- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಗುಟ್ಟು ಬೇಕ ? ಕೆಲವೊಮ್ಮೆ ಬೇಕು! ಕೆಲವೊಮ್ಮೆ ಬೇಡ! ಪ್ರತಿಯೊಬ್ಬರಲ್ಲೂ ಅಡಗಿರುವ ಅದೆಷ್ಟೊ ಸತ್ಯಗಳಿರುತ್ತವೆ. ಕೆಲವು ವ್ಯಕ್ತ ಇನ್ನುಕೆಲವು ಅವ್ಯಕ್ತ. ಅವ್ಯಕ್ತವಾದದ್ದನ್ನೆ ಕೆಲವರಿಗೆ ವಿಚಾರವನ್ನು ತಿಳಿಸಬಾರದೆಂದೂ “ಯಾರಿಗೂ ಹೇಳದಿರಿ…” ಎಂದು ಹೇಳಿದರೆ ಅದೇ ಗುಟ್ಟು. ಗುಟ್ಟುಗಳನ್ನು ರಹಸ್ಯ, ಮರ್ಮ ,ಗೌಪ್ಯತೆ, ಸೀಕ್ರೆಟ್, ಕಾನ್ಫಿಡೆನ್ಷಿಯಲ್ ಎಂದೂ ಕರೆಯುತ್ತೇವೆ. ವಿಚಾರಗಳು ವ್ಯಷ್ಟಿ ಚಿಂತನೆಯಿಂದ ಕೂಡಿದ್ದರೆ ಅದೇ ಗುಟ್ಟು. ಸಮಷ್ಟಿಯ ಚಿಂತನೆಯಿಂದ ಕೂಡಿದ್ದರೆ, ಸತ್ಯವನ್ನು ಕಾಯ್ದುಕೊಳ್ಳುವ ಅವಶ್ಯಕತೆಯಿದ್ದರೆ ರಹಸ್ಯ ಎನ್ನಬಹುದು. ರಹಸ್ಯ ಎಂದ ಕೂಡಲೆ ಚಿದಂಬರ ರಹಸ್ಯ, ಬರ್ಮುಡ ಟ್ರೈಯಾಂಗಲ್ ಇತ್ಯಾದಿಗಳ ಹೆಸರುಗಳು ಥಟ್ ಎಂದು ಹೊಳೆಯುತ್ತವೆ. ಈ ರಹಸ್ಯಗಳನ್ನು ಈವರೆಗೂ ಯಾರಿಂದಲೂ ಬಿಡಿಸಲಾಗಿಲ್ಲ. ಸೈನ್ಯದಲ್ಲಿ ಪ್ರಮುಖ ವಿಚಾರಗಳಲ್ಲಿ ರಾಷ್ಟ್ರ ರಕ್ಷಣೆಯ ದೃಷ್ಟಿಯಿಂದ ರಹಸ್ಯ ಕಾಪಾಡಿಕೊಳ್ಳಲಾಗುತ್ತದೆ.ಗುಟ್ಟುಗಳಿಗೆ ಹೋಲಿಸಿಕೊಂಡರೆ ರಹಸ್ಯ ಪದದ ಮೌಲ್ಯ ರವಷ್ಟು ಹೆಚ್ಚು ಎನ್ನಬಹುದು.
