಸಿಕೊಂಡಿದ್ದೇನೆ.ನನ್ನ ಕಾವ್ಯದ ಬಗ್ಗೆ, ಅದರಲ್ಲೂ ಗಜಲ್ ಗಳ ಬಗ್ಗೆ ಅವರಿಗೆ ತುಂಬ ಅಭಿಮಾನ.ಮೊನ್ನೆ ಅವರಿಂದ ‘ಮಲ್ಲಿಗೆ ಬಗ್ಗೆ ಗಜಲ್ ಬರೆದಿದ್ದರೆ ಕಳಿಸಿ,ಇಲ್ಲವಾದರೆ ರಚಿಸಿ!’ ಎಂಬ ತುಸು ವಿಚಿತ್ರವೆನಿಸುವ ಸಂದೇಶ ಬಂತು. ನಾನು ಯಾವಾಗಲೋ ಬರೆದಿದ್ದ ಮಲ್ಲಿಗೆಯ ಕುರಿತಾದ ಹನಿಗವನವನ್ನು ಕಳಿಸಿ ‘ಗಜಲ್ನಲ್ಲಿ ಮಲ್ಲಿಗೆ ಬಂದಂತಿಲ್ಲ. ಮುಂದೆ ಪ್ರಯತ್ನ ಮಾಡುತ್ತೇನೆ’ ಎಂದೆ.ಅವರು ಕೂಡಲೇ ಮಲ್ಲಿಗೆ ಬಗ್ಗೆ ಗಜಲ್ ಈಗಲೇ ಬೇಕಾಗಿ ಬಂದ ಸಂದರ್ಭವನ್ನು ವಿವರಿಸಿದರು.ನನಗೂ ಅದರಲ್ಲಿ ಆಸಕ್ತಿ ಬಂತು.’ಒಂದು ದಿನ ಟೈಂ ಕೊಡಿ, ಬರೆಯಲು ಪ್ರಯತ್ನಿಸುತ್ತೇನೆ’ ಎಂದೆ.ಮುಂದಿನ ಅರ್ಧ, ಮುಕ್ಕಾಲು ಗಂಟೆಯಲ್ಲಿ ಬರೆದ ಗಜಲ್ ಇಲ್ಲಿದೆ.ಇದನ್ನು ಅವರಿಗೆ ಕಳಿಸಿದ ಕೊಟ್ಟಾಗ ಅವರು ಪಟ್ಟ ಸಂತೋಷ ನನಗೆ ಸಾರ್ಥಕ ಭಾವವನ್ನು ತಂದಿದೆ.]
ಮಲ್ಲಿಗೆ ಗಜಲ್
ಹಸುರಿನ ಹೊದರಿನಲಿ ಅರಳುವಳು ನೀನು
ತುಟಿಗಳನು ಅರೆಬಿರಿದು ನಗುವವಳು ನೀನು
‘ಮಲ್ಲಿಗೆಬಿಳುಪು’ ಎಂದೇ ಹೇಳುವುದು ಲೋಕ
ಬಿಳಿಯೆ ಮೈಪಡೆದಂತೆ ಬೆಳಗುವಳು ನೀನು
ನೀಲಿ ನಭದೊಡಲಲ್ಲಿ ಹೇಗೆ ಮಿನುಗಿವೆ ಚುಕ್ಕಿ
ಬನದ ಹಸಿರಿನಲಂತೆ ತೊಳಗುವಳು ನೀನು
ಕಾಡು ಮಲ್ಲಿಗೆಯೆನಿಸಿ ಏನೆಲ್ಲ ಕಲಿಸುವೆ
ಮನ್ನಣೆಗೆ ಬಾಯ್ಬಿಡದೆ ಸರಿಯುವಳು ನೀನು
ಅಕಲಂಕ ಮನಸಿಗೆ ಬೇರೇನಿದೆ ಹೋಲಿಕೆ
ಬಾಳ ಪರಿಮಳವಾಗಿ ಉಳಿಯುವಳು ನೀನು
ಒಲವಿನುಯ್ಯಾಲೆಯನು ಸಿಂಗರಿಸುವವಳು
ಮೊದಲ ಮಿಲನಕೆ ಸಾಕ್ಷಿಯಾಗುವಳು ನೀನು
ನರುಗಂಪು ಕೋಮಲತೆ ನಿನ್ನ ಆಭರಣ
‘ಜಂಗಮ’ನ ಎದೆಯನ್ನು ತುಂಬುವಳು ನೀನು
★ ಡಾ. ಗೋವಿಂದ ಹೆಗಡೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