ನಾವು ಮಾಡುವ ದಾನ, ಮತದಾನ ಇತರರಿಗೆ ತಿಳಿಯದೆ ಗುಟ್ಟಾಗಿರಬೇಕು. ಒಳ್ಳೆಯ ವಿಚಾರಗಳಲ್ಲಿ ಗುಟ್ಟು ಕಾಪಾಡಿಕೊಂಡು ಇತರರಿಗೆ ಒಳ್ಳೆಯದನ್ನು ಬಯಸಿದರೆ ಸರಿ! ಅನ್ಯ ಉದ್ದೇಶದಿಂದ ಇರಿಸಿಕೊಂಡ ಗುಟ್ಟುಗಳು ಗುಟುಕು ಗುಟುಕಾಗಿ ಇತರರ ಬದುಕಲಲ್ಲಿ ಚೆಲ್ಲಾಟವಾಡಿಬಿಡುತ್ತವೆ. ಜನ್ಮರಹಸ್ಯ ಕಡೆಗೆ ತಿಳಿದ ನಂತರ ಕರ್ಣ ಯುದ್ಧದಲ್ಲಿ ತನ್ನ ಪ್ರಾಣ ಸ್ನೇಹಿತ ಸುಯೋಧನನ ಪರ ಹೋರಾಟ ಬಿಡುವಂತಿಲ್ಲ. ಪಾಂಡವರನ್ನು ಕೊಲ್ಲುವಂತಿಲ್ಲ ಎಂಬ ಸಂಧಿಗ್ಧತೆಗೆ ಸಿಲುಕಿಬಿಡುತ್ತಾನೆ. ಈ ಸನ್ನಿವೇಶಕ್ಕೆ ಪಂಪ ವಿಕ್ರಮಾರ್ಜುನ ವಿಜಯದಲ್ಲಿ “ವಂಶವನರುಹಿ ಕೌರವನ ಕೊಂದೆ ನೀನೆಂದ” ಎಂಬ ಮಾತಿದ್ದರೆ ಕುಮಾರವ್ಯಾಸ ಭಾರತದಲ್ಲಿ “ಬೇಧದಲಿ ಹೊಕ್ಕಿರಿದನೋ” ಎಂಬ ಮಾತಿದೆ. ಅಂದರೆ ಕರ್ಣನಿಗೆ ಜನ್ಮ ರಹಸ್ಯವನ್ನು ಹೇಳುವ ಮೂಲಕ ಕೃಷ್ಣ ಅವನ ಮನಸ್ಸನು ವಿಚಲಿತಗೊಳಿಸಿ ಗೆದ್ದ ಎಂಬಂತೆ. “ಕುಂತಿ ಜನ್ಮ ರಹಸ್ಯವನ್ನು ಕಾಪಾಡಿಕೊಂಡಿದ್ದರಿಂದಲೇ ನನಗೆ ಅನ್ಯಾಯವಾಯಿತು ಹಾಗಾಗಿ ಹೆಂಗಸರ ಬಾಯಲ್ಲಿ ಗುಟ್ಟು ನಿಲ್ಲದೆ ಹೋಗಲಿ ಎಂದು ಕರ್ಣ ಶಾಪ ಕೊಟ್ಟ” ಎನ್ನುತ್ತದೆ ಜಾನಪದ ಕಥೆ.
ಯಾರಾದರೂ ಗುಟ್ಟು ಹೇಳುತ್ತಾರೆ ಅಂದರೆ ಸಾಕು ಕೇಳುವವರ ಕಿವಿಗಳು ನಿಮಿರುತ್ತವೆ. ಹೇಳುವವರ ಕೈಗಳು ಸಹಜವಾಗಿ ಬಾಯಿಗೆ ಅಡ್ಡ ಬಂದೇ ಬರುತ್ತವೆ ಅಂದರೆ ಅಷ್ಟು ಕುತೂಹಲ!! ಯಾವುದೇ ಡಾಟಾ ಬಳಸಿಕೊಳ್ಳದೆ ಸುಲಭವಾಗಿ, ವೇಗವಾಗಿ ಟ್ರಾನ್ಸ್ಫರ್ ಆಗುವವು ಗುಟ್ಟುಗಳು ಹೌದಲ್ವ! ಕೆಲವು ಗುಟ್ಟುಗಳು ರಟ್ಟಾಗಬೇಕು ಇನ್ನು ಕೆಲವು ಹಾಗೆ ಉಳಿದರೆ ಕ್ಷೇಮ.
ಗುಟ್ಟುಗಳನ್ನು ಆಧರಿಸಿಯೇ “ಸಂಸಾರ ಗುಟ್ಟು ವ್ಯಾಧಿ ರಟ್ಟು” ಎಂಬ ಗಾದೆಯಿದೆ ಅಂದರೆ ಸಾಂಸಾರಿಕ ಗುಟ್ಟುಗಳು ಇತರರ ಬಾಯಿಗೆ ಹೋದಷ್ಟು ತೊಂದರೆ ತಪ್ಪಿದ್ದಲ್ಲ.ಅದೇ ರೋಗಗಳು ಅರ್ಥಾತ್ ವ್ಯಾಧಿಗಳು ದೇಹದಲ್ಲಿ ಉಳಿದಷ್ಟೇ ಅಪಾಯ ಹೆಚ್ಚು ಎನ್ನುತ್ತಾರೆ. ವಾಹನ ಚಲಾಯಿಸುವಾಗ ಕ್ಲಚ್, ಬ್ರೇಕ್, ಎಕ್ಸಲೇಟರ್ಗಳನ್ನು ಅಗತ್ಯವಿದ್ದಷ್ಠೆ ಬಳಸಿಕೊಳ್ಳುವಂತೆ ನಮ್ಮೊಳಗಿನ ಒಳಹುಗಳನ್ನು ಅಗತ್ಯವಿದ್ದರಷ್ಟೆ, ಅಗತ್ಯವಿರುವಷ್ಟು ಹಂಚಿಕೊಳ್ಳಬೇಕಾಗುತ್ತದೆ. ಗುಟ್ಟುಗಳನ್ನು ಗುಟ್ಟಾಗಿ ಇಟ್ಟುಕೊಂಡಷ್ಟೂ ಒತ್ತಡ ಹೆಚ್ಚಾಗಿ ತೀವ್ರ ಅಸಮಾಧಾನಗಳಿಗೆ ಎಡೆ ಕೊಡಬಹುದು ಹಾಗಿರುವಾಗ ಅವುಗಳನ್ನು ಸಂಭಾಳಿಸುವುದು ಜಾಣತನ.
ರಹಸ್ಯಗಳನ್ನು ಕಾಪಾಡಿಕೊಳ್ಳುವುದಕ್ಕೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಗುಟ್ಟುಗಳು ತಿಳಿದಾಗ ಅವುಗಳು ನಂಬದಿರುವಂತಿದ್ದರೆ ನಿದ್ರೆ ಕಸಿಯುತ್ತವೆ. ಸರಕಾರಿ ಮಟ್ಟದಲ್ಲಿ ಗುಟ್ಟು ಬಯಲು ಮಾಡಲು, ರಹಸ್ಯ ಭೇದಿಸಲು, ಸತ್ಯ ಪತ್ತೆಹಚ್ಚಲು ಪಾಲಿಗ್ರಾಫಿ ಪರೀಕ್ಷೆಯನ್ನೂ ಮಾಡುತ್ತಾರೆ. ಆದಾಯಕ್ಕಿಂತ ಹೆಚ್ಚು ಸಂಪಾದನೆ ಹೊಂದಿದ್ದಲ್ಲಿ ಅವರ ಮೇಲೆ ನಿಗಾ ಇಡುವುದೂ ಕೂಡ ರಹಸ್ಯವಾಗಿಯೇ ಆಗುತ್ತದೆ. ಇನ್ನು ಕೆಲವರು ಈ ಗುಟ್ಟುಗಳನ್ನು ಯಾರಿಗೂ ತಿಳಿಯದ ಹಾಗೆ ಕಾಪಾಡಿಕೊಳ್ಳಲು ಸಂಕೇತಗಳನ್ನು ಬಳಸುತ್ತಾರೆ ಅದನ್ನು ಭೇದಿಸುವವರೂ ಚತುರರೇ ಇದೇ ಕೋಡಿಂಗ್ ಮತ್ತು ಡಿಕೋಡಿಂಗ್ ಅಲ್ವೆ!
1970 ರಲ್ಲಿ ಬಿಡುಗಡೆಯಾದ ‘ಪರೋಪಕಾರಿ ‘ ಚಲನಚಿತ್ರದಲ್ಲಿ ಪಿ. ಬಿ. ಶ್ರೀನಿವಾಸರವರು ಹಾಡಿರುವ “ಪುಟಾಣಿ ಮಕ್ಕಳೆ ಗುಟ್ಟೊಂದ ಹೇಳುವೆ…… ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ… ಹಣಕೆ ದಾಸನಾಗಿ ನೀನೆಂದೂ ಬಾಳದಿರು, ತಂದೆಯಾಗಿ ಮೇಲೆ ಆ ದೇವನಿರುವನಲ್ಲ “ಎಂಬ ಹಾಡು ಇಂದಿಗೂ ಕೇಳಲು ಹಿತವಾಗಿದೆ. ಮಾಸ್ತಿಯವರ “ಜ್ಯೊಗ್ಯೋರ ಅಂಜಪ್ಪನ ಕೋಳಿ ಕತೆ”ಯಲ್ಲಿ ಇಂಥದ್ದೊಂದು ಗುಟ್ಟಿನ ತರ್ಕ ಬರುತ್ತದೆ ಕಥಾ ನಾಯಕ ಹಾಡು ಹೇಳಿದ್ದಕ್ಕೆ ಹುಡುಗಿಯೊಬ್ಬಳಿಂದ ಭಿಕ್ಷೆ ಸ್ವೀಕರಿಸುತ್ತಾನೆ ಆದರೆ ಅದನ್ನು ಕೊಟ್ಟ ಹುಡುಗಿ ಗುಟ್ಟಾಗಿರಲಿ ಯಾರಿಗೂ ಹೇಳಬೇಡ ಎನ್ನುತ್ತಾಳೆ. ಆದರೆ ಭಿಕ್ಷೆ ತೆಗೆದುಕೊಂಡ ಅಂಜಪ್ಪ ರೆಡ್ಹ್ಯಾಂಢಾಗಿ ಅರ್ಥಾತ್ ವಸ್ತು ಸಮೇತ ಸಿಕ್ಕಿ ಬಿದ್ದು ಮರ್ಯಾದೆಗಂಜಿ ಜೈಲಿಗೆ ಹೋಗದೆ ದಂಡ ಕಟ್ಟಿ ಮನೆಗೆ ಬರುತ್ತಾನೆ. ಮುಚ್ಚು ಮರೆ ಮಾಡಿದರೆ, ವಿಷಯ ಬಚ್ಚಿಟ್ಟರೆ ಈ ರೀತಿಯ ಅಧ್ವಾನಗಳಾಗುತ್ತವೆ. ಇನ್ನು ಕೆಲವರು ಗುಟ್ಟಿಂದ ಬೇರೆಯವರನ್ನು ತೇಜೋವಧೆ ಮಾಡುವ ಕೆಲಸಗಳು ಹೇಡಿಯ ಕೆಲಸವಾಗುತ್ತವೆ. ಏನೇ ಆಗಲಿ ಗುಟ್ಟುಗಳು ಒಗ್ಗಟ್ಟನ್ನು ಕೆಡಿಸಬಾರದಷ್ಟೇ!. ಹೇಳುವುದಾದರೆ ಗುಟ್ಟುಗಳನ್ನು ಗುಟ್ಟಾಗಿಯೇ ಹೇಳಬೇಕು ಯಾರಾದರೂ ನೋಡಿದರೆ “ನಮ್ಮ ಬಗ್ಗೆನೆ ಏನೋ ಮಾತು “ಎಂದು ತಪ್ಪು ತಿಳಿಯಬಹುದು.
ಕೊರೊನಾ ಲಸಿಕೆ ತಯಾರಿ, ಪ್ರಯೋಗ, ಬಿಡುಗಡೆ ಎಂದು ಹೇಳುತ್ತಿರುವ ಈ ದಿಮಾನಗಳಲ್ಲಿ ಲಸಿಕೆಯ ಫಾರ್ಮುಲವನ್ನು ಔಷಧ ಕಂಪೆನಿಗಳವರು ಯಾರಿಗೂ ಹೇಳುವುದಿಲ್ಲ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ನಾಟಿ ಔಷಧ ಕೊಡುವವರೂ ಯಾವ ಔಷಧಿಗಳನ್ನು ಸೇರಿಸುತ್ತಾರೆ ಎಂಬ ಒಳಗುಟ್ಟನ್ನು ಬಿಡುವುದಿಲ್ಲ ಹಾಗೊಂದು ವೇಳೆ ಎಲ್ಲರಿಗೂ ತಿಳಿದರೆ ಔಷಧಿ ಕೆಲಸ ಮಾಡಲ್ಲ ಎಂಬ ನಂಬಿಕೆ ಕೆಲವರಲ್ಲಿ ಇಂದಿಗೂ ಇದೆ. ಹೀಗಾಗಬಾರದು ಕೊಡುವ ಔಷಧಿಗಳ ವಿವರವನ್ನು ಇತರರಿಗೆ ತಿಳಿಸಬೇಕು ಇಲ್ಲವೇ ದಾಖಲಿಸಬೇಕು ಇಲ್ಲವಾದರೆ ಇದೂ ಒಂದು ರೀತಿಯ ನಷ್ಟವೇ ಹೌದು!
ಸೆಲೆಬ್ರೆಟಿಗಳನ್ನು ಸಂದರ್ಶನ ಮಾಡುವಾಗ ಸಂದರ್ಶಕರು ಕಟ್ಟಕಡೆಯದಾಗಿ ನಿಮ್ಮ ಸೌಂದರ್ಯದ ಗುಟ್ಟೇನು?, ರಹಸ್ಯವೇನು ?ಎಂದು ಕೇಳಿಯೇ ಕೇಳುತ್ತಾರೆ ಹೌದಲ್ಲ! “ಅಚ್ಚಿಟ್ಟು ಬಚ್ಚಿಟ್ಟು ಮಕ್ಕಳನ್ನು ಸಾಕಿದೆ ಕೈಕೊಟ್ಟುಬೇರೆ ಹೋದರು!” ಎಂಬ ಮಾತನ್ನು ಮಕ್ಕಳಿಂದ ಅವಜ್ಞೆಗೆ ಗುರಿಯಾದ ತಾಯಂದಿರು ಹೇಳುವುದಿದೆ. ಹಣದ ಆಸೆಗೆ ಒಳಗಾಗಿ ಗುಟ್ಟಾಗಿ ಕೆಲವು ಸ್ಕೀಮಿಗೆ ಸೇರಿ ಮೋಸ ಹೋಗುವ ಅದೆಷ್ಟೋ ಜನರು ಇದ್ದಾರೆ. ತೆರಿಗೆ ವಂಚಿಸಲು ಚಿನ್ನವನ್ನು ಬೇರೆ ಬೇರೆ ರೂಪಾಂತರದಲ್ಲಿ ಗುಟ್ಟಾಗಿ ತಂದರೆ ಕಸ್ಟಮ್ಸ್ ಅಧಿಕಾರಿಗಳು ಆ ಗುಟ್ಟನ್ನು ಬಯಲು ಮಾಡುತ್ತಾರೆ. ಕೆಲವೊಮ್ಮೆ ಜನರ ಮೌಢ್ಯತೆಯನ್ನು ದುರುಪಯೋಗ ಮಾಡಿಕೊಂಡು ಪವಾಡ ಮಾಡುವವರನ್ನು ವಿಚಾರವಾದಿಗಳು ವೈಜ್ಞಾನಿಕ ಹಿನ್ನೆಲೆಯಲ್ಲಿ ರಹಸ್ಯಗಳನ್ನು ಬಯಲು ಮಾಡುತ್ತಾರೆ.
ಗುಟ್ಟುಗಳಲ್ಲಿ ನೀತಿಯೂ ಇರುತ್ತದೆ ಎಂಬ ವಿಚಾರವನ್ನು ಸುಧಾ ಮೂರ್ತಿಯವರ “ಗುಟ್ಟೊಂದು ಹೇಳುವೆ “ ಕೃತಿಯಲ್ಲಿ ನೋಡಬಹುದು. ಕೆಲವೊಮ್ಮೆ ಗುಟ್ಟುಗಳು ಎಡವಟ್ಟು ಉಂಟುಮಾಡುತ್ತವೆ. ಕೆಲವು ಗುಟ್ಟುಗಳನ್ನು ನಂಬಬಾರದು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಪರಾಮರ್ಶಿಸಿ ನೋಡುವುದು ಜಾಣತನ. ತುಂಬಾ ತುಂಬಾ ವರ್ಷದ ಹಿಂದೆ ನಡೆದ ಗುಟ್ಟಿನ ಅವಾಂತರ. ದೊಡ್ಡಮ್ಮನ ಮಗನ ಮದುವೆ.ಮದುವೆ ಮುಗಿಸಿ ಮತ್ತೆ ಬರುವಾಗ ಸಂಜೆ ಆಗಿತ್ತು . ನನಗೂ ನನ್ನ ಚಿಕ್ಕಮ್ಮನ ಮಗಳಿಗೂ ಬಸ್ನಲ್ಲಿ ಒಳ್ಳೆ ಸೀಟ್ ಸಿಕ್ಕಿತ್ತು! ಆ ಕಾರಣಕ್ಕೆ ಖುಷಿಯಲ್ಲಿದ್ದೆವು. ಬಸ್ನ ಲೈಟ್ಗಳು ಆಫ್ ಆಗುವ ಸಮಯಕ್ಕೆ ನನ್ನ ಚಿಕ್ಕಮ್ಮ ಬಂದು “ಬಜ್ಜಿ ಇದೆ ಮುಗಿಸಿಬಿಡಿ” ಎಂದು ಬ್ಯಾಗ್ ಕೊಟ್ಟರು. ನಾವು ಸಾವಧಾನವಾಗಿ ಬ್ಯಾಗ್ ತೆಗೆದರೆ ಬಜ್ಜಿಗಳು ಹಳತಾಗಿರುವ ಸೂಕ್ಷ್ಮಗೊತ್ತಾಯಿತು. ಹಾಗೆ ಕಿಟಕಿ ತೆಗೆದು ಗಾಳಿಯಲ್ಲಿ ಗುಟ್ಟಾಗಿ ತೂರಿದೆವು ಆತುರ ಮಾಡಿದ್ದರೆ…..? ಇದು ಚಿಕ್ಕ ಸನ್ನಿವೇಶವೇ ಹೌದು ! ಇನ್ನಿತರ ವಿಚಾರಗಳಲ್ಲಿ ಗುಟ್ಟುಗಳನ್ನು ನಂಬಿದರೆ ಚಿಕ್ಕ ಸಮಸ್ಯೆಗಳು ಕೂಡ ಗುಡ್ಡಗಳಾಗುತ್ತವೆ!
ಜಾಗೃತರಾಗಿರಬೇಕು! ಡಿಸೆಂಬರ್ 14ರ ವರದಿಯಂತೆ ಉತ್ತರ ಪ್ರದೇಶದ ಕೊತ್ವಾಲ್ ಪಟ್ಟಣದಲ್ಲಿ ನೆಡದ ಘಟನೆ. ವರ ಕುದುರೆಯೇರಿ ಬಂದು ರಾತ್ರಿಯಿಡೀ ಹುಡುಕಿದರೂ ವಧುವಿನ ಮನೆ ಸಿಗುವುದಿಲ್ಲ ಕಡೆಗೆ ರೊಚ್ಚಿಗೆದ್ದ ವರನ ಕಡೆಯವರು ಮದುವೆ ದಲ್ಲಾಳಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ವರ ಇನ್ನೊಂದು ಮದುವೆಯಾಗಿರುವ ವಿಷಯವೂ ತಿಳಿಯಿತ್ತದೆ. ಪೋಲಿಸರು ಮಧ್ಯೆ ಪ್ರವೇಶಿಸಿ ಸಮಸ್ಯೆ ತಿಳಿಗೊಳಿಸುತ್ತಾರೆ ಅಂದರೆ ಈ ರೀತಿ ಸತ್ಯ ಮುಚ್ಚಿಟ್ಟು ಮೋಸಮಾಡುವವರ ಬಗ್ಗೆ ನಾವು ಸದಾ ಕಾವಲುಗಣ್ಣವರಾಗಿರಬೇಕು. ಗುಟ್ಟುಗಳು ಕೆಲವರ ಪಾಲಿಗೆ ಯಶಸ್ಸಿನ ಕೀಲಿಕೈ ಇನ್ನು ಕೆಲವರ ಪಾಲಿನ ದೌರ್ಬಲ್ಯ. ಗುಟ್ಟುಗಳು ಗೌಪ್ಯವೋ, ರಹಸ್ಯವೋ, ಮರ್ಮವೋ ಗೊತ್ತಿಲ್ಲ. ಒಟ್ಟು ಅನರ್ಥ ಉಂಟುಮಾಡಬಾರದು! ಇದೇ ಗುಟ್ಟಿನ ಗುಟ್ಟು!!
ಹೆಚ್ಚಿನ ಬರಹಗಳಿಗಾಗಿ
‘ಅಕ್ಷರ ಲೋಕ’ದ ಗಾರುಡಿಗ
ಕೊಡವರ ಆಷಾಢದ ವಿಶೇಷ ಹಬ್ಬಮತ್ತು ಮದ್ದುಪಾಯಸ
ವಡ್ಡಾರಾಧನೆಯ ಕಾರ್ತಿಕ ಋಷಿ ಮತ್ತು ‘ಈಡಿಪಸ್ ಕಾಂಪ್ಲೆಕ್ಸ್’